Site icon Vistara News

ವಿಸ್ತಾರ TOP 10 NEWS | ಮುಂದಿನ ವರ್ಷದಿಂದ ಶಾಲೆಯಲ್ಲಿ ಮೌಲ್ಯ ಶಿಕ್ಷಣ, ಸಿದ್ದರಾಮಯ್ಯ ಸ್ಪರ್ಧೆಗೆ ಕೋಲಾರ ಕಣ ಇತ್ಯಾದಿ ಪ್ರಮುಖ ಸುದ್ದಿಗಳಿವು

Top 10 News

ಬೆಂಗಳೂರು: ಕೊನೆಗೂ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರು ಕೋಲಾರದಿಂದಲೇ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಈ ನಡುವೆ ಸಿದ್ದರಾಮಯ್ಯ ಅವರಿಗೆ ವಿರುದ್ಧವಾಗಿ ʻಸಿದ್ದು ನಿಜ ಕನಸುʼ ಎಂಬ ಪುಸ್ತಕವನ್ನು ಬಿಡುಗಡೆ ಮಾಡುವ ಬಿಜೆಪಿ ಕನಸಿಗೆ ಕೋರ್ಟ್‌ ತಡೆ ಹಾಕಿದೆ. ಆದರೂ ಬುಕ್‌ ವಾರ್‌ ಮುಂದುವರಿದಿದೆ. ಶಾಲೆಗಳಲ್ಲಿ ಮೌಲ್ಯ ಶಿಕ್ಷಣ ನೀಡುವ ವಿಚಾರಕ್ಕೆ ಸಂಬಂಧಿಸಿ ಧಾರ್ಮಿಕ ಮುಖಂಡರ ಮ್ಯಾರಥಾನ್‌ ಸಭೆ ನಡೆದು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಮೌಲ್ಯ ಶಿಕ್ಷಣ ಜಾರಿಗೆ ತೀರ್ಮಾನಿಸಲಾಗಿದೆ. ಶಿವಮೊಗ್ಗದಲ್ಲಿ ಬಜರಂಗ ದಳ ಮುಖಂಡನ ಹತ್ಯೆಯತ್ನ, ಇಂಡಿಗೋ ಫ್ಲೈಟ್‌ನಲ್ಲಿ ಕುಡಿದು ಹೊಡೆದಾಟ, ದೇಶದ ಅಣೆಕಟ್ಟುಗಳು ಬರಿದಾಗುವ ಆತಂಕದ ಸುದ್ದಿಗಳಿವೆ. ಅದರ ನಡುವೆಯೇ ಮೂಡಿರುವ ಇನ್ನೊಂದು ಕುತೂಹಲವೆಂದರೆ ಕೆಜಿಎಫ್‌-೩ಯಲ್ಲಿ ಯಶ್‌ ಇರ್ತಾರಾ ಇಲ್ವಾ? ಹೀಗೆ ನಾನಾ ವಲಯಗಳ ಪ್ರಮುಖ ಸುದ್ದಿಗಳ ಗುಚ್ಛವಿದು ವಿಸ್ತಾರ TOP 10 NEWS.

೧. ಮುಂದಿನ ವರ್ಷದಿಂದಲೇ ಮೌಲ್ಯ ಶಿಕ್ಷಣ ಜಾರಿ; ಅಧ್ಯಯನಕ್ಕೆ ಉನ್ನತ ಸಮಿತಿ ರಚನೆ
ಶಾಲೆಯಲ್ಲಿ ಮೌಲ್ಯಯುತ ಶಿಕ್ಷಣವನ್ನು ಜಾರಿಗೆ ತರುವ ನಿಟ್ಟಿನಲ್ಲಿ ಮೌಲ್ಯ ಶಿಕ್ಷಣ ಸಮಿತಿಯನ್ನು ರಚಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈ ಸಂಬಂಧ ಅಭಿಪ್ರಾಯ/ಸಲಹೆಗಳನ್ನು ಸಂಗ್ರಹಿಸಲು ವಿಧಾನಸೌಧದಲ್ಲಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ನೇತೃತ್ವದಲ್ಲಿ ಕರೆಯಲಾಗಿದ್ದ ವಿವಿಧ ಮಠಾಧೀಶರು, ಧಾರ್ಮಿಕ ಮುಖಂಡರು ಹಾಗೂ ಶಿಕ್ಷಣ ತಜ್ಞರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮೌಲ್ಯಯುತ ಶಿಕ್ಷಣದ ಬಗ್ಗೆ ಸಾಕಷ್ಟು ಚರ್ಚೆಯಾಗಿ ಈ ಎಲ್ಲ ಸಲಹೆಗಳನ್ನು ಆಧರಿಸಿ, ವರದಿ ನೀಡುವಂತೆ ಸಮಿತಿಯನ್ನು ರಚಿಸಲು ಸರಕಾರ ಮುಂದಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

2. ಸಿದ್ದರಾಮಯ್ಯ ಸ್ಪರ್ಧಾ ಅಖಾಡವಾಯ್ತು ಕೋಲಾರ; ಶುರುವಾಗಿದೆ ರಾಜಕೀಯ ಲೆಕ್ಕಾಚಾರ
ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಮ್ಮ ಕ್ಷೇತ್ರ ಆಯ್ಕೆಯನ್ನು ಮಾಡಿಕೊಂಡಿದ್ದಾರೆ. ಕೋಲಾರವೇ ತಮ್ಮ ಮುಂದಿನ ಚುನಾವಣೆ ಅಖಾಡ ಎಂದು ಘೋಷಿಸುವ ಮೂಲಕ ಸ್ಪರ್ಧೆಯ ವಿಚಾರವಾಗಿ ಉಂಟಾಗಿದ್ದ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಇವರ ಕ್ಷೇತ್ರ ಆಯ್ಕೆಯ ಹಿಂದೆ ಸಾಕಷ್ಟು ಲೆಕ್ಕಾಚಾರಗಳು, ಅಧ್ಯಯನಗಳು, ಜಾತಿ ಸಮೀಕರಣ, ಪಕ್ಷದ ಆಂತರಿಕ ಭಿನ್ನಾಭಿಪ್ರಾಯ ಸೇರಿದಂತೆ ಸಾಧಕ-ಬಾಧಕಗಳ ಚಿಂತನೆಗಳ ಬಳಿಕವೇ ಸಿದ್ದರಾಮಯ್ಯ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ, ಇದು ಅವರಿಗೆ ಹೂವಿನ ಹಾಸಿಗೆಯಂತೂ ಅಲ್ಲ ಎಂಬುದಂತೂ ಸ್ಪಷ್ಟ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

೩. ನಿಜವಾಗದ ಬಿಜೆಪಿ ಕನಸು; ಕೋರ್ಟ್‌ ತಡೆಯಿಂದ ಬಿಡುಗಡೆಯಾಗದ ಸಿದ್ದು ನಿಜಕನಸು!
ಕಳೆದ ಎರಡು ದಿನಗಳಿಂದ ಭಾರಿ ಸುದ್ದಿಯಲ್ಲಿದ್ದ “ಸಿದ್ದು ನಿಜಕನಸುಗಳು” ಪುಸ್ತಕ ಬಿಡುಗಡೆ ಸಮಾರಂಭವು ಸಾಕಷ್ಟು ಗದ್ದಲ, ಪ್ರತಿಭಟನೆಗಳ ನಡುವೆ ಕೋರ್ಟ್‌ ತಡೆಯಾಜ್ಞೆಯಿಂದ ರದ್ದಾಗಿದೆ. ಈ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ದು ನಿಜಕನಸುಗಳು ಪುಸ್ತಕ ಬಿಡುಗಡೆಯ ಬಿಜೆಪಿ ಕನಸು ಈಡೇರಿಲ್ಲ. ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಕಾರ್ಯಕ್ರಮವನ್ನು ರದ್ದು ಮಾಡಲಾಗಿಲ್ಲ. ಮುಂದೂಡಲ್ಪಟ್ಟಿದೆ. ಈ ವಿಚಾರವನ್ನು ಕೋರ್ಟ್‌ ಮುಂದೆ ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳಿಕೊಂಡಿದೆ. ಈ ನಡುವೆ ಕಾಂಗ್ರೆಸ್‌ ಕೂಡಾ ʻಬಿಜೆಪಿಯ ಕಳ್ಳ ಮಾರ್ಗಗಳುʼ ಎನ್ನುವ ಪುಸ್ತಕವನ್ನು ಸಿದ್ಧಪಡಿಸಿದ್ದಾಗಿ ಹೇಳಿಕೊಂಡಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

೪. ಮುಂದಿನ ವಾರದಲ್ಲಿ ಪ್ರಧಾನಿ ಮೋದಿ, ಪ್ರಿಯಾಂಕಾ ಗಾಂಧಿ ರಾಜ್ಯಕ್ಕೆ: ಹೆಚ್ಚಲಿದೆ ಚುನಾವಣಾ ಕಳೆ
ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ ೧೨ ಮತ್ತು ೧೯ರಂದು ಹಾಗೂ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಜನವರಿ ೧೬ರಂದು ರಾಜ್ಯಕ್ಕೆ ಬರಲಿದ್ದಾರೆ. ಮೋದಿ ಬರುವುದು ಸರ್ಕಾರಿ ಕಾರ್ಯಕ್ರಮಕ್ಕೇ ಆದರೂ ಅದರಲ್ಲಿ ರಾಜಕೀಯ ಛಾಯೆ ದಟ್ಟವಾಗಿದೆ. ಪ್ರಿಯಾಂಕಾ ಗಾಂಧಿ ಅವರದ್ದು ಪಕ್ಕಾ ಪೊಲಿಟಿಕಲ್‌ ಸಮಾವೇಶ.
| Narendra Modi Visit | ಜ. 12ರಂದು ಪ್ರಧಾನಿ ನರೇಂದ್ರ ಮೋದಿ ಹುಬ್ಬಳ್ಳಿಗೆ, 19ಕ್ಕೆ ನಾರಾಯಣಪುರಕ್ಕೆ
| ಜನವರಿ 16ರಂದು ರಾಜ್ಯಕ್ಕೆ ಪ್ರಿಯಾಂಕಾ ಗಾಂಧಿ ಆಗಮನ: ಬೃಹತ್‌ ಸಮಾವೇಶಕ್ಕೆ ಕಾಂಗ್ರೆಸ್‌ ಪ್ಲ್ಯಾನ್‌

5. 7 ದಿನವಾದರೂ ಸ್ಯಾಂಟ್ರೊ ರವಿ ಬಂಧಿಸದ ಪೊಲೀಸ್‌, ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ದಲಿತ ಮಹಿಳೆಯೊಬ್ಬರು ಅತ್ಯಾಚಾರ ಮತ್ತು ವಂಚನೆಯ ಪ್ರಕರಣ ದಾಖಲಿಸಿ ಏಳು ದಿನಗಳೇ ಕಳೆದಿವೆ. ರಾಜ್ಯಾದ್ಯಂತ ಆತನ ಸಂಬಂಧಗಳು, ಖತರ್ನಾಕ್‌ ಕೃತ್ಯಗಳ ಬಗ್ಗೆ ಬಣ್ಣ ಬಣ್ಣದ ಕಥೆಗಳು ಓಡಾಡುತ್ತಿವೆ. ಅಷ್ಟಾದರೂ ಮೈಸೂರು ಪೊಲೀಸರು ಮಾತ್ರ ವಿಚಾರಣೆ ಮಾಡುವಷ್ಟೂ ಧೈರ್ಯವನ್ನು ತೋರಿಸಿಲ್ಲ. ಇದೀಗ ಹೈಕೋರ್ಟ್‌ ಆತನ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡು ಪೊಲೀಸರಿಗೆ ನೋಟಿಸ್‌ ನೀಡಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಸ್ಯಾಂಟ್ರೋ ರವಿ ಮಾತು ಕೇಳಿ ಸಿಕ್ಕಾಕಿಕೊಂಡ ಕಾಟನ್‌ಪೇಟೆ ಇನ್ಸ್‌ಪೆಕ್ಟರ್‌: ಅಮಾನತು ಸಾಧ್ಯತೆ

6. ಬಜರಂಗ ದಳ ಸಹ ಸಂಚಾಲಕ ಸುನಿಲ್‌ ಹತ್ಯೆ ಯತ್ನ: ಜ. 10ರಂದು ಸಾಗರ ಬಂದ್‌ಗೆ ಕರೆ
ಸಾಗರದ ನೆಹರೂ ನಗರದ ಬಜರಂಗ ದಳದ ನಗರ ಸಹ ಸಂಚಾಲಕ ಸುನೀಲ್ ಎಂಬುವವರ ಮೇಲೆ ತಲ್ವಾರ್ ನಿಂದ ಹಲ್ಲೆ ಮಾಡಿ ಕೊಲೆಗೈಯಲು ವಿಫಲ ಯತ್ನ (Shivamogga attack) ನಡೆಸಲಾಗಿದ್ದು, ಇದನ್ನು ಖಂಡಿಸಿ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗ ದಳ, ಪರಿವಾರದ ಸಂಘಟನೆಗಳು ಜ. 10ರ ಮಂಗಳವಾರ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಸಾಗರ ಬಂದ್‍ಗೆ ಕರೆ ನೀಡಿವೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

೭. 2050ರ ಹೊತ್ತಿಗೆ ಭಾರತದ 3700 ಡ್ಯಾಮ್‌ಗಳ ನೀರಿನ ಸಂಗ್ರಹ ಸಾಮರ್ಥ್ಯ ಶೇ.26ರಷ್ಟು ಕುಸಿಯಲಿದೆ!
2050ರ ಹೊತ್ತಿಗೆ ಭಾರತದಲ್ಲಿನ ಸುಮಾರು 3,700 ಡ್ಯಾಮ್‌ಗಳು ತಮ್ಮ ಒಟ್ಟು ನೀರು ಸಂಗ್ರಹಣೆಯ ಸಾಮರ್ಥ್ಯದಲ್ಲಿ ಶೇ.26ರಷ್ಟು ಕಳೆದುಕೊಳ್ಳಲಿವೆ. ಹೆಚ್ಚುತ್ತಿರುವ ಹೂಳಿನಿಂದಾಗಿ ಸಂಗ್ರಹಣಾ ಸಾಮರ್ಥ್ಯವು ಕುಸಿಯಲಿದ್ದು, ಭವಿಷ್ಯದಲ್ಲಿ ನೀರಿನ ಭದ್ರತೆ, ನೀರಾವರಿ ಮತ್ತು ವಿದ್ಯುತ್ ಉತ್ಪಾದನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ವಿಶ್ವ ಸಂಸ್ಥೆಯ ಅಧ್ಯಯನ ವರದಿಯೊಂದು ತಿಳಿಸಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

೮.‌ ಕೆಜಿಎಫ್‌-3 ಚಿತ್ರದಿಂದ ‘ರಾಕಿಭಾಯ್’ ಯಶ್ ಔಟ್? ನಿರ್ಮಾಪಕ ವಿಜಯ್ ಕಿರಗಂದೂರು ಹೇಳಿದ್ದೇನು?
ಸ್ಯಾಂಡಲ್‌ವುಡ್‌ನಲ್ಲಿ ಇತಿಹಾಸ ಸೃಷ್ಟಿಸಿದ ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ (Actor Yash ) ಕೆಜಿಎಫ್‌ ಸಿನಿಮಾ ಬ್ಲಾಕ್‌ ಬಸ್ಟರ್‌ ಲಿಸ್ಟ್‌ಗೆ ಸೇರುತ್ತಿದ್ದಂತೆ ‘ಕೆಜಿಎಫ್ 3’ ಬೇಕು ಎಂದು ಅಭಿಮಾನಿಗಳು ಪಟ್ಟು ಹಿಡಿದಿದ್ದರು. ನಿರ್ಮಾಣ ಸಂಸ್ಥೆ ಕೂಡ ‘ಕೆಜಿಎಫ್ ಚಾಪ್ಟರ್ 3’ ಸೆಟ್ಟೇರಿವುದಕ್ಕೆ ತುದಿಗಾಲಲ್ಲಿ ನಿಂತಿದೆ. ಆದರೆ ಇದೀಗ ವಿಜಯ ಕಿರಗಂದೂರು ಹೇಳಿಕೆ ಒಂದು ಭಾರಿ ಸಂಚಲನ ಸೃಷ್ಟಿಸಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

೯. ಏಕರೂಪ ನಾಗರಿಕ ಸಂಹಿತೆ ಸಮಿತಿ ರಚನೆ ವಿರೋಧಿಸಿದ್ದ ಪಿಐಎಲ್ ವಜಾ ಮಾಡಿದ ಸುಪ್ರೀಂ ಕೋರ್ಟ್
ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ಸಂಬಂಧ ವಿವಿಧ ರಾಜ್ಯಗಳು ಸಮಿತಿಗಳನ್ನು ರಚಿಸಿವೆ. ಇದನ್ನು ವಿರೋಧಿಸಿ ದಾಖಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾ ಮಾಡಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

೧೦. IndiGo Flight | ಇಂಡಿಗೋ ಫ್ಲೈಟ್‌ನಲ್ಲಿ ಕುಡಿದು, ಪರಸ್ಪರ ಜಗಳವಾಡಿದ ಇಬ್ಬರು ಪ್ರಯಾಣಿಕರು
ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ಮಾಡಿದ ಪ್ರಕರಣದ ಬೆನ್ನಲ್ಲೇ ಮತ್ತೊಂದು ಪ್ರಕರಣವು ಬೆಳಕಿಗೆ ಬಂದಿದೆ. ಪ್ರಯಾಣಿಕರಿಬ್ಬರು ವಿಮಾನದಲ್ಲಿ ಕುಡಿದು, ಅಮಲಿನಲ್ಲಿ ಪರಸ್ಪರ ಜಗಳವಾಡಿದ ಘಟನೆ ಇಂಡಿಗೋ (IndiGo Flight) ಪ್ಲೈಟ್‌ನಲ್ಲಿ ನಡೆದಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version