Site icon Vistara News

ವಿಸ್ತಾರ TOP 10 NEWS | ರಾಜಕಾಲುವೆ ನುಂಗಿದ್ದರ ತನಿಖೆಯಿಂದ ʼಕ್ಯಾಪ್ಟನ್‌ʼ ಬಿಜೆಪಿ ಸೇರ್ಪಡೆವರೆಗಿನ ಪ್ರಮುಖ ಸುದ್ದಿಗಳಿವು

TOP 10 NEWS 19092022

ಬೆಂಗಳೂರು: ರಾಜಧಾನಿಯ ಅನಾಹುತಗಳಿಗೆ ಪ್ರಮುಖ ಕಾರಣವಾಗಿರುವ ಒತ್ತುವರಿ ಸಮಸ್ಯೆಯನ್ನು ಸರಿಪಡಿಸುವ ಕ್ರಮದ ಜತೆಗೆ ಕೆರೆ ಒತ್ತುವರಿ ಹಾಗೂ ರಾಜಕಾಲುವೆ ಒತ್ತುವರಿ ಕುರಿತು ತನಿಖೆಗೆ ಆದೇಶ ನೀಡುವುದಾಗಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಈಗಾಗಲೆ ದೆಹಲಿಯಲ್ಲಿ ಇಡಿ ವಿಚಾರಣೆ ಎದುರಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗುವ ಸಾಧ್ಯತೆಯಿದೆ, ಖ್ಯಾತ ವಾಗ್ಮಿ ನಿತ್ಯಾನಂದ ವಿವೇಕವಂಶಿ ಅವರ ಹೊಸ ಅಂಕಣ ʼತ್ರಯಸ್ಥʼ ಆರಂಭವಾಗಿದೆ, ಪಂಜಾಬ್‌ ಮಾಜಿ ಸಿಎಂ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಬಿಜೆಪಿ ಸೇರಿದ್ದಾರೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. Bengaluru Rain | ಕೆರೆ, ರಾಜಕಾಲುವೆ ನುಂಗಿದ್ದರ ತನಿಖೆಗೆ ಆಯೋಗ, ಅಭಿವೃದ್ಧಿಗೆ ಟಾಸ್ಕ್‌ ಫೋರ್ಸ್‌
ಬೆಂಗಳೂರಿನಲ್ಲಿ ರಾಜಕಾಲುವೆ ಹಾಗೂ ಕೆರೆಗಳನ್ನು ಒತ್ತುವರಿ ಮಾಡಿ ಆಸ್ತಿ ನಿರ್ಮಾಣ ಮಾಡಿರುವ ಕುರಿತು ಸಂಪೂರ್ಣ ತನಿಖೆ ನಡೆಸಲು ನ್ಯಾಯಾಂಗ ಅಧಿಕಾರಿ ನೇತೃತ್ವದಲ್ಲಿ ಆಯೋಗವನ್ನು ರಚನೆ ಮಾಡಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ರಾಜ್ಯದಲ್ಲಿ ಅತಿವೃಷ್ಟಿ ಕುರಿತು ರಾಜ್ಯ ಸರ್ಕಾರದ ವತಿಯಿಂದ ಕಂದಾಯ ಸಚಿವ ಆರ್‌. ಅಶೋಕ್‌ ಅವರು ಉತ್ತರ ನೀಡುವ ಮಧ್ಯೆ ಹಾಗೂ ನಂತರ ಸ್ವತಃ ಸರ್ಕಾರದಿಂದ ಉತ್ತರ ನೀಡುವಾಗ ಸಿಎಂ ಬೊಮ್ಮಾಯಿ ಮಾತನಾಡಿದರು. ರಾಜ್ಯದಲ್ಲಿ ಯಾರ‍್ಯಾರ ಕಾಲದಲ್ಲಿ ಎಷ್ಟೆಷ್ಟು ಕೆರೆ ಒತ್ತುವರಿ ಆಗಿದೆ ಎಲ್ಲವನ್ನೂ ತನಿಖೆ ನಡೆಸಲಾಗುತ್ತದೆ ಎಂದರು.
ರಾಜಕಾಲುವೆ ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ತೆರವು ಮಾಡಲಾಗುತ್ತದೆ. ಇಲ್ಲಿಯವರೆಗೆ ಸರ್ಕಾರಗಳಿಗೆ ಈ ಕಾರ್ಯ ಆದ್ಯತೆಯಾಗಿರಲಿಲ್ಲ. ಈಗ ಇದೇ ಕಾರ್ಯವನ್ನು ಕೈಗೆತ್ತಿಕೊಳ್ಳಲು ಟಾಸ್ಕ್‌ ಫೋರ್ಸ್‌ ರಚನೆ ಮಾಡಲಾಗುತ್ತದೆ. ಈ ಟಾಸ್ಕ್‌ ಫೋರ್ಸ್‌ ಮುಂದಿನ ಮೂರ್ನಾಲ್ಕು ವರ್ಷ ಇದೇ ಕೆಲಸ ಮಾಡುತ್ತದೆ. ರಾಜಕಾಲುವೆ ಅಗಲ ಎಷ್ಟಿರಬೇಕು, ವಿನ್ಯಾಸ ಹೇಗೆ ಎಲ್ಲವನ್ನೂ ಇದೇ ಟಾಸ್ಕ್‌ ಫೋರ್ಸ್‌ ನಿರ್ಧಾರ ಮಾಡುತ್ತದೆ. ಇದಕ್ಕಾಗಿ ಬಜೆಟ್‌ನಲ್ಲಿ ಅನುದಾನವನ್ನೂ ನೀಡಲಾಗುತ್ತದೆ ಎಂದರು. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

2. ಇ.ಡಿ ವಿಚಾರಣೆಗೆ ಹಾಜರಾದ ವೇಳೆ ಡಿಕೆಶಿಗೆ ಕಾಡಿದ ಆರೋಗ್ಯ ಸಮಸ್ಯೆ, ಐಟಿ ಪ್ರಕರಣದಲ್ಲೂ ಎದುರಾಯ್ತು ಸಂಕಷ್ಟ
ಅಕ್ರಮ ಅಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನೋಟಿಸ್‌ ನೀಡಿದ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ದೆಹಲಿಯ ವಿದ್ಯುತ್ ಲೇನ್​ನಲ್ಲಿರುವ ಕಚೇರಿಗೆ ಆಗಮಿಸಿ ವಿಚಾರಣೆ ಎದುರಿಸುತ್ತಿದ್ದಾರೆ. ಈ ನಡುವೆ ಶಿವಕುಮಾರ್ ಅವರಿಗೆ ಆರೋಗ್ಯ ಸಮಸ್ಯೆ ಕಾಡಿದೆ. ದಿನಪೂರ್ತಿ ಇಡಿ ಅಧಿಕಾರಿಗಳಿಂದ ವಿಚಾರಣೆ ಎದುರಿಸಿದ ಬೆನ್ನಲ್ಲೆ ಐಟಿ ಪ್ರಕರಣದಲ್ಲೂ ಸಂಕಷ್ಟ ಎದುರಾಗಿದೆ. ಈ ಹಿಂದೆ ಹೈಕೋರ್ಟ್‌ ತಡೆ ನೀಡಿದ್ದ ಐಟಿ ಪ್ರಕರಣ ವಿಚಾರಣೆ ತಡೆಯನ್ನು ಸುಪ್ರೀಂಕೋರ್ಟ್‌ ರದ್ದುಪಡಿಸಿ, ವಿಚಾರಣೆಗೆ ಕೈಗೆತ್ತಿಕೊಳ್ಳಲು ಮುಂದಾಗಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್‌ ಕ್ಲಿಕ್‌ ಮಾಡಿ

3. ಹೌದು, ನನಗೆ ಅಸಮಾಧಾನ ಇದೆ, ಅದಕ್ಕೇ ಅಧಿವೇಶನಕ್ಕೆ ಹೋಗಿಲ್ಲ: ಕೆ.ಎಸ್.‌ ಈಶ್ವರಪ್ಪ ಬಹಿರಂಗ ಹೇಳಿಕೆ
ಹೌದು ನನಗೆ ಅಸಮಾಧಾನ ಇದೆ. ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣದಲ್ಲಿ ನನಗೆ ಕ್ಲೀನ್‌ ಚಿಟ್‌ ಸಿಕ್ಕಿದ್ದರೂ ನನಗೆ ಮಂತ್ರಿ ಸ್ಥಾನ ಕೊಡಲು ಮೀನಮೇಷ ಎಣಿಸುತ್ತಿದ್ದಾರೆ. ಈ ಬಗ್ಗೆ ನನಗೆ ಅತೃಪ್ತಿ ಇದೆ. ಅದಕ್ಕೇ ಅಧಿವೇಶನಕ್ಕೆ ಹೋಗಿಲ್ಲ: ಹೀಗೆ ನೇರವಾಗಿಯೇ ಹೇಳಿದ್ದಾರೆ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ.
ಸೋಮವಾರ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಈಶ್ವರಪ್ಪ ಅವರು ಕಳೆದ ಸೆಪ್ಟೆಂಬರ್‌ ೧೨ರಿಂದ ಆರಂಭವಾದ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತಿಲ್ಲ. ಅದಕ್ಕಿಂತ ಮೊದಲು ಸೆಪ್ಟೆಂಬರ್‌ ೧೦ರಂದು ದೇವನಹಳ್ಳಿಯಲ್ಲಿ ನಡೆದ ಬಿಜೆಪಿ ಸರಕಾರದ ಜನಸ್ಪಂದನ ಸಮಾವೇಶಕ್ಕೂ ಅವರು ಬಂದಿರಲಿಲ್ಲ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

4. Amarinder Singh | ವಿಲೀನ ಅಮರಿಂದರ್‌ ಸಿಂಗ್‌ಗೆ ಅಸ್ತ್ರ, ಬಿಜೆಪಿಗೆ ಬ್ರಹ್ಮಾಸ್ತ್ರ?
ಪಂಜಾಬ್‌ ಮುಖ್ಯಮಂತ್ರಿಯಾಗಿ ಆಡಳಿತ ನೀಡಿದರೂ ರಾಜಕೀಯ ಮೇಲಾಟದಲ್ಲಿ ಕಾಂಗ್ರೆಸ್‌ನಿಂದ ಹೊರಬಂದ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ (Amarinder Singh) ಈಗ ಬಿಜೆಪಿ ಜತೆ ತಮ್ಮ ಪಂಜಾಬ್‌ ಲೋಕ ಕಾಂಗ್ರೆಸ್‌ ಪಕ್ಷವನ್ನು ವಿಲೀನಗೊಳಿಸಿದ್ದಾರೆ ಇದು ಕ್ಯಾಪ್ಟನ್‌ ಅವರ ಹಳೆಯ ರೂಢಿಯಾದರೂ, ಇದರಿಂದ ಅನುಕೂಲವಾಗುವುದು ಬಿಜೆಪಿಗೆ ಮಾತ್ರ ಎಂದೇ ವಿಶ್ಲೇಷಿಸಲಾಗುತ್ತಿದೆ.
ಕಳೆದ ವಿಧಾನಸಭೆ ಚುನಾವಣೆ ವೇಳೆ ಪಂಜಾಬ್‌ ಲೋಕ ಕಾಂಗ್ರೆಸ್‌ ಸ್ಥಾಪಿಸಿ, ಬಿಜೆಪಿ ಜತೆಗೂಡಿ ಚುನಾವಣೆ ಎದುರಿಸಿದರೂ ಕ್ಯಾಪ್ಟನ್‌ಗೆ ಭಾರಿ ಹಿನ್ನಡೆಯಾಯಿತು. ಈಗ ಪಕ್ಷವನ್ನು ಸಂಘಟಿಸಲೂ ಆಗದೆ, ಯಾವ ಭರವಸೆಯೂ ಕಾಣದೆ ಅವರು ಬಿಜೆಪಿ ಜತೆ ಪಕ್ಷವನ್ನು ವಿಲೀನಗೊಳಿಸಿದ್ದಾರೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

5. ವಿಸ್ತಾರ Explainer | ಡಾಲರ್‌ಗೆ ಭಾರತ-ರಷ್ಯಾ ಡೋಂಟ್‌ ಕೇರ್, ಇನ್ಮುಂದೆ ರೂಪಾಯಿ-ರುಬೆಲ್‌ ದರ್ಬಾರ್!
ಅಂತಾರಾಷ್ಟ್ರೀಯ ಹಣಕಾಸು ವ್ಯವಹಾರಗಳಲ್ಲಿ ಡಾಲರ್‌ ಪ್ರಾಬಲ್ಯವನ್ನು ಹತ್ತಿಕ್ಕಲು ಹಾಗೂ ರೂಪಾಯಿ-ರುಬೆಲ್‌ ಕರೆನ್ಸಿಯಲ್ಲಿ ವ್ಯವಹರಿಸಲು ಭಾರತ ಮತ್ತು ರಷ್ಯಾ ತಮ್ಮ ಕಾರ್ಯತಂತ್ರವನ್ನು ಜಾರಿಗೊಳಿಸಿವೆ. ಹಾಗಾದರೆ ಏನಿದು ಕಾರ್ಯತಂತ್ರವೇನು? ಇದರಿಂದ ಉಭಯ ರಾಷ್ಟ್ರಗಳಿಗೆ ಲಾಭವೇನು? ಈ ಕ್ರಾಂತಿಕಾರಕ ಪದ್ಧತಿಯ ( ವಿಸ್ತಾರ Explainer) ಒಳನೋಟವನ್ನು ಇಲ್ಲಿ ನೋಡಬಹುದು.

6. ವಿಸ್ತಾರ Explainer | ಇರಾನ್‌ನಲ್ಲಿ ಹಿಜಾಬ್‌ ಕಟ್ಟಳೆ, ಹೊರಬರಲು ಆಗುವುದಿಲ್ಲವೇ ಮಹಿಳೆ?
ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರ ನಿಯಮ ಏನೇ ಇರಲಿ, ಹಿಜಾಬ್‌ ಧರಿಸಲು ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಒಂದಷ್ಟು ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಲು ಅವಕಾಶ ನೀಡದಿದ್ದರೆ ನಾವು ಪರೀಕ್ಷೆಯನ್ನೇ ಬರೆಯುವುದಿಲ್ಲ ಎಂದು ಪರೀಕ್ಷಾ ಕೊಠಡಿಯಿಂದಲೇ ಹೊರಬಂದು ಶಿಕ್ಷಣ, ಭವಿಷ್ಯವನ್ನೇ ಅಡಕತ್ತರಿಗೆ ಸಿಲುಕಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಹಿಜಾಬ್‌ ಬೇಡ, ವಸ್ತ್ರಸಂಹಿತೆ ಕಿತ್ತುಹಾಕಿ ಎಂದು ಇಸ್ಲಾಮಿಕ್‌ ರಾಷ್ಟ್ರವಾದ ಇರಾನ್‌ನಲ್ಲಿಯೇ ಹೋರಾಟ ನಡೆಯುತ್ತಿದೆ!
22 ವರ್ಷದ ಮಹ್ಸಾ ಅಮಿನಿ ಎಂಬ ಯುವತಿಯ ಸಾವಿನಿಂದಾಗಿ ಇರಾನ್‌ನಲ್ಲಿ ಮಹಿಳೆಯರ ಆಕ್ರೋಶವು ಕಿಚ್ಚಾಗಿ ಬದಲಾಗಿದೆ. ಹಾಗಾದರೆ, ಇರಾನ್‌ನಲ್ಲಿ ಏಕೆ ಮಹಿಳೆಯರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ? ಅಲ್ಲಿ ಹಿಜಾಬ್‌ ವಿರುದ್ಧ ಏಕೆ ಹೋರಾಟ ನಡೆಯುತ್ತಿದೆ? ಸಂಕ್ಷಿಪ್ತ ವಿವರ, ಹೋರಾಟದ ಚಿತ್ರಣ ಇಲ್ಲಿದೆ.

7. ವಿಸ್ತಾರ Explainer | ಸರಕು ಸಾಗಣೆಗೆ ಚೀತಾ ಸ್ಪೀಡ್‌ ನೀಡಲು ಲಾಜಿಸ್ಟಿಕ್ಸ್‌ ನೀತಿ!
ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ೭೨ನೇ ಜನ್ಮ ದಿನದಂದು ರಾಷ್ಟ್ರೀಯ ಲಾಜಿಸ್ಟಿಕ್ಸ್‌ ನೀತಿಗೆ ಚಾಲನೆ ನೀಡಿದ್ದಾರೆ. ರಾಷ್ಟ್ರೀಯ ಲಾಜಿಸ್ಟಿಕ್ಸ್‌ ನೀತಿಯ ಪರಿಣಾಮ ಭಾರತದಾದ್ಯಂತ ಚೆಕ್‌ ಪೋಸ್ಟ್‌ಗಳ ಹಂಗಿಲ್ಲದೆ ಸೀಮಾತೀತವಾಗಿ ಸರಕುಗಳ ಸಾಗಣೆಗೆ ಟ್ರಕ್‌ಗಳಿಗೆ ಹಾದಿ ಸುಗಮವಾಗಲಿದೆ. ಇದರಿಂದ ಉದ್ಯಮ ವಲಯಕ್ಕೆ “ಚೀತಾ ಸ್ಪೀಡ್‌ʼ ಸಿಗಲಿದೆ ಎಂದು ಪ್ರಧಾನಿ ಮೋದಿ ಅವರು ಬಣ್ಣಿಸಿದ್ದಾರೆ. ದೇಶದ ಎಲ್ಲ ಮೂಲೆಗಳಿಗೂ ಸರಕುಗಳನ್ನು ಸಾಗಿಸಲು, ಭಾರತ ಅಭಿವೃದ್ಧಿ ಹೊಂದಿದ ದೇಶವಾಗಿ ಹೊರಹೊಮ್ಮುವ ನಿಟ್ಟಿನಲ್ಲಿ ಇದು ಅಭೂತಪೂರ್ವವಾಗಿ ಸಹಕಾರಿಯಾಗಲಿದೆ ಎಂದಿದ್ದರು. ಈ ಕುರಿತು ಸಂಪೂರ್ಣ ಇವರಣೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

8. Rice price rise | ಅಕ್ಕಿಯ ದರದಲ್ಲಿ ಪ್ರತಿ ಕೆ.ಜಿಗೆ 8-10 ರೂ. ಏರಿಕೆ‌, ಕಾರಣವೇನು?
ಅಕ್ಕಿಯ ದರದಲ್ಲಿ ಇತ್ತೀಚೆಗೆ ಪ್ರತಿ ಕೆ.ಜಿಗೆ 8-10 ರೂ. ಏರಿಕೆಯಾಗಿದೆ. ಅತಿ ವೃಷ್ಠಿಯಿಂದಾಗಿ ಉಂಟಾಗಿರುವ ಬೆಳೆ ಹಾನಿ, ಬಾಂಗ್ಲಾದೇಶಕ್ಕೆ ಅಕ್ಕಿ ರಫ್ತು ಮುಂತಾದ ಕಾರಣಗಳಿಂದ ದರ ಏರಿಕೆ ಉಂಟಾಗಿದೆ ಎಂದು (Rice price rise ) ತಜ್ಞರು ತಿಳಿಸಿದ್ದಾರೆ. ಮಳೆಗಾಲದ ಅತಿವೃಷ್ಟಿಯ ಪರಿಣಾಮ ಭತ್ತದ ಇಳುವರಿ ಕುಸಿದಿದೆ. ಮತ್ತೊಂದು ಕಡೆ ಜೂನ್ 22 ರಂದು, ಬಾಂಗ್ಲಾದೇಶವು ಅಕ್ಟೋಬರ್ 31 ರವರೆಗೆ ಬಾಸ್ಮತಿಯೇತರ ಅಕ್ಕಿಯನ್ನು ಭಾರತದಿಂದ ಆಮದು ಮಾಡಿಕೊಳ್ಳಲು ಅವಕಾಶ ನೀಡಿದೆ. ಈ ಹಿಂದೆ ಭಾರತವು ಗೋಧಿ ರಫ್ತನ್ನು ನಿಷೇಧಿಸಿದಂತೆ ಅಕ್ಕಿ ರಫ್ತಿನ ಮೇಲೆ ಕೂಡ ನಿಷೇದ ವಿಧಿಸಬಹುದೆಂಬ ಆತಂಕದಿಂದ ಬಾಂಗ್ಲಾದೇಶವು ಭಾರತದಿಂದ ಅಕ್ಕಿಯನ್ನು ಆಮದು ಮಾಡಿಕೊಳ್ಳಲು ಅನುಮತಿ ನೀಡಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

9. (ಹೊಸ ಅಂಕಣ) ತ್ರಯಸ್ಥ ಅಂಕಣ | ಮೋದಿಯಿಸಂನ ಉಚ್ಛ್ರಾಯ ಕಾಲದಲ್ಲಿ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರಾರು?
ಮೋದಿ ದೇಶಭಕ್ತ, ಬಿಜೆಪಿ ಧರ್ಮನಿಷ್ಠ, ಸಂಘಪರಿವಾರ ಧ್ಯೇಯನಿಷ್ಠ ಅಂತ ಸಾವಿರ ಹೇಳಿದರೂ, ಇವರ ಮೂಗಿನಡಿಯಲ್ಲೇ ಆಪರೇಷನ್ ಕಮಲದಂಥಾ ಪ್ರಜಾಪ್ರಭುತ್ವ ವಿರೋಧಿ ಪ್ರಕರಣಗಳು ನಡೆಯುತ್ತಿವೆ ಎಂಬುದನ್ನು ಮರೆಯಬಾರದು ಎನ್ನುತ್ತಾರೆ ಚಿಂತಕ, ಲೇಖಕ, ವಾಗ್ಮಿ ನಿತ್ಯಾನಂದ ವಿವೇಕವಂಶಿ ಅವರು, ತಮ್ಮ ಹೊಚ್ಚ ಹೊಸ ʼತ್ರಯಸ್ಥʼ ಅಂಕಣದಲ್ಲಿ. ಓದಲು ಇಲ್ಲಿ ಕ್ಲಿಕ್‌ ಮಾಡಿ.

10. WhatsApp Edit | ಇನ್ನು ವಾಟ್ಸ್ಆ್ಯಪ್ ಮೆಸೇಜ್ ಎಡಿಟ್ ಮಾಡಬಹುದು! ಆದ್ರೆ ಇದಕ್ಕಾಗಿ ಸ್ವಲ್ಪ ದಿನ ಕಾಯಬೇಕು
ಜನಪ್ರಿಯ ಮೈಕ್ರೋ ಬ್ಲಾಗಿಂಗ್ ಟ್ವಿಟರ್ ಎಡಿಟ್ ಬಟನ್ ಪರಿಚಯಿಸಲು ಮುಂದಾಗಿರುವ ಬೆನ್ನಲ್ಲೇ, ಮತ್ತೊಂದು ಜನಪ್ರಿಯ ಸೋಷಿಯಲ್ ಮೀಡಿಯಾ ವಾಟ್ಸ್ಆ್ಯಪ್ (WhatsApp) ಕೂಡ ಎಡಿಟ್ ಫೀಚರ್ ಅಳವಡಿಸಲು ಮುಂದಾಗಿದೆ. ಅಂದರೆ, ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿದ ಸಂದೇಶವನ್ನು ಎಡಿಟ್ ಮಾಡಲು ಈ ಫೀಚರ್ ಅವಕಾಶ ಕಲ್ಪಿಸಲಿದೆ. ಒಂದೊಮ್ಮೆ ವಾಟ್ಸ್ಆ್ಯಪ್‌ ಮಾಡುವಾಗ ಏನಾದರೂ ತಪ್ಪುಗಳಾಗಿದ್ದರೆ, ಈ ಎಡಿಟ್ ಫೀಚರ್ ಬಳಸಿಕೊಂಡು ಸರಿಪಡಿಸಬಹುದು! ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

Exit mobile version