Site icon Vistara News

ವಿಸ್ತಾರ TOP 10 NEWS | ಸಿದ್ದರಾಮಯ್ಯ ಪಶ್ಚಾತ್ತಾಪದಿಂದ ಸಿಸೋಡಿಯಾಗೆ ಸಿಬಿಐ ತಾಪದವರೆಗಿನ ಪ್ರಮುಖ ಸುದ್ದಿಗಳಿವು

Vistara TOP 10 19082022

ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ಭಾರೀ ಸದ್ದು ಮಾಡಿದ್ದ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರಕ್ಕೆ ಮುನ್ನುಡಿ ಬರೆದ ಮಾಜಿ ಸಿಎಂ ಸಿದ್ದರಾಮಯ್ಯ ಪಶ್ಚಾತ್ತಾಪ ಪಟ್ಟಿದ್ದಾರೆ ಎಂಬ ರಂಭಾಪುರಿ ಶ್ರೀಗಳ ಹೇಳಿಕೆ, ರಾಜ್ಯ ರಾಜಕೀಯದ ದೃಷ್ಟಿಯಿಂದ ಮಹತ್ವ ಪಡೆದಿದೆ. ಸಾವರ್ಕರ್‌ ಕುರಿತ ಹೇಳಿಕೆ ನಂತರ ಕಾಂಗ್ರೆಸ್‌ ಹಾಗೂ ಬಿಜೆಪಿ ಪ್ರತಿಭಟನೆಗಳು ಮುಂದುವರಿದಿವೆ, ವಿಸ್ತಾರ ನ್ಯೂಸ್‌ನಲ್ಲಿ ಎರಡು ಹೊಚ್ಚ ಹೊಸ ಅಂಕಣಗಳು ಆರಂಭವಾಗುತ್ತಿವೆ ಎನ್ನುವುದು ಸೇರಿ ಎಲ್ಲರೂ ಓದಲೇಬೇಕಾದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. ಧರ್ಮ ಒಡೆಯುವ ಪ್ರಯತ್ನಕ್ಕೆ ಸಿದ್ದರಾಮಯ್ಯ ಪಶ್ಚಾತ್ತಾಪ: ಜತೆಗಿದ್ದವರು ದಾರಿ ತಪ್ಪಿಸಿದರು ಎಂದ ಮಾಜಿ ಸಿಎಂ?
ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ತಮ್ಮ ಜತೆಗಿದ್ದವರು ದಾರಿ ತಪ್ಪಿಸಿದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪಶ್ಚಾತ್ತಾಪ ಪಟ್ಟಿದ್ದಾರೆ. ಈ ಮಾತುಗಳನ್ನು ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ತಿಳಿಸಿದ್ದಾರೆ. ಅತಿ ವೃಷ್ಟಿಯಿಂದ ಹಾನಿಗೀಡಾದ ಪ್ರದೇಶಗಳನ್ನು ವೀಕ್ಷಿಸಲು ಚಿಕ್ಕಮಗಳೂರು ಜಿಲ್ಲಾ ಪ್ರವಾಸದಲ್ಲಿರುವ ಸಿದ್ದರಾಮಯ್ಯ, ಇದೇ ಮೊದಲ ಬಾರಿಗೆ ರಂಭಾಪುರಿ ಪೀಠಕ್ಕೆ ಭೇಟಿ ನೀಡಿ ಸ್ವಾಮೀಜಿಯವರ ಆಶೀರ್ವಾದ ಪಡೆದರು. ವೀರಶೈವ ಲಿಂಗಾಯತ ಎನ್ನುವುದು ಪ್ರತ್ಯೇಕವಲ್ಲ, ಅದನ್ನು ಒಡೆಯಬಾರದು ಎಂದು ರಂಭಾಪುರಿ ಪೀಠ ಸೇರಿ ಪಂಚಪೀಠಗಳು ಕಳೆದ ಚುನಾವಣೆ ವೇಳೆ ಪ್ರತಿಪಾದಿಸಿದ್ದವು. ಇದೀಗ ಸಿದ್ದರಾಮಯ್ಯ ಪಶ್ಚಾತ್ತಾಪ ಪಟ್ಟಿದ್ದಾರೆ ಎನ್ನುವ ವಿಚಾರ ಪ್ರಮುಖ ಬೆಳವಣಿಗೆಯಾಗಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

2. ಸಿದ್ದರಾಮಯ್ಯ ವಿರುದ್ಧ ಚಿಕ್ಕಮಗಳೂರಿನಲ್ಲೂ ಕಪ್ಪು ಬಾವುಟ ಪ್ರದರ್ಶನ, ಕಾಂಗ್ರೆಸ್‌ನಿಂದಲೂ ಪ್ರತಿಭಟನೆ
ನೆರೆ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೊಡಗಿನಲ್ಲಿ ಕಪ್ಪು ಬಾವುಟ ಪ್ರದರ್ಶನ, ಮೊಟ್ಟೆ ಎಸೆತ ಘಟನೆ ಬೆನ್ನಿಗೆ, ಚಿಕ್ಕಮಗಳೂರಿನಲ್ಲೂ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ. ಕೊಡಗು ಭೇಟಿ ನಂತರ ಚಿಕ್ಕಮಗಳೂರಿಗೆ ಭೇಟಿ ನೀಡಿದ ಸಿದ್ದರಾಮಯ್ಯ ಅವರಿಗೆ ಕೊಪ್ಪ ತಾಲೂಕಿನ ಮಕ್ಕಿಕೊಪ್ಪ ಗ್ರಾಮದಲ್ಲಿ ಪ್ರತಿಭಟನೆ ಬಿಸಿ ತಟ್ಟಿದೆ. ಸಿದ್ದು ಗೋ ಬ್ಯಾಕ್ ಎಂದು ಆಕ್ರೋಶ ಹೊರಹಾಕಿರುವ ಪ್ರತಿಭಟನಾಕಾರರು, ಸಾವರ್ಕರ್ ಬಗ್ಗೆ ಸಿದ್ದರಾಮಯ್ಯ ಹೇಳಿಕೆಯನ್ನು ಖಂಡಿಸಿದ್ದಾರೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.
ಇದೇ ವೇಳೆ, ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಕಾಂಗ್ರೆಸ್‌ನಿಂದಲೂ ಪ್ರತಿಭಟನೆ ನಡೆಸಲಾಗಿದೆ. ಪ್ರತಿಪಕ್ಷ ನಾಯಕರಿಗೆ ಗೌರವ ನೀಡದೆ ಬಿಜೆಪಿ ಗೂಂಡಾಗಿರಿ ಮಾಡುತ್ತಿದೆ ಎಂದು ಆರೋಪಿಸಲಾಗಿದೆ.

3. ಬಿಜೆಪಿಯ ಗೋಬ್ಯಾಕ್‌ ‌ವಿರುದ್ಧ ಸಿದ್ದರಾಮಯ್ಯ ಗರಂ, ಆ. 26ರಂದು ಕೊಡಗಿನಲ್ಲಿ ಕಾಂಗ್ರೆಸ್‌ ಪ್ರತಿಭಟನೆ
ಕೊಡಗಿನಲ್ಲಿ ನನ್ನ ವಿರುದ್ಧ ಪ್ರತಿಭಟನೆ ಮಾಡಲು ಬಿಜೆಪಿ ಸರ್ಕಾರವೇ ಕುಮ್ಮಕ್ಕು ನೀಡಿದೆ. ಇಲ್ಲವಾದರೆ ಪೊಲೀಸರು ಯಾಕೆ ಪ್ರತಿಭಟನೆ ವೇಳೆ ಸುಮ್ಮನಿದ್ದರು ಎಂದು ಪ್ರಶ್ನಿಸಿದ್ದಾರೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ. ಅವರು ಚಿಕ್ಕಮಗಳೂರು ತಾಲೂಕಿನ ಬಾಸಪುರದಲ್ಲಿ ಪ್ರತಿಕ್ರಿಯೆ ನೀಡಿದರು. ಈ ನಡುವೆ ಪೊಲೀಸರ ವರ್ತನೆ, ಬಿಜೆಪಿ ಕಾರ್ಯಕರ್ತರ ನಡವಳಿಕೆ ವಿರುದ್ಧ ಆಗಸ್ಟ್‌ ೨೬ರಂದು ಕೊಡಗಿನಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು. ಜತೆಗೆ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಪ್ರಕಟಿಸಿದರು. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

4. (ಹೊಸ ಅಂಕಣ) ಪವರ್‌ ಪಾಯಿಂಟ್‌ with HPK | ಎಚ್‌ಡಿಕೆ- ಡಿಕೆ ಪ್ರೀತಿ ಪ್ರೇಮದ ಒಳಗುಟ್ಟು ಇದು!
ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ನಡೆಯುವ ಘಟನಾವಳಿಗಳ ಕುರಿತು ನಿಷ್ಪಕ್ಷಪಾತವಾದ ವಿಶ್ಲೇಷಣೆ ಹಾಗೂ ಹೊಳಹುಗಳನ್ನು ನೀಡುವ, ವಿಸ್ತಾರ ನ್ಯೂಸ್‌ ಸಿಇಒ ಹಾಗೂ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ ಅವರ ಹೊಸ ಅಂಕಣ ಪವರ್‌ ಪಾಯಿಂಟ್‌ with HPK ಆರಂಭವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರ ಇತ್ತೀಚಿನ ನಡೆಗಳ ಕುರಿತು ಮೊದಲ ಲೇಖನವಿದೆ. ಸಂಪೂರ್ಣ ಲೇಖನ ಓದಲು ಇಲ್ಲಿ ಕ್ಲಿಕ್‌ ಮಾಡಿ.

5. IRCTC | ಪ್ರಯಾಣಿಕರ ಡೇಟಾ ಮಾರಾಟದಿಂದ 1,000 ಕೋಟಿ ರೂ. ಆದಾಯ ಗಳಿಸಲು ರೈಲ್ವೆ ಪ್ಲಾನ್!
ರೈಲ್ವೆ ಇಲಾಖೆಯ ಇಂಡಿಯನ್‌ ರೈಲ್ವೆ ಕೇಟರಿಂಗ್‌ & ಟೂರಿಸಂ ಕಾರ್ಪೊರೇಷನ್‌ (IRCTC) ಸಂಸ್ಥೆಯ ಷೇರು ದರ ಕಳೆದ ಎರಡು ದಿನಗಳಲ್ಲಿ ೧೨% ಏರಿಕೆಯಾಗಿದೆ. ಪ್ರತಿ ಷೇರಿನ ದರ ೬೭೧ ರೂ.ಗಳಿಂದ ೭೫೨ ರೂ.ಗೆ ಜಿಗಿದಿದೆ.
ಐಆರ್‌ಸಿಟಿಸಿಯು ತನ್ನ ಪ್ರಯಾಣಿಕರ ಡೇಟಾಗಳನ್ನು ನಗದೀಕರಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ಷೇರು ದರ ಹೆಚ್ಚಳವಾಗಿದೆ. ಇದರಿಂದ ಸಂಸ್ಥೆಯ ಆದಾಯ ಮತ್ತು ಲಾಭ ಹೆಚ್ಚಳವಾಗಲಿದೆ. ಡಿಜಿಟಲ್‌ ನಗದಿಕರಣದ ಮೂಲಕ (Digital monetisation ) ಮೂಲಕ ೧,೦೦೦ ಕೋಟಿ ರೂ. ಆದಾಯ ಗಳಿಸುವ ಗುರಿಯನ್ನು ಐಆರ್‌ಸಿಟಿಸಿ ಹೊಂದಿದೆ. ಈ ಸಂಬಂಧ ಕನ್ಸಲ್ಟೆಂಟ್‌ ನೆರವು ಪಡೆಯಲು ಐಆರ್‌ಸಿಟಿಸಿ ನಿರ್ಧರಿಸಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

6. ಪಂಚಮಸಾಲಿ ಮೀಸಲಾತಿ | ರಾಜ್ಯ ಸರ್ಕಾರಕ್ಕೆ ಆಗಸ್ಟ್‌ 22ರ ಮಧ್ಯರಾತ್ರಿ 12ರವರೆಗೆ ಗಡುವು
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರಕ್ಕೆ ಆಗಸ್ಟ್‌ 22ರ ಮಧ್ಯರಾತ್ರಿ 12ಗಂಟೆವರೆಗೆ ಗಡುವು ನೀಡಲಾಗಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಕೂಡಲಸಂಗಮದ ಪಂಚಮಸಾಲಿ ಪೀಠದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಆಗಸ್ಟ್ 22ಕ್ಕೆ ಸರ್ಕಾರಕ್ಕೆ ಕೊಟ್ಟ ಕಾಲಾವಕಾಶ ಮುಗಿಯುತ್ತಿದೆ. 2 ತಿಂಗಳಲ್ಲಿ ಮೀಸಲಾತಿ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳದಿದ್ದರೆ ತಾವೇ ಬಂದು ಸಿಎಂ ಮನೆ ಮುಂದೆ ಹೋರಾಟ ಮಾಡುತ್ತೇನೆ ಎಂದು ಯತ್ನಾಳ್‌ ಹೇಳಿದ್ದರು. ಸಿಎಂ ಮಾತು ಕೊಟ್ಟ ಹಾಗೆ ನಡೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

7. ಅಬಕಾರಿ ನೀತಿ | ಮನೀಷ್‌ ಸಿಸೋಡಿಯಾ ಮನೆ ಮೇಲೆ ಸಿಬಿಐ ದಾಳಿ
ದೆಹಲಿ ಸರ್ಕಾರದ ಉಪ ಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಅವರ ನಿವಾಸಕ್ಕೆ ಕೇಂದ್ರೀಯ ತನಿಖಾ ದಳ (ಸಿಬಿಐ) ಶುಕ್ರವಾರ ಮುಂಜಾನೆ ದಾಳಿ ನಡೆಸಿದೆ. ದೆಹಲಿ ಸರ್ಕಾರದ ನೂತನ ಅಬಕಾರಿ ನೀತಿ ವಿವಾದಕ್ಕೆ ಸಂಬಂಧಿಸಿದಂತೆ ಈ ರೇಡ್​​​ ನಡೆದಿದೆ ಎನ್ನಲಾಗಿದೆ. ರಾಜಧಾನಿ ಪ್ರದೇಶದ 20 ಕಡೆಗಳಲ್ಲಿ ಸಿಬಿಐ ದಾಳಿ ನಡೆಸಿದೆ. ಅಬಕಾರಿ ನೀತಿ ವಿವಾದಕ್ಕೆ ಸಂಬಂಧಿಸಿದ ಆರೋಪಗಳನ್ನು ಸಿಸೋಡಿಯಾ ನಿರಾಕರಿಸಿದ್ದು, ಸಿಬಿಐ ತನಿಖೆಗೆ ಎಲ್ಲ ನೆರವೂ ನೀಡುವುದಾಗಿ ತಿಳಿಸಿದ್ದಾರೆ. ದೇಶದಲ್ಲಿ ಉತ್ತಮ ಕೆಲಸ ಮಾಡುತ್ತಿರುವವರ ಮೇಲೆ ನಡೆಸಲಾಗುತ್ತಿರುವ ಇಂಥ ದಾಳಿಗಳು ದುರದೃಷ್ಟಕರ ಎಂದಿದ್ದಾರೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.
ಮದ್ಯ ನೀತಿ ತಂದಿಟ್ಟ ಸಂಕಷ್ಟ; ಮನೀಷ್​ ಸಿಸೋಡಿಯಾ ವಿರುದ್ಧ ಸಿಬಿಐ ತನಿಖೆಗೇನು ಕಾರಣಗಳು?

8. (ಹೊಸ ಅಂಕಣ) Brand story | ಕಾಲೇಜು ಡ್ರಾಪ್‌ಔಟ್‌ ಹುಡುಗ ಡಿಮಾರ್ಟ್‌ ಸ್ಟೋರ್ ತೆರೆದು ರಿಟೇಲ್‌ ಕಿಂಗ್‌ ಆಗಿದ್ದು ಹೇಗೆ?!
ದೇಶದ ಉದ್ಯಮ ಜಗತ್ತಿನಲ್ಲಿ ಅನೇಕ ಬ್ರ್ಯಾಂಡ್‌ಗಳು ಬರುತ್ತವೆ, ಅನೇಕ ಬ್ರ್ಯಾಂಡ್‌ಗಳು ಕಾಲಾಂತರದಲ್ಲಿ ಕಣ್ಮರೆಯಾಗುತ್ತವೆ. ಪ್ರತಿ ಬ್ರ್ಯಾಂಡ್‌ ಬೆಳವಣಿಗೆಯ ಹಿಂದೆ ಒಂದು ಸ್ಫೂರ್ತಿದಾಯಕ ಕತೆ, ವ್ಯಕ್ತಿ, ಸನ್ನಿವೇಶವಿರುತ್ತದೆ. ಪ್ರತಿ ಬ್ರ್ಯಾಂಡ್‌ ಮರೆಯಾಗುವುದರ ಹಿಂದೆಯೂ, ಕಲಿಯಬಹುದಾದ ಒಂದು ಪಾಠವಿರುತ್ತದೆ. ಪ್ರತಿ ವಾರ ಇಂತಹ ರೋಚಕ ಮಾಹಿತಿಗಳನ್ನು ನೀಡುವ ಹೊಸ ಅಂಕಣ ಆರಂಭವಾಗಿದೆ. ಪ್ರಸಿದ್ಧ ಡಿಮಾರ್ಟ್‌ ಸ್ಟೋರ್‌ ಹಿಂದಿನ ಕತೆಯನ್ನು ವಿಸ್ತಾರ ನ್ಯೂಸ್‌ ಸಹಾಯಕ ಸುದ್ದಿ ಸಂಪಾದಕ ಕೇಶವ ಪ್ರಸಾದ್‌ ಬಿ. ಅವರು ವಿವರಿಸಿದ್ದಾರೆ. ಅಂಕಣವನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ.

9. ವಿಸ್ತಾರ Explainer | ಈಗ ಯಾರು ಬೇಕಿದ್ರೂ ಕಾಶ್ಮೀರದಲ್ಲಿ ವೋಟ್‌ ಮಾಡಬಹುದಾ?
‘ಸ್ಥಳೀಯರಲ್ಲದವರೂ ಜಮ್ಮು- ಕಾಶ್ಮೀರದಲ್ಲಿ ಈಗ ಮತ ಹಾಕಬಹುದುʼʼ ಎಂದು ಜಮ್ಮು- ಕಾಶ್ಮೀರದ ಮುಖ್ಯ ಚುನಾವಣಾಧಿಕಾರಿ ಹೃದೇಶ್‌ ಕುಮಾರ್‌ ನೀಡಿದ ಹೇಳಿಕೆ ಈಗ ಕಣಿವೆಯಾದ್ಯಂತ ಬಿಜೆಪಿ ಹೊರತುಪಡಿಸಿ ಉಳಿದ ಪಕ್ಷಗಳು ರೊಚ್ಚಿಗೇಳುವಂತೆ ಮಾಡಿದೆ. ಹೃದೇಶ್‌ ಕುಮಾರ್‌ ಹೇಳಿದ್ದೇನು? ʼʼಜಮ್ಮು ಮತ್ತು ಕಾಶ್ಮೀರದಲ್ಲಿ ವಾಸಿಸುತ್ತಿರುವ ಹಾಗೂ ಉದ್ಯೋಗ ಮಾಡುತ್ತಿರುವ ಯಾವುದೇ ಭಾರತೀಯ ಪ್ರಜೆ, ಸ್ಥಳೀಯರಲ್ಲದವರು ಸಹ, ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಬಹುದು ಹಾಗೂ ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾನ ಮಾಡಬಹುದು. ಜಮ್ಮು- ಕಾಶ್ಮೀರದ ಶಾಂತಿ ನೆಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಶಸ್ತ್ರ ಪಡೆಗಳ ಯೋಧರು ಸಹ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು.ʼ ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

10. ಜನ್ಮಾಷ್ಟಮಿಯಂದೇ ಶ್ರೀಕೃಷ್ಣನಿಗೆ ಅಪಮಾನ ಹಿನ್ನೆಲೆ ಅಮೆಜಾನ್‌ ವಿರುದ್ಧ ಹಿಂದೂ ಜನಜಾಗೃತಿ ಸಮಿತಿ ದೂರು
ಶ್ರೀಕೃಷ್ಣ ಜನ್ಮಾಷ್ಟಮಿ ದಿನವೇ ಬೆಂಗಳೂರು ಮೂಲದ ಪೇಂಟಿಂಗ್‌ ಸೆಲ್ಲರ್‌ ಸಂಸ್ಥೆ ಇಂಕೋಲಾಗಿಯು (Inkologie)‌ ಭಗವಾನ್ ಶ್ರೀಕೃಷ್ಣನನ್ನು ಅಶ್ಲೀಲವಾಗಿ ಚಿತ್ರಿಸಿರುವ ಕಲಾಕೃತಿಗಳನ್ನು ಮಾರಾಟ ಮಾಡುತ್ತಿರುವ ಆನ್‌ಲೈನ್‌ ಮಾರಾಟ ಮಳಿಗೆ ಅಮೆಜಾನ್ (Amazon) ವಿರುದ್ಧ ಹಿಂದೂ ಜನಜಾಗೃತಿ ಸಮಿತಿಯು ಬೆಂಗಳೂರಿನಲ್ಲಿ ದೂರು ನೀಡಿದೆ. ಬೆಂಗಳೂರಿನ ಸುಬ್ರಹ್ಮಣ್ಯನಗರ ಪೊಲೀಸ್‌ ಠಾಣೆಯಲ್ಲಿ ಸಮಿತಿಯು ದೂರು ನೀಡಿದ್ದು, “ಶ್ರೀಕೃಷ್ಣನಿಗೆ ಅಪಮಾನ ಮಾಡುವ ಪೇಂಟಿಂಗ್‌ಗಳನ್ನು “INKOLOGIE Hindu Gods Fine Art Painting” ಹೆಸರಿನಲ್ಲಿ ಅಮೆಜಾನ್ ಮಾರಾಟ ಮಾಡಲಾಗುತ್ತಿದೆ. ಇದರಿಂದ ಕೋಟ್ಯಂತರ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿದೆ. ಜನ್ಮಾಷ್ಟಮಿ ದಿನವೇ ಹೀಗೆ ಮಾಡುತ್ತಿರುವುದರ ಹಿಂದೆ ಷಡ್ಯಂತ್ರವಿದೆ. ಹಾಗಾಗಿ, ಅಮೆಜಾನ್‌ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು” ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

Exit mobile version