Site icon Vistara News

ವಿಸ್ತಾರ TOP 10 NEWS | ನೆಟ್ಟಾರುವಿನಲ್ಲಿ ಹರಿದ ನೆತ್ತರು, ಸರ್ಕಾರದ ವಿರುದ್ಧ ಆಕ್ರೋಶ ಇನ್ನಿತರ ಪ್ರಮುಖ ಸುದ್ದಿಗಳಿವು

Vistara top 10

ಬೆಂಗಳೂರು: ಅನೇಕ ದಿನಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಕೋಮು ಸಂಘರ್ಷ, ವಾಗ್ವಾದಕ್ಕೆ ಮತ್ತೊಂದು ಸೇರ್ಪಡೆಯಾಗಿ ದಕ್ಷಿಣ ಕನ್ನಡದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತನ ಹತ್ಯೆ ನಡೆದಿದೆ. ಸರ್ವಜನಾಂಗದ ಶಾಂತಿಯ ತೋಟವಾದ ಕರ್ನಾಟಕದಲ್ಲಿ ಶಾಂತಿ ನೆಲೆಸಲಿ ಎಂಬುದು ಒಂದೆಡೆಯಾದರೆ, ಚುನಾವಣೆ ವರ್ಷದಲ್ಲಿ ಬಿಜೆಪಿ ಸರ್ಕಾರಕ್ಕೆ ಈ ಪ್ರಕರಣ ಸಂಕಷ್ಟ ತಂದೊಡ್ಡಿದೆ. ಬಹುನಿರೀಕ್ಷೆಯ ವಿಕ್ರಾಂತ್‌ ರೋಣ ಸಿನಿಮಾ ಗುರುವಾರ ಬಿಡುಗಡೆಯಾಗುತ್ತದೆ, ಪದೇಪದೆ ಅವಘಡ ಸಂಭವಿಸಿದ್ದರಿಂದ ಸ್ಪೈಸ್‌ಜೆಟ್‌ ವಿಮಾನಗಳ ಹಾರಾಟಕ್ಕೆ ನಿಯಂತ್ರಣ ಹೇರಲಾಗಿದೆ ಎಂಬುದು ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS

1. ಸುಳ್ಯದಲ್ಲಿ ಬಿಜೆಪಿ ಯುವ ಮೋರ್ಚಾದ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮೋರ್ಚಾ ಮುಖಂಡನ ಹತ್ಯೆ ನಡೆದಿದೆ. ಬೆಳ್ಳಾರೆ ಮಾಸ್ತಿಕಟ್ಟೆಯಲ್ಲಿ ಚಿಕನ್ ಸೆಂಟರ್ ನಡೆಸುತ್ತಿದ್ದ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು (೨೯) ಅವರನ್ನು ಅವರ ಅಂಗಡಿಯಲ್ಲಿಯೇ ಹತ್ಯೆ ಮಾಡಲಾಗಿದೆ. ಬೈಕ್‌ನಲ್ಲಿ ಬಂದಿದ್ದ ಮೂವರು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಕ್ಷುಲ್ಲಕ ಕಾರಣಕ್ಕೆ ಮಸೂದ್ ಎಂಬ ಯುವಕನ ಮೇಲೆ ಹಲ್ಲೆ ನಡೆದಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಎಂಟು ಜನ ಹಿಂದೂ ಸಂಘಟನೆಯ ಕಾರ್ಯಕರ್ತರು ಮಸೂದ್ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಜೈಲು ಸೇರಿದ್ದಾರೆ. ಈ ಪ್ರಕರಣಕ್ಕೆ ಪ್ರತಿಕಾರವಾಗಿ ಈ ಹತ್ಯೆ ನಡೆದಿರಬಹುದು ಎಂದು ಅನುಮಾನಿಸಲಾಗುತ್ತಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

2. 22 ಸಾವಿನ ಹೆಸರಿನಲ್ಲಿ BJP ಅಧಿಕಾರ: 2022 ಬಂದರೂ ನ್ಯಾಯವಿಲ್ಲ ಎಂಬ ಆಕ್ರೋಶ
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವದಲ್ಲಿದ್ದ ಅಷ್ಟೂ ವರ್ಷದಲ್ಲಿ ರಾಜ್ಯ ಬಿಜೆಪಿ ನಿರಂತರವಾಗಿ ಚರ್ಚಿಸಿದ ವಿಚಾರವೆಂದರೆ ಹಿಂದು ಕಾರ್ಯಕರ್ತರ ಹತ್ಯೆ. 2014ರಲ್ಲಿ ಸಿದ್ದರಾಮಯ್ಯ ಸರ್ಕಾರ ಆಡಳಿತ ಆರಂಭಿಸಿತ್ತು. ಅದೇ ವರ್ಷದಿಂದ ಕಾರ್ಯಕರ್ತರ ಹತ್ಯೆ ಆರೋಪಗಳು ಸರ್ಕಾರವನ್ನು ಸುತ್ತಿಕೊಳ್ಳಲು ಆರಂಭಿಸಿದವು. ಹಂತಕರು ಪಾತಾಳದಲ್ಲಿ ಅಡಗಿದ್ದರೂ ಬಿಡದೆ ಶಿಕ್ಷೆ ಕೊಡಿಸುತ್ತದೆ ಎಂದು ಬಿಜೆಪಿ ನಾಯಕರು ಹೇಳಿದರಾದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಕಾರ್ಯಕರ್ತರಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

3. Praveen Nettaru | ಆರೋಪಿಗಳ ಪತ್ತೆಗೆ 5 ತಂಡ ರಚನೆ; 15 ಮಂದಿಯ ವಿಚಾರಣೆ
ಪ್ರವೀಣ್ ನೆಟ್ಟಾರು (Praveen Nettaru) ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಕೂಡಲೇ ತಪ್ಪಿತಸ್ಥರ ಬಂಧನಕ್ಕೆ ಕ್ರಮ ಕೈಗೊಳ್ಳಲು ಸೂಚಿಸಿದೆ. ಆರೋಪಿಗಳ ಪತ್ತೆಗಾಗಿ 5 ತಂಡಗಳ ರಚಿಸಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆದೇಶ ಹೊರಡಿಸಿದ್ದು, ಈಗಾಗಲೇ ಈ ತಂಡವು ಸುಮಾರು 15 ಜನಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆಂದು ಮೂಲಗಳು ತಿಳಿಸಿವೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

4. ಜನೋತ್ಸವ ಆಚರಣೆ ಮೇಲೆ ಕಾರ್ಮೋಡ: ಕರಾವಳಿ ಶಾಸಕರು, ಸಚಿವರ ಗೈರು
ಬಿಜೆಪಿ ಸರ್ಕಾರದ ಮೂರು ವರ್ಷ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಆಡಳಿತದ ಒಂದು ವರ್ಷದ ಸಂಭ್ರಮಾಚರಣೆಗೆ ಇದೀಗ ಕಾರ್ಮೋಡ ಕವಿದಿದೆ. ಸತತ ಹಿಂದು ಕಾರ್ಯಕರ್ತರ ಹತ್ಯೆಗಳು ನಡೆಯುತ್ತಿದ್ದರೂ ಬಿಜೆಪಿ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಬಿಜೆಪಿ ಕಾರ್ಯಕರ್ತರ ಆಕ್ರೋಶದ ನಡುವೆ ಜನೋತ್ಸವ ಕಾರ್ಯಕ್ರಮದ ಮೂಲಕ ಸಂಭ್ರಮಾಚರಣೆ ನಡೆಸುವುದು ಎಷ್ಟು ಸರಿ ಎಂಬ ಚರ್ಚೆ ಬಿಜೆಪಿ ವಲಯದಲ್ಲಿ ನಡೆಯುತ್ತಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

5. Praveen Nettaru | ಪಕ್ಷ, ಸಿದ್ಧಾಂತಕ್ಕೆ ಹೋರಾಡುವವರಿಗಿಲ್ಲ ರಕ್ಷಣೆ; ಬಿಜೆಪಿ ನೂರಾರು ಕಾರ್ಯಕರ್ತರ ರಾಜೀನಾಮೆ
ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್‌ ನೆಟ್ಟಾರು ಬರ್ಬರ ಹತ್ಯೆ ಖಂಡಿಸಿ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ನಡುವೆ ಪಕ್ಷ ಹಾಗೂ ಸಿದ್ಧಾಂತಕ್ಕೆ ಹೋರಾಡುತ್ತಿರುವ ಕಾರ್ಯಕರ್ತರ ಪ್ರಾಣಕ್ಕೆ ಬಿಜೆಪಿ ಸರ್ಕಾರದಲ್ಲೇ ರಕ್ಷಣೆ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ನೂರಾರು ಕಾರ್ಯಕರ್ತರು, ಮುಖಂಡರು ತಮ್ಮ ಜವಾಬ್ದಾರಿಗಳಿಗೆ ರಾಜೀನಾಮೆ ನೀಡಿದ್ದಾರೆ. ಪ್ರವೀಣ್‌ ಹತ್ಯೆಗೆ ನ್ಯಾಯ ಸಿಗುವವರೆಗೆ ಪಕ್ಷದ ಕಾರ್ಯಕಲಾಪಗಳಲ್ಲಿ ಸಕ್ರಿಯವಾಗುವುದಿಲ್ಲ ಎಂದು ಈ ಮೂಲಕ ವರಿಷ್ಠರಿಗೆ ಎಚ್ಚರಿಕೆ ರವಾನಿಸಿದ್ದಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

6. google street view: ಬರಲಿದೆ ಭಾರತದಲ್ಲಿಯೂ ಗೂಗಲ್‌ ಸ್ಟ್ರೀಟ್‌ ವ್ಯೂ, ಬೆಂಗಳೂರಿನಲ್ಲಿಯೇ ಮೊದಲು
ಗೂಗಲ್ ಕೊನೆಗೂ ಭಾರತದಲ್ಲಿ ʻಸ್ಟ್ರೀಟ್ ವ್ಯೂʼ ಸೌಲಭ್ಯವನ್ನು ತರುತ್ತಿದ್ದು, ಆರಂಭದಲ್ಲಿ ದೇಶದ ಹತ್ತು ನಗರಗಳಲ್ಲಿ ಅಳವಡಿಸುತ್ತಿದೆ. ಸ್ಟ್ರೀಟ್‌ ವ್ಯೂ ಮೂಲಕ ಗ್ರಾಹಕರು ತಾವಿದ್ದಲ್ಲೇ ತಮಗೆ ಅಗತ್ಯವಾದ ನಗರದ ವಿವಿಧ ತಾಣಗಳ ರಿಯಲ್‌ ಟೈಮ್‌ ಸ್ಥಿತಿಗತಿಯನ್ನು ಪರಿಶೀಲಿಸಬಹುದು. ಯಾವುದೇ ಪ್ರೇಕ್ಷಣೀಯ ಸ್ಥಳ, ರೆಸ್ಟೋರೆಂಟ್‌, ಟ್ರಾಫಿಕ್‌ ಪರಿಸ್ಥಿತಿ, ಒನ್‌ವೇ ಇತ್ಯಾದಿಗಳನ್ನು ಅನ್ವೇಷಿಸಬಹುದು. ರಸ್ತೆಗಳ ವೇಗದ ಮಿತಿ, ರಸ್ತೆ ಮುಚ್ಚುಗಡೆ, ಅಡಚಣೆಗಳ ಮಾಹಿತಿ, ಟ್ರಾಫಿಕ್‌ ಜಂಕ್ಷನ್‌ಗಳ ಒತ್ತಡಗಳನ್ನು ಕೂಡ ಇದು ತೋರಿಸುತ್ತದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

7. Vikrant Rona | ವಿಕ್ರಾಂತ್ ರೋಣ ಅಂದರೆ ವಿಕ್ಟರಿ ರೋಣ : ಇದು ರೋಣನ ಪ್ರೀ ರಿಲೀಸ್ ಇವೆಂಟ್ ಹಬ್ಬ
ಬೆಂಗಳೂರಿನ ಲುಲು ಮಾಲ್‌ನಲ್ಲಿ ಬುಧವಾರ ಜುಲೈ 26ರಂದು ನಡೆದ ವಿಕ್ರಾಂತ್‌ ರೋಣ (Vikrant Rona ) ತಂಡದ ಪ್ರೀ ರಿಲೀಸ್ ಇವೆಂಟ್ ವೈಭೋಗಮಯವಾಗಿತ್ತು. ವೇದಿಕೆ ಮೇಲಿನ ವಸ್ತುಗಳು, ಎಲ್ಇಡಿ ಲೈಟ್ಸ್, 3ಡಿ ರೂಪದಲ್ಲಿದ್ದ ಪೋಸ್ಟರ್ ಎಲ್ಲವೂ ಕಣ್ಣುಕುಕ್ಕುತ್ತಿದ್ದವು. ಕಿಚ್ಚನ ಆಗಮನಕ್ಕೆ ಕಲಾ ತಂಡಗಳೊಂದಿಗೆ ಅದ್ದೂರಿ ಸ್ವಾಗತ ಕೋರಿ, ಡೊಳ್ಳು ಕುಣಿತಕ್ಕೆ ಅಭಿಮಾನಿಗಳು ಹೆಜ್ಜೆ ಹಾಕಿದ್ದಾರೆ. ಇದಲ್ಲದೆ ಚಿನ್ನದ ನಾಡು ಕೋಲಾರ ಜಿಲ್ಲೆಯ ಅಭಿಮಾನಿಗಳು ಕಿಚ್ಚನ ಭಾವಚಿತ್ರವಿರುವ ಬಾವುಟ ಹಿಡಿದು ಹಾರಿಸಿದರು. ಸಿನಿಮಾ ತೆರೆಗೆ ಅಪ್ಪಳಿಸಲು ಕೌಂಟ್ ಡೌನ್ ಶುರುವಾಗಿದೆ. ಹೀಗಿರುವಾಗ ಕಿಚ್ಚ ಜುಲೈ 27ಕ್ಕೆ ದುಬೈ ನಲ್ಲಿ ಪ್ರಚಾರ ಮಾಡಲು ಮುಂದಾಗಿದ್ದಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

8. ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಇ ಡಿ ವಿಚಾರಣೆ ಮುಕ್ತಾಯ; ಸದ್ಯಕ್ಕಿಲ್ಲ ಹೊಸ ಸಮನ್ಸ್​
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಇ.ಡಿ ವಿಚಾರಣೆ ಬುಧವಾರ ಮುಕ್ತಾಯಗೊಂಡಿದೆ. ಬೆಳಗ್ಗೆಯಿಂದ ಮೂರು ತಾಸುಗಳ ಕಾಲ ಅವರಿಗೆ ಪ್ರಶ್ನೆಗಳನ್ನು ಕೇಳಲಾಯಿತು. ಹಾಗೇ, ಮತ್ತೆ ವಿಚಾರಣೆಗೆ ಆಗಮಿಸುವಂತೆ ಯಾವುದೇ ಸಮನ್ಸ್ ನೀಡಿಲ್ಲ. ರಾಹುಲ್​ ಗಾಂಧಿಗೆ ಐದು ಸುತ್ತುಗಳಲ್ಲಿ ವಿಚಾರಣೆ ನಡೆಸಿದ್ದ ಇ ಡಿ ಅಧಿಕಾರಿಗಳು ಸೋನಿಯಾ ಗಾಂಧಿ ವಿಚಾರಣೆಯನ್ನು ಮೂರು ಸುತ್ತುಗಳಲ್ಲಿ ಮುಗಿಸಿದ್ದಾರೆ. ಸೋನಿಯಾ ಗಾಂಧಿ ಇಂದು ಬೆಳಗ್ಗೆ 11 ಗಂಟೆಗೆ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಾಹುಲ್ ಗಾಂಧಿಯೊಂದಿಗೆ ಇ ಡಿ ಕಚೇರಿಗೆ ತೆರಳಿದ್ದರು. 11.15 ರಿಂದ ಪ್ರಶ್ನಾವಳಿ ಪ್ರಾರಂಭವಾಗಿತ್ತು. ಇದೀಗ ಅವರು ಇ ಡಿ ಕಚೇರಿಯಿಂದ ವಾಪಸ್ ಮನೆಗೆ ತೆರಳಿದ್ದಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

9. ಬೆಂಗಳೂರು Traffic Problem ಪರಿಹಾರಕ್ಕೆ Google ಮೊರೆ: ಸಿಗ್ನಲ್‌ನಲ್ಲಿ ಕಾಯುವ ಸಮಯ ಕಡಿಮೆ
ಒಂದು ಕೋಟಿಗೂ ಹೆಚ್ಚಿನ ಸಂಖ್ಯೆಯಲ್ಲಿರುವ ಬೆಂಗಳೂರಿನ ಸಂಚಾರ ದಟ್ಟಣೆಯನ್ನು (Traffic Problem) ಕಡಿಮೆ ಮಾಡಲು ತಂತ್ರಜ್ಞಾನ ದೈತ್ಯ ಗೂಗಲ್‌ ಮೊರೆ ಹೋಗಲಾಗಿದೆ. ಬೆಂಗಳೂರು ಸಂಚಾರ ಪೊಲೀಸರು ಇದೀಗ ಗೂಗಲ್‌ ಜತೆಗೆ ಒಪ್ಪಂದ ಮಾಡಿಕೊಂಡಿದ್ದು, ಒಟ್ಟಾರೆ ಸಮಯದಲ್ಲಿ ಶೇ.20ಕ್ಕಿಂತಲೂ ಕಡಿಮೆಯಾಗುವ ಭರವಸೆಯಿದೆ. ಈಗಾಗಲೆ ನಡೆಸಿದ ಪ್ರಾಯೋಗಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಸಿಕ್ಕಿದೆ ಎಂದು ಬೆಂಗಳೂರು ಸಂಚಾರ ಪೊಲೀಸ್‌ ಜಂಟಿ ಆಯುಕ್ತ ಡಾ. ಬಿ.ಆರ್‌. ರವಿಕಾಂತೇಗೌಡ ಹೇಳಿದ್ದಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

10. ಸ್ಪೈಸ್‌ಜೆಟ್‌ ವಿಮಾನ ಹಾರಾಟವನ್ನು 50% ಕಡಿತಗೊಳಿಸಿ ಡಿಜಿಸಿಎ ಆದೇಶ
ಇತ್ತೀಚಿಗೆ ಪದೇಪದೆ ತಾಂತ್ರಿಕ ಅಡಚಣೆಗೆ ಒಳಗಾಗಿ ಆತಂಕ ಸೃಷ್ಟಿಸಿದ್ದ ಸ್ಪೈಸ್‌ಜೆಟ್‌ ವಿರುದ್ಧ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ), ಮುಂದಿನ ೮ ವಾರಗಳ ಕಾಲ ೫೦% ವಿಮಾನ ಹಾರಾಟವನ್ನು ಮಾತ್ರ ನಡೆಸುವಂತೆ ನಿರ್ಬಂಧಿಸಿದೆ. ಇತ್ತೀಚಿನ ವರ್ಷಗಳಲ್ಲಿಯೇ ಏರ್‌ಲೈನ್‌ ಒಂದರ ವಿರುದ್ಧ ಡಿಜಿಸಿಎ ಕೈಗೊಂಡಿರುವ ಕಠಿಣ ಕ್ರಮ ಇದಾಗಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

Exit mobile version