Site icon Vistara News

ವಿಸ್ತಾರ TOP 10 NEWS | ರಾಜಕೀಯ `ನಿವೃತ್ತಿʼ ಚರ್ಚೆಯಿಂದ ಚೋಪ್ರಾ ಬೆಳ್ಳಿ ಸಾಧನೆವರೆಗಿನ ಪ್ರಮುಖ ಸುದ್ದಿಗಳಿವು

Vistara top 10 news 24072022

ಬೆಂಗಳೂರು: ವಿಶ್ವದ ಎಲ್ಲ ಹುದ್ದೆಗಳಿಗೂ ನಿವೃತ್ತಿ ಇದೆ, ಉದ್ಯಮಪತಿಗಳೂ ನಿವೃತ್ತಿ ಘೋಷಿಸುತ್ತಾರೆ. ಆದರೆ ನಿವೃತ್ತಿಯೇ ಇಲ್ಲದ ರಾಜಕೀಯ ಕ್ಷೇತ್ರದಲ್ಲಿ ಕರ್ನಾಟಕದ ಮಟ್ಟಿಗೆ ಈಗ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಒಲಿಂಪಿಯನ್‌ ಕ್ರೀಡಾಪಟು ನೀರಜ್‌ ಚೋಪ್ರಾ ವರ್ಲ್ಡ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದಿದ್ದಾರೆ, ಆದಾಯ ತೆರಿಗೆ ರಿಟರ್ನ್‌ ಸಲ್ಲಿಕೆಗೆ ಜುಲೈ 31ರ ಗಡುವನ್ನು ವಿಸ್ತರಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ರಾಜ್ಯದಲ್ಲಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಇಬ್ಬರು ಪೊಲೀಸರೂ ಸೇರಿ ಎಂಟು ಜನರು ಮೃತಪಟ್ಟಿದ್ದಾರೆ ಎಂಬುದರ ಜತೆಗೆ ದೇಶದಲ್ಲಿ ನಡೆದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. World Athletics Championships | ಒಂದೇ ತಿಂಗಳಲ್ಲಿ ಎರಡು ಬೆಳ್ಳಿ ಪದಕ ಗೆದ್ದ ನೀರಜ್‌ ಚೋಪ್ರಾ
World Athletics Championships- ೨೦೨೨ ಕೂಟದಲ್ಲಿ ರಜತ ಪದಕ ಗೆದ್ದಿರುವ ಭಾರತದ ನೀರಜ್‌ ಚೋಪ್ರಾ ಒಂದೇ ತಿಂಗಳಲ್ಲಿ ಭಾರತಕ್ಕೆ ಎರಡು ಪದಕ ತಂದುಕೊಟ್ಟಿದ್ದಾರೆ. ಜುಲೈ ೧ರಂದು ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ನಡೆದ ಡೈಮಂಡ್‌ ಲೀಗ್‌ನಲ್ಲೂ ಅವರು ಬೆಳ್ಳಿಯ ಪದಕ ಗೆದ್ದು ಬೀಗಿದ್ದರು. ಅಮೆರಿಕದ ಒರೆಗಾನ್‌ನಲ್ಲಿ ಭಾನುವಾರ ಬೆಳಗ್ಗೆ ನಡೆದ (ಭಾರತೀಯ ಕಾಲಮಾನ) World Athletics Championships ಫೈನಲ್‌ ಸ್ಪರ್ಧೆಯಲ್ಲಿ ನೀರಜ್‌ ಚೋಪ್ರಾ ಐತಿಹಾಸಿಕ ಸಾಧನೆ ಮಾಡಿದ್ದಾರೆ. ನೀರಜ್‌ ಅವರು ತಮ್ಮ ನಾಲ್ಕನೇ ಪ್ರಯತ್ನದಲ್ಲಿ 88.13 ಮೀಟರ್‌ ದೂರಕ್ಕೆ ಎಸೆಯವ ಮೂಲಕ ಎರಡನೇ ಸ್ಥಾನ ಗಳಿಸಿ ರಜತ ಪದಕಕ್ಕೆ ಕೊರಳೊಡ್ಡಿದರು. ಕಳೆದ ಎರಡು ಬಾರಿಯ ಚಾಂಪಿಯನ್‌ ಗ್ರೆನೆಡಾ ದೇಶದ ಪೀಟರ್‌ ಆಂಡರ್ಸನ್‌ 90.54 ಮೀಟರ್‌ ಎಸೆಯುವ ಮೂಲಕ ಬಂಗಾರದ ಪದಕ ಗೆದ್ದರು. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

2. ರಾಜ್ಯ ರಾಜಕೀಯದಲ್ಲಿ ʻನಿವೃತ್ತಿʼ ಚರ್ಚೆ: ಬಿಜೆಪಿಯಲ್ಲಿ ನಡುಕ, 92ರಲ್ಲೂ ನಿವೃತ್ತಿ ಇಲ್ಲವೆಂದ ಶ್ಯಾಮನೂರು!
ರಾಜ್ಯ ರಾಜಕೀಯದಲ್ಲೀಗ ನಿವೃತ್ತಿ ಮಾತುಗಳದ್ದೇ ಚರ್ಚೆ. ನಾನು ನಿವೃತ್ತಿ ಆಗುತ್ತೇನೆ ಎಂದು ಒಬ್ಬ ನಾಯಕ ಹೇಳಿದರೆ, ಅದೇ ವಯಸ್ಸಿನ ಇನ್ನಿತರೆ ನಾಯಕರಲ್ಲಿ ನಡುಕ ಉಂಟಾಗುತ್ತದೆ. ಮತ್ತೊಬ್ಬರು ಬದುಕಿರುವವರೆಗೂ ನಾನೇ ಶಾಸಕ ಎನ್ನುತ್ತಾರೆ. ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರು ಎರಡು ದಿನಗಳ ಹಿಂದೆ ಶಿವಮೊಗ್ಗದಲ್ಲಿ ತಮ್ಮ ನಿವೃತ್ತಿ ಇಂಗಿತವನ್ನು ವ್ಯಕ್ತಪಡಿಸಿದ್ದರು. ಇದೀಗ ರಾಣೆಬೆನ್ನೂರು ಶಾಸಕ ಕೆ.ಬಿ. ಕೋಳಿವಾಡ ಸಹ ಇದೇ ರೀತಿಯ ಮಾತನ್ನಾಡಿದ್ದಾರೆ. ಆದರೆ 92ರ ಹರೆಯದ ಶ್ಯಾಮನೂರು ಶಿವಶಂಕರಪ್ಪ ಮಾತ್ರ ತಾವೇ ಕ್ಯಾಂಡಿಡೇಟ್‌ ಎನ್ನುತ್ತಿದ್ದಾರೆ.(ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

3. GOOD NEWS| ಆಗಸ್ಟ್‌ 15ರಂದು ಔಷಧಗಳ ದರ ಇಳಿಕೆಗೆ ಕೇಂದ್ರ ಸರ್ಕಾರ ಪರಿಶೀಲನೆ
ಕೇಂದ್ರ ಸರ್ಕಾರ ಆಗಸ್ಟ್‌ ೧೫ರಂದು ಕೆಲವು ನಿರ್ಣಾಯಕ ಔಷಧಗಳ ದರ ಇಳಿಕೆಗೆ ಮುಂದಾಗಿದೆ. ಕ್ಯಾನ್ಸರ್‌ ಮತ್ತು ಹೃದಯದ ಕಾಯಿಲೆ ಕುರಿತ ಚಿಕಿತ್ಸೆಯಲ್ಲಿ ಬಳಸುವ ಪ್ರಮುಖ ಔಷಧಗಳ ದರಗಳು ಇಳಿಕೆಯಾಗುವ ನಿರೀಕ್ಷೆ ಇದೆ. ಔಷಧಗಳ ದರ ಇಳಿಸುವ ಬಗ್ಗೆ ಪ್ರಸ್ತಾಪ ಇದ್ದು, ಸರ್ಕಾರ ಅಂತಿಮ ನಿರ್ಧಾರವನ್ನು ಶೀಘ್ರ ಕೈಗೊಳ್ಳಲಿದೆ. ನಿರ್ಣಾಯಕ ಔಷಧಗಳ ದುಬಾರಿ ದರಗಳ ಬಗ್ಗೆ ಸರ್ಕಾರ ಕಳವಳ ಹೊಂದಿದೆ. ಹೀಗಾಗಿ ಅದನ್ನು ನಿಯಂತ್ರಿಸಲು ಮುಂದಾಗಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

4. ITR Filing 2021-22| ಐಟಿ ರಿಟರ್ನ್‌ ಸಲ್ಲಿಕೆಯ ಗಡುವು ವಿಸ್ತರಣೆ ಪರಿಶೀಲನೆ ಇಲ್ಲ, ಕಂದಾಯ ಕಾರ್ಯದರ್ಶಿ
ಆದಾಯ ತೆರಿಗೆ ರಿಟರ್ನ್‌ ಸಲ್ಲಿಕೆಯ ಗಡುವನ್ನು ಜುಲೈ ೩೧ರಿಂದಾಚೆಗೆ ವಿಸ್ತರಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಕಂದಾಯ ಕಾರ್ಯದರ್ಶಿ ತರುಣ್‌ ಬಜಾಜ್‌ ತಿಳಿಸಿದ್ದಾರೆ. ಬಹುತೇಕ ಐಟಿ ರಿಟರ್ನ್‌ ನಿಗದಿತ ಗಡುವಿನ ಒಳಗೆ ಸಲ್ಲಿಕೆಯಾಗುವ ನಿರೀಕ್ಷೆ ಇರುವುದರಿಂದ ವಿಸ್ತರಣೆ ಸಾಧ್ಯತೆ ಇಲ್ಲ ಎಂದು ಹೇಳಿದ್ದಾರೆ. ೨೦೨೧-೨೨ರ ಸಾಲಿನ ೨.೩ ಕೋಟಿ ಐಟಿ ರಿಟರ್ನ್‌ಗಳು ಸಲ್ಲಿಕೆಯಾಗಿವೆ. ಸಂಖ್ಯೆ ಏರಿಕೆಯೂ ಆಗುತ್ತಿದೆ. ಕಳೆದ ೨೦೨೦-೨೧ರ ಸಾಲಿನಲ್ಲಿ ೫.೮೯ ಕೋಟಿ ಐಟಿಆರ್‌ ಸಲ್ಲಿಕೆಯಾಗಿದೆ. ಐಟಿ ರಿಟರ್ನ್‌ ಸಲ್ಲಿಕೆಯ ಗಡುವು ವಿಸ್ತರಣೆ ವಾಡಿಕೆ ಎಂಬಂತಾಗಿದೆ. ಹೀಗಾಗಿ ಜನ ನಿಧಾನಗತಿಯಲ್ಲಿ ರಿಟರ್ನ್‌ ಸಲ್ಲಿಸುತ್ತಿದ್ದಾರೆ. ಆದರೆ ಈಗ ದಿನಕ್ಕೆ ೧೫ ಲಕ್ಷದಿಂದ ೧೮ ಲಕ್ಷ ರಿಟರ್ನ್‌ ಸಲ್ಲಿಕೆಯಾಗುತ್ತಿದೆ. ಇದು ೨೫-೩೦ ಲಕ್ಷ ಸರಾಸರಿಗೆ ಏರಿಕೆಯಾಗಲಿದೆ ಎಂದು ತಿಳಿಸಿದರು. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

5. ಗಾಂಜಾ ಆರೋಪಿಯ ಹಿಡಿಯಲು ಹೋಗಿದ್ದ ಬೆಂಗಳೂರಿನ ಇಬ್ಬರು ಪೊಲೀಸರು ಅಪಘಾತಕ್ಕೆ ಬಲಿ
ಬೆಂಗಳೂರು ಪೊಲೀಸರು ತೆರಳುತ್ತಿದ್ದ ವಾಹನ ಆಂಧ್ರದ ಚಿತ್ತೂರು ಬಳಿ ಅಪಘಾತಕ್ಕೆ ಒಳಗಾಗಿ ಶಿವಾಜಿನಗರ ಠಾಣೆಯ ಪಿಎಸ್ಐ ಅವಿನಾಶ್, ಪೊಲೀಸ್‌ ಕಾನ್‌ಸ್ಟೇಬಲ್‌ ಅನಿಲ್‌ ಮತ್ತು ಖಾಸಗಿ ಕಾರಿನ ಚಾಲಕ ಜೋಸೆಫ್ ಮೃತಪಟ್ಟಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

6. ಕೊಪ್ಪಳದಲ್ಲಿ ಭೀಕರ ರಸ್ತೆ ಅಪಘಾತಕ್ಕೆ ಐವರ ಸಾವು, ನಾಲ್ವರಿಗೆ ಗಾಯ
ಭಾನಾಪುರ ಬಳಿ ನಡೆದ ರಸ್ತೆ ಅಪಘಾತದಲ್ಲಿ(Accident) ಐವರು ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿರುವ ನಾಲ್ವರಿಗೆ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಜಿಲ್ಲಾಸ್ಪತ್ರೆಗೆ ಸಚಿವ ಹಾಲಪ್ಪ ಆಚಾರ್ ಮತ್ತು ಕೊಪ್ಪಳ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಭೇಟಿ ನೀಡಿ ಗಾಯಾಳುಗಳ ಆರೋಗ್ಯ ಸ್ಥಿತಿ ವಿಚಾರಿಸಿ ಸಾಂತ್ವನ ಹೇಳಿದ್ದಾರೆ. ಕೊಪ್ಪಳ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಮುಖ್ಯ ಪೇದೆಯಾಗಿರುವ ಶರಣಪ್ಪ ಕೊಪ್ಪದ ಎಂಬುವವರ ಮೊಮ್ಮಗಳ ಬರ್ತ್‌ಡೇ ಪಾರ್ಟಿ ಇತ್ತು. ಅದೇ ಸಂಭ್ರಮದಿಂದ ಪುನಃ ಮನೆಗೆ ಹೊರಟವರಿಗೆ ಭಾನಾಪುರದ ಟಾಯ್ಸ್ ಕ್ಲಸ್ಟರ್ ಬಳಿ ಅಪರಿಚಿತ ಭಾರಿ ವಾಹನವೊಂದು ಸ್ಕಾರ್ಪಿಯೋಗೆ ಡಿಕ್ಕಿ ಹೊಡೆದಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

7. ವಿಸ್ತಾರ Fact Check | ಔತಣಕೂಟದಲ್ಲಿ ರಾಮನಾಥ ಕೋವಿಂದ್‌ಗೆ ಅವಮಾನಿಸಿದರಾ ಪ್ರಧಾನಿ ಮೋದಿ?
ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರ ಅಧಿಕಾರ ಅವಧಿ ಇಂದು ಮುಕ್ತಾಯವಾಗಿದ್ದು, ಸಂಜೆ 7 ಗಂಟೆಗೆ ವಿದಾಯದ ಭಾಷಣ ಮಾಡಲಿದ್ದಾರೆ. ಹುದ್ದೆಯಿಂದ ನಿರ್ಗಮಿಸಲಿರುವ ರಾಮನಾಥ ಕೋವಿಂದ್‌ಗಾಗಿ ಶುಕ್ರವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಔತಣಕೂಟ ಏರ್ಪಡಿಸಿದ್ದರು. ಅದರಲ್ಲಿ ಬಹುತೇಕ ಎಲ್ಲ ಸಂಸದರು, ಗಣ್ಯರು ಪಾಲ್ಗೊಂಡಿದ್ದರು. ಆದರೆ ಔತಣಕೂಟ ಮುಗಿಯುತ್ತಿದ್ದಂತೆ ಕಾಂಗ್ರೆಸ್‌ ಮತ್ತು ಆಪ್‌ನ ಕೆಲವು ಮುಖಂಡರು ಒಂದು ವಿಡಿಯೊವನ್ನು ಶೇರ್‌ ಮಾಡಿಕೊಂಡು ಪ್ರಧಾನಿ ನರೇಂದ್ರ ಮೋದಿಯವರ ವರ್ತನೆಯನ್ನು ಟೀಕಿಸುತ್ತಿದ್ದಾರೆ. ಆದರೆ ಇದೇ ಸಂಪೂರ್ಣ ಸತ್ಯವಲ್ಲ. ಏನಿದು ಘಟನೆ? ವಿಸ್ತೃತ ವರದಿ ಓದಿ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

8. PM ಫಸಲ್‌ ಬಿಮಾ| ವಿಮೆ ಕಂಪನಿಗಳಿಗೆ 5 ವರ್ಷಗಳಲ್ಲಿ 40,000 ಕೋಟಿ ರೂ. ಗಳಿಕೆ, ರೈತರಿಗೆ?
ವಿಮೆ ಕಂಪನಿಗಳು ಕಳೆದ ೫ ವರ್ಷಗಳಲ್ಲಿ ಕೇಂದ್ರ ಸರ್ಕಾರದ ಬೆಳೆ ವಿಮೆ ಯೋಜನೆಯಾದ ಪಿಎಂ ಫಸಲ್‌ ಬಿಮಾದಲ್ಲಿ ೪೦,೦೦೦ ಕೋಟಿ ರೂ. ಗಳಿಕೆಯನ್ನು ತಮ್ಮದಾಗಿಸಿವೆ. ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯನ್ನು (PMFBY) ೨೦೧೬-೧೭ರಿಂದ ಆರಂಭಿಸಲಾಗಿದೆ. ಅಲ್ಲಿಂದ ೨೦೨೧-೨೨ರ ತನಕದ ಅವಧಿಯಲ್ಲಿ ವಿಮೆ ಕಂಪನಿಗಳು ೪೦,೦೦೦ ಕೋಟಿ ರೂ.ಗಳನ್ನು ಗಳಿಸಿವೆ ಎಂದು ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಅವರು ರಾಜ್ಯ ಸಭೆಗೆ ತಿಳಿಸಿದ್ದಾರೆ.‌ (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

9. Plastic Ban | ಹುಬ್ಬಳ್ಳಿಯಲ್ಲಿ ಆಗಿಲ್ಲ ಪ್ಲಾಸ್ಟಿಕ್‌ ಬ್ಯಾನ್‌; ನಡೆಯುತ್ತಿದೆ ಅಂತಾರಾಜ್ಯ ಕೊರಿಯರ್‌ ಪ್ಲ್ಯಾನ್‌!
ಏಕಬಳಕೆ ಪ್ಲಾಸ್ಟಿಕ್‌ ಮಾರಾಟಕ್ಕೆ ದೇಶಾದ್ಯಂತ ನಿಷೇಧ ಹೇರಲಾಗಿದ್ದರೂ ಹುಬ್ಬಳ್ಳಿಯಲ್ಲಿ ಮಾತ್ರ ಅವ್ಯಾಹತವಾಗಿ ನಡೆಯುತ್ತಿದೆ. ಈ ಮಾದರಿಯ ಪ್ಲಾಸ್ಟಿಕ್‌ ಬಳಕೆ ಮತ್ತು ಉತ್ಪಾದನೆಗೆ (Plastic Ban) ಕೇಂದ್ರ ಸರ್ಕಾರ ಬ್ರೇಕ್‌ ಹಾಕಿದ ಮೇಲೂ ಇಲ್ಲಿ ಕಾಣಿಸಿಕೊಳ್ಳುವುದರ ಹಿಂದೆ ದೊಡ್ಡ ಜಾಲವೇ ಇದೆ ಎಂಬ ಅಸಲಿ ಕಹಾನಿ ಈಗ ಬಹಿರಂಗವಾಗಿದೆ. ಕಠಿಣ ಕಾನೂನಿನ ಮಧ್ಯೆಯೂ ರಾಜಾರೋಷವಾಗಿ ಪ್ಲಾಸ್ಟಿಕ್‌ ದಂಧೆ ನಡೆಯುತ್ತಿರುವ ಬಗ್ಗೆ ಮಾಹಿತಿ ತಿಳಿಯಲು “ವಿಸ್ತಾರ ನ್ಯೂಸ್‌” ಮುಂದಾದಾಗ ಆತಂಕಕಾರಿ ವಿಷಯವೊಂದು ಬಹಿರಂಗವಾಗಿದ್ದು, ಹೊರ ರಾಜ್ಯಗಳಿಂದ ಕೊರಿಯರ್‌ ಮೂಲಕ ಪ್ಲಾಸ್ಟಿಕ್‌ ಉತ್ಪನ್ನಗಳು ರಾಜ್ಯವನ್ನು ತಲುಪುತ್ತಿವೆ ಎಂಬ ಅಂಶ ಬೆಳಕಿಗೆ ಬಂದಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

10. ಸೇನಾಪಡೆಗಳ ಸಮನ್ವಯಕ್ಕೆ ಜಂಟಿ ಥಿಯೇಟರ್ ಕಮಾಂಡ್‌ ಘೋಷಿಸಿದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್
ಸಶಸ್ತ್ರ ಸೇನಾಪಡೆಗಳ ನಡುವೆ ಸಮನ್ವಯಕ್ಕೆ ಜಂಟಿ ಥಿಯೇಟರ್ ಕಮಾಂಡ್‌ ವ್ಯವಸ್ಥೆಯನ್ನು ರಚಿಸಲಾಗುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ತಿಳಿಸಿದ್ದಾರೆ. ಭಾರತೀಯ ಸಶಸ್ತ್ರಪಡೆಯ ಹುತಾತ್ಮರಿಗೆ ಗೌರವ ಸಲ್ಲಿಸಲು ಜಮ್ಮು ಕಾಶ್ಮೀರ್‌ ಪೀಪಲ್ಸ್‌ ಫೋರಮ್‌ ಆಯೋಜಿಸಿದ್ದ ೨೩ನೇ ಕಾರ್ಗಿಲ್‌ ವಿಜಯ ದಿವಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ವಿಷಯ ತಿಳಿಸಿದರು. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

Exit mobile version