Site icon Vistara News

ವಿಸ್ತಾರ TOP 10 NEWS | ಗಡ್ಕರಿ ಮಹತ್ವದ ಸಭೆಯಿಂದ ಜನಸ್ಪಂದನ ಕ್ಷಣಗಣನೆವರೆಗಿನ ದಿನದ ಪ್ರಮುಖ ಸುದ್ದಿಗಳಿವು

TOP 10 NEWS 09092022

ಬೆಂಗಳೂರು: ಬೆಂಗಳೂರಿನ ಅತಿ ಪ್ರಮುಖ ಸಮಸ್ಯೆಗಳಲ್ಲೊಂದಾದ ಸಂಚಾರ ದಟ್ಟಣೆಯನ್ನು ನಿವಾರಿಸಲು ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ ಯೋಜನೆ ರೂಪಿಸಲಾಗಿದೆ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಬೆಂಗಳೂರಿನಲ್ಲಿ ತಿಳಿಸಿದ್ದಾರೆ. ಅನೇಕ ವಿಘ್ನಗಳನ್ನು ಎದುರಿಸಿರುವ, ಸರ್ಕಾರದ ಜನಸ್ಪಂದನ ಕಾರ್ಯಕ್ರಮ ಶನಿವಾರ ನಡೆಯಲಿದೆ. ಶಿವಮೊಗ್ಗದಲ್ಲಿ ಅದ್ಧೂರಿ ಗಣೇಶ ವಿಸರ್ಜನೆ ಮೆರವಣಿಗೆ, ಪುನೀತ್‌ ರಾಜಕುಮಾರ್‌ಗೆ ನ.1ರಂದು ಕರ್ನಾಟಕ ರತ್ನ ಪ್ರದಾನ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS ನಲ್ಲಿ.

1. ಮೂರು ತಿಂಗಳಲ್ಲಿ ಬೆಂಗಳೂರು ಸ್ಕೈಬಸ್‌ ಸರ್ವೇ: CM ಬೊಮ್ಮಾಯಿಗೆ ʼಹಣ ತರುವ ಮಂತ್ರʼ ಬೋಧಿಸಿದೆ ಎಂದ ನಿತಿನ್‌ ಗಡ್ಕರಿ!
ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಸಲುವಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ಎರಡು ಸಭೆ ನಡೆಸಲಾಗಿದ್ದು, ವಿಸ್ತೃತ ಯೋಜನೆಗಳನ್ನು ಸಿದ್ಧಪಡಿಸಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ. ಇದೇ ವೇಳೆ, ಬೃಹತ್‌ ಪ್ರಮಾಣದ ಕಾಮಗಾರಿಗಳಿಗೆ ಹಣವನ್ನು ಎಲ್ಲಿಂದ ತರಬೇಕು ಎಂಬ ಮಂತ್ರವನ್ನು ಸಿಎಂ ಬೊಮ್ಮಾಯಿ ಅವರಿಗೆ ಹೇಳಿಕೊಟ್ಟಿರುವುದಾಗಿ ತಿಳಿಸಿದ್ದಾರೆ. ಬೆಂಗಳೂರಿನ ಸಂಚಾರ ದಟ್ಟಣೆ, ಶಿರಾಡಿ ಘಾಟ್‌, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಸಮಸ್ಯೆ, ತುಮಕೂರು ರಸ್ತೆ ಫ್ಲೈ ಓವರ್‌ ದುರಸ್ತಿ ಸೇರಿ ಅನೇಕ ವಿಚಾರಗಳ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ್ದಾರೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. ಜನಸ್ಪಂದನಕ್ಕೆ ಕ್ಷಣಗಣನೆ | ವ್ಯಕ್ತಿ ಪೂಜೆಗೆ ಸಮಾವೇಶವಲ್ಲ ಎಂದ ಸುಧಾಕರ್‌: ಸಿದ್ದರಾಮೋತ್ಸವಕ್ಕೆ ಟೀಕೆ
ಜನರಿಗೋಸ್ಕರ ಜನಸ್ಪಂದನ ಕಾರ್ಯಕ್ರಮ ನಡೆಸಲಾಗುತ್ತಿದೆಯೇ ವಿನಃ ಇದು ಯಾವುದೇ ವ್ಯಕ್ತಿಪೂಜೆಯ ಕಾರ್ಯಕ್ರಮ ಅಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ನಡೆದ ಸಿದ್ದರಾಮೋತ್ಸವವನ್ನು ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಟೀಕಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ರಘುನಾಥಪುರ ಬಳಿ‌ ಶನಿವಾರ ಬೆಳಗ್ಗೆ ನಡೆಯುವ ಜನಸ್ಪಂದನ ಕಾರ್ಯಕ್ರಮಕ್ಕೂ ಮುನ್ನ ಸ್ಥಳದಲ್ಲಿ ಪೂಜೆ, ಹೋಮ ನೆರವೇರಿಸಿ ನಂತರ ಸುದ್ದಿಗಾರರೊಂದಿಗೆ ಸುಧಾಕರ್‌ ಮಾತನಾಡಿದರು. ಸಮಾವೇಶಕ್ಕೆ ಮೂರು ಲಕ್ಷ ಜನರು ಆಗಮಿಸಲಿದ್ದು, ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ಸುಧಾಕರ್‌ ತಿಳಿಸಿದ್ದಾರೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Queen Elizabeth’s Death | ಯಾರ ಪಾಲಾಗಲಿದೆ ಕೊಹಿನೂರು ವಜ್ರ ಇರುವ ಕ್ವೀನ್​ ಎಲಿಜಬೆತ್​​ರ ಕಿರೀಟ?
ಬ್ರಿಟನ್​​ನಲ್ಲಿ 70ವರ್ಷಗಳಿಂದ ರಾಣಿ ಪಟ್ಟದಲ್ಲಿದ್ದ ಕ್ವೀನ್​ ಎಲಿಜಬೆತ್​ ಗುರುವಾರ ಮೃತಪಟ್ಟಿದ್ದಾರೆ. ಕಳೆದ ಅಕ್ಟೋಬರ್​ನಿಂದಲೂ ವಯೋಸಹಜ ಕಾಯಿಲೆಗಳಿಂದ ತೀವ್ರವಾಗಿ ಬಳಲುತ್ತಿದ್ದ ಅವರು ಸ್ಕಾಟ್​ಲೆಂಡ್​ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗುರುವಾರ ಮಧ್ಯಾಹ್ನದ ವೇಳೆ ರಾಣಿ ಆರೋಗ್ಯ ಹದಗೆಟ್ಟಿದೆ ಎಂಬ ವರದಿ ಬಂದಿತ್ತು. ನಂತರ ಸಂಜೆಯ ಹೊತ್ತಿಗೆ ಕ್ವೀನ್​ ಎಲಿಜಬೆತ್​ ಇನ್ನಿಲ್ಲ ಎಂಬುದನ್ನು ಲಂಡನ್​​ನ ಬಕಿಂಗ್​ಹ್ಯಾಮ್​ ಅರಮನೆ ಮೂಲಗಳು ದೃಢಪಡಿಸಿದವು. ಇದೀಗ ಅವರ ಹಿರಿಯ ಪುತ್ರ ಪ್ರಿನ್ಸ್​ ಚಾರ್ಲ್ಸ್​ ಬ್ರಿಟನ್​ ರಾಜನಾಗಿದ್ದಾರೆ.
ಇಷ್ಟೆಲ್ಲದರ ಮಧ್ಯೆ ಕುತೂಹಲ ಮೂಡಿಸಿರುವುದು ‘ಕೊಹಿನೂರು ವಜ್ರ’. ಇಷ್ಟು ದಿನ ಬ್ರಿಟನ್​ ರಾಣಿ ಕ್ವೀನ್​ ಎಲಿಜಬೆತ್​ ಕಿರೀಟದಲ್ಲಿದ್ದ, ಭಾರತ ಮೂಲದ ಈ ಅತ್ಯಮೂಲ್ಯ ವಜ್ರ ಏನಾಗಲಿದೆ? ವಜ್ರ ಇರುವ ಕಿರೀಟದ ಹಕ್ಕನ್ನು ಯಾರು ಹೊಂದುತ್ತಾರೆ? ಎಂಬ ಚರ್ಚೆ ಪ್ರಾರಂಭವಾಗಿದೆ. ಸಂಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ.

4. ವಿಧಾನಸೌಧದಲ್ಲಿ “ಅಪ್ಪುʼಗೆ ಕರ್ನಾಟಕ ರತ್ನ ಪ್ರದಾನ: ಮೊದಲ ಬಾರಿ ಕಲಾಕ್ಷೇತ್ರದಿಂದ ಹೊರಗೆ ರಾಜ್ಯೋತ್ಸವ
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ನಡೆಸಿದ ಕಾರ್ಯಕ್ರಮಗಳ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆದಿರುವ ರಾಜ್ಯ ಸರ್ಕಾರ ಇದೀಗ ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ವಿಧಾನಸೌಧದಲ್ಲಿ ಭವ್ಯ ಸಮಾರಂಭ ಆಯೋಜನೆ ಮಾಡಿ ಪ್ರದಾನ ಮಾಡಲು ಮುಂದಾಗಿದೆ. ನವೆಂಬರ್‌ 1ರಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆದರೆ ಅದಕ್ಕೂ ಮೊದಲೇ ಅಕ್ಟೋಬರ್‌ 28ರಂದು ಕಂಠೀರವ ಕ್ರೀಡಾಂಗಣದಲ್ಲಿ ಸುಮಾರು 40 ಸಾವಿರ ಜನರು ಏಕಕಾಲದಲ್ಲಿ ಮೂರು ಗೀತೆ ಹಾಡಲಿದ್ದಾರೆ. ರಾಜ್ಯ ಹಾಗೂ ಹೊರದೇಶಗಳಲ್ಲಿ ಒಂದು ಕೋಟಿ ಜನರು ಜತೆಯಾಗಲಿದ್ದಾರೆ. ಈ ಕುರಿತು ವಿಶೇಷ ವರದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Virat kohli | ವಿರಾಟ್‌ ಕೊಹ್ಲಿಗೆ ಸ್ಮರಣೀಯವಾಗಲಿದೆ ದುಬೈ ಪಿಚ್‌, ಇಲ್ಲಿದೆ ನೋಡಿ ಕಾರಣಗಳು
ಅಫಘಾನಿಸ್ತಾನ ವಿರುದ್ಧದ ಏಷ್ಯಾ ಕಪ್ ಸೂಪರ್‌-೪ ಪಂದ್ಯದಲ್ಲಿ ಶತಕ ಬಾರಿಸಿದ ಟೀಮ್‌ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿಗೆ, ಪಂದ್ಯ ನಡೆದ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಮ್‌ ಸ್ಮರಣೀಯ ಎನಿಸಿಕೊಳ್ಳಲಿದೆ. ಯಾಕೆಂದರೆ ಶತಕದ ದಾಖಲೆಯ ಜತೆಗೆ ವಿರಾಟ್‌ ಇನ್ನೂ ಐದು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ವಿರಾಟ್ ಕೊಹ್ಲಿ ಬಾರಿಸಿರುವ ಅಜೇಯ ೧೨೨ ರನ್‌ ಟಿ೨೦ ಮಾದರಿಯಲ್ಲಿ ಭಾರತೀಯ ಆಟಗಾರನೊಬ್ಬ ದಾಖಲಿಸಿದ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ಈ ಮೂಲಕ ಅವರು ರೋಹಿತ್‌ ಶರ್ಮ ೨೦೧೭ರಲ್ಲಿ ಗಳಿಸಿದ್ದ ೧೧೮ ರನ್‌ಗಳ ದಾಖಲೆಯನ್ನು ಮುರಿದಿದ್ದಾರೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. ಶಿವಮೊಗ್ಗ ಗಣೇಶ ಮೆರವಣಿಗೆಯಲ್ಲಿ ಹರ್ಷ, ಪ್ರವೀಣ್‌, ಗೋಡ್ಸೆ ಚಿತ್ರ: ರಾಷ್ಟ್ರಲಾಂಛನ ಮೇಲಿದ್ದ ಕೇಸರಿ ಧ್ವಜ ತೆರವು
ಇಲ್ಲಿನ ಹಿಂದೂ ಮಹಾಸಭಾ ವತಿಯಿಂದ ಕೋಟೆ ರಸ್ತೆಯ ಭೀಮೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ನಗರದ ಬೀದಿಗಳಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ. ಲಕ್ಷಾಂತರ ಮಂದಿ ಈ ಮೆರವಣಿಗೆಯಲ್ಲಿ ಭಾಗವಹಿಸಿದ್ದು ಇಡೀ ನಗರ ಕೇಸರಿಮಯವಾಗಿ ಕಂಗೊಳಿಸುತ್ತಿವೆ. ಮೆರವಣಿಗೆಯು ಗಾಂಧಿ ಬಜಾರ್‌, ರಾಮಣ್ಣ ಶ್ರೇಷ್ಠಿ ಪಾರ್ಕ್, ಶಿವಪ್ಪ ನಾಯಕ ವೃತ್ತ, ಅಮೀರ್ ಅಹ್ಮದ್ ಸರ್ಕಲ್, ನೆಹರೂ ರಸ್ತೆ, ದುರ್ಗಿಗುಡಿ ಮೂಲಕ ಸಾಗುತ್ತಿದ್ದು ಎಲ್ಲ ಕಡೆ ಸಂಭ್ರಮ ನೆಲೆ ಮಾಡಿದೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
Ganeshotsav | ಶಿವಮೊಗ್ಗದಲ್ಲಿ ಬಿಗಿ ಭದ್ರತೆ ನಡುವೆ ಅದ್ಧೂರಿ ಗಣೇಶ ರಾಜಬೀದಿ ಉತ್ಸವ

7. Brand story | ಅಂದು ರಿಕ್ಷಾ ಚಾಲಕ, ಇಂದು ಬಿಸಿನೆಸ್‌ 500 ಕೋಟಿ ವಾರ್ಷಿಕ, ಅವರೇ ಬಿಂದು ಜೀರಾ ಮಾಲೀಕ!
ಬಿಂದು ಜೀರಾ ತಂಪು ಪಾನೀಯದ ರುಚಿಯನ್ನು ಆಸ್ವಾದಿಸದವರೇ ಅಪರೂಪ ಎನ್ನುವಷ್ಟರಮಟ್ಟಿಗೆ ಮನೆಮಾತಾಗಿದೆ. (Brand story) ಇದು ದಕ್ಷಿಣಕನ್ನಡದ ಗ್ರಾಮೀಣ ಮೂಲದ ಬ್ರಾಂಡ್‌ ಎನ್ನುವುದು ವಿಶೇಷ. ಭಾರತದ ಕಾರ್ಪೊರೇಟ್‌ ವಲಯದ ದಿಗ್ಗಜ ರಿಲಯನ್ಸ್‌ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಕೇಶ್‌ ಅಂಬಾನಿ ಕೂಡ ಬಿಂದು ಜೀರಾ ಬ್ರಾಂಡ್‌ ಅನ್ನು ಖರೀದಿಸಲು ಇತ್ತೀಚೆಗೆ ಮುಂದಾಗಿದ್ದರು. ಈ ಕುರಿತು ವಿಶೇಷ ವರದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. ಎಂ ಕೆ ಭಾಸ್ಕರ್‌ ರಾವ್‌ ಅವರ “ಮೊಗಸಾಲೆʼ ಅಂಕಣ | ಸಿಪಿಎಂ ಮತ್ತು ತೋಳ ಕುರಿಮರಿ ಕಥೆ
ಕೊರೊನಾ ಕಾಲದಲ್ಲಿ ಅತ್ಯುತ್ತಮ ಕೆಲಸ ಮಾಡಿದ ಕೇರಳದ ಮಾಜಿ ಆರೋಗ್ಯ ಸಚಿವೆ ಕೆ ಕೆ ಶೈಲಜಾ ಪಕ್ಷದ ಸೂಚನೆಯಂತೆ ರಾಮೊನ್ ಮ್ಯಾಗ್ಸೇಸೆ ಪ್ರಶಸ್ತಿ ತಿರಸ್ಕರಿಸಿದ್ದಾರೆ. ಏನಿದರ ಒಳ ಹೂರಣ? ಇಲ್ಲಿದೆ ಒಂದು ವಿಶ್ಲೇಷಣೆ.

9. Rice export | ಕಡಿ ಅಕ್ಕಿ ರಫ್ತಿಗೆ ನಿಷೇಧ, ಬಾಸ್ಮತಿಯೇತರ ಅಕ್ಕಿಗೆ 20% ಸುಂಕ
ಭಾರತ ಅಕ್ಕಿಯ ರಫ್ತಿನ ಮೇಲೆ (Rice export) ನಿರ್ಬಂಧಗಳನ್ನು ವಿಧಿಸಿದೆ. ಕಡಿ ಅಕ್ಕಿ ರಫ್ತಿಗೆ (broken rice) ನಿಷೇಧ ವಿಧಿಸಲಾಗಿದೆ. ಬಾಸ್ಮತಿಯೇತರ ಅಕ್ಕಿಗೆ 20% ಸುಂಕ ವಿಧಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಭತ್ತದ ಬಿತ್ತನೆ ಪ್ರದೇಶ ಕುಂಠಿತವಾಗಿರುವುದರಿಂದ ಅಕ್ಕಿಯ ಉತ್ಪಾದನೆ ಮತ್ತು ಪೂರೈಕೆಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಕೆಲವು ರಫ್ತುದಾರರಿಗೆ ಸೆಪ್ಟೆಂಬರ್‌ 15ರ ತನಕ ರಫ್ತಿಗೆ ಅವಕಾಶ ನೀಡಲಾಗಿದೆ. ಅಕ್ಕಿ ರಫ್ತು ನಿರ್ಬಂಧಕ್ಕೆ ಕಾರಣವೇನು? ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. ವಿಸ್ತಾರ Fact Check | ಎಟಿಎಂ ವಿತ್‌ಡ್ರಾವಲ್ಸ್‌ಗೆ 118 ರೂ. ಶುಲ್ಕ ಇಲ್ಲ, 24 ರೂ. ಮಾತ್ರ
ಎಟಿಎಂನಿಂದ ಪ್ರತಿ ತಿಂಗಳು 5ಕ್ಕಿಂತ ಹೆಚ್ಚು ಸಲ ನಗದು ಹಣವನ್ನು ಡ್ರಾ ಮಾಡಿದರೆ, ಬಳಿಕ ಪ್ರತಿ ವಿತ್‌ ಡ್ರಾಗೂ ಜಿಎಸ್‌ಟಿ ಸೇರಿ 118 ರೂ. ಶುಲ್ಕ ತಗಲುತ್ತದೆ ಎಂಬ ವರದಿಗಳು ಇತ್ತೀಚೆಗೆ ಕೆಲ ಮಾಧ್ಯಮಗಳಲ್ಲಿ ಪ್ರಕಟವಾಗಿ ಜನತೆಯಲ್ಲಿ ಆತಂಕ ಸೃಷ್ಟಿಸಿತ್ತು. ಇನ್ನೂ ಕೆಲವು ವರದಿಗಳ ಪ್ರಕಾರ ತಿಂಗಳಿಗೆ 4 ಉಚಿತ ವಿತ್‌ ಡ್ರಾವಲ್ಸ್‌ ಬಳಿಕ 173 ರೂ. ಶುಲ್ಕ ಕಟ್ಟಬೇಕಾಗುತ್ತದೆ. ಆದರೆ ವಾಸ್ತವವೇನು? (ವಿಸ್ತಾರ Money Guide) ಇಲ್ಲಿದೆ ವಿವರ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Exit mobile version