ಬೆಂಗಳೂರು: ಕೇಂದ್ರ ಸರ್ಕಾರದಿಂದ ಹಿಂದಿ ದಿವಸ ಆಚರಣೆಗೆ ರಾಜ್ಯದಲ್ಲಿ ಮುಖ್ಯವಾಗಿ ಜೆಡಿಎಸ್ ಪಕ್ಷ ವಿರೋಧ ವ್ಯಕ್ತಪಡಿಸಿತು. ವಿಧಾನಸೌಧದ ಆವರಣದಲ್ಲಿ ಪ್ರತಿಭಟನೆ ನಡೆಸಿದ ಜೆಡಿಎಸ್, ಸದನದ ಒಳಗೂ ವಿಚಾರ ಪ್ರಸ್ತಾಪ ಆಗುವಂತೆ ನೋಡಿಕೊಂಡಿತು. ಆದರೆ ಕಾಂಗ್ರೆಸ್, ಬಿಜೆಪಿ ಇದಕ್ಕೆ ವ್ಯತಿರಿಕ್ತವಾಗಿ ಪ್ರತಿಕ್ರಿಯೆ ನೀಡಿದವು. ಲಂಚ ಪ್ರಕರಣದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕುಟುಂಬಕ್ಕೆ ಮತ್ತೆ ಸಂಕಷ್ಟ ಎದುರಾಗಿದೆ, ಮಳೆ ಹಾನಿ ಕುರಿತು ಚರ್ಚೆ ಸದನದಲ್ಲಿ ಎರಡನೇ ದಿನವೂ ಮುಂದುವರಿದಿದೆ, ಗೋವಾದಲ್ಲಿ 8 ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಿದ್ದಾರೆ, ಮುರುಘಾಶ್ರೀಗಳ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದೆ ಎನ್ನುವುದು ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
1. ಹಿಂದಿ ದಿವಸ ವಿರೋಧಿಸಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ JDS ಪ್ರತಿಭಟನೆ: ಡಿಕೆಶಿ, ಖಾದರ್, ಸಿ.ಟಿ. ರವಿ ಭಿನ್ನ ಧ್ವನಿ
ಕೇಂದ್ರ ಸರ್ಕಾರದ ವತಿಯಿಂದ ರಾಜ್ಯದಲ್ಲಿ ಹಿಂದಿ ದಿವಸ ಆಚರಿಸುತ್ತಿರುವುದು, ಅದಕ್ಕೆ ರಾಜ್ಯ ಬಿಜೆಪಿ ಸರ್ಕಾರ ಬೆಂಬಲ ನೀಡುತ್ತಿರುವುದು ಅತ್ಯಂತ ಖಂಡನೀಯ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಹಿಂದಿ ದಿವಸ ಆಚರಣೆ ಖಂಡಿಸಿ ವಿಧಾನಸೌಧ ಬಳಿಯ ಮಹಾತ್ಮ ಗಾಂಧೀಜಿ ಪ್ರತಿಮೆ ಎದುರು ಕನ್ನಡ ಶಾಲು ಧರಿಸಿ ಹಾಗೂ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ನಡೆಸಿದರು. ನಂತರ ಸದನದೊಳಕ್ಕೂ ಕಪ್ಪುಪಟ್ಟಿ ಧರಿಸಿ ಪ್ರವೇಶಿಸಲು ಜೆಡಿಎಸ್ ಸದಸ್ಯರು ಪ್ರಯತ್ನಿಸಿದರು. ಆದರೆ ಮಾರ್ಷಲ್‌ಗಳು ಇದಕ್ಕೆ ಅವಕಾಶ ನೀಡಲಿಲ್ಲ. ಕೇಂದ್ರ ಸರ್ಕಾರಕ್ಕೆ ಭಾಷಾ ಸಹಿಷ್ಣುತೆ ಇಲ್ಲ. ರಾಜ್ಯಗಳ ಮೇಲೆ, ಅದರಲ್ಲೂ ಕರ್ನಾಟಕದ ಮೇಲೆ ಪದೇಪದೆ ಹಿಂದಿ ಹೇರಿಕೆ ಮಾಡುತ್ತಲೇ ಇದೆ. ಪ್ರಾದೇಶಿಕ ಭಾಷೆಗಳನ್ನು, ಮುಖ್ಯವಾಗಿ ಕನ್ನಡವನ್ನು ಹತ್ತಿಕ್ಕುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
🟩 ಡಿ.ಕೆ. ಶಿವಕುಮಾರ್: ಹಿಂದಿ ರಾಷ್ಟ್ರೀಯ ಭಾಷೆ, ಅದಕ್ಕೆ ಗೌರವ ಕೊಡಲು ತಕರಾರಿಲ್ಲ, ಆದರೆ…
🟩 ಯು.ಟಿ. ಖಾದರ್: ಹಿಂದಿಯನ್ನು ಏಕೆ ವಿರೋಧ ಮಾಡ್ಬೇಕೊ ಗೊತ್ತಿಲ್ಲ
🟩ಸಿ.ಟಿ. ರವಿ: ಹಿಂದಿ ದಿವಸ್ ಶುಭಾಶಯ ಕೋರಿದ ಸಿ.ಟಿ. ರವಿ: ದೇವೇಗೌಡರ ಆಡಿಯೊ ಮೂಲಕ JDSಗೆ ಎದಿರೇಟು
2. ವಿಧಾನ ಮಂಡಲ ಅಧಿವೇಶನ | ಕೆರೆ ಮುಚ್ಚಿ ನಿರ್ಮಿಸಿದ ಡಾಲರ್ಸ್ ಕಾಲೊನಿಯಲ್ಲಿ ಶ್ರೀಮಂತರಿಗೆ ಮನೆ ಕೊಟ್ರಿ: BDA ವಿರುದ್ಧ ಕುಮಾರಸ್ವಾಮಿ ಕಿಡಿ
ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ನಗರದ ಇಂದಿನ ಎಲ್ಲ ಕರ್ಮಕಾಂಡಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವೇ (ಬಿಡಿಎ) ಕಾರಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು. ನಿಯಮ 69ರ ಅಡಿ ಅತಿವೃಷ್ಟಿ ಬಗ್ಗೆ ವಿಧಾನಸಭೆಯಲ್ಲಿ ಬುಧವಾರ ಸುದೀರ್ಘವಾಗಿ ಮಾತನಾಡಿದ ಕುಮಾರಸ್ವಾಮಿ, ಇದ್ದ ಎಲ್ಲ ಕೆರೆಗಳನ್ನು ಮುಚ್ಚಿ ಬಡಾವಣೆಗಳನ್ನು ಮಾಡಿ, ಕಾಲುವೆಗಳನ್ನು ಮುಚ್ಚಿ ಬೆಂಗಳೂರು ಸೌಂದರ್ಯವನ್ನು ಬಿಡಿಎ ನಾಶ ಮಾಡಿತು ಎಂದು ಕಿಡಿಕಾರಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಅಧಿವೇಶನದ ಇನ್ನಷ್ಟು ಸುದ್ದಿಗಳು
🔴ʼಆಸರೆ ಮನೆಗಳು ಪಾಳು ಬಿದ್ದಿವೆʼ: ವಿಧಾನಸಭೆಯಲ್ಲಿ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಆಕ್ರೋಶ
🔴ʼಬೋರ್‌ವೆಲ್ ಗುತ್ತಿಗೆದಾರರ ಲಾಬಿಯಿಂದ ವಿವಾದ ಸೃಷ್ಟಿʼ: ಗಂಗಾ ಕಲ್ಯಾಣ ಕುರಿತು ಸದನದಲ್ಲಿ ಗದ್ದಲ
🔴ಪರಿಸರವಾದಿಗಳಿಂದ ಅಭಿವೃದ್ಧಿಗೆ ತೊಂದರೆ: ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಆರೋಪ
3. ಮೋದಿಯನ್ನು ಇನ್ನಷ್ಟು ಬಲಪಡಿಸಲು ಬಿಜೆಪಿ ಸೇರಿದ್ದೇವೆ: ಗೋವಾದಲ್ಲಿ ʼಕೈʼ ಬಿಟ್ಟ 8 ಶಾಸಕರ ಮಾತು!
ಕಾಂಗ್ರೆಸ್ ನಾಯಕರು ಭಾರತ್ ಜೋಡೋ ಯಾತ್ರೆಯ ದೂರವನ್ನು ಕ್ರಮಿಸುತ್ತಿದ್ದರೆ, ಇನ್ನೊಂದೆಡೆ ಕಾಂಗ್ರೆಸ್ ಛೋಡೋ ಅಭಿಯಾನ ಮುಂದುವರಿದಿದೆ. ಗೋವಾದಲ್ಲಿಂದು ಕಾಂಗ್ರೆಸ್ಗೆ (Goa Congress) ದೊಡ್ಡ ಹಿನ್ನಡೆಯಾಗಿದೆ. ಆ ರಾಜ್ಯದಲ್ಲಿ ಇದ್ದ 11 ಕಾಂಗ್ರೆಸ್ ಶಾಸಕರಲ್ಲಿ ಎಂಟು ಮಂದಿ ಕಮಲ ಹಿಡಿದಿದ್ದಾರೆ. ಗೋವಾ ಮುಖ್ಯಮಂತ್ರಿ, ಬಿಜೆಪಿ ನಾಯಕ ಪ್ರಮೋದ್ ಸಾವಂತ್ ಮತ್ತು ಬಿಜೆಪಿ ರಾಜ್ಯ ಮುಖ್ಯಸ್ಥ ಸದಾನಂದ್ ಶೇಟ್ ತನಾವಡೆ ಸಮ್ಮುಖದಲ್ಲಿ ಇವರೆಲ್ಲ ಬಿಜೆಪಿಗೆ ಕಾಲಿಟ್ಟಿದ್ದಾರೆ. ಅಲ್ಲಿಗೆ ಜುಲೈ ತಿಂಗಳಿಂದ ಕಾಂಗ್ರೆಸ್ನಲ್ಲಿ ಶುರುವಾಗಿದ್ದ ಬಂಡಾಯಕ್ಕೆ ಒಂದು ಅಂತ್ಯ ಸಿಕ್ಕಂತಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. ಕೊಳಗಲ್ ಆಟೊ ದುರಂತ| ಆರು ಬಡ ಹೆಣ್ಮಕ್ಕಳ ಬಾಳಿಗೆ ಚರಮ ಗೀತೆ ಹಾಡಿತು ಆ ಒಂದು ಕಲ್ಲು!
ನಿತ್ಯದ ಕೂಲಿಯೇ ಇವರ ತುತ್ತು ಅನ್ನದ ಬದುಕಿಗೆ ಆಧಾರ. ನಿತ್ಯವೂ ದುಡಿದರೆ ಮಾತ್ರ ಹೊಟ್ಟೆ ತುಂಬುತ್ತದೆ ಎಂಬಂತಿರುವ ಇವರ ಬದುಕಿಗೆ ಒಂದು ಸಣ್ಣ ಕಲ್ಲು ಚರಮ ಗೀತೆ ಹಾಡಿದೆ!. ಬಳ್ಳಾರಿ ತಾಲೂಕಿನ ಶಾಂತಿನಗರ ಸಮೀಪ ಬುಧವಾರ ಮುಂಜಾನೆ ನಡೆದ ದುರಂತದ ಹಿಂದಿನ ದುರಂತ ಕಥನ. ಜಮೀನಿಗೆ ಕೂಲಿ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ಆಟೋ ರಿಕ್ಷಾ ಪಲ್ಟಿಯಾಗಿ ಕಾಲುವೆಗೆ ಉರುಳಿ ಆರು ಮಂದಿ ಪ್ರಾಣ ಕಳೆದುಕೊಂಡ ಘಟನೆ ಇದು. ಪೂರ್ಣ ವರದಿಗೆ ಇಲ್ಲಿ ಕ್ಲಿಕ್ ಮಾಡಿ.
5. ವಿಸ್ತಾರ Money Guide | 25 ವರ್ಷದ ಗೃಹಸಾಲವನ್ನು 12 ವರ್ಷದಲ್ಲೇ ಸುಲಭವಾಗಿ ತೀರಿಸುವುದು ಹೇಗೆ?
ಗೃಹ ಸಾಲವನ್ನು ಹೊಂದುವ ಪ್ರತಿಯೊಬ್ಬರೂ, ವರ್ಷಾನುಗಟ್ಟಲೆ ಇಎಂಐ ಅನ್ನು ಹೇಗೆ ಮರು ಪಾವತಿಸುವುದು ಹಾಗೂ ಯಾವಾಗ ಸಾಲದಿಂದ ಮುಕ್ತಿ ಪಡೆಯಬಹುದು ಎಂದು (ವಿಸ್ತಾರ Money Guide) ಆಲೋಚಿಸುತ್ತಾರೆ. ಅದಕ್ಕೆ ವಿಸ್ತಾರ ನ್ಯೂಸ್ ಎಕ್ಸಿಕ್ಯುಟಿವ್ ಎಡಿಟರ್ ಶರತ್ ಎಂ.ಎಸ್ ಅವರ ಪರಿಹಾರೋಪಾಯ ಇಲ್ಲಿದೆ. ಓದಲು ಹಾಗೂ ವಿಡಿಯೊ ನೋಡಲು ಇಲ್ಲಿ ಕ್ಲಿಕ್ ಮಾಡಿ.
6. ಬಿಎಸ್‌ವೈ ಕುಟುಂಬಕ್ಕೆ ಸಂಕಷ್ಟ | ಲಂಚ ಪ್ರಕರಣದಲ್ಲಿ ಲೋಕಾಯುಕ್ತ ತನಿಖೆ ನಡೆಸಲು ಜನಪ್ರತಿನಿಧಿ ಕೋರ್ಟ್ ಆದೇಶ
ಮಾಜಿ ಮುಖ್ಯಮಂತ್ರಿ, ಬಿಜೆಪಿಯ ರಾಷ್ಟ್ರೀಯ ಸಲಹಾ ಮಂಡಳಿಯ ಸದಸ್ಯ ಬಿ.ಎಸ್. ಯಡಿಯೂರಪ್ಪ, ಅವರ ಪುತ್ರ ಬಿ.ವೈ ವಿಜಯೇಂದ್ರ ಸೇರಿದಂತೆ ಹಲವರಿಗೆ ಮತ್ತೆ ಸಂಕಟ ಎದುರಾಗಿದೆ. ಮುಖ್ಯಮಂತ್ರಿಯಾಗಿದ್ದ ವೇಳೆ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಕುಟುಂಬಿಕರು ಅಧಿಕಾರ ದುರ್ಬಳಕೆ ಮಾಡಿಕೊಂಡು ಬಿಡಿಎ ವಸತಿ ಯೋಜನೆ ಗುತ್ತಿಗೆ ನೀಡುವ ಸಲುವಾಗಿ ಲಂಚ ಸ್ವೀಕರಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿ ತನಿಖೆ ನಡೆಸಿ ನವೆಂಬರ್ ೨ರೊಳಗೆ ವರದಿ ನೀಡುವಂತೆ ಜನಪ್ರತಿನಿಧಿ ನ್ಯಾಯಾಲಯವು ಲೋಕಾಯುಕ್ತಕ್ಕೆ ಆದೇಶ ನೀಡಿದೆ. ಇದರೊಂದಿಗೆ ಪುನರುಜ್ಜೀವಿತ ಲೋಕಾಯುಕ್ತದ ಮುಂದೆ ಹೈಪ್ರೊಫೈಲ್ ಕೇಸೊಂದು ಬಂದು ನಿಂತಂತಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. Vistara-Air India | ವಿಸ್ತಾರ-ಏರ್ ಇಂಡಿಯಾ ವಿಲೀನ? ಶುರುವಾಗಿದೆ ಮಾತುಕತೆ
ಟಾಟಾ ಸನ್ಸ್ ಮತ್ತು ಸಿಂಗಾಪುರ ಏರ್‌ಲೈನ್ಸ್‌ನ ಜಂಟಿ ಸಹಭಾಗಿತ್ವವಿರುವ ವಿಸ್ತಾರ ಏರ್‌ಲೈನ್ ಮತ್ತು ಏರ್ ಇಂಡಿಯಾ ವಿಲೀನ ಬಗ್ಗೆ ಮಾತುಕತೆ ಆರಂಭವಾಗಿದೆ. (Vistara-Air India) ಏರ್ ಇಂಡಿಯಾ ಈಗಾಗಲೇ ಟಾಟಾ ಸಮೂಹದ ಪಾಲಾಗಿದೆ. ವಿಸ್ತಾರದಲ್ಲಿ ಟಾಟಾ ಸನ್ಸ್ 51% ಹಾಗೂ ಸಿಂಗಾಪುರ ಏರ್‌ಲೈನ್ಸ್ 49% ಷೇರುಗಳನ್ನು ಹೊಂದಿದೆ. ಜುಲೈ ವೇಳೆಗೆ ಮಾರುಕಟ್ಟೆ ಪಾಲು ದೃಷ್ಟಿಯಿಂದ ಎರಡನೇ ಅತಿ ದೊಡ್ಡ ಏರ್‌ಲೈನ್ ಆಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. ಮುರುಘಾಶ್ರೀ ಪ್ರಕರಣ | ಶ್ರೀಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ, ಇನ್ನೂ 14 ದಿನ ಜೈಲೇ ಗತಿ
ಮಠದ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ಚಿತ್ರದುರ್ಗದ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾಶರಣರ ನ್ಯಾಯಾಂಗ ಬಂಧನ ಅವಧಿಯನ್ನು ಇನ್ನೂ ೧೪ ದಿನಗಳ ಕಾಲ ವಿಸ್ತರಿಸಲಾಗಿದೆ. ಹೀಗಾಗಿ ಅವರು ಸೆಪ್ಟೆಂಬರ್ ೨೭ರವರೆಗೆ ಜೈಲಿನಲ್ಲೇ ಇರಬೇಕಾಗಿದೆ. ಕಳೆದ ಸೆಪ್ಟೆಂಬರ್ ೧ರಂದು ಬಂಧಿತರಾಗಿದ್ದ ಶ್ರೀಗಳಿಗೆ ಅಂದೇ ರಾತ್ರಿ ೧೪ ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಅದರ ನಡುವೆಯೇ ಅವರನ್ನು ಸೆಪ್ಟೆಂಬರ್ ೫ರವರೆಗೆ ಪೊಲೀಸ್ ಕಸ್ಟಡಿಗೆ ಒಪಿಸಲಾಗಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. ಗುಜರಾತ್ ಕರಾವಳಿಯಲ್ಲಿ ಡ್ರಗ್ಸ್ ತರುತ್ತಿದ್ದ ಪಾಕ್ ಬೋಟ್ ಜಪ್ತಿ; 200 ಕೋಟಿ ರೂ ಬೆಲೆಯ ಮಾದಕ ವಸ್ತು ವಶ
ಅರೇಬಿಯನ್ ಸಮುದ್ರದ ಗುಜರಾತ್ ಕರಾವಳಿ ತೀರದಲ್ಲಿ ಪಾಕಿಸ್ತಾನಿ ಮೀನುಗಾರಿಕಾ ಬೋಟ್ನಲ್ಲಿದ್ದ 200 ಕೋಟಿ ರೂಪಾಯಿ ಮೌಲ್ಯದ 40 ಕೆಜಿ ಹೆರಾಯಿನ್ನ್ನು ವಶಪಡಿಸಿಕೊಳ್ಳಲಾಗಿದೆ. ಗುಜರಾತ್ ಆ್ಯಂಟಿ ಟೆರರಿಸ್ಟ್ ಸ್ಕ್ವಾಡ್ (ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ) ಮತ್ತು ಭಾರತೀಯ ಕರಾವಳಿ ರಕ್ಷಕ ಪಡೆ (ಇಂಡಿಯನ್ ಕೋಸ್ಟ್ ಗಾರ್ಡ್) ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿವೆ. ಈ ಬೋಟ್ನಲ್ಲಿದ್ದ ಆರು ಮಂದಿ ಪಾಕಿಸ್ತಾನ ಪ್ರಜೆಗಳನ್ನೂ ಬಂಧಿಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. Ram Mandir | ಮುಂದಿನ ವರ್ಷದ ಡಿಸೆಂಬರ್‌ನಲ್ಲಿ ಅಯೋಧ್ಯೆ ರಾಮ ದೇಗುಲಕ್ಕೆ ಭಕ್ತರ ಪ್ರವೇಶ
ಅಯೋಧ್ಯೆಯಲ್ಲಿ ರಾಮ ಮಂದಿರದ (Ram Mandir) ಗರ್ಭಗುಡಿ ನಿರ್ಮಾಣವು ಮುಂದಿನ ವರ್ಷ ಡಿಸೆಂಬರ್‌ಕ್ಕೆ ಪೂರ್ಣಗೊಳ್ಳಲಿದ್ದು, ಶೀಘ್ರವೇ ಸಾರ್ವಜನಿಕರಿಗೆ ರಾಮದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ರಾಮ ದೇಗುಲ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಹೇಳಿದ್ದಾರೆ. ದೇಗುಲದ ದೀರ್ಘ ಬಾಳಿಕೆಗಾಗಿ ನಾವು ಗ್ರಾನೈಟ್ ಸ್ಲ್ಯಾಬ್‌ಗಳನ್ನು ಬಳಸುತ್ತಿದ್ದೇವೆ. ಮಂದಿರ ನಿರ್ಮಾಣವು ವೇಳಾಪಟ್ಟಿಯಂತೆಯೇ ನಡೆಯುತ್ತಿದ್ದು, 2023ರ ಡಿಸೆಂಬರ್ ಹೊತ್ತಿಗೆ ಭಕ್ತರು ರಾಮದೇವರ ದರ್ಶನವನ್ನು ಪಡೆದುಕೊಳ್ಳಲು ಸಾಧ್ಯವಾಗಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಈ ವೇಳೆಗಾಗಲೇ ಗರ್ಭ ಗುಡಿ ಪೂರ್ಣಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.