ಬೆಂಗಳೂರು: ಕೆರೆಗಳ ಒತ್ತುವರಿಯೋ, ಸರ್ಕಾರದ ಬೇಜವಾಬ್ದಾರಿಯೋ, ನಾಗರಿಕರು ರಾಜಕಾಲುವೆ ಒತ್ತುವರಿ ಮಾಡಿಕೊಂಡದ್ದೊ… ಒಟ್ಟಿನಲ್ಲಿ ಭಾರೀ ಮಳೆಯ ಹೊಡೆತವನ್ನು ತಾಳಲಾರದೆ ಐಟಿ ಸಿಟಿ ಬೆಂಗಳೂರು ಇದೀಗ ಸಂಪೂರ್ಣ ದ್ವೀಪವಾಗಿ ಪರಿವರ್ತನೆಯಾಗಿದೆ. ಒಂದೆಡೆ ಎಲ್ಲಿ ನೋಡಿದರೂ ಮಳೆ ನೀರು, ಮತ್ತೊಂದೆಡೆ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಮಠಾಧೀಶರ ಅನೈತಿಕ ಸಂಬಂಧ ವಿಚಾರ ಇದೀಗ ಮತ್ತೊಂದು ಮಗ್ಗುಲಿಗೆ ಹೊರಳಿದ್ದು, ಸ್ವಾಮೀಜಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿಇಟಿ ಕುರಿತು ಹೈಕೋರ್ಟ್ ತೀರ್ಪಿನ ವಿರುದ್ಧ ಸರ್ಕಾರ ಮೇಲ್ಮನವಿಗೆ ನಿರ್ಧರಿಸಿದೆ, ಪಾಕಿಸ್ತಾನದ ವಿರುದ್ಧದ ಸೋಲಿಗೆ ಬೌಲರ್ ಅರ್ಶ್‌ದೀಪ್ ಕಾರಣವೇ ಎಂಬ ಕುರಿತು ಅನೇಕ ಚರ್ಚೆ, ವಾಗ್ವಾದಗಳು ನಡೆದಿವೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
1. Bengaluru Rain | ಮುಳುಗಡೆಯಾದ ಬೆಂಗಳೂರು: ದೇಶದ ರಾಜಧಾನಿವರೆಗೂ ಚರ್ಚೆ
ನಗರದಲ್ಲಿ ರಾತ್ರಿಯಿಂದ ಸುರಿದ ಮಳೆಯಿಂದಾಗಿ ಜನ-ಜೀವನ ಅಸ್ತವ್ಯಸ್ತಗೊಂಡಿದೆ. ಮನೆಗಳಿಗೆ ನೀರು ನುಗ್ಗಿದ್ದು, ಬಡಾವಣೆಗಳೆಲ್ಲವೂ (Bengaluru Rain News) ಜಲಾವೃತಗೊಂಡಿದೆ. ನಗರದ ರಸ್ತೆಗಳೆಲ್ಲವೂ ನದಿಯಂತಾಗಿದ್ದು ಜನರು ಓಡಾಡಲು ತೆಪ್ಪವನ್ನು ಬಳಸುವ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದೆಲ್ಲೆಡೆ ಬೆಂಗಳೂರಿನ ಅವ್ಯವಸ್ಥೆಯ ಚರ್ಚೆ ನಡೆಯುತ್ತಿದೆ.
ಪ್ರಮುಖವಾಗಿ ಬೆಳ್ಳಂದೂರು, ಸರ್ಜಾಪುರ ರಸ್ತೆ, ವೈಟ್‌ಫೀಲ್ಡ್, ಹೊರ ವರ್ತುಲ ರಸ್ತೆ ಮತ್ತು ಬಿಇಎಂಎಲ್ ಲೇಔಟ್ ಹಾಗೂ ಮಾರತ್‌ಹಳ್ಳಿ ಹೆಚ್ಚು ಮಳೆ ಬಾಧಿತ ಪ್ರದೇಶಗಳಾಗಿವೆ. ಗಂಟೆಗಳ ಕಾಲ ಸುರಿದ ಮಳೆಯಿಂದಾಗಿ ರಾಜಧಾನಿಯ ಚಿತ್ರಣವೇ ಬದಲಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಮಳೆ ಅವಾಂತರವನ್ನು ಹಂಚಿಕೊಂಡಿದ್ದಾರೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಕೋವಿಡ್ ನಂತರ ಆರಂಭವಾಗಿದ್ದ ಕಚೇರಿಗಳನ್ನು ಬಂದ್ ಮಾಡಿರುವ ORR ವ್ಯಾಪ್ತಿಯ ಅನೇಕ ಐಟಿ ಕಂಪನಿಗಳು ಒಂದು ವಾರ ವರ್ಕ್ ಫ್ರಂ ಹೋಮ್ ಆದೇಶಿಸಿದೆ.
2. ಬೆಂಗಳೂರಿಗೆ ನೀರು ಸರಬರಾಜು ಮಾಡುವ ಪಂಪ್‌ಹೌಸ್ ಮುಳುಗಡೆ, ಇನ್ನೂ ಎರಡು ದಿನ ನೀರಿನ ಸಮಸ್ಯೆ
ರಾಜಧಾನಿಯನ್ನು ನಡುಗಿಸಿರುವ ಮಹಾಮಳೆ (Rain News) ಕೇವಲ ರಸ್ತೆ, ಕಟ್ಟಡಗಳನ್ನು ಮುಳುಗಿಸಿದ್ದಲ್ಲ. ಕಾವೇರಿ ನೀರು ಸರಬರಾಜು ಮಾಡುವ ಯಂತ್ರಾಗಾರಗಳೂ ನೀರಿನಲ್ಲಿ ಮುಳುಗಿವೆ. ಹೀಗಾಗಿ ಮಂಡ್ಯ ಜಿಲ್ಲೆಯ ತೊರೆಕಾಡನಹಳ್ಳಿ (ಟಿ.ಕೆ. ಹಳ್ಳಿ) ಸಿಎಂ ಬಸವರಾಜ ಬೊಮ್ಮಾಯಿ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
“ನೀರು ತುಂಬಿದ ಎರಡು ಪಂಪ್ ಹೌಸ್ ಗಳನ್ನು ಸರಿಪಡಿಸುವ ಕೆಲಸ ಈಗಾಗಲೇ ಮಾಡಲಾಗುತ್ತಿದೆ. ಸ್ಟೇಜ್ 4 ಪಂಪ್ ಹೌಸ್ ನಲ್ಲಿ 12 ಅಡಿ ನೀರು ಹೊರಗೆ ತೆಗೆಯಲಾಗಿದೆ, ಇನ್ನೂ 11 ಅಡಿ ನೀರು ತೆಗೆಯಬೇಕು. ಮಧ್ಯರಾತ್ರಿ ಅಥವಾ ನಾಳೆ ಬೆಳಗ್ಗೆ ಒಳಗೆ ಈ ಕಾರ್ಯ ಮುಗಿಯಲಿದೆ” ಎಂದಿದ್ದಾರೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
3. ಮಡಿವಾಳೇಶ್ವರ ಮಠದ ಬಸವಸಿದ್ಧಲಿಂಗ ಸ್ವಾಮೀಜಿ ಆತ್ಮಹತ್ಯೆ: ಸಾವಿಗೆ ಕಾರಣವಾಯಿತಾ ಹೆಣ್ಮಕ್ಕಳ ಆ ಸಂಭಾಷಣೆ?
ಬೈಲಹೊಂಗಲ ತಾಲೂಕಿನ ನೇಗಿನಹಾಳ ಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿ ಬಸವಸಿದ್ಧಲಿಂಗ ಸ್ವಾಮೀಜಿ (50) ಸೋಮವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಠದ ಆವರಣದಲ್ಲಿರುವ ಅವರ ಮಲಗುವ ಕೋಣೆಯಲ್ಲಿಯೇ ಶ್ರೀಗಳು ನೇಣು ಹಾಕಿಕೊಂಡಿದ್ದಾರೆ. ಇತ್ತೀಚೆಗೆ ಇಬ್ಬರು ಹೆಣ್ಮಕ್ಕಳು ಪರಸ್ಪರ ಮಾತನಾಡುತ್ತಾ ಕೆಲವು ಲಿಂಗಾಯತ ಮಠಗಳ ಮಠಾಧಿಪತಿಗಳ ಕಾಮಕಾಂಡದ ಬಗ್ಗೆ ಉಲ್ಲೇಖಿಸಿದ್ದರು. ಅದರಲ್ಲಿ ಮಡಿವಾಳೇಶ್ವರ ಮಠದ ಶ್ರೀಗಳ ಹೆಸರು ಕೂಡಾ ಪ್ರಸ್ತಾಪವಾಗಿತ್ತು. ಇದರಿಂದ ಶ್ರೀಗಳು ನೊಂದಿದ್ದರು ಎಂದು ಹೇಳಲಾಗಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
4. ಮುರುಘಾಶ್ರೀ ಪ್ರಕರಣ | ಶ್ರೀಗಳಿಗೆ 9 ದಿನ ನ್ಯಾಯಾಂಗ ಬಂಧನ, ಜೈಲಿಗೆ ಶಿಫ್ಟ್
ಇಬ್ಬರು ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಬಂಧಿತರಾಗಿರುವ ಇಲ್ಲಿನ ಮುರುಘಾಮಠದ ಶ್ರೀ ಶಿವಮೂರ್ತಿ ಮುರುಘಾಶರಣರಿಗೆ ಒಂಬತ್ತು ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸೋಮವಾರ ಪೊಲೀಸ್ ಕಸ್ಟಡಿ ಅವಧಿ ಮುಕ್ತಾಯಗೊಂಡಿದೆ. ಹೀಗಾಗಿ ಅವರನ್ನು ಮತ್ತೆ 2ನೇ ಅಪರ ಮತ್ತು ಸತ್ರ ನ್ಯಾಯಾಧೀಶೆ ಬಿ.ಕೆ ಕೋಮಲಾ ಅವರ ಮುಂದೆ ಹಾಜರುಪಡಿಸಲಾಯಿತು. ಕೋರ್ಟ್ ಆದೇಶ ನೀಡುತ್ತಿದ್ದಂತೆಯೇ ಶ್ರೀಗಳನ್ನು ಡಿವೈಎಸ್‌ಪಿ ಕಚೇರಿಯಿಂದ ಹಳೇ ಬೆಂಗಳೂರು ರಸ್ತೆಯಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗುತ್ತಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
5. CET results Issue| ಹೈಕೋರ್ಟ್ ಆದೇಶ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರ್ಧಾರ
ರಿಪೀಟರ್‌ಗಳಿಗೆ ತೊಂದರೆಯಾಗುತ್ತಿದೆ ಎಂಬ ಕಾರಣಕ್ಕಾಗಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದ ಸಿಇಟಿ ಫಲಿತಾಂಶವನ್ನು ರದ್ದುಪಡಿಸಿ ಹೊಸದಾಗಿ ಪರಿಷ್ಕೃತ ಪಟ್ಟಿ ಪ್ರಕಟಿಸಬೇಕು ಎಂಬ ರಾಜ್ಯ ಹೈಕೋರ್ಟ್‌ನ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಈಗಾಗಲೇ ಕಾನೂನು ತಜ್ಞರ ಜತೆ ಮಾತುಕತೆ ನಡೆಸಲಾಗಿದೆ. ಯಾರಿಗೂ ಅನ್ಯಾಯ ಆಗದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮುಂದಾಗಿದ್ದೇವೆ. ಇದನ್ನು ಹೈಕೋರ್ಟ್‌ಗೆ ಮನವರಿಕೆ ಮಾಡಿಕೊಡುತ್ತೇವೆ. ಮಂಗಳವಾರ ದ್ವಿಸದಸ್ಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಸೋಮವಾರ ಬೆಳಗ್ಗೆ ಉನ್ನತ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಉನ್ನತ ಶಿಕ್ಷಣ ಸಚಿವ ಅಶ್ವತ್ಧನಾರಾಯಣ ಹೇಳಿದರು. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
6. ಶಿಕ್ಷಕರ ದಿನದಂದು ಸಾಧಕ ಶಿಕ್ಷಕರಿಂದ ಪಡೆಯೋಣ ಪ್ರೇರಣೆ
ದೇಶಾದ್ಯಂತ ಶಿಕ್ಷಕರ ದಿನಾಚರಣೆ ನಡೆಯುತ್ತಿರುವ ಬೆನ್ನಲ್ಲೆ ರಾಜ್ಯ ಸರ್ಕಾರದಿಂದಲೂ, ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ರಾಜ್ಯದ ಮೂಲೆಮೂಲೆಗಳಲ್ಲಿ ಅತ್ಯಂತ ಕಡಿಮೆ ಮೂಲಸೌಕರ್ಯ, ಸೌಲಭ್ಯಗಳ ನಡುವೆಯೇ ಮಕ್ಕಳ ಶ್ರೇಯೋಭಿವೃದ್ಧಿಗೆ ಅನೇಕ ಶಿಕ್ಷಕರು ಶ್ರಮಿಸುತ್ತಿದ್ದಾರೆ. ಪ್ರಸಕ್ತ ಸಾಲಿನ ರಾಜ್ಯ ಸರ್ಕಾರದ ಪ್ರಶಸ್ತಿಗೆ ಪಾತ್ರವಾಗಿರುವ ಉತ್ತಮ ಶಿಕ್ಷಕರ ಪರಿಚಯ, ಅವರ ಪರಿಶ್ರಮದ ಪ್ರೇರಣಾದಾಯಿ ಕಥೆಯನ್ನು ಈ ಲಿಂಕ್ ಬಳಸಿ ಓದಬಹುದು.
7. Liz Truss | ಇನ್ಫಿ ಮೂರ್ತಿ ಅಳಿಯ ಸುನಕ್‌ಗೆ ಕೈತಪ್ಪಿದ ಬ್ರಿಟನ್ ಪ್ರಧಾನಿ ಹುದ್ದೆ, ಲಿಜ್ ಟ್ರಸ್‌ಗೆ ಗೆಲುವು
ಹಲವು ಹಗರಣಗಳು, ಸಾಲು ಸಾಲು ಸಚಿವರ ರಾಜೀನಾಮೆಯಿಂದಾಗಿ ಬ್ರಿಟನ್‌ನಲ್ಲಿ ಉಂಟಾಗಿದ್ದ ರಾಜಕೀಯ ಬಿಕ್ಕಟ್ಟು ತಾರ್ಕಿಕ ಅಂತ್ಯ ಕಂಡಿದೆ. ನಿರೀಕ್ಷೆಯಂತೆಯೇ ಬ್ರಿಟನ್‌ನ ನೂತನ ಪ್ರಧಾನಿಯಾಗಿ ಲಿಜ್ ಟ್ರಸ್ (Liz Truss) ಅವರು ಆಯ್ಕೆಯಾಗಿದ್ದಾರೆ. ಆದರೆ, ಇನ್ಫಿ ನಾರಾಯಣಮೂರ್ತಿ ಅವರ ಅಳಿಯ, ಭಾರತ ಮೂಲದ ರಿಷಿ ಸುನಕ್ ಅವರು ಹಿನ್ನಡೆ ಅನುಭವಿಸಿದ್ದು, ಭಾರತೀಯರಿಗೆ ತುಸು ನಿರಾಸೆ ಮೂಡಿಸಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
8. Hijab Row | ಹಿಜಾಬ್ ನಿಷೇಧ ಪ್ರಶ್ನಿಸಿದ ಅರ್ಜಿ ವಿಚಾರಣೆ ಆರಂಭ, ಸೆ.7ಕ್ಕೆ ಮುಂದೂಡಿದ ಸುಪ್ರೀಂ
ಕರ್ನಾಟಕದಲ್ಲಿ ಉಂಟಾಗಿರುವ ಹಿಜಾಬ್ ವಿವಾದದ (Hijab Row) ಕುರಿತು ವಾದ-ಪ್ರತಿವಾದ ಆಲಿಸಿದ ಸುಪ್ರೀಂ ಕೋರ್ಟ್, ಸೆಪ್ಟೆಂಬರ್ 7ಕ್ಕೆ ವಿಚಾರಣೆ ಮುಂದೂಡಿದೆ. ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ನಿಷೇಧಿಸಿದ ಕರ್ನಾಟಕ ಸರ್ಕಾರದ ಆದೇಶವನ್ನು ಎತ್ತಿಹಿಡಿದ ರಾಜ್ಯ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಪೀಠವು, ಬುಧವಾರಕ್ಕೆ ವಿಚಾರಣೆ ಮುಂದೂಡಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
9. PSI Scam | ಸರ್ಕಾರಕ್ಕೆ ಹಣ ಕೊಟ್ಟಿದ್ದೇನೆ ಎಂದ ಬಿಜೆಪಿ ಶಾಸಕ: ಸರ್ಕಾರಕ್ಕೆ ಮತ್ತೊಂದು ಸಂಕಷ್ಟ
ಅನೇಕ ಸಂದರ್ಭಗಳಲ್ಲಿ ಆಡಿಯೊ, ವಿಡಿಯೋ ವೈರಲ್ ಆಗಿ ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಿರುವಾಗಲೇ ಇದೀಗ ಬಿಜೆಪಿ ಶಾಸಕರೊಬ್ಬರು ಪಿಎಸ್‌ಐ ಹಗರಣದಲ್ಲಿ ಹಣ ಪಡೆದಿದ್ದಾರೆ ಎಂಬುದಕ್ಕೆ ಪುರಾವೆಯಾಗಿ ಆಡಿಯೊ ಬಹಿರಂಗವಾಗಿದೆ. ಕೊಪ್ಪಳ ಜಿಲ್ಲೆಯ ಕನಕಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ದಡೇಸೂಗೂರು ಮಾತನಾಡಿದ್ದಾರೆ ಎನ್ನಲಾದ ಆಡಿಯೊ ವೈರಲ್ ಆಗಿದ್ದು, ಸ್ವತಃ ಶಾಸಕರೂ ಈ ಆಡಿಯೊ ತಮ್ಮದು ಎಂದು ಒಪ್ಪಿದ್ದಾರೆ. ಪ್ರತಿಪಕ್ಷಗಳ ನಾಯಕರುಗಳು ಈ ಕುರಿತು ಪ್ರತಿಕ್ರಿಯಿಸಿದ್ದು, ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
10. IND vs PAK | ಒತ್ತಡದಲ್ಲಿ ತಪ್ಪು ಸಹಜ; ಕ್ಯಾಚ್ ಬಿಟ್ಟ ಅರ್ಶ್‌ದೀಪ್‌ಗೆ ಸಮಾಧಾನ ಹೇಳಿದವರು ಯಾರು?
ಸೆಪ್ಟೆಂಬರ್ ೪ರಂದು ನಡೆದ ಭಾರತ ಮತ್ತು ಪಾಕಿಸ್ತಾನ (IND vs PAK) ತಂಡಗಳ ನಡುವಿನ ಪಂದ್ಯದಲ್ಲಿ ಭಾರತ ೫ ವಿಕೆಟ್‌ಗಳಿಂದ ಸೋಲುಂಡಿತು. ಆ ಪಂದ್ಯದಲ್ಲಿ ಭಾರತ ತಂಡಕ್ಕೆ ಗೆಲುವಿನ ಅವಕಾಶ ಕೆಲವೊಂದು ಬಾರಿ ಒದಗಿ ಬಂದಿತ್ತು. ಆದರೆ, ಅದನ್ನು ಭಾರತ ತಂಡದ ಆಟಗಾರರು ಸದ್ಬಳಕೆ ಮಾಡಿಕೊಂಡಿಲ್ಲ. ಅದರಲ್ಲೊಂದು ಅಸಿಫ್ ಅಲಿಯ ಕ್ಯಾಚ್. ಅದನ್ನು ಅರ್ಶ್‌ದೀಪ್ ಸಿಂಗ್ ಕೈಚೆಲ್ಲಿದ್ದರು. ಭಾರತ ತಂಡದ ಬಹುತೇಕ ಅಭಿಮಾನಿಗಳು ಈ ಕ್ಯಾಚ್ ಡ್ರಾಪ್ ಭಾರತದ ಸೋಲಿಗೆ ಕಾರಣ ಎಂದು ನಂಬಿದ್ದಾರೆ. ಆದರೆ, ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅದನ್ನು ಒಪ್ಪುವುದಿಲ್ಲ. ಅರ್ಶ್‌ದೀಪ್ ಕ್ಯಾಚ್ ಬಿಡುವ ಮೊದಲೇ ಗೆಲುವು ಪಾಕಿಸ್ತಾನ ತಂಡದ ಪರ ವಾಲಿತ್ತು ಎಂದಿದ್ದಾರೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ಇದೇ ವೇಳೆ, ಕ್ಯಾಚ್ ಬಿಟ್ಟ ಅರ್ಶ್‌ದೀಪ್‌ರನ್ನು ಖಾಲಿಸ್ತಾನಿ ಎಂದ ಪಾಕಿಸ್ತಾನಿಗಳಿಗೆ ಭಾರತೀಯರು ಪ್ರತ್ಯುತ್ತರ ಕೊಟ್ಟಿದ್ದಾರೆ.