Site icon Vistara News

Loksabha 2024: Vistara Survey: ಮೋದಿ ಸರ್ಕಾರಕ್ಕೆ ಕನ್ನಡಿಗರು ಎಷ್ಟು ಅಂಕ ಕೊಟ್ಟರು?: ಇಲ್ಲಿದೆ ಮೋದಿ ಮಾರ್ಕ್ಸ್‌ ಕಾರ್ಡ್‌

Modi Marks Card Vistara News Survey

#image_title

ಬೆಂಗಳೂರು: 9 ವರ್ಷ ಪೂರೈಸಿದೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ. ಮೋದಿ ಸರ್ಕಾರದ 9 ವರ್ಷಗಳ ಆಡಳಿತ ಜನರಿಗೆ ತೃಪ್ತಿ ತಂದಿದ್ಯಾ..? ಕರುನಾಡ ಮಂದಿ BJP ಕಾರ್ಯವೈಖರಿಗೆ ಕೊಡುವ ಮಾರ್ಕ್ಸ್‌ ಎಷ್ಟು..? ಕೇಂದ್ರದ ಪ್ಲಸ್‌ ಪಾಯಿಂಟ್ ಏನು..? ಮೈನಸ್ ಪಾಯಿಂಟ್ ಏನು..? ಈ ಬಗ್ಗೆ ರಾಜ್ಯದ ಎಲ್ಲ ಜಿಲ್ಲೆ, ತಾಲೂಕುಗಳಿಂದ ವಿಸ್ತಾರ ವರದಿಗಾರರು ನಡೆಸಿರುವ ಮೆಗಾ ಸಮೀಕ್ಷೆ ಇಲ್ಲಿದೆ.

ರಾಜ್ಯದೆಲ್ಲೆಡೆ ಅತಿ ವರದಿಗಾರರ ಬೃಹತ್‌ ಜಾಲ ಹೊಂದಿರುವ ವಿಸ್ತಾರ ನ್ಯೂಸ್‌, ಸಾಮಾನ್ಯ ಜನರ ಮುಂದೆ ಒಟ್ಟು 10 ಪ್ರಶ್ನೆಗಳನ್ನಿಟ್ಟು ಆ ಮೂಲಕ ಅವರ ಮನದಾಳವನ್ನು ಅರಿಯುವ ಪ್ರಯತ್ನ ಮಾಡಿದೆ. ಈಗತಾನೆ ವಿಧಾನಸಭೆ ಚುನಾವಣೆಗಳು ನಡೆದು ಕಾಂಗ್ರೆಸ್‌ ಸರ್ಕಾರ ರಚನೆಯಾಗಿರುವ ಬೆನ್ನಿಗೇ ಈ ಸಮೀಕ್ಷೆ ನಡೆದಿರುವುದು ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಜತೆಗೆ ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳಿಗೂ ಮಾರ್ಗಸೂಚಿಯಾಗಲಿದೆ. ಸಮೀಕ್ಷೆಗೆ ಸಜನರ ಸ್ಪಂದನೆ ಹಾಗೂ ಅದರ ಕಾರಣಗಳು ಈ ಕೆಳಕಂಡಂತಿವೆ.

ಪ್ರಶ್ನೆ 01: ನರೇಂದ್ರ ಮೋದಿಯವರ 9 ವರ್ಷಗಳ ಆಡಳಿತ ಹೇಗಿದೆ..?

2014 ರ ಮೇ 26 ರಂದು ನರೇಂದ್ರ ಮೋದಿ ಪ್ರಥಮ ಬಾರಿಗೆ ಭಾರತದ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. 2019 ರ ಮೇ 30 ರಂದು ಎರಡನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ಈ ಮೇಲಿನ ಪ್ರಶ್ನೆಗೆ ಶೇ.36.7 ರಷ್ಟು ಜನ ಮೋದಿ ಆಡಳಿತ ಅತ್ಯುತ್ತಮವಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಶೇ.30.1 ರಷ್ಟು ಜನ ಮೋದಿಯವರದ್ದು ಉತ್ತಮ ಆಡಳಿತ ಎಂದಿದ್ದಾರೆ. ಸಾಧಾರಣವಾಗಿದೆ ಮೋದಿ ಆಡಳಿತ ಎಂದವರ ಸಂಖ್ಯೆ ಶೇ.21.4ರಷ್ಟಿದೆ.

ಮೋದಿ ಆಡಳಿತ ಸರಿಯಿಲ್ಲ… ಕಳಪೆಯಾಗಿದೆ ಎನ್ನುವರರ ಸಂಖ್ಯೆ ಶೇ.11.8ರಷ್ಟಿದೆ. ಈ ಅಂಕಿ-ಅಂಶವನ್ನ ಗಮನಿಸಿದ್ರೆ ಮೋದಿ ಆಡಳಿತದ ಬಗ್ಗೆ ಬಹುತೇಕರಿಗೆ ಅಂದ್ರೆ ಶೇ.88.2ರಷ್ಟು ಜನರಿಗೆ ಸಮಾಧಾನ ಇದ್ದಂತೆ ಕಾಣುತ್ತಿದೆ.

ಪ್ರಶ್ನೆ 02: ಮೋದಿ ಸರ್ಕಾರದ ಯೋಜನೆಗಳ ಲಾಭ ನಿಮಗೆ ಸಿಕ್ಕಿದೆಯಾ..?

ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಲವಾರು ಯೋಜನೆಗಳನ್ನ ಜಾರಿಗೆ ತಂದಿದೆ. ಅದರಲ್ಲಿ ಮುಖ್ಯವಾಗಿ ಸ್ವಚ್ಛ ಭಾರತ್​ ಅಭಿಯಾನ, ಡಿಜಿಟಲ್​ ಇಂಡಿಯಾ, ಮೇಕ್​ ಇನ್​ ಇಂಡಿಯಾ, ಸ್ಕಿಲ್​ ಇಂಡಿಯಾ, ಮುದ್ರಾ ಯೋಜನೆ, ಜನ್​ಧನ್​ ಅಕೌಂಟ್​, ಸ್ಟಾರ್ಟ್​ ಅಪ್​ ಇಂಡಿಯಾ, ರೈತ ಸಮ್ಮಾನ್​, ಪ್ರಧಾನ್​ ಮಂತ್ರಿ ಆವಾಸ್​ ಯೋಜನೆ, ಉಜ್ವಲ ಯೋಜನೆ, ಪ್ರಧಾನಮಂತ್ರಿ ಫಸಲ್​ ಬಿಮಾ ಯೋಜನೆ, ಆಯುಷ್ಮಾನ್​ ಭಾರತ್​, ಜನೌಷಧಿ ಕೇಂದ್ರ, ಅಟಲ್​ ಪಿಂಚಣಿ, ವಯೋವಂದನ ಯೋಜನೆ, ಮನೆ ಮನೆಗೂ ನೀರು ಪ್ರಮುಖವಾದವು.

ಪ್ರಶ್ನೆ 03: ಮೋದಿ ಸರ್ಕಾರದ ಸಚಿವರ ಕಾರ್ಯವೈಖರಿ ಹೇಗಿದೆ..?

ಮೋದಿ ಸರ್ಕಾರದ ಸಚಿವರು ಹೇಗೆ ಕೆಲಸ ಮಾಡ್ತಿದ್ದಾರೆ ಅಂತ ಕೇಳಿದ್ರೆ ಅತ್ಯುತ್ತಮ ಮತ್ತು ಉತ್ತಮ ಅಂತ ಶೇ.56.6 ರಷ್ಟು ಜನ ಹೇಳಿದ್ದಾರೆ. ಶೇ.20.9 ರಷ್ಟು ಜನ ಮಾತ್ರ ಉತ್ತಮವೂ ಅಲ್ಲ, ಕಳಪೆಯೂ ಅಲ್ಲ ಸಾಧಾರಣವಾಗಿ ಅವರ ಕೆಲಸ ಎಂದಿದ್ದಾರೆ. ಇನ್ನು ಶೇ.22.5ರಷ್ಟು ಜನ ಮಾತ್ರ ಮೋದಿ ಕ್ಯಾಬಿನೆಟ್​ ಕಾರ್ಯವೈಖರಿ ಕಳಪೆಯಾಗಿದೆ ಅಂತ ಹೇಳಿದ್ದಾರೆ.

ಮೋದಿ ಕೆಲಸದ ಬಗ್ಗೆ ಯಾರಿಗೂ ಚಕಾರವೆತ್ತದಿದ್ರೂ, ಅವರ ಕ್ಯಾಬಿನೆಟ್​ನ ಸಚಿವರ ಕಾರ್ಯದ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವು ಸಚಿವರು ತಮ್ಮ ಖಾತೆಗಳನ್ನ ಉತ್ತಮವಾಗಿ ನಿಭಾಯಿಸುತ್ತಿದ್ರೂ, ಇನ್ನು ಇಲಾಖೆಗಳಲ್ಲಿ ಹೇಳಿಕೊಳ್ಳುವಂತಹ ಕೆಲಸ ಆಗ್ತಿಲ್ಲ ಎಂಬ ಹೇಳಿಕೆ ನೀಡಿದ್ದಾರೆ.

ಪ್ರಶ್ನೆ 04: ಮೋದಿ ಸರ್ಕಾರ ಬೆಲೆ ಏರಿಕೆ ತಡೆಯುವಲ್ಲಿ ವಿಫಲವಾಗಿದ್ಯಾ..?

ಕಳೆದ 9 ವರ್ಷಗಳಲ್ಲಿ ಕೇಂದ್ರ ಸರ್ಕಾರ ಬೆಲೆ ಏರಿಕೆಯನ್ನು ತಡೆಯುವಲ್ಲಿ ವಿಫಲವಾಗಿದೆ ಅಂತ ಶೇ.56.1 ರಷ್ಟು ಹೇಳಿದ್ದಾರೆ. ಇಲ್ಲ, ಸರ್ಕಾರ ಸಮರ್ಥವಾಗಿ ಬೆಲೆ ಏರಿಕೆ ತಡೆದಿದೆ ಅನ್ನೋವ್ರ ಸಂಖ್ಯೆ ಶೇ.43.9 ರಷ್ಟಿದೆ. ಗ್ಯಾಸ್​ ಸಿಲಿಂಡರ್​ ಬೆಲೆ ಏರಿಕೆ, ಪೆಟ್ರೋಲ್​, ಡೀಸೆಲ್​ ಬೆಲೆ ಏರಿಕೆ, ಬೇಳೆ, ಕಾಳುಗಳ ಬೆಲೆ ಏರಿಕೆ, ದಿನಸಿ ಪದಾರ್ಥಗಳ ಬೆಲೆ ಏರಿಕೆ, ಜನರ ದಿನನಿತ್ಯದ ವೆಚ್ಚ ಹೆಚ್ಚಳ ಆಗಿರುವುದರ ಬಗ್ಗೆ ಸಾಮಾನ್ಯ ಜನರಲ್ಲಿ ಅಸಮಧಾನ ಕಂಡುಬಂದಿದೆ.

ಪ್ರಶ್ನೆ 05: ಯೋಜನೆ ಜನರಿಗೆ ತಲುಪಿಸುವಲ್ಲಿ ಭ್ರಷ್ಟಾಚಾರ ಕಡಿಮೆ ಆಗಿದೆಯಾ..?

ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನ ಜಾರಿಗೆ ತರುತ್ತಿದೆ. ಯಾವುದೇ ಯೋಜನೆ ಜನಸಾಮಾನ್ಯರಿಗೆ ತಲುಪಬೇಕಾದ್ರೆ ಭ್ರಷ್ಟಚಾರಕ್ಕೆ ಕಡಿವಾಣ ಬೀಳಬೇಕು. ಈ ಹಿನ್ನೆಲೆಯಲ್ಲಿ ಈ ಪ್ರಶ್ನೆಯನ್ನ ಜನರನ್ನ ಕೇಳಿದಾಗ, ಬಹುತೇಕರು ಅಂದ್ರೆ ಶೇ.79 ರಷ್ಟು ಜನ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರ ಕಡಿಮೆ ಆಗಿದೆ ಎಂದಿದ್ದಾರೆ.

ನಾ ಖಾವೂಂಗ, ನಾ ಖಾನೇ ದೂಂಗಾ ಎಂದು ಹೇಳಿದ್ದ ಮೋದಿ ಕೇಂದ್ರದ ಯೋಜನೆಗಳನ್ನ ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾದಂತೆ ಕಾಣುತ್ತಿದೆ. ಇದಕ್ಕೆ ಮತ್ತೊಂದು ಪ್ರಮುಖ ಕಾರಣ ಎಂದರೆ ಡಿಜಿಟಲ್​ ಪೇಮೆಂಟ್​ ಸಿಸ್ಟಂ, ಜನ್​ಧನ್​ ಮೂಲಕ ಪ್ರತಿಯೊಬ್ಬರಿಗೂ ಬ್ಯಾಂಕ್​ ಅಕೌಂಟ್​ ಮಾಡಿಸಲಾಯಿತು. ಜನರ ಬ್ಯಾಂಕ್​ ಅಕೌಂಟ್​ಗೆ ನೇರವಾಗಿ ಹಣ ವರ್ಗಾವಣೆ ಮಾಡುವ ಮೂಲಕ ಮಧ್ಯವರ್ತಿಗಳ ಹಾವಳಿಯನ್ನ ತಪ್ಪಿಸುವಲ್ಲಿ ಕೇಂದ್ರ ಯಶಸ್ವಿಯಾಯ್ತು.

ಪ್ರಶ್ನೆ 06: ಭಯೋತ್ಪಾದನೆ ತಡೆಯುವ ವಿಚಾರದಲ್ಲಿ ಸರ್ಕಾರದ ಕ್ರಮ ಹೇಗಿದೆ..?

ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಭಯೋತ್ಪಾದನೆ ತಡೆಯಲು ಮಹತ್ವದ ಕ್ರಮಗಳನ್ನ ತೆಗೆದುಕೊಂಡಿದೆ. ಕಳೆದ 9 ವರ್ಷಗಳಲ್ಲಿ ಮೋದಿ ಸರ್ಕಾರ ಭಯೋತ್ಪಾದಕರ ವಿರುದ್ದ ತೆಗೆದುಕೊಂಡ ಕ್ರಮಗಳು ಅನೇಕ ಇವೆ.

ಪ್ರಶ್ನೆ 07: ಕೊರೊನಾ ಸಂದರ್ಭದಲ್ಲಿ ಕೇಂದ್ರ ಹೇಗೆ ಕಾರ್ಯನಿರ್ವಹಿಸಿದೆ..?

ವಿಶ್ವವೇ ಕಂಡು ಕೇಳರಿಯದ ಆತಂಕಕ್ಕೆ ಈಡಾಗಿದ್ದು ಕೊವಿಡ್​ ಸಮಯದಲ್ಲಿ. ಕರೋನಾ ಹೆಮ್ಮಾರಿ ಜನರ ಜೀವ ತೆಗೆಯಲು ಶುರುಮಾಡಿದಾಗ ಅದರ ವಿರುದ್ಧ ಹೋರಾಡಲು ಲಸಿಕೆ ತಯಾರಿಸಲು ಮತ್ತು ಆದಷ್ಟು ಶೀಘ್ರ ಅದು ಜನರಿಗೆ ಸಿಗುವಂತೆ ಮಾಡಿದ ಹೆಗ್ಗಳಿಕೆ ಮೋದಿ ಸರ್ಕಾರದ್ದು. ಲಾಕ್​​ಡೌನ್​ ಹೇರಿದರೆ ದೇಶದ ಆರ್ಥಿಕತೆ ಹೇಗೆ ಎಂದು ಬಲಾಢ್ಯ ರಾಷ್ಟ್ರಗಳು ಯೋಚನೆ ಮಾಡುತ್ತಿದ್ದಾಗ ಭಾರತದಲ್ಲಿ ಲಾಕ್​ಡೌನ್​ ಘೋಷಣೆ ಮಾಡಿದರು. ಸಾಮಾನ್ಯ ಜನಜೀವನಕ್ಕೆ ಬಹಳ ತೊಂದರೆ ಆದರೂ, ದೇಶದ ಒಳಿತಿಗಾಗಿ ಮೋದಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಜನರು ನಿಯಮ ಪಾಲನೆ ಮಾಡಿದರು.

ಈ ಸಮಯದಲ್ಲಿ ದೇಶದಲ್ಲಿ ಒಂದೂ ಪಿಪಿಇ ಕಿಟ್​ ತಯಾರಾಗುತ್ತಿರಲಿಲ್ಲ. ಎಲ್ಲವನ್ನೂ ಆಮದು ಮಾಡಲಾಗುತ್ತಿತ್ತು. ಆದರೆ ಮೋದಿ ಕರೆಗೆ ಹಾಗೂ ಸರ್ಕಾರದ ಬೆಂಬಲಕ್ಕೆ ಸ್ಪಂದಿಸಿದ ಭಾರತದ ಉದ್ಯಮ, ಗಾರ್ಮೆಂಟ್​ಗಳು ಪ್ರತಿನಿತ್ಯ 2ಲಕ್ಷ ಪಿಪಿಇ ಕಿಟ್​ ಉತ್ಪಾದಿಸುವ ಹಂತಕ್ಕೆ ತಲುಪಿತು. ಕೋವಿಡ್​ ಕಿಟ್​​ ಉತ್ಪಾದನೆಯಲ್ಲಿ ವಿಶ್ವದಲ್ಲೇ ಪ್ರಮುಖ ದೇಶವಾಯಿತು.

2020ರ ಮಾರ್ಚ್​​ನಲ್ಲಿ ಪಿಎಂ ಕೇರ್ಸ್​ ನಿಧಿ ಸ್ಥಾಪಿಸಿದರು. ಇದಕ್ಕೆ ದೇಶದ ಸಾಮಾನ್ಯ ಜನರು, ಉದ್ಯಮಿಗಳು, ಸರ್ಕಾರಿ ಉದ್ಯಮಿಗಳು ಸೇರಿ ಅನೇಕರು ದೇಣಿಗೆ ನೀಡಿದರು. ಪಿಎಂ ಕೇರ್ಸ್​ ನಿಧಿಯ ಮೂಲಕ ರಾಜ್ಯಗಳಲ್ಲಿ ಆಕ್ಸಿಜನ್​ ಉತ್ಪಾದನೆ ಘಟಕ ಸ್ಥಾಪನೆ ಮಾಡಲಾಯಿತು, ಲಕ್ಷಾಂತರ ಆಕ್ಸಿಜನ್​ ಕಾನ್ಸಂಟ್ರೇಟರ್​​ಗಳನ್ನು ಭಾರತದಲ್ಲೇ ಉತ್ಪಾದಿಸಿ ಹಂಚಲಾಯಿತು. ಪ್ರತಿ ಜಿಲ್ಲೆಯಲ್ಲೂ ಕೋವಿಡ್ ಕೇಂದ್ರ ತೆರೆಯಲಾಯಿತು. ವಿವಿಧ ವಿದೇಶಿ ಲಸಿಕಾ ಕಾಂಪನಿಗಳು ಹೆಚ್ಚಿನ ಹಣಕ್ಕೆ ತಮ್ಮ ಲಸಿಕೆ ಮಾರಲು ಹೊರಟಿದ್ದಾರೆ, ಸ್ವದೇಶಿ ಲಸಿಕೆಗೆ ಮೋದಿ ಒತ್ತು ನೀಡಿದರು.

ಒಂದಲ್ಲ ಎಂದು ಎರಡು ಲಸಿಕೆಗಳನ್ನು ದೇಶದಲ್ಲೇ ಉತ್ಪಾದನೆ ಮಡಲಾಯಿತು. ಕೋವಿನ್​ ಮೊಬೈಲ್​ ಆಪ್​ ಮೂಲಕ, ಸಂಪೂರ್ಣ ಪಾರದರ್ಶಕವಾಗಿ ಲಸಿಕೆ ನೀಡಲಾಯಿತು. ಮೊದಲಿಗೆ ಶ್ರೀಮಂತರಿಗೆ, ರಾಜಕಾರಣಿಗಳಿಗೆ ನೀಡುವುದಾಗಲಿ, ಕಾಳಸಂತೆಯಲ್ಲಿ ಮಾರಾಟಕ್ಕೆ ಅವಕಾಶವಿಲ್ಲದಂತೆ ವಿತರಿಸಲಾಯಿತು. ಅಮೆರಿಕದಲ್ಲಿಯೂ ಕೈಬರೆಹದ ಲಸಿಕಾ ಪ್ರಮಾಣಪತ್ರ ನೀಡಿದರೆ ಭಾರತದಲ್ಲಿ ಡಿಜಿಟಲ್​​ ಪ್ರಮಾಣಪತ್ರ ನೀಡಲಾಯಿತು. ಇದು ವಿದೇಶದಲ್ಲೂ ಮೆಚ್ಚುಗೆಗೆ ಪಾತ್ರವಾಯಿತು. ತಮಗೆ ಅನನುಕೂಲವಾದರೂ, ತಮ್ಮ ಪ್ರೀತಿಪಾತ್ರರೇ ಅನೇಕರು ಮೃತಪಟ್ಟರೂ ಸರ್ಕಾರದ ಮೇಳೆ ಜನರ ವಿಶ್ವಾಸ ಉಳಿದಿದೆ. ಮೋದಿ ಸರ್ಕಾರ ತನ್ನ ಕೈಲಾದಷ್ಟು ಕೆಲಸ ಮಾಡಿದೆ ಎಂಬ ಭಾವನೆ ಇಲ್ಲಿ ಕಾಣುತ್ತಿದೆ.

ಪ್ರಶ್ನೆ 08: ನೋಟ್ ಬ್ಯಾನ್ ದೇಶದ ಆರ್ಥಿಕತೆಗೆ ಅನುಕೂಲವಾಗಿದೆಯೇ..?

2016ರ ನವೆಂಬರ್​​ 8 ರಂದು ರಾತ್ರಿ 8.15 ಗಂಟೆಗೆ ಟಿವಿ ಮುಂದೆ ಕಾಣಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ, ಇಂದು ರಾತ್ರಿಯಿಂದಲೇ 500 ರೂ. ಹಾಗೂ 1000 ರೂ. ನೋಟುಗಳು ಮಾನ್ಯತೆಯನ್ನು ಕಳೆದುಕೊಳ್ಳುತ್ತವೆ ಎಂದು ಘೋಷಿಸಿದರು. ದೇಶದಲ್ಲಿ ಕಪ್ಪು ಹಣವನ್ನು ಮಟ್ಟ ಹಾಕುವ ಸಲುವಾಗಿ, ಭ್ರಷ್ಟಾಚಾರಕ್ಕೆ ಹಣ ನೀಡಿಕೆಯನ್ನು ತಡೆಯಲು ಈ ನೋಟು ಅಮಾನ್ಯೀಕರಣ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ಮೋದಿ ಹೇಳಿದ್ದರು.

1000 ರೂ. ನೋಟು ಅನೇಕರ ಕೈಯಲ್ಲಿ ಇರಲಿಲ್ಲವಾದರೂ, 500 ರೂ. ನೋಟು ಸಾಮಾನ್ಯ ಜನರಲ್ಲೂ ಇತ್ತು, ಇದು ಆಘಾತಕ್ಕೆ ಕಾರಣವಾಯಿತು. ತಮ್ಮ ಬಳಿಯಿರುವ ಹಣವನ್ನು ಬದಲಾಯಿಸಿಕೊಳ್ಳಲು ಜನರು ಬ್ಯಾಂಕುಗಳ ಎದುರು ಸಾಲುಗಟ್ಟಿ ನಿಂತರು. ರೈಲ್ವೆ, ವಿಮಾನ ನಿಲ್ದಾಣ, ಸರ್ಕಾರಿ ಬಸ್​ ಟಿಕೆಟ್​ ಬುಕ್ಕಿಂಗ್​, ಆಸ್ಪತ್ರೆ ಹಾಗೂ ಪೆಟ್ರೋಲ್​ ಬಂಕ್​ಗಳಲ್ಲಿ ನವೆಂಬರ್​ 11ರ ವರೆಗೂ ಈ ನೋಟುಗಳನ್ನು ಬಳಸಲು ಅವಕಾಶವಿತ್ತು.

ಇತರೆ ದೇಶಗಳಲ್ಲೂ ಅಮಾನ್ಯೀಕರಣ ಮಡಲಾಗಿತ್ತು. 1984ರಲ್ಲಿ ಮುಹಮ್ಮದು ಬುಹಾರಿ ನೇತೃತ್ವದ ಸರ್ಕಾರ ಹೊಸ ನೋಟುಗಳನ್ನು ಪರಿಚಯಿಸಿ ಹಳೆ ನೋಟುಗಳನ್ನು ನಿಷೇಧಿಸಿತು. ಆದರೆ ಇದರಿಂದಾಗಿ ಹಣದುಬ್ಬರ ಹಾಗೂ ಸಾಲದ ಹೊರೆ ಹೆಚ್ಚಾಗಿ ಆರ್ಥಿಕತೆ ಕುಸಿಯಿತು. ಅಲ್ಲದೇ ಮುಹಮ್ಮದು ಬುಹಾರಿ ಸರ್ಕಾರ ಇದನ್ನು ನಿಭಾಯಿಸುವಲ್ಲಿ ವಿಫಲವಾಯಿತು.

1982ರಲ್ಲಿ ತೆರಿಗೆ ವಂಚಕರನ್ನು ತಡೆಯಲು ಘಾನಾ ದೇಶದಲ್ಲಿ 50 ಸಿಡಿ ನೋಟುಗಳನ್ನು ನಿಷೇಧ ಮಾಡಲಾಯಿತು. ಅಧಿಕ ದ್ರವ್ಯತೆ ಮತ್ತು ಭ್ರಷ್ಟಾಚಾರ ತಡೆಗಟ್ಟುವ ಗುರಿಯನ್ನು ಹೋದಲಾಗಿತ್ತು. ಇದು ದೇಶದ ಜನರು ಕಪ್ಪು ಮಾರುಕಟ್ಟೆ, ವಿದೇಶಿ ಕರೆನ್ಸಿ ಬೆಂಬಲಿಸಲು ಕಾರಣವಾಯಿತು. ಕರೆನ್ಸಿಗಾಗಿ ಕಪ್ಪುಹಣದ ಮಾರುಕಟ್ಟೆ ವ್ಯಾಪಕವಾಗಿ ಬೆಳೆಯಿತು. ಈ ಎಲ್ಲ ಅಂಶಗಳು ಅರ್ಥವ್ಯವಸ್ಥೆಯನ್ನು ದುರ್ಬಲನನ್ನಾಗಿಸಿತ್ತು. ಈ ರೀತಿ ಅನೇಕ ದೇಶಗಳಲ್ಲಿ ನೋಟು ಅಮಾನ್ಯೀಕರಣ ವಿಫಲವಾಗಿತ್ತು. ಭಾರತದಲ್ಲೂ ಅನೇಕ ಮಧ್ಯಮ ಕೈಗಾರಿಕೆಗಳು ಮುಚ್ಚಿದವು.

ಇಷ್ಟೆಲ್ಲ ಸಂಕಷ್ಟದ ನಂತರವೂ ಜನರು ಪ್ರಧಾನಿ ಮೋದಿಯವರ ಕುರಿತು ವಿಶ್ವಾಸ ವ್ಯಕ್ತಪಡಿಸಿದರು. ಮೋದಿ ದೇಶಕ್ಕಾಗಿ ಒಳ್ಳೆಯದನ್ನು ಮಾಡಿದ್ದಾರೆ, ಅವರಿಗೆ ನಾವು ಬೆಂಬಲಿಸುತ್ತೇವೆ ಎಂದರು. ಕೆಲವೆಡೆ ಕ್ಯೂನಲ್ಲಿ ನಿಂತಿದ್ದಾಗ ಹೃದಯಾಘಾತವಾಗಿ ಮೃತಪಟ್ಟ ಘಟನೆಗಳೂ ನಡೆದವು. ಆಟೊಮೊಬೈಲ್​​, ಕೃಷಿ, ಕೈಗಾರಿಕೆ ಕ್ಷೇತ್ರಗಳಿಗೆ ಹಿನ್ನಡೆ ಆಯಿತು. ಆದರೆ ನೋಟು ಅಮಾನ್ಯೀಕರಣದ ಪರಿಣಾಮ ಡಿಜಿಟಲ್​ ವಹಿವಾಟು ಗಗನಕ್ಕೇರಿತು. ಡಿಜಿಟಲ್​ ವಹಿವಾಟು ಹೆಚ್ಚಾಗಿ, ಯುಪಿಐ ಬಳಕೆ ಸಾಮಾನ್ಯ ಜನರಿಗೆ, ತಳ್ಳುಗಾಡಿ ವ್ಯಾಪಾರಿಗಳಿಗೂ ಅಭ್ಯಾಸ ಆಯಿತು ಈ ಡಿಜಿಟಲ್​​​​ ವಾತಾವರಣವು ಕೋವಿಡ್​​- 19 ರ ಸಮಯದಲ್ಲಿ ಜನರನ್ನು ಕಾಪಾಡಿತು. ಹಣಕ್ಕಾಗಿ ಪರದಾಡುವುದನ್ನು ತಪ್ಪಿಸಿತು. ಹಾಗಾಗಿ ಜನರಿಗೆ ಕಷ್ಟವಾಗಿದ್ದರೂ, ಸರ್ಕಾರ ಸಾಕಷ್ಟು ಪ್ರಯತ್ನ ಮಾಡಿದೆ ಎಂಬ ಅಭಿಪ್ರಾಯ ಜನರಲ್ಲಿದೆ.

ಪ್ರಶ್ನೆ 09: ನರೇಂದ್ರ ಮೋದಿ ಅವಧಿಯಲ್ಲಿ ವಿದೇಶಾಂಗ ನೀತಿ ಹೇಗಿದೆ..?

ಭಾರತವನ್ನು ಇಂದು ವಿಶ್ವಗುರು ಎಂದು ಕರೆಯಲಾಗುತ್ತಿದೆ. ಇದಕ್ಕೆ ಕಾರಣ ಕಳೆದ 9 ವರ್ಷಗಳಲ್ಲಿ ಭಾರತ ವಿಶ್ವದರ್ಜೆಯಲ್ಲಿ ಕೈಗೊಂಡು ಕೆಲವು ಪ್ರಮುಖ ನಿರ್ಣಯಗಳು. ಅಮೆರಿಕ, ಇಂಗ್ಲೆಂಡ್​, ರಷ್ಯಾ, ಫ್ರಾನ್ಸ್, ಜರ್ಮನಿಯಂತಹ ಅಗ್ರಗಣ್ಯರಾಜ್ಯಗಳ ಜೊತೆಗೆ ಪಫುವಾ ನ್ಯೂಗಿನಿಯಾದಂತಹ ಸಣ್ಣಪುಟ್ಟ ರಾಷ್ಟ್ರಗಳ ಜೊತೆಯೂ ಉತ್ತರ ಬಾಂಧವ್ಯವನ್ನು ಭಾರತ ಹೊಂದಿದೆ.

ವ್ಯಾಕ್ಸಿನ್​ ಮೈತ್ರಿ – ಕೊವಿಡ್​ ವೇಳೆ ಸಣ್ಣಪುಟ್ಟ ರಾಷ್ಟ್ರಗಳು ಲಸಿಕೆ ಸಿಗದೆ ಪರದಾಡುತ್ತಿದ್ದಾಗ 100ಕ್ಕೂ ಹೆಚ್ಚು ದೇಶಗಳಿಗೆ 30 ಕೋಟಿ ವ್ಯಾಕ್ಸಿನ್​ನ್ನ ಭಾರತ ಉಚಿತವಾಗಿ ನೀಡಿತು. ಭಾರತ ತನ್ನ ಬದ್ಧವೈರಿ ಪಾಕಿಸ್ತಾನವನ್ನು ವಿಶ್ವಮಟ್ಟದಲ್ಲಿ ಮೂಲೆಗುಂಪು ಮಾಡಿತು. ಭಯೋತ್ಪಾದನೆಗೆ ಬೆಂಬಲ, ಹಣಕಾಸಿನ ನೆರವು ನೀಡುತ್ತಿರುವ ಕಾರಣಕ್ಕೆ ವಿಶ್ವದ ಪ್ರಮುಖ ವೇದಿಕೆಗಳಲ್ಲಿ ಪದೇಪದೆ ಪಾಕಿಸ್ತಾನದ ಮಾನ ಹರಾಜು ಹಾಕುವ ಮೂಲಕ ಮೂಲೆಗುಂಪು ಮಾಡಲಾಗಿದೆ. ಅಂತಾರಾಷ್ಟ್ರೀಯ ಬಿಕ್ಕಟ್ಟು, ಸಂಘರ್ಷಗಳ ವಿಚಾರ ಬಂದಾಗ ಮೋದಿ ಸರ್ಕಾರ ಭಾರತದ ಹಿತಾಸಕ್ತಿಗೆ ಮೊದಲ ಪ್ರಾಶಸ್ತ್ರ್ಯ ಕೊಡುತ್ತಿದೆ. ಉಕ್ರೇನ್​- ರಷ್ಯಾ ಯುದ್ಧದ ಸಂದರ್ಭದಲ್ಲಿ ಪಾಶ್ಚಾತ್ಯ ರಾಷ್ಟ್ರಗಳ ವಿರೋಧದ ನಡುವೆಯೂ ರಷ್ಯಾದಿಂದ ಇಂಧನ ಆಮದು ಮಾಡಿಕೊಳ್ಳೋ ಮೂಲಕ ದಿಟ್ಟತನವನ್ನು ತೋರಿತು.

ಚೀನಾ ಭಾರತದ ಮೇಲೆ ದಾಳಿ ಮಾಡಲು ಮುಂದಾದಾಗ ಆ ದೇಶವನ್ನು ಸಮರ್ಥವಾಗಿ ಎದುರಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಶಕ್ತಿಯನ್ನ ಪ್ರದರ್ಶಿಸಿತು. ವಿದೇಶಾಂಗ ನೀತಿಯಲ್ಲಿ ಅನುಸರಿಸುತ್ತಿದ್ದ ಅಡ್ಡಗೋಡೆ ಮೇಲೆ ದೀಪವಿಡುವ ಸಂಪ್ರದಾಯಕ್ಕೆ ಬಹುತೇಕ ತಿಲಾಂಜಲಿ ಇಡಲಾಗಿದೆ. ಚೀನಾ ಇರಬಹುದು, ಪಾಕಿಸ್ತಾನ ಇರಬಹುದು ಅದರ ಕುರಿತು ಸ್ಪಷ್ಟ ಶಬ್ದಗಳಲ್ಲಿ ಖಂಡನೆ ಮಾಡಲಾಗುತ್ತಿದೆ.

ಪ್ರಶ್ನೆ 10: ಈಗ ಚುನಾವಣೆ ನಡೆದರೆ ಮೋದಿ ನೋಡಿ ಬಿಜೆಪಿಗೆ ಮತ ಹಾಕ್ತೀರಾ..?

ಕೇವಲ 3 ವಾರಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಅಧಿಕಾರ ಕಳೆದುಕೊಂಡು ಕೇವಲ 66 ಸ್ಥಾನಗಳಿಗಷ್ಟೇ ಸೀಮಿತವಾಗಿತ್ತು. ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್​ 135 ಸೀಟುಗಳನ್ನ ಗೆಲ್ಲೋ ಮೂಲಕ ಭರ್ಜರಿ ಬಹುಮತ ಪಡೆದು ಅಧಿಕಾರಕ್ಕೆ ಬಂದಿದೆ. ಈ ಸರ್ವೇಯಲ್ಲಿ ಜನ ಹೇಳಿರೋದನ್ನ ಗಮನಿಸಿದ್ರೆ, ರಾಜ್ಯ ಸರ್ಕಾರ ಮತ್ತು ಸ್ಥಳೀಯ ಆಡಳಿತದ ಬಗ್ಗೆ ವಿರೋಧ ಎದ್ದು ಕಾಣುತ್ತಿದೆ.

ಆದ್ರೆ ಇದೇ ವೇಳೆ ನರೇಂದ್ರ ಮೋದಿ ಬಗ್ಗೆ ತದ್ವಿರುದ್ದವಾದ ನಿಲುವನ್ನು ಹೊಂದಿರುವುದು ಕಾಣುತ್ತಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತದ ಬಗ್ಗೆ ಉತ್ತಮ ಅಭಿಪ್ರಾಯ ಕಂಡುಬಂದಿದೆ. ಕರ್ನಾಟಕದ ಜನರು ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ವಿಭಿನ್ನವಾಗಿ ಮತ ನೀಡುತ್ತಾರೆ. ಎರಡೂ ಚುನಾವಣೆಯಲ್ಲಿ ವಿಭಿನ್ನ ವಿಚಾರಗಳನ್ನು ಪರಿಗಣಿಸುತ್ತಾರೆ ಎನ್ನುವುದು 2013 ಹಾಗೂ 2014ರಲ್ಲೂ ಸಾಬೀತಾಗಿದೆ. 2013ರಲ್ಲಿ ಕಾಂಗ್ರೆಸ್​​​​​ ಭರ್ಜರಿ ಜನಾದೇಶದೊಂದಿಗೆ ಸರ್ಕಾರ ರಚನೆ ಮಾಡಿತ್ತು, ಆಗ ಬಿಜೆಪಿಯೇ ಅತಿ ಹೆಚ್ಚು ಸಂಸತ್​ ಸದಸ್ಯರನ್ನು ಹೊಂದಿತು.

ರಾಜ್ಯ ಬಿಜೆಪಿಯಲ್ಲಿ ಪ್ರಮುಖವಾಗಿ ಸ್ಥಳೀಯ ನಾಯಕರ ಕೊರತೆ ಕಾರಣಕ್ಕೆ ಕಾಂಗ್ರೆಸ್​​ನತ್ತ ಜನರು ನೋಡಿದರು. ಆದರೆ ಕೇಂದ್ರದಲ್ಲಿ ಗಟ್ಟಿ ನಿರ್ಧಾರ ಕೈಗೊಳ್ಳುವ ನಾಯಕ ಎಂದು ಮೋದಿ ಪ್ರಸಿದ್ಧರಾಗಿದ್ದಾರೆ, ಅದರಲ್ಲೂ ಪಾಕಿಸ್ತಾನ-ಚೀನಾ-ಅಮೆರಿಕದಂತಹ ರಾಷ್ಟ್ರಗಳೊಂದಿಗೆ ಸರಿಯಾದ ವ್ಯವಹಾರ ಮಾಡಲು ಮೋದಿಯೇ ಸರಿ ಎನ್ನಿಸುತ್ತಿದೆ. ಈ ಎಲ್ಲ ಕಾರಣಗಳಿಂದಾಗಿ ಲೋಕಸಭೆಯಲ್ಲಿ ನರೇಂದ್ರ ಮೋದಿಗೇ ಬೆಂಬಲ ನೀಡಲು ಹೆಚ್ಚಿನ ಜನರು ಒಲವು ವ್ಯಕ್ತಪಡಿಸಿದ್ದಾರೆ.

Exit mobile version