ಬೆಂಗಳೂರು: ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಆಯೋಜಿಸಲು ಅನುಮತಿ ಸಿಗುತ್ತದೆಯೇ ಇಲ್ಲವೇ ಎಂಬ ಕುತೂಹಲಕ್ಕೆ ಈ ವರ್ಷದ ಮಟ್ಟಿಗಂತೂ ತೆರೆ ಬಿದ್ದಿದ್ದು, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂಕೋರ್ಟ್ ತ್ರಿಸದಸ್ಯಪೀಠ ಮಹತ್ವದ ತೀರ್ಪು ನೀಡಿದೆ. ಇದೇ ವೇಳೆ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸಲು ಹೈಕೋರ್ಟ್ ಹಸಿರು ನಿಶಾನೆ ತೋರಿದೆ. ಚಿತ್ರದುರ್ಗದ ಮುರುಘಾ ಶ್ರೀಗಳ ವಿರುದ್ಧದ ಪ್ರಕರಣದಲ್ಲಿ ವಿಚಾರಣೆಯ ಕುತೂಹಲ ಮುಂದುವರಿದಿದೆ ಎನ್ನುವುದೂ ಸೇರಿದಂತೆ ದಿನಪೂರ್ತಿ ನಡೆದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
1. ಚಾಮರಾಜಪೇಟೆ ಮೈದಾನ | ಯಥಾಸ್ಥಿತಿ ಕಾಪಾಡಲು ಸುಪ್ರೀಂ ಆದೇಶ, ಗಣೇಶೋತ್ಸವಕ್ಕೆ ಅವಕಾಶ ಇಲ್ಲ
ಬೆಂಗಳೂರಿನ ಚಾಮರಾಜಪೇಟೆಯ ಮೈದಾನದಲ್ಲಿ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶದಂತೆ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಅಂದರೆ ಈ ವಿವಾದಿತ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶ ಇಲ್ಲ. ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠದ ಮುಂದೆ ನಡೆದ ಮಹತ್ವದ ವಿಚಾರಣೆಯ ಬಳಿಕ ಈ ಆದೇಶ ಹೊರಬಿದ್ದಿದೆ. ಹೈಕೋರ್ಟ್‌ನ ಏಕಸದಸ್ಯ ಪೀಠ ಈ ಮೈದಾನದಲ್ಲಿ ವರ್ಷಕ್ಕೆರಡು ಬಾರಿ ಮುಸ್ಲಿಮರ ನಮಾಜ್‌ಗೆ ಮಾತ್ರ ಅವಕಾಶ ನೀಡಿತ್ತು. ಉಳಿದಂತೆ ಮೈದಾನವನ್ನು ಕೇವಲ ಆಟದ ಮೈದಾನವಾಗಿ ಮಾತ್ರ ಬಳಸಿಕೊಳ್ಳಬಹುದು ಎಂದಿತ್ತು. ಅದೇ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
2. ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್
ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ, ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸಲು ರಾಜ್ಯ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಅಲ್ಲಿ ಬಹು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಗಣೇಶೋತ್ಸವ ಆಚರಿಸಲು ಮಹಾನಗರ ಪಾಲಿಕೆ ಅವಕಾಶ ನೀಡಿತ್ತು. ಆದರೆ ಇದನ್ನು ಪ್ರಶ್ನಿಸಿ ಮತ್ತು ಅವಕಾಶ ನೀಡಬಾರದು ಎಂದು ಕೋರಿ ಹೈಕೋರ್ಟ್‌ನ ಮೊರೆ ಹೋಗಲಾಗಿತ್ತು. ಮಂಗಳವಾರ ಈ ಅರ್ಜಿಯ ತುರ್ತು ವಿಚಾರಣೆ ನಡೆಸಿದ ಹೈಕೋರ್ಟ್‌ನ ಏಕ ಸದಸ್ಯ ಪೀಠ ತೀರ್ಪನ್ನು ಕಾದಿರಿಸಿತ್ತು. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
3. ಮುರುಘಾಶ್ರೀ ಪ್ರಕರಣ| ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯದ ಜತೆಗೆ ದಲಿತ ದೌರ್ಜನ್ಯ ಕೇಸ್ ಕೂಡ ದಾಖಲು, ಬಾಲಕಿಯರ ಹೇಳಿಕೆ ದಾಖಲು ಪ್ರಗತಿಯಲ್ಲಿ
ಪ್ರತಿಷ್ಠಿತ ಮುರುಘಾ ಮಠದ ಪೀಠಾಧಿಪತಿ ಶ್ರೀ ಶಿವಮೂರ್ತಿ ಮುರುಘಾ ಶರಣರಿಗೆ ಡಬಲ್ ಟ್ರಬಲ್ ಎದುರಾಗಿದೆ. ಒಂದು ಕಡೆ ಹಾಸ್ಟೆಲ್‌ವಾಸಿಗಳಾಗಿದ್ದ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣ ಅವರ ಪಾಲಿಗೆ ಆತಂಕ ಸೃಷ್ಟಿಸಿದ್ದರೆ, ಈಗ ದಲಿತ ದೌರ್ಜನ್ಯ ಪ್ರಕರಣವೂ ಜತೆಯಾಗಿದೆ.
ದೂರು ದಾಖಲಾದ ಬೆನ್ನಲ್ಲೇ ಚಿತ್ರದುರ್ಗದ ಸುತ್ತಮುತ್ತಲಿನ ಹಾಗೂ ಮುರುಘಾ ಮಠದ ಶಾಖಾ ಮಠಗಳಿಗೆ ಸೇರಿದ ಇಪ್ಪತ್ತಕ್ಕೂ ಹೆಚ್ಚು ಮಠಾಧೀಶರು ಸುದ್ದಿಗೋಷ್ಠಿ ನಡೆಸಿದ್ದು, ಪಟ್ಟಭದ್ರರಿಂದ ಪಿತೂರಿ: 20ಕ್ಕೂ ಹೆಚ್ಚು ಮಠಾಧೀಶರ ಬೆಂಬಲ ವ್ಯಕ್ತಪಡಿಸಿದ್ದಾರೆ. ಬಾಲಕಿಯರಿಬ್ಬರು ನ್ಯಾಯಾಧೀಶರ ಎದುರು ಹೇಳಿಕೆಗಳನ್ನು ನೀಡುತ್ತಿದ್ದು, ಹೇಳಿಕೆ ದಾಖಲಿಸಿಕೊಂಡ ನಂತರದಲ್ಲಿ ನ್ಯಾಯಾಧೀಶರ ತೀರ್ಮಾನ ಹಾಗೂ ಪೊಲೀಸರ ನಡೆ ಮೇಲೆ ಕುತೂಹಲ ನೆಟ್ಟಿದೆ.
4. ಬಾಬರಿ ಧ್ವಂಸ ಕೇಸ್: ನ್ಯಾಯಾಂಗ ನಿಂದನೆ ಪ್ರಕರಣಗಳನ್ನು ಕೈ ಬಿಟ್ಟ ಸುಪ್ರೀಂ ಕೋರ್ಟ್, ಆಡ್ವಾಣಿ ನಿರಾಳ
ಬಾಬರಿ ಕಟ್ಟಡ ಧ್ವಂಸಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ನಿಂದನೆಯ ಪ್ರಕರಣಗಳಿಗೆ ಸುಪ್ರೀಂ ಕೋರ್ಟ್ ಅಂತ್ಯ ಹಾಡಿದೆ. ಉತ್ತರ ಪ್ರದೇಶದ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಬಾಬರಿ ಮಸೀದಿ ಕಟ್ಟಡಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ನಿಂದನೆಯ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಈಗ ಆ ಎಲ್ಲ ಪ್ರಕರಣಗಳಿಗೂ ಮುಕ್ತಿ ದೊರೆತಿದೆ. ಸುಪ್ರೀಂ ಕೋರ್ಟ್‌ನ ಈ ಆದೇಶದಿಂದಾಗಿ ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಆಡ್ವಾಣಿ, ಉಮಾ ಭಾರತಿ, ವಿನಯ್ ಕಟಿಯಾರ್ ಸೇರಿದಂತೆ ಅನೇಕರಿಗೆ ನಿರಾಳತೆ ಒದಗಿಸಿದೆ.
ಇದೇ ವೇಳೆ, ಗುಜರಾತ್‌ನ 2002ರ ಗೋಧ್ರೋತ್ತರ ಕೋಮು ದಂಗೆಗೆ ಸಂಬಂಧಿಸಿದ ಎಲ್ಲ ಕೇಸ್‌ಗಳನ್ನು ಕ್ಲೋಸ್ ಮಾಡಿದೆ. ಬಾಬರಿ ಕಟ್ಟಡ ಭೂ ವ್ಯಾಜ್ಯಕ್ಕೆ ಸಂಬಂಧಿಸಿದಂತೆ 2019ರ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ, ಈ ನ್ಯಾಯಾಂಗ ನಿಂದನೆ ಪ್ರಕರಣಗಳಿಗೆ ಈಗ ಮೌಲ್ಯ ಉಳಿದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
5. ರಾಷ್ಟ್ರಗೀತೆಗೆ ಅವಮಾನ | ಸ್ಪಷ್ಟನೆ ನೀಡಿದ ಬರಗೂರು ರಾಮಚಂದ್ರಪ್ಪ, ಆದರೂ ಉಳಿದ ಅನುಮಾನ
ತಮ್ಮ ಕಾದಂಬರಿಯಲ್ಲಿ ರಾಷ್ಟ್ರಗೀತೆಯನ್ನು ವಿಡಂಬನಾತ್ಮಕವಾಗಿ ರಚಿಸಿ ಅವಮಾನ ಮಾಡಲಾಗಿದೆ ಎಂಬ ಆರೋಪದ ಕುರಿತು ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಸುದೀರ್ಘ ಸ್ಪಷ್ಟೀಕರಣ ನೀಡಿದ್ದಾರೆ. ತಮ್ಮನ್ನು “ಸದಾ ಸಾಮಾಜಿಕ ಕಾಳಜಿಯ ದೇಶನಿಷ್ಠ ಲೇಖಕʼ ಎಂದು ಹೇಳಿಕೊಂಡಿರುವ ಬರಗೂರು ರಾಮಚಂದ್ರಪ್ಪ ಅವರು ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
6. ಪ್ರತಾಪ್ ಸಿಂಹ ಬಂದರೆ ಹೆದ್ದಾರಿಯಲ್ಲೇ ಸ್ವಿಮ್ಮಿಂಗ್ ಮಾಡಬಹುದು: ಎಚ್.ಡಿ. ಕುಮಾರಸ್ವಾಮಿ ಕಿಡಿ
ರಾಮನಗರ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿ ಕಾಮಗಾರಿ ಅತ್ಯುತ್ತಮವಾಗಿದೆ ಎಂದು ಹೇಳಿರುವ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಸಂಗಬಸಪ್ಪನದೊಡ್ಡಿ ಬಳಿ ಬಂದು ಸ್ವಿಮ್ಮಿಂಗ್ ಮಾಡಬಹುದು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರೇ ನಿಂತು ಫೋಟೊ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಿಸಿಕೊಂಡಿದ್ದರು. ಉತ್ತಮವಾದ ಕೆಲಸ ಏನಾಗಿದೆ ಎಂಬುದನ್ನು ಪ್ರತಾಪಸಿಂಹ ಬಂದು ನೋಡಲಿ ಎಂದಿದ್ದಾರೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ರಾಷ್ಟ್ರೀಯ ಹೆದ್ದಾರಿಯೊಂದನ್ನು ಯೋಜನೆ ಮಾಡುವಾಗ ಯಾವ ಪ್ರಾಥಮಿಕ ಸಂಗತಿಗಳನ್ನೂ ಗಮನಿಸದೇ ಮುಂದಾಗಿರುವುದೇ ಬೆಂಗಳೂರು-ಮೈಸೂರು ಹೆದ್ದಾರಿ ಆಸುಪಾಸಿನಲ್ಲಿ ಹೆದ್ದಾರಿ ಅವಾಂತರಕ್ಕೆ ಕಾರಣ ಎಂದು ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹೆದ್ದಾರಿಯನ್ನು ಪ್ಲಾನ್ ಮಾಡಿರುವ ಇಂಜಿನಿಯರ್‌ಗಳಿಗೆ ಮುಖ್ಯಮಂತ್ರಿಗಳು ಪದ್ಮಭೂಷಣ ಅಥವಾ ಬೇರೆ ಪ್ರಶಸ್ತಿ ಕೊಡಿಸಬೇಕು ಎಂದು ವ್ಯಂಗ್ಯವಾಡಿದ್ದಾರೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
7. ಗಣೇಶೋತ್ಸವ ಸಂಭ್ರಮ ಹೆಚ್ಚಿಸುವ ಅರಿವಿನ ಲೇಖನಗಳು
ನಾಡಿನಾದ್ಯಂತ ವಿಘ್ನನಿವಾರಕ ಗಣೇಶನ ಆರಾಧನೆಗೆ ಭರದ ಸಿದ್ಧತೆ ನಡೆದಿದೆ. ವಿಶ್ವಾದ್ಯಂತ ಗಣಪತಿಯ ರೂಪಗಳು, ಗಣಪತಿಯ ಜೀವನದ ಕಥೆಗಳ ಹಿಂದಿನ ಜೀವನಸತ್ಯ, ಗಣಪತಿ ಸ್ವರೂಪದ ತಾತ್ತ್ವಿಕಾವಲೋಕನಗಳನ್ನು ತಿಳಿಸುವ ಲೇಖನಗಳು, ಅರಿವಿಗಾಗಿ, ಸ್ಫೂರ್ತಿಗಾಗಿ.
🙏🏾 ತತ್ವಮಯನಾದ ದೇವ ಗಣಪತಿ
🙏🏾 ಗಣೇಶ ಚತುರ್ಥಿ ನಿಮಿತ್ತ ಗಣಪತಿ ಸ್ವರೂಪದ ತಾತ್ತ್ವಿಕಾವಲೋಕನ
🙏🏾 ಗಣಪತಿ ತಯಾರಿಸುವ ಸಾಫ್ಟ್‌ವೇರ್ ಎಂಜಿನಿಯರ್!
🙏🏾 ಗಣಪತಿ ಬಪ್ಪಾ ಮೋರ‍್ಯಾ ಎಂದರೇನು? ಮರಾಠಿ ಘೋಷಣೆಗಿದೆ ಕರ್ನಾಟಕದ ಲಿಂಕ್!
🙏🏾 ಗಣಪತಿಯನ್ನು ಪೂಜಿಸುವಾಗ ಈ ಮಂತ್ರ ಹೇಳಲು ಮರೆಯಬೇಡಿ
8. Explainer | ತಲಾಖ್-ಇ-ಹಸನ್ ರದ್ದಿಗೆ ಆಗ್ರಹ, ಮಹಿಳೆಯರ ವಾದವೇನು? ಸುಪ್ರೀಂ ಕೋರ್ಟ್ ಹೇಳಿದ್ದೇನು?
‘ತ್ರಿವಳಿ ತಲಾಖ್’ ನಿಷೇಧ ಬೆನ್ನಲ್ಲೇ ಈಗ ಮುಸ್ಲಿಮ್ ಮಹಿಳೆಯರು ಮತ್ತೊಂದು ರೀತಿಯ ತಲಾಖ್ ಅಪಾಯವನ್ನು ಎದುರಿಸುತ್ತಿದ್ದಾರೆ. ಮುಸ್ಲಿಮ್ ವಿವಾಹ ಪದ್ಧತಿಯಲ್ಲಿ ತಲಾಖ್-ಇ-ಹಸನ್ ಎಂಬ ಪದ್ಧತಿಯೂ ಜಾರಿಯಲ್ಲಿದ್ದು, ವಿವಾಹಿತ ಮಹಿಳೆಯರೂ ಇದರಿಂದಲೂ ತೊಂದರೆ ಅನುಭವಿಸುತ್ತಿದ್ದಾರೆ. ಈ ಸಂಬಂಧ ಸುಪ್ರೀ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಉತ್ತರ ಪ್ರದೇಶ ಮೂಲದ ಬೆನಜಿರ್ ಹೀನಾ ಎಂಬುವವರು ಈ ತಲಾಖ್-ಇ-ಹಸನ್ ವಿರುದ್ಧ ಕೋರ್ಟ್ ಮೊರೆ ಹೋಗಿದ್ದಾರೆ. ಅವರು ತಲಾಖ್-ಇ-ಹಸನ್ ಸಿಂಧುತ್ವವನ್ನು ಪ್ರಶ್ನಿಸಿದ್ದಾರೆ. ಈ ಕುರಿತು ಸಂಪೂರ್ಣ ವಿವರಣೆಗಾಗಿ ಇಲ್ಲಿ ಕ್ಲಿಕ್ ಮಾಡಿ.
9. Sensex | ಷೇರುಪೇಟೆಯಲ್ಲಿ ಅಬ್ಬರಿಸಿದ ಗೂಳಿ, ಸೆನ್ಸೆಕ್ಸ್ 1,564 ಅಂಕ ಜಿಗಿತ
ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ (Sensex) ಮಂಗಳವಾರ ಮಧ್ಯಂತರ ವಹಿವಾಟಿನಲ್ಲಿ ೧,564 ಅಂಕಗಳ ಭಾರಿ ಜಿಗಿತ ದಾಖಲಿಸಿದೆ. ಸೋಮವಾರ ೮೬೧ ಅಂಕ ಕುಸಿದಿದ್ದ ಸೆನ್ಸೆಕ್ಸ್, ಮರುದಿನ ಈ ಎತ್ತರಕ್ಕೇರಿದೆ. ಸೆನ್ಸೆಕ್ಸ್ ೫೯,೫೩೭ ಅಂಕಗಳಿಗೆ ದಿನದ ವಹಿವಾಟು ಮುಕ್ತಾಯಗೊಳಿಸಿದರೆ, ನಿಫ್ಟಿ ೪೪೬ ಅಂಕ ಏರಿಕೊಂಡು ೧೭,೭೫೯ಕ್ಕೆ ಸ್ಥಿರವಾಯಿತು. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
10. ಎಲೆಕ್ಷನ್ ಹವಾ | ಸಾಗರದಲ್ಲಿ ಕಾಂಗ್ರೆಸ್ ಟಿಕೆಟ್ ಬೇಳೂರುಗೋ, ಕಾಗೋಡು ಪುತ್ರಿಗೋ?
ಕಾಗೋಡು ಚಳವಳಿ ಮೂಲಕ ರಾಷ್ಟ್ರದ ಗಮನ ಸೆಳೆದ ಕ್ಷೇತ್ರ ಸಾಗರ. ಹಿಂದೊಮ್ಮೆ ಸಮಾಜವಾದಿಗಳ, ಸಮಾಜವಾದ ಬೆಂಬಲಿಸುವ ಕಾಂಗ್ರೆಸಿಗರ ಗಟ್ಟಿ ನೆಲೆಯಾಗಿತ್ತು ಈ ಕ್ಷೇತ್ರ. 2023ರ ಚುನಾವಣೆ ಸಲುವಾಗಿ ರಾಜ್ಯದಲ್ಲಿ ಈಗಾಗಲೆ ರಾಜಕೀಯ ಸಂಚಲನ ಆರಂಭವಾಗಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.