ಬೆಂಗಳೂರು: ಮಲೆನಾಡಿಗರಲ್ಲಿ ಆತಂಕ ಮೂಡಿಸಿದ್ದ ಕಸ್ತೂರಿ ರಂಗನ್ ವರದಿಗೆ ತಾತ್ಕಾಲಿಕ ತಡೆ, ರಾಜಧಾನಿ ಬೆಂಗಳೂರು ಭಯೋತ್ಪಾದಕರ ಸ್ಲೀಪರ್ ಸೆಲ್ ಆಗುತ್ತಿದೆಯೇ ಎಂಬುದಕ್ಕೆ ಪುಷ್ಟಿ ನೀಡುವಂತೆ ಇಬ್ಬರು ಶಂಕಿತ ಉಗ್ರರ ಬಂಧನ, ರಾಷ್ಟ್ರಪತಿಯಾಗಿ ಮೊದಲ ಬುಡಕಟ್ಟು ವ್ಯಕ್ತಿಯಾಗಿ ದ್ರೌಪದಿ ಮುರ್ಮು ಪ್ರಮಾಣವಚನ, ಉತ್ತರ ಕರ್ನಾಟಕದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಆರೋಗ್ಯ ಸಚಿವ ಸುಧಾಕರ್ ಬೆಂಬಲ ಸೇರಿದಂತೆ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
1. ಒಂದು ವರ್ಷ ಕಸ್ತೂರಿ ರಂಗನ್ ವರದಿಗೆ ಬ್ರೇಕ್: ಬೀಸೋ ದೊಣ್ಣೆಯಿಂದ ಮಲೆನಾಡಿಗರು ಪಾರು
ಪಶ್ಚಿಮ ಘಟ್ಟ ಪ್ರದೇಶಗಳ ಜನಜೀವನದಲ್ಲಿ ಭಯ ಹುಟ್ಟಿಸಿರುವ ಡಾ. ಕೆ. ಕಸ್ತೂರಿ ರಂಗನ್ ಸಮಿತಿ ವರದಿಯನ್ನು ಜಾರಿ ಮಾಡದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಕುರಿತು ತಮ್ಮನ್ನು ಭೇಟಿ ಮಾಡಿದ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸಮಿತಿಗೆ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ತಿಳಿಸಿದ್ದಾರೆ. ವರದಿ ಜಾರಿಗೆ ತಾತ್ಕಾಲಿತ ತಡೆ ನೀಡಲಾಗಿದೆ ಎಂದಿರುವ ಭೂಪೇಂದ್ರ ಯಾದವ್, ವಸ್ತುಸ್ಥಿತಿ ಅಧ್ಯಯನಕ್ಕೆ ಐಎಫ್‌ಎಸ್ ಅಧಿಕಾರಿ ನೇತೃತ್ವದ ಉನ್ನತಾಧಿಕಾರ ಸಮಿತಿಯನ್ನು ರಚನೆ ಮಾಡಲಾಗಿದೆ. ಈ ಸಮಿತಿಯು ಪಶ್ಚಿಮಘಟ್ಟ ಪ್ರದೇಶದಲ್ಲಿ ವಸ್ತುಸ್ಥಿತಿಯನ್ನು ಅಧ್ಯಯನ ನಡೆಸಿ ಒಂದು ವರ್ಷದಲ್ಲಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಲಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
2. ನಿಗಮ ಮಂಡಳಿಗಳಿಗೆ ನೇಮಕ; ಅಧಿಕೃತ ಆದೇಶ ಹೊರಡಿಸಿದ ಸರ್ಕಾರ
ಹಲವು ನಿಗಮ ಮಂಡಳಿಗಳಿಗೆ ಅಧ್ಯಕ್ಷರು ಹಾಗೂ ನಿರ್ದೇಶಕರನ್ನು ನೇಮಕ ಮಾಡಿ ಕರ್ನಾಟಕ ರಾಜ್ಯ ಸರ್ಕಾರ ಸೋಮವಾರ ಅಧಿಕೃತ ಆದೇಶ ಹೊರಡಿಸಿದೆ. ಕಳೆದ ನಾಲ್ಕು ದಿನಗಳ ಹಿಂದೆ ಸರ್ಕಾರ ಪಟ್ಟಿ ಬಿಡುಗಡೆ ಮಾಡಿತ್ತು. ಆದರೆ, ಸೋಮವಾರ ಆದೇಶದ ಹೊರಡಿಸಿದೆ.ಜುಲೈ ೧೨ರಂದು ರಾಜ್ಯ ಸರ್ಕಾರ ಒಟ್ಟು 52 ನಿಗಮ ಮಂಡಳಿಗಳ ನೇಮಕಾತಿ ರದ್ದುಪಡಿಸಿತ್ತು. ಬಿ. ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ಈ ನೇಮಕಗಳು ನಡೆದಿದ್ದವು. ಆದರೆ, ಚುನಾವಣೆ ಹಿನ್ನೆಲೆಯಲ್ಲಿ ಹೊಸಬರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಅಧ್ಯಕ್ಷರು ಹಾಗೂ ನಿರ್ದೇಶಕರ ಆಯ್ಕೆಯನ್ನು ರದ್ದು ಮಾಡಲಾಗಿತ್ತು. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
3. Terror Accused | ಬೆಂಗಳೂರಿನಲ್ಲಿ ಮತ್ತೊಬ್ಬ ಶಂಕಿತ ಉಗ್ರ ಬಂಧನ, ಒಂದೇ ದಿನ ಇಬ್ಬರು ಅರೆಸ್ಟ್!
ಅಸ್ಸಾಂ ಮೂಲದ ಶಂಕಿತ ಉಗ್ರ (Terrorist Accused) ಅಖ್ತರ್ ಹುಸೇನ್‌ನನ್ನು ಸೋಮವಾರ (ಜು.25) ಬೆಳಗ್ಗೆ ಬಂಧಿಸಿದ್ದ ಸಿಸಿಬಿ ಪೊಲೀಸರು ಇದೀಗ ಮತ್ತೊಬ್ಬ ಶಂಕಿತ ಉಗ್ರ ಅದಿಲ್ ಹುಸೇನ್ ಎಂಬಾತನನ್ನು ಬಂಧಿಸಿದ್ದಾರೆ. ಅಖ್ತರ್ ಹುಸೇನ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ ಸಿಸಿಬಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ಅದಿಲ್ ಹುಸೇನ್ ವಶಕ್ಕೆ ಪಡೆಯಲಾಗಿದೆ. ಇವರೆಲ್ಲರು ಉಗ್ರ ಸಂಘಟನೆಗಳ ಜತೆ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. (ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
4. Draupadi Murmu | 15ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ದ್ರೌಪದಿ ಮುರ್ಮು
ಭಾರತದ 15ನೇ ರಾಷ್ಟ್ರಪತಿಯಾಗಿ ಸೋಮವಾರ ದ್ರೌಪದಿ ಮುರ್ಮು ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಪ್ರತಿಜ್ಞಾವಿಧಿ ಬೋಧಿಸಿದರು. ಮುರ್ಮು ಅವರು ಸಂಸತ್ತಿನ ದಾಖಲೆಗೆ ಸಹಿ ಹಾಕಿದರು. ಹಾಗೇ, ಸಂಸತ್ತಿನ ಹೊರಭಾಗದಲ್ಲಿ 21 ಕುಶಾಲುತೋಪುಗಳನ್ನು ಸಿಡಿಸಿ ಗೌರವ ಸಲ್ಲಿಸಲಾಯಿತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು, ಲೋಕಸಭಾ ಸ್ಪೀಕರ್ ಓಂಬಿರ್ಲಾ, ನಿರ್ಗಮಿತ ರಾಷ್ಟ್ರಪತಿ ರಾಮನಾಥ ಕೋವಿಂದ್ ಮತ್ತು ಇತರ ಸಚಿವರು, ಸಂಸದರು ಉಪಸ್ಥಿತರಿದ್ದರು. (ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
ಎಲ್ಲ ರಾಷ್ಟ್ರಪತಿಗಳು ಜುಲೈ 25ಕ್ಕೇ ಯಾಕೆ ಪ್ರಮಾಣವಚನ ಸ್ವೀಕರಿಸುತ್ತಾರೆ?
5. Multi specialty | ಉ.ಕ.ಕ್ಕೆ ಬರಲು ವೈದ್ಯರೇ ಒಪ್ಪುತ್ತಿಲ್ಲವೆಂದ ಶಾಸಕಿ; ಸಿಎಂ ಜತೆ ಚರ್ಚಿಸುವೆನೆಂದ ಆರೋಗ್ಯ ಸಚಿವ
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ (Multi specialty) ಹೋರಾಟ ತೀವ್ರಗೊಂಡು ಅಭಿಯಾನದ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ, ಶಾಸಕಿ ರೂಪಾಲಿ ನಾಯ್ಕ್ ಹೇಳಿಕೆ ಚರ್ಚೆಯನ್ನು ಹುಟ್ಟುಹಾಕಿದೆ. ಜಿಲ್ಲೆಗೆ ಬರಲು ವೈದ್ಯರೇ ಒಪ್ಪುತ್ತಿಲ್ಲ. ಇದೇ ಸಮಸ್ಯೆಗೆ ಮೂಲ ಕಾರಣ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಮಾಜಿ ಮುಖ್ಯಮಂತ್ರಿದ್ವಯರಾದ ಸಿದ್ದರಾಮಯ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿ ಸಹ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದರು. ಈಗ ಆರೋಗ್ಯ ಸಚಿವರು ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಭರವಸೆ ಮೂಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆರಂಭಗೊಂಡಿರುವ ಅಭಿಯಾನಕ್ಕೆ ಹಲವು ರಾಜಕಾರಣಿಗಳು ಸಹ ತಮ್ಮ ಬೆಂಬಲವನ್ನು ಸೂಚಿಸುತ್ತಿವೆ. ಈಗ ಆರೋಗ್ಯ ಸಚಿವರೂ ಟ್ವೀಟ್ ಮಾಡುವ ಮೂಲಕ ಸಮಸ್ಯೆಯನ್ನು ಪರಿಹರಿಸುವ ಭರವಸೆಯನ್ನು ನೀಡಿದ್ದಾರೆ. (ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
6. 100 ಕೋಟಿಗೆ ರಾಜ್ಯಸಭೆ, ರಾಜ್ಯಪಾಲ ಹುದ್ದೆಯ ಆಮಿಷ; ಕರ್ನಾಟಕದವನೂ ಸೇರಿ ನಾಲ್ವರನ್ನು ಬಂಧಿಸಿದ ಸಿಬಿಐ
ರಾಜ್ಯಸಭಾ ಸ್ಥಾನ ಕೊಡಿಸುತ್ತೇವೆ ಎಂದು ಹೇಳಿ 100 ಕೋಟಿ ರೂಪಾಯಿಯವರೆಗೂ (Rajya Sabha seats For 100 Crore) ಲಂಚ ಪಡೆಯುತ್ತಿದ್ದ ವಂಚಕರ ಜಾಲವನ್ನು ಸಿಬಿಐ ಭೇದಿಸಿದೆ. ಡೀಲಿಂಗ್‌ಗೆ ಸಂಬಂಧಪಟ್ಟು ಸದ್ಯ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಈ ದಂಧೆಯಲ್ಲಿ ಇನ್ನೂ ಹೆಚ್ಚಿನ ಜನರು ಭಾಗಿಯಾಗಿರುವ ಶಂಕೆಯೂ ಇದೆ. ಇವರು ಬರೀ ರಾಜ್ಯಸಭೆ ಸ್ಥಾನಕ್ಕಷ್ಟೇ ಅಲ್ಲ, ರಾಜ್ಯಪಾಲ ಹುದ್ದೆ ಮತ್ತು ಸರ್ಕಾರದಲ್ಲಿ ವಿವಿಧ ಪ್ರಮುಖ ಆಡಳಿತಾತ್ಮಕ ಹುದ್ದೆ ನೀಡಿಸುವ ಆಮಿಷ ಒಡ್ಡುತ್ತಿದ್ದರು ಎಂಬ ಮಾಹಿತಿಯೂ ಸಿಕ್ಕಿದೆ. (ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
7. Politics | ಕರ್ನಾಟಕ ಬಿಜೆಪಿ ಅಧ್ಯಕ್ಷರ ಆಯ್ಕೆ ದಾರಿಯಲ್ಲಿ ದಕ್ಷಿಣ ಕನ್ನಡ ಸಂಕಟ!
ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರ ಅವಧಿ ಆಗಸ್ಟ್‌ನಲ್ಲಿ ಮುಕ್ತಾಯವಾಗಲಿದ್ದು, ಈ ಅವಧಿಯನ್ನು ವಿಸ್ತರಣೆ ಮಾಡಬೇಕೆ ಅಥವಾ ಹೊಸ ಅಧ್ಯಕ್ಷರ ನೇಮಕ ಮಾಡಬೇಕೆ ಎಂಬ ಮಾರ್ಗದಲ್ಲಿ ʻದಕ್ಷಿಣ ಕನ್ನಡʼ ಎಂಬ ವಿಚಾರ ಅಡ್ಡಬಂದಿದೆ. 2019ರಲ್ಲಿ ನೇಮಕವಾದ ನಳಿನ್‌ಕುಮಾರ್ ಕಟೀಲ್ ಅವಧಿ 2022ರ ಆಗಸ್ಟ್‌ನಲ್ಲಿ ಮುಕ್ತಾಯವಾಗಲಿದೆ. ಚುನಾವಣೆ ವರ್ಷದಲ್ಲಿ ಪಕ್ಷಕ್ಕೆ ಹೊಸ ಹುರುಪು ನೀಡುವ ಹಾಗೂ ಭೌಗೋಳಿಕ, ಜಾತಿ ಸಮೀಕರಣದಿಂದಲೂ ಜನತೆಗೆ ಸಂದೇಶ ನೀಡುವ ನಿಟ್ಟಿನಲ್ಲಿ ಬದಲಾವಣೆ ಮಾಡಬೇಕು ಎಂಬ ಚರ್ಚೆಗಳು ನಡೆಯುತ್ತಿವೆ. (ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
8. KRS Dam | ಜಾರ್ಖಂಡ್ ವಿಜ್ಞಾನಿಗಳ ತಂಡದಿಂದ ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟಿಂಗ್ ಆರಂಭ, ರೈತರ ವಿರೋಧ
ಕೆಆರ್‌ಎಸ್ ಜಲಾಶಯಕ್ಕೆ (KRS Dam) ಅಪಾಯ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ರೈತರ ವಿರೋಧದ ನಡುವೆಯೂ ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟಿಂಗ್ ಸೋಮವಾರ ಬೆಳಗ್ಗೆ 11 ಗಂಟೆಗೆ ಆರಂಭವಾಗಿದೆ. ಜುಲೈ 31ರವರೆಗೂ ಜಾರ್ಖಂಡ್‌ನ ವಿಜ್ಞಾನಿಗಳ ತಂಡದಿಂದ ಬ್ಲಾಸ್ಟಿಂಗ್ ಮೂಲಕ ಪರೀಕ್ಷೆ ನಡೆಯಲಿದೆ. ಜಿಲ್ಲೆಯ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದಲ್ಲಿ ಸರ್ಕಾರದ ಒಪ್ಪಿಗೆ ಪಡೆದು ಜಿಲ್ಲಾಡಳಿತ ಟ್ರಯಲ್ ಬ್ಲಾಸ್ಟ್ ನಡೆಸುತ್ತಿದೆ. ಟ್ರಯಲ್ ಬ್ಲಾಸ್ಟ್‌ನಲ್ಲಿ ಅಪಾಯವಿಲ್ಲ ಎಂಬ ವರದಿ ಬಂದರೆ, ಮತ್ತೆ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಲಾಗುತ್ತದೆ. ಆದರೆ, ಟ್ರಯಲ್ ಬ್ಲಾಸ್ಟ್ ನಡೆಸದಂತೆ ಸ್ಥಳೀಯರು ವಿರೋಧವನ್ನು ವ್ಯಕ್ತಪಡಿಸಿದ್ದು, ಇದರ ನಡುವೆಯು ಸೋಮವಾರದಿಂದ ಬ್ಲಾಸ್ಟಿಂಗ್ ಪ್ರಕ್ರಿಯೆ ಶುರುವಾಗಿದೆ. (ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
KRS Dam | ಟ್ರಯಲ್ ಬ್ಲಾಸ್ಟಿಂಗ್ ವಿರೋಧದ ದನಿಗೆ ಮಂಡ್ಯ ಸಂಸದೆ ಸುಮಲತಾ ಸಾಥ್
9. ವಿಸ್ತಾರ Explainer | ಸ್ಮೃತಿ ಇರಾನಿ ಮಗಳು ಝೋಯಿಶ್ ಹಾಗೂ ಗೋವಾ ರೆಸ್ಟೋರೆಂಟ್: ಏನಿದು ವಿವಾದ?
ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಿಟ್ಟಿಗೆದ್ದಿದ್ದಾರೆ. ತಮ್ಮ ಮಗಳ ಹೆಸರನ್ನು ಅನಗತ್ಯವಾಗಿ ಎಳೆದು ತಂದು ವಿವಾದ ಎಬ್ಬಿಸಿರುವ ಕಾಂಗ್ರೆಸಿಗರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಹೇಳಿ, ಹಾಗೇ ನೋಟೀಸ್ ಕೂಡ ಕಳಿಸಿದ್ದಾರೆ. ಸ್ಮೃತಿ ಇರಾನಿ ತಪ್ಪಿತಸ್ಥೆ, ಅವರಿಂದ ಪ್ರಧಾನಿ ರಾಜೀನಾಮೆ ಪಡೆಯಬೇಕು ಎಂದು ಕಾಂಗ್ರೆಸಿಗರು ಆಗ್ರಹಿಸಿದ್ದಾರೆ. ಹಾಗಾದರೆ ವಿವಾದವೇನು? ಕಾಂಗ್ರೆಸಿಗರು ಆರೋಪಿಸಿದ್ದೇನು? ಸ್ಮೃತಿ ಇರಾನಿ ಅವರ ಪ್ರತ್ಯುತ್ತರವೇನು? ನಿಜವೇನು? (ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
10. Ind vs Wi ODI | ವಿಂಡೀಸ್ ವಿರುದ್ಧ ಗರಿಷ್ಠ ರನ್ ಚೇಸ್ ಮಾಡಿದ Team India ಹೊಸ ದಾಖಲೆ
ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ (Ind vs Wi ODI )೩೧೨ ರನ್‌ಗಳ ಗುರಿಯನ್ನು ಮೀರಿ ಗೆದ್ದಿರುವ ಭಾರತ ತಂಡ ಹೊಸ ದಾಖಲೆಯೊಂದನ್ನು ಸೃಷ್ಟಿಸಿದೆ. ಅದೇನೆಂದರೆ ಕೆರಿಬಿಯನ್ ಪಡೆಯ ವಿರುದ್ಧ ಮೊದಲ ಬಾರಿ ಗರಿಷ್ಠ ಮೊತ್ತವನ್ನು ಚೇಸ್ ಮಾಡಿ ಗೆಲುವು ಸಾಧಿಸಿರುವುದು. ಮೊದಲು ಬ್ಯಾಟ್ ಮಾಡಿದ್ದ ವೆಸ್ಡ್ ಇಂಡೀಸ್ ತಂಡ ೮ ವಿಕೆಟ್ ನಷ್ಟಕ್ಕೆ ೩೧೧ ರನ್ ಬಾರಿಸಿದ್ದರೆ, ಭಾರತ ೪೯.೪ ಓವರ್‌ಗಳಲ್ಲಿ ೮ ವಿಕೆಟ್ ಕಳೆದುಕೊಂಡು ೩೧೨ ರನ್ ಬಾರಿಸಿ ಗೆಲುವು ಸಾಧಿಸಿದೆ. ಇದು ವೆಸ್ಟ್ ಇಂಡೀಸ್ ತವರಿನಲ್ಲಿ ಭಾರತ ತಂಡ ಆತಿಥೇಯರ ವಿರುದ್ಧದ ಗರಿಷ್ಠ ರನ್ ಚೇಸ್ ಗೆಲುವು. (ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)