Site icon Vistara News

ವಿಸ್ತಾರ TOP 10 NEWS | ನಿಗಮಾಧ್ಯಕ್ಷರ ರದ್ದತಿಯಿಂದ 5G ಹರಾಜಿನವರೆಗೆ ದಿನದ ಪ್ರಮುಖ ಸುದ್ದಿಗಳಿವು

vistara TOP 10 news 12072022

ಬೆಂಗಳೂರು: ರಾಜ್ಯ ಸರ್ಕಾರ ವಿಧಾನಸಭೆ ಚುನಾವಣೆಯ ಮೂಡ್‌ಗೆ ಹೊರಳುತ್ತಿರುವ ಮುನ್ಸೂಚನೆ ನೀಡಿದ್ದು, 52 ನಿಗಮ ಮಂಡಳಿಗಳ ನಾಮನಿರ್ದೇಶನಗಳನ್ನು ರದ್ದುಗೊಳಿಸಿದೆ. ಚುನಾವಣೆಗೂ ಮುನ್ನ ಪಕ್ಷ ಸಂಘಟನಾತ್ಮಕ ಶಕ್ತಿ ವರ್ಧನೆಗೆ ಈ ನಡೆ ಎನ್ನಲಾಗುತ್ತಿದೆ. ಚಾಮರಾಜಪೇಟೆ ಮೈದಾನವನ್ನು ಬಿಬಿಎಂಪಿ ಸುಪರ್ದಿಗೆ ಪಡೆಯಬೇಕೆಂದು ಮಂಗಳವಾರ ಬಂದ್‌ ನಡೆದಿದೆ. ಎಸಿಬಿ ಹಾಗೂ ಎಸಿಬಿ ಅಧ್ಯಕ್ಷ ಸೀಮಂತ್‌ಕುಮಾರ್‌ ಸಿಂಗ್‌ ಅವರ ವಿಚಾರಣೆಯನ್ನು ಮೂರು ದಿನ ಮುಂದೂಡುವಂತೆ ಕರ್ನಾಟಕ ಹೈಕೋರ್ಟ್‌ಗೆ ಸುಪ್ರೀಂಕೋರ್ಟ್‌ ಹೇಳಿದೆ ಎನ್ನುವುದು ಸೇರಿದಂತೆ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. 52 ನಿಗಮ, ಮಂಡಳಿಗಳ ನೇಮಕ ರದ್ದು: ಬಿಜೆಪಿ ಕಾರ್ಯಕರ್ತರಿಗೆ ಅವಕಾಶ?
ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆ ಕೆಳಹಂತದ ನಾಯಕರು ಹಾಗೂ ಅಸಮಾಧಾನಿತ ಮುಖಂಡರನ್ನು ಸಮಾಧಾನಪಡಿಸುವ ಕಸರತ್ತಿಗೆ ರಾಜ್ಯ ಸರ್ಕಾರ ಮುಂದಾಗಿದೆ. ಇದೇ ಮೊದಲ ಬಾರಿಗೆ ಬಹುದೊಡ್ಡ ಪ್ರಮಾಣದಲ್ಲಿ ನಿಗಮ, ಮಂಡಳಿಗಳ ನಾಮನಿರ್ದೇಶನಗಳನ್ನು ರದ್ದುಪಡಿಸಿದೆ. ರಾಜ್ಯ ಸರ್ಕಾರದ 22 ಇಲಾಖೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುವ 52 ನಿಗಮ, ಮಂಡಳಿ, ಪ್ರಾಧಿಕಾರಗಳೆಲ್ಲದರ ಅಧ್ಯಕ್ಷರು, ಉಪಾಧ್ಯಕ್ಷರ ನಾಮನಿರ್ದೇಶನವನ್ನು ರದ್ದುಪಡಿಸಲಾಗಿದೆ ಎಂದು ಮುಖ್ಯ ಕಾರ್ಯದರ್ಶಿಯವರ ಕಚೇರಿಯಿಂದ ಹೊರಡಿಸಲಾದ ಆದೇಶದಲ್ಲಿ ತಿಳಿಸಲಾಗಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

2. Chamarajpet Bandh | ಅಂಗಡಿ-ಮುಂಗಟ್ಟು ಬಂದ್‌, ಜನತೆಗೆ ಸಂದ ಜಯವೆಂದ ಒಕ್ಕೂಟ
ಚಾಮರಾಜಪೇಟೆ ಮೈದಾನ ಬಿಬಿಎಂಪಿ ಸ್ವತ್ತಾಗಿದ್ದು, ವಕ್ಫ್‌ ಬೋರ್ಡ್‌ಗೆ ಬಿಟ್ಟು ಕೊಡಬಾರದು ಎಂದು ನಾಗರಿಕ ಒಕ್ಕೂಟ ಜುಲೈ 12ರ ಮಂಗಳವಾರ ಚಾಮರಾಜಪೇಟೆ ಬಂದ್‌ ನಡೆಯಿತು.ಮುಂಜಾನೆ 8ರಿಂದ ಸಂಜೆ 5 ಗಂಟೆ ತನಕ ಅಂಗಡಿ-ಮುಂಗಟ್ಟು, ಶಾಲೆಗಳು ಸೇರಿದಂತೆ ಇತರೆ ಖಾಸಗಿ ಕಚೇರಿಗಳೆಲ್ಲವೂ ಬಂದ್‌ ಆಗಿದ್ದವು. ನಿತ್ಯ ವಾಹನದಿಂದ ಗಿಜಿಗುಡುತ್ತಿದ್ದ ಮುಖ್ಯ ರಸ್ತೆಗಳೆಲ್ಲ ಬಿಕೋ ಎನ್ನುತ್ತಿದ್ದವು. ಇತ್ತ ಜನ ಸಂಚಾರವೂ ವಿರಳವಾಗಿತ್ತು. ಬಂದ್‌ ಯಶಸ್ವಿಯಾಗಿದ್ದು, ಇದು ಜನತೆಗೆ ಸಂದ ಜಯ ಎಂದು ಒಕ್ಕೂಟ ಅಭಿಪ್ರಾಯಪಟ್ಟಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

೩. ಎಸಿಬಿ, ಸೀಮಂತ್‌ ಕುಮಾರ್‌ ಸಿಂಗ್‌ಗೆ 3 ದಿನ ರಿಲೀಫ್‌ : ವಿಚಾರಣೆ ಮುಂದೂಡುವಂತೆ ಸುಪ್ರೀಂ ಮನವಿ
ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ವೇಳೆ ಹೈಕೋರ್ಟ್‌ ನ್ಯಾಯಮೂರ್ತಿ ಎಚ್‌.ಪಿ. ಸಂದೇಶ್‌ ಅವರಿಂದ ಆಕ್ರೋಶಕ್ಕೆ ಒಳಗಾಗಿರುವ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಹಾಗೂ ಎಸಿಬಿ ಮುಖ್ಯಸ್ಥ ಸೀಮಂತ್‌ಕುಮಾರ್‌ ಸಿಂಗ್‌ಗೆ ಮೂರು ದಿನ ರಿಲೀಫ್‌ ಸಿಕ್ಕಿದೆ. ನ್ಯಾ. ಎಚ್‌.ಪಿ. ಸಂದೇಶ್‌ ಅವರು ತಮ್ಮ ವಿರುದ್ಧ ಮೌಖಿಕ ಹೇಳಿಕೆ ನೀಡುವುದರಿಂದ ರಕ್ಷಣೆ ನೀಡಬೇಕೆಂಬ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಮುಖ್ಯನ್ಯಾಯಮೂರ್ತಿ ಎನ್‌.ವಿ. ರಮಣ, ನ್ಯಾ. ಕೃಷ್ಣ ಮುರಾರಿ ಹಾಗೂ ಹಿಮಾ ಕೊಹ್ಲಿ ಮಂಗಳವಾರ ನಡೆಸಿದರು. ಮೂರು ದಿನ ವಿಚಾರಣೆಯನ್ನು ಮುಂದೂಡಿ ಎಂದು ಕರ್ನಾಟಕ ಹೈಕೋರ್ಟ್‌ಗೆ ಮನವಿ ಮಾಡಿದರು. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

೪. Chief Minister tour | ಪ್ರಕೃತಿ ವಿಕೋಪ ಶಾಶ್ವತ ಪರಿಹಾರಕ್ಕೆ ಮುಂದಿನ ವಾರದಿಂದಲೇ ಅಧ್ಯಯನ: ಬೊಮ್ಮಾಯಿ
ಪ್ರಕೃತಿ ವಿಕೋಪ ಸಂಬಂಧ ಶಾಶ್ವತ ಪರಿಹಾರಕ್ಕೆ ಸರ್ಕಾರ ಮುಂದಾಗಿದ್ದು, ಗುಡ್ಡ ಕುಸಿತ ಮತ್ತು ಭೂಕಂಪನಕ್ಕೆ ನಿಖರ ಕಾರಣಗಳ ಬಗ್ಗೆ ಅಧ್ಯಯನ ನಡೆಸಲು ಮುಂದಿನ ವಾರ ರಾಜ್ಯಕ್ಕೆ ವಿಜ್ಞಾನಿಗಳ ತಂಡ ಆಗಮಿಸಲಿದೆ. ಅವರಿಂದ ವರದಿ ಪಡೆದು ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಮಡಿಕೇರಿಯಲ್ಲಿ ಮಳೆ ಹಾನಿ ಪ್ರದೇಶಗಳಿಗೆ ಮಂಗಳವಾರ ಭೇಟಿ ನೀಡಿದ ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿಎಂ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಭೂಕಂಪನ ಮತ್ತು ಗುಡ್ಡ ಕುಸಿತ ಸಂಬಂಧ ಅಧ್ಯಯನ ಮಾಡಿ ವರದಿ ನೀಡುವಂತೆ ನವ ದೆಹಲಿಯಲ್ಲಿ ಇರುವ ರಾಷ್ಟ್ರೀಯ ಮಟ್ಟದ ಭೂವಿಜ್ಞಾನ ಸಂಸ್ಥೆಗಳಿಗೆ ಪತ್ರ ಬರೆದಿದ್ದೇನೆ. ಅವರು ಮುಂದಿನ ವಾರ ರಾಜ್ಯಕ್ಕೆ ಭೇಟಿ ನೀಡಿ ಅಧ್ಯಯನ ಪ್ರಾರಂಭಿಸಲಿದ್ದಾರೆ ಎಂದು ತಿಳಿಸಿದರು. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)
Rain News| ಭೀಕರ ಮಳೆಗೆ ಬೀಳುತ್ತಿವೆ ಮನೆಗಳು, ತತ್ತರಿಸುತ್ತಿದೆ ಬದುಕು

5. ರಾಜಕೀಯದಿಂದ ಆರ್‌ಎಸ್‌ಎಸ್‌ ದೂರ, ಸಂಘಕ್ಕೆ ರಾಜಕೀಯ ಹೊಂದುವುದಿಲ್ಲ: ಡಾ. ಮೋಹನ್‌ ಭಾಗವತ್‌
ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್‌ಎಸ್‌ಎಸ್‌) ಸರಸಂಘ ಚಾಲಕರಾದ ಡಾ. ಮೋಹನ್‌ ಭಾಗವತ್‌ ಅವರು ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದಲ್ಲಿ ದಲಿತ, ಹಿಂದುಳಿದ ವರ್ಗಗಳ ೨೧ ಮಠಾಧೀಶರೊಂದಿಗೆ ಮಂಗಳವಾರ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸಂವಾದದಲ್ಲಿ ಅನೇಕ ಸ್ವಾಮೀಜಿಗಳು ಕೇಳಿದ ಪ್ರಶ್ನೆಗಳಿಗೆ ಮೋಹನ್‌ ಭಾಗವತ್‌ ಉತ್ತರ ಕೊಟ್ಟರು. ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋಹನ್‌ ಭಾಗವತ್, ಸಂಘಕ್ಕೆ ಹೆಚ್ಚು ಹೊಂದುವುದು ರಾಜಕೀಯ ಅಲ್ಲ; ಧಾರ್ಮಿಕತೆ ಮತ್ತು ಆಧ್ಯಾತ್ಮಿಕತೆ. ಹಾಗಾಗಿ ಸಂಘಕ್ಕೆ ರಾಜಕೀಯದವರಿಗಿಂತ ಸ್ವಾಮೀಜಿಗಳೇ ಹೆಚ್ಚು ಹತ್ತಿರವಾಗುತ್ತಾರೆ ಎಂದರು. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

6. ಕೇರಳದ ಆರ್‌ಎಸ್‌ಎಸ್‌ ಕಚೇರಿ ಮೇಲೆ ಮುಂಜಾನೆ ಬಾಂಬ್‌ ದಾಳಿ; ಕಿಟಕಿ ಗಾಜುಗಳು ಪುಡಿಪುಡಿ
ಕೇರಳದ ಕಣ್ಣೂರ್‌ ಜಿಲ್ಲೆಯ ಪಯ್ಯನ್ನೂರ್‌ನಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS)ಕಚೇರಿ ಮೇಲೆ ಮಂಗಳವಾರ ಮುಂಜಾನೆ (ಜುಲೈ 12) ಬಾಂಬ್‌ ದಾಳಿಯಾಗಿದೆ. ಕಟ್ಟಡದ ಕಿಟಕಿಯ ಗಾಜುಗಳೆಲ್ಲ ಒಡೆದು ಚೂರಾಗಿವೆ ಎಂದು ಪಯ್ಯನ್ನೂರ್‌ ಪೊಲೀಸರು ತಿಳಿಸಿದ್ದಾರೆ. ಹಾಗೇ, ಬಾಂಬ್‌ ದಾಳಿಯಿಂದ ಹೆಚ್ಚೇನೂ ಅಪಾಯವಾಗಿಲ್ಲ. ಯಾರದ್ದೂ ಜೀವ ಹಾನಿಯಾಗಿಲ್ಲ. ಯಾರೂ ಗಾಯಗೊಂಡಿಲ್ಲ ಎಂದು ಹೇಳಿದ್ದಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

೭. ಶಾಲೆಗಳಲ್ಲಿ ಭಗವದ್ಗೀತೆ ಕಡ್ಡಾಯ ಕಲಿಕೆ ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹೊಕ್ಕ ಮುಸ್ಲಿಂ ಪಂಡಿತರ ಸಂಘಟನೆ
ಮುಂದಿನ ಶೈಕ್ಷಣಿಕ ವರ್ಷದಿಂದ 6ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಕಲಿಕೆಯನ್ನು ಕಡ್ಡಾಯಗೊಳಿಸಿರುವ ಗುಜರಾತ್‌ನ ಶಿಕ್ಷಣ ಇಲಾಖೆ ನಿರ್ಣಯ ಪ್ರಶ್ನಿಸಿ ಮುಸ್ಲಿಂ ಸಂಘಟನೆಯೊಂದು ಹೈಕೋರ್ಟ್‌ ಮೊರೆ ಹೊಕ್ಕಿದೆ. ದೇಶದ ಪ್ರಮುಖ ಮುಸ್ಲಿಂ ಪಂಡಿತರ ಸಂಘಟನೆಯಾಗಿರುವ ಜಮಿಯತ್ ಉಲಮಾ-ಎ-ಹಿಂದ್ ಸಲ್ಲಿಸಿದ ಅರ್ಜಿಯನ್ನು ಸ್ವೀಕರಿಸಿದ ಮುಖ್ಯ ನ್ಯಾಯಮೂರ್ತಿ ಅರವಿಂದ ಕುಮಾರ್‌ ಮತ್ತು ನ್ಯಾಯಮೂರ್ತಿ ಅಶುತೋಷ್ ಜೆ ಶಾಸ್ತ್ರಿ ಅವರಿದ್ದ ವಿಭಾಗೀಯ ಪೀಠ ಸರ್ಕಾರದ ನಿರ್ಧಾರಕ್ಕೆ ತಡೆ ನೀಡಬೇಕೆಂಬ ಅರ್ಜಿದಾರರ ಮನವಿ ಪರಿಗಣಿಸಲು ನಿರಾಕರಿಸಿತು. ಆದರೆ, ಈ ಬಗ್ಗೆ ಸರಕಾರದ ಅಭಿಪ್ರಾಯವೇನು ಎಂಬ ಬಗ್ಗೆ ತಿಳಿದುಕೊಳ್ಳಲು ಬಯಸಿತು. ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ 18ಕ್ಕೆ ಮುಂದೂಡಲಾಗಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

8. 5G ಹರಾಜು: ಜಿಯೊ, ಏರ್‌ಟೆಲ್‌, ವೊಡಾಫೋನ್‌ ಐಡಿಯಾ ಜತೆ ಅದಾನಿ ಡೇಟಾದಿಂದಲೂ ಬಿಡ್!
ಬಿಲಿಯನೇರ್‌ ಗೌತಮ್‌ ಅದಾನಿ ನೇತೃತ್ವದ ಅದಾನಿ ಡೇಟಾ ನೆಟ್‌ವರ್ಕ್ಸ್‌, ರಿಲಯನ್ಸ್‌ ಜಿಯೊ, ಭಾರ್ತಿ ಏರ್‌ಟೆಲ್‌ ಮತ್ತು ವೊಡಾಫೋನ್‌ ಐಡಿಯಾ ಮುಂಬರುವ ೫ಜಿ ಸ್ಪೆಕ್ಟ್ರಮ್‌ ಹರಾಜಿನಲ್ಲಿ ಬಿಡ್‌ ಸಲ್ಲಿಸಿವೆ. ದೂರಸಂಪರ್ಕ ಇಲಾಖೆ ಮಂಗಳವಾರ ಪಟ್ಟಿ ಬಿಡುಗಡೆಗೊಳಿಸಿದೆ. ಜುಲೈ ೨೬ರಿಂದ ಸ್ಪೆಕ್ಟ್ರಮ್‌ ಹರಾಜು ಆರಂಭವಾಗಲಿದೆ. ಅದಾನಿ ಡೇಟಾ ನೆಟ್‌ವರ್ಕ್ಸ್‌ ಪ್ರವೇಶದಿಂದಾಗಿ ಹಾಗೂ ಈಗಾಗಲೇ ಪ್ರಮುಖ ಟೆಲಿಕಾಂ ಕಂಪನಿಗಳಾಗಿರುವ ರಿಲಯನ್ಸ್‌ ಜಿಯೊ, ಭಾರ್ತಿ ಏರ್‌ಟೆಲ್‌ನಿಂದ ಹರಾಜಿನ ಕಣದಲ್ಲಿ ತೀವ್ರ ಪೈಪೋಟಿಯನ್ನು ನಿರೀಕ್ಷಿಸಲಾಗಿದೆ. ಅರ್ಜಿಗಳನ್ನು ಹಿಂತೆಗೆದುಕೊಳ್ಳಲು ಜುಲೈ ೧೯ರ ತನಕ ಕಾಲಾವಕಾಶ ಇದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

೯. Shivaraj Kumar Birthday | ಜನುಮದಿನದ ಸಂಭ್ರಮದಲ್ಲಿ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌
ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ಗೆ ಮಂಗಳವಾರ (ಜು.12) 60ನೇ ವರುಷದ ಸಂಭ್ರಮ. ಕನ್ನಡ ಚಿತ್ರರಂಗದಲ್ಲಿ ಶಿವಣ್ಣ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಪುನೀತ್‌ ರಾಜ್‌ಕುಮಾರ್‌ ನಿಧನದ ಹಿನ್ನೆಲೆಯಲ್ಲಿ ಈ ವರ್ಷ ತಾವು ಹುಟ್ಟು ಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಶಿವಣ್ಣ ಪ್ರಕಟಿಸಿದ್ದರು. ನಟಿಸಿದ ಮೂರು ಚಿತ್ರಗಳು, ಅಂದರೆ ಆನಂದ್‌, ರಥಸಪ್ತಮಿ, ಮನಮೆಚ್ಚಿದ ಹುಡುಗ ಸಿನಿಮಾಗಳು ಒಂದರ ಹಿಂದೊಂದು 100 ದಿನ ಪ್ರದರ್ಶನ ಕಂಡದ್ದರಿಂದ ಹ್ಯಾಟ್ರಿಕ್‌ ಹೀರೋ ಎಂಬ ಬಿರುದು ಪಡೆದವರು ಶಿವಣ್ಣ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

10. IND vs ENG ODI ; ಟೂರ್ನಮೆಂಟ್‌ಗೆ ವಿರಾಟ್‌ ಕೊಹ್ಲಿ ಅಲಭ್ಯ
ವಿರಾಟ್‌ ಕೊಹ್ಲಿ ತೊಡೆ ಸಂದು ನೋವಿಗೆ ಒಳಗಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, IND vs ENG ODI ಸರಣಿಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಹೇಳಲಾಗಿದೆ. ಈ ವೇಳೆ ಪ್ರದರ್ಶನ ವೈಫಲ್ಯದ ಕಾರಣಕ್ಕೆ ಅವರು ಆಡಲು ಮುಂದಾಗುತ್ತಿಲ್ಲವೇ ಎಂಬ ಚರ್ಚೆಯೂ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ. ಟಿ೨೦ ಸರಣಿಯ ಮೂರನೇ ಪಂದ್ಯದ ವೇಳೆ ಅವರು ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಅವರು ಸೋಮವಾರ ಅಭ್ಯಾಸಕ್ಕೆ ಹೊರಟ ಟೀಮ್‌ ಇಂಡಿಯಾದ ಬಸ್‌ನಲ್ಲೂ ಕಾಣಿಸಿಕೊಂಡಿಲ್ಲ. ಆದರೆ, ಸಾಮಾಜಿಕ ಜಾಲತಾಣಗಳ ಚರ್ಚೆಗಳ ಪ್ರಕಾರ, ಪ್ರದರ್ಶನ ವೈಫಲ್ಯದಿಂದ ಒತ್ತಡಕ್ಕೆ ಬಿದ್ದಿರುವ ಕೊಹ್ಲಿ ಆಡುವುದು ಬೇಡ ಎಂದು ಟೀಮ್‌ ಇಂಡಿಯಾ ಮ್ಯಾನೇಜ್‌ಮೆಂಟ್‌ ನಿರ್ಧರಿಸಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

Exit mobile version