Site icon Vistara News

ಪಾರದರ್ಶಕತೆಗೆ ಪರ್ಯಾಯ ಪದ ಆಗುತ್ತೇವೆ: ವಿಸ್ತಾರ ನ್ಯೂಸ್‌ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ

vistara

ಬೆಂಗಳೂರು: ಮಾಧ್ಯಮವು ಪಾರದರ್ಶಕತೆಗೆ ಪರ್ಯಾಯ ಪದ ಆಗಬೇಕು. ಆಗ ಸಾಮಾಜಿಕ ಬೆಳವಣಿಗೆ ಸಾಧ್ಯವಾಗುತ್ತದೆ. ಸದುದ್ದೇಶ ಹಾಗೂ ಎರಡು ಪಾರದರ್ಶಕತೆಗಳು ಸೇರಿದಾಗ ಅದು ಜನರ ನಡುವೆ ವಿಶ್ವಾಸಾರ್ಹವೆನಿಸಿಕೊಳ್ಳುತ್ತದೆ ಎಂದು ವಿಸ್ತಾರ ನ್ಯೂಸ್‌ನ ಪ್ರಧಾನ ಸಂಪಾದಕ ಹಾಗೂ ಸಿಇಒ ಹರಿಪ್ರಕಾಶ್‌ ಕೋಣೆಮನೆ ಹೇಳಿದರು.

ಬೆಂಗಳೂರಿನಲ್ಲಿ ಶನಿವಾರ ನಡೆದ ವಿಸ್ತಾರ ನ್ಯೂಸ್‌ ವೆಬ್‌ಸೈಟ್‌ ಲೋಕಾರ್ಪಣೆ ಹಾಗೂ ವಿಸ್ತಾರ ಮೀಡಿಯಾ ಲೋಗೊ ಅನಾವರಣ ಕಾರ್ಯಕ್ರಮದಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಅವರು ವಿಸ್ತಾರ ನ್ಯೂಸ್‌ನ ಹೂಡಿಕೆದಾರರ ವಿವರ, ಸಂಸ್ಥೆಯ ಆಶಯ ಹಾಗೂ ಧ್ಯೇಯೋದ್ದೇಶಗಳನ್ನೂ ವಿವರಿಸಿದರು.

ಆಶಯ ಬದಲಾಗಬಾರದು

ಮಾಧ್ಯಮ ಪ್ರಜಾತಂತ್ರದ ನಾಲ್ಕನೇ ಅಂಗ ಎನ್ನುತ್ತಾರೆ. ನಾವು ಅತ್ಯಂತ ಪ್ರಧಾನ ಅಂಗವೆನ್ನುವುದನ್ನು ಮೀಡಿಯಾ ಒಪ್ಪಿಕೊಳ್ಳಬೇಕಿದ್ದರೆ ಹಾಗೆಯೇ ಕಾರ್ಯಾಚರಿಸಬೇಕು. ಮಾಧ್ಯಮ ಕೈಬರಹದ ಕಾಲದಿಂದ ಡಿಜಿಟಲ್‌ವರೆಗೆ ಸಾಗಿಬಂದಿದೆ. ಮಾಧ್ಯಮದ ಕಾರ್ಯವಿಧಾನ ಬದಲಾಗುತ್ತಿದೆ. ಮೀಡಿಯಾ ಬಳಕೆದಾರರ ಸಂಖ್ಯೆ ಲಕ್ಷಾಂತರ ಸಂಖ್ಯೆಯಲ್ಲಿ ವಿಸ್ತರಿಸುತ್ತಿದೆ. ಆದರೆ ಆಶಯ ಬದಲಾಗುವುದಿಲ್ಲ, ಬದಲಾಗಬಾರದು. ಸಾಮಾಜಿಕ ಒಳಿತೇ ಆ ಆಶಯವಾಗಿದೆ ಎಂದು ಹರಿಪ್ರಕಾಶ್‌ ಹೇಳಿದರು.

ವಿಸ್ತಾರ ನ್ಯೂಸ್‌ನ ಅನಾವರಣ ದಿನ ಇತಿಹಾಸದೊಂದಿಗೆ ಸೇರಿಕೊಂಡಿದೆ. ಇಂದು ಇಬ್ಬರು ಮಹಾನ್‌ ವ್ಯಕ್ತಿಗಳ ಜನ್ಮದಿನ. ಕೇಸರಿ ಪತ್ರಿಕೆಯ ಮೂಲಕ ಸ್ವಾತಂತ್ರ್ಯ ಹೋರಾಟದ ಕಿಡಿ ಹೊತ್ತಿಸಿದ ಬಾಲ ಗಂಗಾಧರ ತಿಲಕ್‌ ಹಾಗೂ ಸ್ವಾತಂತ್ರ್ಯ ಹೋರಾಟದ ಕಲಿ ಚಂದ್ರಶೇಖರ ಆಜಾದ್‌ ಜನಿಸಿದ ದಿನ ಇಂದು. ಇತಿಹಾಸದೊಂದಿಗೆ ವರ್ತಮಾನವನ್ನು ನಾವು ಜೋಡಿಸುತ್ತಿದ್ದೇವೆ ಎಂದವರು ಹೇಳಿದರು.

ಮಾಧ್ಯಮ ಟೀಕೆಗೆ ಹೊರತಲ್ಲ

ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಮಾಧ್ಯಮಕ್ಕೆ ತಾನು ಪ್ರತ್ಯೇಕ ಎಂಬ ಭಾವನೆ ಇರಕೂಡದು. ವರದಿ, ಟೀಕೆ, ವಿಶ್ಲೇಷಣೆಗಳು ಮೀಡಿಯಾದ ಕರ್ತವ್ಯ. ಇದಕ್ಕೆ ಹೊರತಾದ ಜವಾಬ್ದಾರಿಗಳೂ ಇವೆ. ತಾನೂ ಟೀಕೆ ಮತ್ತು ವಿಶ್ಲೇಷಣೆಗೆ ಹೊರತಲ್ಲ ಎಂಬ ಉತ್ತರದಾಯಿತ್ವ ಮೀಡಿಯಾಗೆ ಇರಬೇಕು. ಇದು ವಿಸ್ತಾರ ನ್ಯೂಸ್ ಮೀಡಿಯಾ ತಂಡದ ಜವಾಬ್ದಾರಿಯ ಪ್ರಜ್ಞೆ. ಒಂದು ಬೆರಳನ್ನು ನಾವು ಸಮಾಜದತ್ತ ತೋರಿದಾಗ ನಾಲ್ಕು ಬೆರಳು ನಮ್ಮನ್ನು ತೋರಿಸುತ್ತದೆ ಎಂಬ ಪ್ರಜ್ಞೆ ನಮ್ಮದಾಗಿದೆ ಎಂದವರು ಸ್ಪಷ್ಟಪಡಿಸಿದರು.

ಸಾರ್ವಜನಿಕರಿಗೆ ಲಭ್ಯ

ನಾನು ವಿಜಯ ಕರ್ನಾಟಕ ಪತ್ರಿಕೆ ಬಿಟ್ಟಾಗಿನಿಂದ ಅನೇಕರು ಹೊಸ ಮಾಧ್ಯಮದ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ಅದಕ್ಕೆ ಉತ್ತರಗಳನ್ನು ಎಲ್ಲರಿಗೂ ಕಾಣುವಂತೆ ಸಾರ್ವಜನಿಕ ತಾಣದಲ್ಲಿ ತೆರದಿಟ್ಟಿದ್ದೇನೆ. ಈ ಹೊಸ ಮೀಡಿಯಾಕ್ಕೆ ಯಾರು ಹಣ ಹೂಡಿದ್ದಾರೆ ಮತ್ತು ಇದು ಹೇಗೆ ಕೆಲಸ ಮಾಡುತ್ತದೆ ಎಂಬ ಪ್ರಶ್ನೆಗಳು ಮುಖ್ಯವಾಗಿವೆ. ನಮ್ಮ ಹೂಡಿಕೆದಾರರು ಯಾರು ಎಂಬ ವಿವರ ಪಾರದರ್ಶಕವಾಗಿದೆ. ಹೀಗೆ ನಮ್ಮ ವಿವರಗಳನ್ನು ಸಾರ್ವಜನಿಕರಿಗೆ ತೆರೆದಿಟ್ಟ ಮೊತ್ತ ಮೊದಲ ಮಾಧ್ಯಮ ಸಂಸ್ಥೆ ವಿಸ್ತಾರ ನ್ಯೂಸ್ ಎಂದು ಹರಿಪ್ರಕಾಶ್‌ ಹೇಳಿದರು.

ನೀವು ಎಡವೇ ಅಥವಾ ಬಲವೇ ಎಂಬ ಪ್ರಶ್ನೆಯಿದೆ. ಸೈದ್ಧಾಂತಿಕವಾಗಿ ನಾವು ಲೆಫ್ಟೂ ಅಲ್ಲ, ರೈಟೂ ಅಲ್ಲ. ಆದರೆ ಯಾವುದು ರೈಟ್‌ ಎಂಬುದನ್ನು ಖಡಾಖಂಡಿತವಾಗಿ ಹೇಳುತ್ತೇವೆ. ದೇಶದ ಹಿತದ ಪ್ರಶ್ನೆ ಬಂದಾಗ ದೇಶ ಮೊದಲು, ನಂತರ ನಾವು. ಅದು ಮಾಧ್ಯಮವೇ ಇರಲಿ, ಉದ್ಯಮವೇ ಇರಲಿ. ನಮ್ಮ ವಿಶ್ವಾಸಾರ್ಹತೆ ನಿರೂಪಿಸಬೇಕಾದರೆ ಕಾಲವೇ ಉತ್ತರ ಹೇಳಬೇಕು. ಮುಂಬರುವ ದಿನಗಳಲ್ಲಿ ಇದಕ್ಕೆ ಸಾಕ್ಷಿ ಪುರಾವೆ ಜನರಿಗೆ ಸಿಗಲಿದೆ ಎಂದವರು ಹೇಳಿದರು.

ಕನ್ನಡ ಭಾಷೆಯೇ ಆದ್ಯತೆ

ಕನ್ನಡ ಭಾಷೆಗಾಗಿ ನಾವೇನು ಮಾಡುತ್ತೇವೆ ಎಂದು ಹಲವರು ಪ್ರಶ್ನಿಸಿದ್ದಾರೆ. ನಾವು ಕನ್ನಡಿಗರು. ನಮಗೆ ಕನ್ನಡವೇ ಮೊದಲ ಆದ್ಯತೆ. ಕನ್ನಡದ ಹಿತರಕ್ಷಣೆ ಮುಖ್ಯ. ಹಾಗೆಂದು ಇತರ ಭಾಷೆಗಳ ಬಗ್ಗೆ ದ್ವೇಷವಿಲ್ಲ. ಎಲ್ಲವನ್ನು ಒಳಗೊಂಡಾಗ ಭಾರತದ ವಿಕಾಸವಾಗುತ್ತದೆ. ಅದರಲ್ಲಿ ಕನ್ನಡದ ವಿಕಾಸವೂ ಅಡಗಿದೆ. ದೇಶಕ್ಕೆ ಮುಕುಟಪ್ರಾಯವಾದ ಕರ್ನಾಟಕ ರಾಜ್ಯದ ಜನ ಸುಸಂಸ್ಕೃತ, ಸಭ್ಯ, ವಿಚಾರಶೀಲರು. ಇಲ್ಲಿನ ಮಾಧ್ಯಮವೂ ಇಲ್ಲಿನ ಜನರ ಲೋಕರೂಢಿ ಭಾವನೆಗಳನ್ನು ಪ್ರತಿನಿಧಿಸಬೇಕು. ನಾವು ಇಲ್ಲಿನ ಸಂಸ್ಕೃತಿಯನ್ನು ಕಲಶಪ್ರಾಯವಾಗುವಂತೆ ಪ್ರತಿನಿಧಿಸುತ್ತೇವೆ. ನಾವು ಖಚಿತವಾದ ಅಭಿಪ್ರಾಯವನ್ನು ಸ್ಪಷ್ಟವಾದ ಧ್ವನಿಯಲ್ಲಿ ನಿರೂಪಿಸುತ್ತೇವೆ ಎಂದು ಭರವಸೆ ನೀಡಿದರು.

ಇಂದು ಮಾಧ್ಯಮಗಳು ಹೆಚ್ಚಿರಬಹುದು, ಮೀಡಿಯಾಗಳ ನಡುವೆ ಪೈಪೋಟಿಯೂ ಸಾಕಷ್ಟು ಇದ್ದಿರಬಹುದು. ಆದರೆ ಒಟ್ಟಾರೆ ಮಾಧ್ಯಮ ವಲಯದ ಕೊಡುಗೆಯ ಬಗ್ಗೆ ಅತೃಪ್ತಿಯೂ ಇದೆ. ಇಂಥ ಅತೃಪ್ತಿಯ ಜಾಗವನ್ನು ತುಂಬಲು ನಾವು ಬರುತ್ತಿದ್ದೇವೆ. ಇದನ್ನು ಮಾಡಲು ಸಾಧ್ಯವೇ ಎಂದು ಹಲವರು ಹುಬ್ಬೇರಿಸಿದ್ದಾರೆ. ವಿಜಯವಾಣಿಯನ್ನು ಎರಡು ವರ್ಷದಲ್ಲಿ ಓದುಗರ ಪತ್ರಿಕೆಯಾಗಿ, ನಂಬರ್‌ ಒನ್‌ ಮಾಡಲು ಸಾಧ್ಯವಾಯಿತು. ವಿಜಯ ಕರ್ನಾಟಕವನ್ನು ನಾಲ್ಕೂವರೆ ವರ್ಷದಲ್ಲಿ ಮಾರುಕಟ್ಟೆ ನಾಯಕನಾಗಿ ಮಾಡಲು ಸಾಧ್ಯವಾಯಿತು. ಕನ್ನಡನಾಡಿನ ಜನತೆಯಲ್ಲಿ ಭರವಸೆ ಮೂಡಿಸಿದಾಗ ಯಶಸ್ಸು ಸಾಧ್ಯ ಎಂಬುದು ರುಜುವಾತಾಗಿದೆ. ನನ್ನ ಜತೆಗೆ ಧರ್ಮೇಶ್‌ ಮತ್ತು ಶ್ರೀನಿವಾಸ ಹೆಬ್ಬಾರ್ ಅವರು ಬೆನ್ನೆಲುಬಾಗಿ ನಿಂತಿದ್ದಾರೆ.‌ ಮಾಧ್ಯಮ ಲೋಕದ ಅತ್ಯುತ್ತಮ ಪ್ರತಿಭಾವಂತರು ನನ್ನ ಜತೆಗೆ ಕೈಜೋಡಿಸಿ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಸ್ತಾರ ನ್ಯೂಸ್‌ ವೆಬ್‌ಸೈಟ್‌ ಲೋಕಾರ್ಪಣೆ ಹಾಗೂ ವಿಸ್ತಾರ ಮೀಡಿಯಾ ಲೋಗೊ ಅನಾವರಣ ಮಾಡಿದರು. ಕಂದಾಯ ಸಚಿವ ಆರ್. ಅಶೋಕ್‌, ವಿಸ್ತಾರ ನ್ಯೂಸ್‌ ಸಂಸ್ಥೆಯ ಚೇರ್ಮನ್‌ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಚ್‌.ವಿ.ಧರ್ಮೇಶ್‌, ಸಂಸ್ಥೆಯ ನಿರ್ದೇಶಕ ಶ್ರೀನಿವಾಸ ಎಸ್.‌ ಹೆಬ್ಬಾರ್‌ ಜತೆಗಿದ್ದರು.

Exit mobile version