ಬೆಂಗಳೂರು: ಜನಾಕ್ರೋಶ, ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದ ಸರ್ಕಾರ, ಕೆಎಂಎಫ್ ಮೇಲೆ ಒತ್ತಡ ಹೇರಿ ಸಂಜೆಯ ವೇಳೆಗೆ ಅಲ್ಪ ಪ್ರಮಾಣದ ದರ ಕಡಿತ ಮಾಡುವಲ್ಲಿ ಯಶಸ್ವಿಯಾಯಿತು. ರಾಷ್ಟ್ರಪತಿ ಚುನಾವಣೆ ದೇಶಾದ್ಯಂತ ನಡೆದಿದ್ದು, ಸಂಸತ್ತಿನಲ್ಲಿ ಶೇ.99.18 ಮತ ಚಲಾವಣೆಯಾಗಿದೆ. ಪಶ್ಚಿಮ ಘಟ್ಟ ಕುರಿತ ಕಸ್ತೂರಿ ರಂಗನ್ ಸಮಿತಿ ವರದಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿದೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒಡೆತನದ ಶಾಲೆಗೆ ಬಾಂಬ್ ಬೆದರಿಕೆ ಆತಂಕ ಮೂಡಿಸಿತ್ತು ಎನ್ನುವುದು ಸೇರಿ ದಿನಪೂರ್ತಿ ನಡೆದ ಪ್ರಮುಖ ಘಟನಾವಳಿಗಳ ಗುಚ್ಛ ವಿಸ್ತಾರ TOP 10 NEWS.
1. ನಂದಿನಿ ಮೊಸರು, ಮಜ್ಜಿಗೆ, ಲಸ್ಸಿ ದರ ಅಲ್ಪ ಕಡಿತ: ಒತ್ತಡಕ್ಕೆ ಮಣಿದ ಕೆಎಂಎಫ್
ಜಿಎಸ್‌ಟಿ ದರಗಳನ್ನು ಹೆಚ್ಚಿಸುವ ಮೂಲಕ ಜನಸಾಮಾನ್ಯರ ದಿನಬಳಕೆ ವಸ್ತುಗಳ ಬೆಲೆ ಹೆಚ್ಚಳದ ಕುರಿತು ರಾಜ್ಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪ್ರತಿಪಕ್ಷಗಳ ನಾಯಕರು ಹಾಗೂ ಜನಸಾಮಾನ್ಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಉತ್ಪಾದನಾ ಕಂಪನಿಗಳು ಬೆಲೆ ಹೆಚ್ಚಳ ಮಾಡುವ ಅಗತ್ಯವಿಲ್ಲ, ನಂತರ ಜಿಎಸ್‌ಟಿ ಮರುಪಾವತಿ ಪಡೆಯುವ ಅವಕಾಶವಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದರ ಹಿನ್ನೆಲೆಯಲ್ಲಿ ಉತ್ಪನ್ನಗಳ ದರವನ್ನು ಕೆಎಂಎಫ್ ಅಲ್ಪ ಕಡಿತ ಮಾಡಿದೆ. ಬೆಳಗ್ಗೆ ಏರಿಕೆಯಾದ ದರಳನ್ನು 12 ಗಂಟೆ ಅವಧಿಯೊಳಗೆ ಪರಿಷ್ಕರಣೆ ಮಾಡಲಾಗಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
2. Murmu vs Sinha | ರಾಷ್ಟ್ರಪತಿ ಚುನಾವಣೆ ಮತದಾನ ಅಂತ್ಯ; ಸಂಸತ್ತಿನಲ್ಲಿ ಶೇ.99.18 ರಷ್ಟು ಮತ ಚಲಾವಣೆ
ರಾಷ್ಟ್ರಪತಿ ಚುನಾವಣೆ ಮತದಾನ ದೇಶಾದ್ಯಂತ ಶಾಂತಿಯುತವಾಗಿ ಮುಕ್ತಾಯವಾಗಿದೆ. ಬೆಳಗ್ಗೆ 10ಗಂಟೆಯಿಂದ ಸಂಜೆ 5ಗಂಟೆವರೆಗೆ ಮತಚಲಾವಣೆ ನಡೆದಿದ್ದು, ಒಟ್ಟಾರೆ ಸಂಸತ್ತಿನಲ್ಲಿ ಶೇ.99.18 ರಷ್ಟು ಮತದಾನ ಆಗಿದೆ ಎಂದು ಚುನಾವಣಾ ಮುಖ್ಯ ರಿಟರ್ನಿಂಗ್ ಆಫೀಸರ್ ಪಿ.ಸಿ.ಮೋಡಿ ಹೇಳಿದ್ದಾರೆ. ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಮತ್ತು ಪ್ರತಿಪಕ್ಷಗಳ ಜಂಟಿ ಅಭ್ಯರ್ಥಿ ಯಶವಂತ್ ಸಿನ್ಹಾರ ಭವಿಷ್ಯ ನಿರ್ಧರಿಸಲಿರುವ ಬ್ಯಾಲೆಟ್ ಬಾಕ್ಸ್‌ಗಳು ದೇಶದ ಎಲ್ಲೆಡೆಯಿಂದ ಮಂಗಳವಾರದೊಳಗೆ ದೆಹಲಿಗೆ ಬರಲಿವೆ. ಈ ಬ್ಯಾಲೆಟ್ ಪೆಟ್ಟಿಗೆಗಳನ್ನು ರಸ್ತೆ ಮತ್ತು ವಾಯು ಮಾರ್ಗದ ಮೂಲಕ ತರಲಾಗುತ್ತದೆ. ಅದರೊಂದಿಗೆ ಸಹಾಯಕ ಚುನಾವಣಾಧಿಕಾರಿಗಳು ಇರುತ್ತಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
3. ಕಸ್ತೂರಿ ರಂಗನ್ ವರದಿ ತಿರಸ್ಕರಿಸಿದ ರಾಜ್ಯ ಸರ್ಕಾರ: ವರದಿ ಕೈಬಿಡುವಂತೆ ಕಾನೂನು ಹೋರಾಟ
ಕಸ್ತೂರಿ ರಂಗನ್ ವರದಿ ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳುವುದಿಲ್ಲ. ಇದು ಮಲೆನಾಡು ಹಾಗೂ ಕರಾವಳಿ ಭಾಗದ ಜನರಿಗೆ ಕಂಟಕಪ್ರಾಯವಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಸೋಮವಾರ ವಿಕಾಸಸೌಧದಲ್ಲಿ ಪಶ್ಚಿಮ ಘಟ್ಟಗಳ ಅರಣ್ಯ ಸಂರಕ್ಷಣೆ ವಿಚಾರವಾಗಿ ಮಲೆನಾಡು, ಕರಾವಳಿ ಭಾಗದ ಶಾಸಕರೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿ ಸಭೆ ನಡೆಸಿದ್ದು, ಎಲ್ಲ ಶಾಸಕರಿಂದ ಈ ವರದಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
4. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒಡೆತನದ ಶಾಲೆಗೆ ಬಾಂಬ್ ಬೆದರಿಕೆ
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒಡೆತನದ ಶಾಲೆಗೆ ಸೋಮವಾರ ಬೆಳಗ್ಗೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಬಾಂಬ್ ನಿಷ್ಕ್ರಿಯ ದಳ ಧಾವಿಸಿತು. ರಾಜರಾಜೇಶ್ವರಿ ನಗರದಲ್ಲಿರುವ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆಗೆ ಇಮೇಲ್ ಮೂಲಕ ಬೆದರಿಕೆ ಬಂದಿದೆ. ಶಾಲೆಯಲ್ಲಿ ಬಾಂಬ್ ಇಡಲಾಗಿದ್ದು, ಭಾನುವಾರ ಸಂಜೆ ಸ್ಫೋಟಿಸುವುದಾಗಿ ತಿಳಿಸಲಾಗಿತ್ತು. ಹುಚ್ಚ ವೆಂಕಟ್ ಹೆಸರಿನ ಇಮೇಲ್ ಐಡಿಯಿಂದ ಬಂದ ಎರಡು ಬೆದರಿಕೆಗಳು ಶಾಲಾ ಆಡಳಿತ ಮಂಡಳಿ ಹಾಗೂ ಪೋಷಕರಲ್ಲಿ ಆತಂಕ ಮೂಡಿಸಿತು. ಇದೇ ವರ್ಷ ಏಪ್ರಿಲ್ 8ರಂದು ಬೆಳಗ್ಗೆ ಬೆಂಗಳೂರಿನ 5 ಖಾಸಗಿ ಶಾಲೆಗಳಿಗೆ ಬೆದರಿಕೆ ಇಮೇಲ್ ಬಂದಿತ್ತು. ಆದರೆ ನಂತರ ಇದು ಹುಸಿ ಬೆದರಿಕೆ ಎಂಬುದು ಸಾಬೀತಾಗಿತ್ತು. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
5. ಕುಸಿಯುವ ಹಂತದಲ್ಲಿ ಕೊಡಗು ಜಿಲ್ಲಾಡಳಿತ ಕಚೇರಿಯ ತಡೆಗೋಡೆ; ರಾಷ್ಟ್ರೀಯ ಹೆದ್ದಾರಿ 275 ಬಂದ್
ಮುಂಗಾರು ಆರಂಭದ ದಿನಗಳಲ್ಲೇ ಭಾರಿ ಮಳೆಯಿಂದ ಕೊಡಗು ತತ್ತರಿಸಿ ಹೋಗಿದೆ. ಒಂದೆಡೆ ಪ್ರಾಕೃತಿಕ ವಿಕೋಪ ಸಂಭವಿಸುತ್ತಿದ್ದರೆ, ಮತ್ತೊಂದೆಡೆ ಮಾನವ ನಿರ್ಮಿತ ವಿಕೋಪಗಳು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ. ಇದೀಗ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದ ಕಾಮಗಾರಿಯಿಂದ ಜಿಲ್ಲಾಡಳಿತ ಭವನ ಹಾಗೂ ರಾಷ್ಟ್ರೀಯ ಹೆದ್ದಾರಿಗೆ ಕಂಟಕ ಬಂದೊದಗಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
ಜುಲೈ 20ರಂದು ಕೆಆರ್‌ಎಸ್, ಕಬಿನಿ ಜಲಾಶಯಕ್ಕೆ ಸಿಎಂ ಬೊಮ್ಮಾಯಿ ಬಾಗಿನ
6. Monkeypox: ಕೇರಳದಲ್ಲಿ ಪತ್ತೆಯಾಯ್ತು ಮತ್ತೊಂದು ಮಂಕಿಪಾಕ್ಸ್ ಪ್ರಕರಣ; ದೇಶದಲ್ಲಿದು 2ನೇ ಕೇಸ್
ಕೇರಳದಲ್ಲಿ ಇನ್ನೊಂದು ಮಂಕಿ ಪಾಕ್ಸ್ ಪ್ರಕರಣ ಪತ್ತೆಯಾಗಿದೆ. ಕಣ್ಣೂರು ಜಿಲ್ಲೆಯ 31 ವರ್ಷದ ವ್ಯಕ್ತಿಯಲ್ಲೀಗ ವೈರಸ್ ದೃಢಪಟ್ಟಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಇವರು ದುಬೈನಿಂದ ಬಂದು ಜುಲೈ 13ರಂದು ಮಂಗಳೂರು ಏರ್‌ಪೋರ್ಟ್‌ನಲ್ಲಿ ಲ್ಯಾಂಡ್ ಆಗಿದ್ದರು. ಆಗಲೇ ಮಂಕಿಪಾಕ್ಸ್ ಲಕ್ಷಣಗಳು ಕಾಣಿಸಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ರಕ್ತದ ಮಾದರಿಯನ್ನು ಪುಣೆಯಲ್ಲಿರುವ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳಿಸಲಾಗಿತ್ತು. ತಪಾಸಣೆಯ ವರದಿ ಬಂದಿದ್ದು, ಮಂಕಿಪಾಕ್ಸ್ ಇರುವುದು ದೃಢಪಟ್ಟಿದೆ. ಸದ್ಯ ಕಣ್ಣೂರಿನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
7. ಸಿಎಂ ಇಬ್ರಾಹಿಂ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಆಗಸ್ಟ್ 11ಕ್ಕೆ ಚುನಾವಣೆ
ಕಾಂಗ್ರೆಸ್ ಸದಸ್ಯರಾಗಿ ಆಯ್ಕೆಯಾಗಿದ್ದ ಸಿಎಂ ಇಬ್ರಾಹಿಂ ರಾಜಿನಾಮೆಯಿಂದ ತೆರವಾದ ವಿಧಾನ ಪರಿಷತ್ ಸ್ಥಾನಕ್ಕೆ ಆಗಸ್ಟ್ 11ರಂದು ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ. ವಿಧಾನಪರಿಷತ್ನಲ್ಲಿ ಪ್ರತಿಪಕ್ಷ ನಾಯಕ ಸ್ಥಾನ ನೀಡಲಾಗುತ್ತದೆ ಎಂಬ ನಿರೀಕ್ಷೆಯನ್ನು ಸಿಎಂ ಇಬ್ರಾಹಿಂ ಹೊಂದಿದ್ದರು. ಆದರೆ ಬಿ.ಕೆ. ಹರಿಪ್ರಸಾದ್ ಅವರನ್ನು ಪ್ರತಿಪಕ್ಷ ನಾಯಕರಾಗಿ ನೇಮಕ ಮಾಡಲಾಯಿತು. ಇದರಿಂದ ಬೇಸತ್ತು ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಪರಿಷತ್ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದರು. ವಿಧಾನಸಭೆಯಲ್ಲಿ ಬಿಜಪಿ ಸಂಖ್ಯಾಬಲವೇ ಹೆಚ್ಚಿರುವುದರಿಂದ, ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಯೇ ಹೆಚ್ಚಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
8. ODI CRICKET | ಏಕದಿನ ಮಾದರಿಗೆ ವಿದಾಯ ಹೇಳಿದ ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್
ಇಂಗ್ಲೆಂಡ್ ತಂಡದ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಸೋಮವಾರ ಏಕದಿನ ಮಾದರಿಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದು, ಕ್ರಿಕೆಟ್ ಕ್ಷೇತ್ರಕ್ಕೆ ಆಘಾತ ಕೊಟ್ಟಿದ್ದಾರೆ. ಜುಲೈ 19ಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಮೊದಲ ಏಕದಿನ ಪಂದ್ಯ ಅವರ ಕೊನೇ ಒಡಿಐ ಪಂದ್ಯವಾಗಲಿದೆ. 31 ವರ್ಷದ ಆಟಗಾರ 2011ರಲ್ಲಿ ಐರ್ಲೆಂಡ್ ವಿರುದ್ಧ ಏಕದಿನ ಮಾದರಿಗೆ ಪದಾರ್ಪಣೆ ಮಾಡಿದ್ದರು. ಮೂರು ಮಾದರಿಯಲ್ಲಿ ಆಡುವುದು ಸುಸ್ಥಿರವಲ್ಲ ಎಂಬ ಹೇಳಿಕೆಯೊಂದಿಗೆ ಬೆನ್ ಸ್ಟೋಕ್ಸ್ ವಿದಾಯ ಘೋಷಣೆ ಮಾಡಿದ್ದಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
9. ಮುಂಗಾರು ಅಧಿವೇಶನಕ್ಕೆ ಮೊದಲ ದಿನವೇ ಕೈ ಅಡ್ಡಿ; ಕಲಾಪ ನಾಳೆ ಬೆಳಗ್ಗೆ 11ಕ್ಕೆ ಮುಂದೂಡಿಕೆ
ರಾಜ್ಯ ಸಭೆ ಕಲಾಪಕ್ಕೆ ಮೊದಲ ದಿನವೇ ವಿಘ್ನ ಎದುರಾಗಿದೆ. ಇಂದು ಬೆಳಗ್ಗೆ ಅಧಿವೇಶನ ಪ್ರಾರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸಂಸದರು ಗದ್ದಲ ಎಬ್ಬಿಸಿದ್ದಾರೆ. ಜಿಎಸ್‌ಟಿ ಮತ್ತು ನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆ, ಅಗ್ನಿಪಥ್ ಯೋಜನೆ ಸೇರಿ ಹಲವು ವಿಷಯವನ್ನು ಪ್ರಸ್ತಾಪಿಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು ಕಲಾಪ ಶುರುವಾಗಿ ಕೆಲವೇ ನಿಮಿಷದಲ್ಲಿ ಕಾಂಗ್ರೆಸ್ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಹೀಗಾಗಿ ರಾಜ್ಯಸಭೆ ಕಲಾಪವನ್ನು ಮಂಗಳವಾರ (ಜುಲೈ 19) ಬೆಳಗ್ಗೆ 11ಗಂಟೆವರೆಗೆ ಮುಂದೂಡಲಾಗಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
10. Video: ನರ್ಮದಾ ನದಿಗೆ ಬಿದ್ದ ಮಹಾರಾಷ್ಟ್ರ ಸರ್ಕಾರಿ ಬಸ್; 13 ಮಂದಿ ಸಾವು, 15 ಜನರ ರಕ್ಷಣೆ
ಮಧ್ಯಪ್ರದೇಶದ ಇಂಧೋರ್‌ನಿಂದ ಪುಣೆಗೆ ತೆರಳುತ್ತಿದ್ದ ಸರ್ಕಾರಿ ಬಸ್ ನರ್ಮದಾ ನದಿಗೆ ಬಿದ್ದು(Bus Fell Into River), 13 ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ. 15 ಜನರನ್ನು ರಕ್ಷಣೆ ಮಾಡಲಾಗಿದೆ. ಈ ಘಟನೆ ನಡೆದಿರುವುದು ಧಾರ್ ಮತ್ತು ಖರ್ಗೋನೆ ಜಿಲ್ಲೆಗಳ ಗಡಿ ಭಾಗದಲ್ಲಿನ ಆಗ್ರಾ-ಮುಂಬೈ ಹೈವೇಯಲ್ಲಿರುವ ಖಲ್‌ಘಾಟ್‌ನ ಸಂಜಯ್ ಸೇತು ಸೇತುವೆಯ ಬಳಿ. ಇಂಧೋರ್‌ನಿಂದ 80 ಕಿಮೀ ದೂರದಲ್ಲಿ ಇರುವ ಈ ಬ್ರಿಜ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ಸೇತುವೆಗೆ ಬದಿಯಲ್ಲಿ ಹಾಕಿದ್ದ ಬೇಲಿಯನ್ನು ಮುರಿದು ನದಿಗೆ ಬಿದ್ದಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)