Site icon Vistara News

ವಿಸ್ತಾರ TOP 10 NEWS | ಕತ್ತಿ ಅಂತಿಮ ಯಾತ್ರೆಯಿಂದ ಭಾರತ್‌ ಜೋಡೊ ಯಾತ್ರೆ ಆರಂಭದವರೆಗಿನ ಪ್ರಮುಖ ಸುದ್ದಿಗಳಿವು

asia cup 2022, Bharat Jodo Yatra, car safety, central vista, janotsava, latest, sbi, SBI jobs, sbi loan, SBI Recruitment 2022, sbi recruitment 2022 online apply, Seat belt, umesh katti, Umesh Katti Dies

ಬೆಂಗಳೂರು: ಸದಾ ತಮ್ಮ ಮೊನಚಿನ ಮಾತುಗಳಿಂದಲೇ ಸುದ್ದಿ, ವಿವಾದ, ಚರ್ಚೆಗೆ ಗ್ರಾಸವಾಗುತ್ತಿದ್ದ ಹಿರಿಯ ರಾಜಕಾರಣಿ ಉಮೇಶ್‌ ಕತ್ತಿ ಅವರ ಅಂತಿಮ ಯಾತ್ರೆಯಲ್ಲಿ ಬೆಳಗಾವಿ ಜಿಲ್ಲೆಯ ಜನರು ಸೇರಿ ರಾಜ್ಯದ ಗಣ್ಯರೆಲ್ಲರೂ ಭಾಗಿಯಾದರು. ಈಗಾಗಲೆ ಎರಡು ಬಾರಿ ಮುಂದೂಡಿಕೆಯಾಗಿರುವ ಜನೋತ್ಸವ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಮೂರನೇ ಬಾರಿ ಮುಂದೂಡಿದೆ. ಕಾಂಗ್ರೆಸ್‌ನ ಮಹತ್ವಾಕಾಂಕ್ಷಿ ಅಭಿಯಾನವಾದ ಭಾರತ್‌ ಜೋಡೊಗೆ ಕನ್ಯಾಕುಮಾರಿಯಿಂದ ಚಾಲನೆ ನೀಡಲಾಗಿದೆ, ಬೆಂಗಳೂರಿನಲ್ಲಿ ಮಳೆಯ ಅಬ್ಬರ ಸ್ವಲ್ಪ ಕಡಿಮೆಯಾಗಿದೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. Umesh Katti | ʼಬೆಲ್ಲದʼ ಮಣ್ಣಿನಲ್ಲಿ ಲೀನವಾದ ಉಮೇಶ್‌ ಕತ್ತಿ
ಮಂಗಳವಾರ ರಾತ್ರಿ ನಿಧನರಾದ ರಾಜ್ಯದ ಅರಣ್ಯ, ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಉಮೇಶ್‌ ಕತ್ತಿ(Umesh Katti) ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಬುಧವಾರ ರಾತ್ರಿ ಅವರ ಸ್ವಗ್ರಾಮವಾದ ಬೆಳಗಾವಿ ಜಿಲ್ಲೆಯ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ನಡೆಯಿತು. ಉತ್ತರ ಕರ್ನಾಟಕ ಪ್ರಬಲ ಧ್ವನಿಯಾಗಿ, ನೇರ ನುಡಿಯ ಮೂಲಕವೇ ಜನ ಮನ ಗೆದ್ದಿದ್ದ ಕತ್ತಿ ಅವರ ಪಾರ್ಥಿವ ಶರೀರವನ್ನು ಅವರ ತಂದೆ ಮತ್ತು ತಾಯಿಯ ಸಮಾಧಿಯ ಪಕ್ಕದಲ್ಲೇ ಸಂಸ್ಕಾರ ಮಾಡುವ ವೇಳೆ ಸಾವಿರಾರು ಅಭಿಮಾನಿಗಳು ಮತ್ತು ಕುಟುಂಬಿಕರು ತಡೆಯಲಾಗದೆ ಕಣ್ಣೀರು ಸುರಿಸಿದರು. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

2. ಉಮೇಶ್‌ ಕತ್ತಿ ನಿಧನ ಹಿನ್ನೆಲೆ: ನಾಳೆ ನಡೆಯಬೇಕಿದ್ದ ಬಿಜೆಪಿ ಜನೋತ್ಸವ ಸೆ.11ಕ್ಕೆ ಮುಂದೂಡಿಕೆ
ಸೆಪ್ಟೆಂಬರ್‌ ೮ರಂದು (ಗುರುವಾರ) ದೊಡ್ಡಬಳ್ಳಾಪುರದಲ್ಲಿ ಆಯೋಜಿಸಲಾಗಿರುವ ಬಿಜೆಪಿ ಸರ್ಕಾರದ ಮೂರನೇ ವರ್ಷಾಚರಣೆ ಮತ್ತು ಬೊಮ್ಮಾಯಿ ನೇತೃತ್ವದ ಸರ್ಕಾರದ ಒಂದನೇ ವರ್ಷಾಚರಣೆ ಕಾರ್ಯಕ್ರಮವನ್ನು ಸೆಪ್ಟೆಂಬರ್‌ ೧೧ಕ್ಕೆ(ಭಾನುವಾರ) ಮುಂದೂಡಲಾಗಿದೆ. ಸಚಿವ ಉಮೇಶ್‌ ಕತ್ತಿ ಅವರ ನಿಧನದ ಹಿನ್ನೆಲೆಯಲ್ಲಿ ಈ ಸಂಭ್ರಮದ ಕಾರ್ಯಕ್ರಮವನ್ನು ಮುಂದೂಡಬೇಕು ಎಂಬ ಶಾಸಕರು ಮತ್ತು ಕೆಲವು ನಾಯಕರ ಪ್ರಬಲ ಹಕ್ಕೊತ್ತಾಯದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

3. Bharat Jodo Yatra | ಕನ್ಯಾಕುಮಾರಿಯಲ್ಲಿ ಕಾಂಗ್ರೆಸ್​; ಭಾರತ್ ಜೋಡೊ ಯಾತ್ರೆಗೆ ರಾಹುಲ್​ ಗಾಂಧಿ ಚಾಲನೆ
ಕಾಂಗ್ರೆಸ್​​ನ ಬಹು ನಿರೀಕ್ಷಿತ ಭಾರತ್ ಜೋಡೋ ಯಾತ್ರೆ (Bharat Jodo Yatra)ಗೆ ಇಂದು ರಾಹುಲ್ ಗಾಂಧಿ ಚಾಲನೆ ನೀಡಿದರು. ಕನ್ಯಾಕುಮಾರಿಯ ಗಾಂಧಿ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್​, ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್​, ಛತ್ತೀಸ್​ಗಢ್​ ಮುಖ್ಯಮಂತ್ರಿ ಭೂಪೇಶ್ ಬಾಘೇಲ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌​ ಮತ್ತು ಇತರ ಹಲವು ಪ್ರಮುಖ ನಾಯಕರು ಇದ್ದರು. ಭಾರತ್ ಜೋಡೋ ಯಾತ್ರೆಗೆ ಚಾಲನೆ ವೇಳೆ ಇಂದು ಡಿಎಂಕೆ ಅಧ್ಯಕ್ಷ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್​ ಅವರು ರಾಷ್ಟ್ರಧ್ವಜವನ್ನು ರಾಹುಲ್​ ಗಾಂಧಿಯವರಿಗೆ ನೀಡಿದರು. ಬಳಿಕ ಇವರಿಬ್ಬರೂ ನಾಯಕರು ತ್ರಿವರ್ಣ ಧ್ವಜಕ್ಕೆ ನಮಿಸಿದರು. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

4. Bengaluru rain | ಮುಳುಗಿದ ಐಷಾರಾಮಿ ಮನೆಗಳು: ಟ್ರ್ಯಾಕ್ಟರ್, ಬೋಟ್‌ ಹತ್ತಿದ ಬಿಲಿಯನೇರ್ ಗಣ್ಯರು
ಸಿಲಿಕಾನ್‌ ವ್ಯಾಲಿ ಎಂದು ಕರೆಸಿಕೊಳ್ಳುವ ಬೆಂಗಳೂರು ಮಹಾಮಳೆಗೆ (Bengaluru rain) ನಲುಗಿ ಹೋಗಿದೆ. ಹಿಂದೆಂದೂ ಕಾಣದ ಮಳೆ ಒಂದು ಕಡೆಯಾದರೆ, ಮಳೆಯಿಂದ ಆಗುತ್ತಿರುವ ಹಾನಿಯಿಂದ ಹೊರಬರಲು ಆಗದೇ ಜನರು ವಿಲವಿಲನೆ ಒದ್ದಾಡುವಂತೆ ಮಾಡಿದೆ.
ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಶ್ರೀಮಂತರ ಮನೆಗಳು ಮಳುಗಡೆಯಾಗಿದೆ. ವಿಲ್ಲಾ ಮತ್ತು ವಿಲ್ಲಾದಲ್ಲಿ ನಿಲ್ಲಿಸಿದ್ದ ಐಷಾರಾಮಿ ಕಾರುಗಳೆಲ್ಲವೂ ನೀರು ಪಾಲಾಗಿದೆ. ಐಷಾರಾಮಿ ಕಾರಿನಲ್ಲಿ ಓಡಾಡುತ್ತಿದ್ದವರು ಈಗ ಟ್ರ್ಯಾಕ್ಟರ್‌ನಲ್ಲಿ ಸವಾರಿ ಮಾಡುವಂತಾಗಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.
NDRF ಪರಿಹಾರ ಸಾಲುವುದಿಲ್ಲ: ವಿಶೇಷ ಎಂದು ಪರಿಗಣಿಸಿ ಅನುದಾನ ನೀಡಲು ಸಿಎಂ ಬೊಮ್ಮಾಯಿ ಮನವಿ

5. SBI Recruitment 2022 | ಎಸ್‌ಬಿಐನಿಂದ 5,008 ಜೂನಿಯರ್‌ ಅಸೋಸಿಯೇಟ್ಸ್‌ ಹುದ್ದೆಗಳಿಗೆ ನೇಮಕ
ದೇಶದ ಅತಿದೊಡ್ಡ ರಾಷ್ಟ್ರೀಕೃತ ಬ್ಯಾಂಕ್‌ ಆದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಜೂನಿಯರ್‌ ಅಸೋಸಿಯೇಟ್ಸ್‌ (ಕಸ್ಟಮರ್‌ ಸಪೋರ್ಟ್‌ ಮತ್ತು ಸೇಲ್ಸ್‌) ಹುದ್ದೆಗಳ ನೇಮಕಕ್ಕೆ (SBI Recruitment 2022) ಅರ್ಜಿ ಆಹ್ವಾನಿಸಿದೆ. ಈ ಬಾರಿ ಒಟ್ಟು 5,008 ಹುದ್ದೆಗಳಿಗೆ ನೇಮಕ ನಡೆಯಲಿದ್ದು, ಕರ್ನಾಟಕದಲ್ಲಿಯೇ 316 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಈ ೩೧೬ ಹುದ್ದೆಗಳನ್ನು ಕನ್ನಡ ಬಲ್ಲವರಿಗೆ ಮಾತ್ರ ಮೀಸಲಿಡಲಾಗಿರುತ್ತದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

6. Car Safety | ಕಾರಿನ ಮುಂದೆ ಕುಳಿತವರು ಮಾತ್ರವಲ್ಲ, ಹಿಂದೆ ಕುಳಿತವರೂ ಸೀಟ್‌ ಬೆಲ್ಟ್‌ ಹಾಕಿಕೊಳ್ಳಲೇಬೇಕು
ಟಾಟಾ ಸನ್ಸ್‌ ಸಂಸ್ಥೆಯ ಮಾಜಿ ‍‍ಚೇರ್ಮನ್ ಸೈರಸ್‌ ಮಿಸ್ತ್ರಿ, ಸೆಪ್ಟೆಂಬರ್‌ ೪ರಂದು ಮುಂಬಯಿನಲ್ಲಿ ನಡೆದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈ ಘಟನೆ ದೇಶದ ಉದ್ಯಮ ಕ್ಷೇತ್ರದ ಗಣ್ಯರನ್ನು ಬೆಚ್ಚಿ ಬೀಳಿಸಿತ್ತು. ಅದರಲ್ಲೂ ಐಷಾರಾಮಿ ಹಾಗೂ ಸುರಕ್ಷಿತ ಕಾರು ಎನಿಸಿಕೊಂಡಿರುವ ಮರ್ಸಿಡೀಸ್‌ ಬೆಂಜ್‌ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅವರು ಹೆಚ್ಚಿನ ಗಾಯಗಳಾದ ಹೊರತಾಗಿಯೂ ಮೃತಪಡಲು ಕಾರಣವೇನು ಎಂಬ ಸಂದೇಹ ಮೂಡಿತ್ತು. ಕಾರು ಜಖಂಗೊಂಡಿರುವ ರೀತಿಯನ್ನು ಗಮನಿಸಿದಾಗ ಆ ರೀತಿ ಅನಿಸಿದ್ದು ಸಹಜ. ಆದರೆ, ಸ್ಥಳ ಮಹಜರಿನ ಬಳಿಕ ಪೊಲೀಸರು ನೀಡಿದ ಹೇಳಿಕೆಯಿಂದ ಸಾವಿಗೆ ಕಾರಣ ಬಹಿರಂಗವಾಗಿತ್ತು. ಪ್ರಯಾಣದ ವೇಳೆ ಸೈರಸ್‌ ಅವರು ಸೀಟ್‌ ಬೆಲ್ಟ್‌ ಹಾಕಿಕೊಂಡಿರದ ಕಾರಣ ಕಾರಿನೊಳಗೆ ಎಸೆಯಲ್ಪಟ್ಟು, ತಲೆಗೆ ಏಟು ಬಿದ್ದು ಪ್ರಾಣ ಕಳೆದುಕೊಂಡಿದ್ದರು. ಸೀಟ್‌ ಬೆಲ್ಟ್‌ ಯಾಕೆ ಕಡ್ಡಾಯ? ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

7. Hijab Row | ಶಾಲೆಗಳಲ್ಲಿ ರುದ್ರಾಕ್ಷಿ, ಶಿಲುಬೆ ಧಾರಣೆ ಉಲ್ಲೇಖಿಸಿ ಸುಪ್ರೀಂ ಕೋರ್ಟ್‌ನಲ್ಲಿ ವಾದ, ನಾಳೆಗೆ ವಿಚಾರಣೆ ಮುಂದೂಡಿಕೆ
ಕಾಲೇಜುಗಳಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ಹಿಜಾಬ್ (Hijab Row) ಧರಿಸುವುದನ್ನು ನಿಷೇಧಿಸಿರುವ ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಗಳನ್ನು ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್, ”ಈ ಪ್ರಕರಣವನ್ನು ನೀವು ಅತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಸಾಧ್ಯವಿಲ್ಲ. ಉಡುಗೆ ತೊಡುಗೆಯ ಹಕ್ಕು ಉಡುಗೆಯನ್ನು ನಿರಾಕರಿಸುವ ಹಕ್ಕನ್ನೂ ಒಳಗೊಂಡಿರುತ್ತದೆ ಅಲ್ಲವೇ?” ಎಂದು ಅರ್ಜಿದಾರರಿಗೆ ಪ್ರಶ್ನಿಸಿದೆ. ಇದೇ ವೇಳೆ, ಶಾಲೆ- ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸಮವಸ್ತ್ರದ ಜತೆಗೆ ರುದ್ರಾಕ್ಷಿ, ಶಿಲುಬೆ ಮೊದಲಾದ ಧಾರ್ಮಿಕ ಸಂಕೇತಗಳನ್ನು ಧರಿಸುವುದು ಪ್ರಸ್ತಾಪವಾಯಿತು. ಏತನ್ಮಧ್ಯೆ, ವಿಚಾರಣೆಯನ್ನು ನಾಳೆಗೆ(ಸೆ.8) ಮುಂದೂಡಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

8. ಬಿಎಸ್‌ವೈ, ಕುಟುಂಬದ ವಿರುದ್ಧದ ಭ್ರಷ್ಟಾಚಾರ ಪ್ರಕರಣ ಮರುಪರಿಗಣಿಸಲು ಹೈಕೋರ್ಟ್‌ ಸೂಚನೆ
ಮುಖ್ಯಮಂತ್ರಿಯಾಗಿದ್ದ ವೇಳೆ ಬಿ.ಎಸ್‌. ಯಡಿಯೂರಪ್ಪ ಮತ್ತು ಅವರ ಕುಟುಂಬಿಕರು ಅಧಿಕಾರ ದುರ್ಬಳಕೆ ಮಾಡಿಕೊಂಡು ಬಿಡಿಎ ವಸತಿ ಯೋಜನೆ ಗುತ್ತಿಗೆ ನೀಡುವ ಸಲುವಾಗಿ ಲಂಚ ಸ್ವೀಕರಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಸಲ್ಲಿಸಿರುವ ಕ್ರಿಮಿನಲ್‌ ಮನವಿಯನ್ನು ಬುಧವಾರ ಕರ್ನಾಟಕ ಹೈಕೋರ್ಟ್‌ ಭಾಗಶಃ ಎತ್ತಿ ಹಿಡಿದಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

9. ವಿಸ್ತಾರ Explainer | ಮನಮೋಹಕ ಸೆಂಟ್ರಲ್ ವಿಸ್ಟಾ ಅವೆನ್ಯೂ! ಗುರುವಾರ ಮೋದಿ ಉದ್ಘಾಟನೆ
ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಯೋಜನೆಯ ಒಂದು ಭಾಗವಾಗಿರುವ ಸೆಂಟ್ರಲ್ ವಿಸ್ಟಾ ಅವೆನ್ಯೂ(ರಾಜಪಥ)ವನ್ನು ಸೆ.8, ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಲಿದ್ದಾರೆ. ಸೆಂಟ್ರಲ್ ವಿಸ್ಟಾಗೆ 2019ರಲ್ಲಿ ಚಾಲನೆ ನೀಡಲಾಗಿದ್ದು, 2026ರಲ್ಲಿ ಇಡೀ ಪ್ರಾಜೆಕ್ಟ್ ಪೂರ್ಣಗೊಳ್ಳಲಿದೆ. ರಾಷ್ಟ್ರಪತಿ ಭವನ, ಹೊಸ ಪಾರ್ಲಿಮೆಂಟ್ ಭವನ, ಮರು ಬಳಕೆಯಾಗಲಿರುವ ನಾರ್ಥ್ ಮತ್ತು ಸೌಥ್ ಬ್ಲಾಕ್, ಹಳೆ ಪಾರ್ಲಿಮೆಂಟ್ ಹಾಗೂ ಇಂಡಿಯಾ ಗೇಟ್ ಸೆಂಟ್ರಲ್ ವಿಸ್ಟಾ ಆಕರ್ಷಣೆಗಳಾಗಿರಲಿವೆ. ಸೆಂಟ್ರಲ್ ವಿಸ್ಟಾ 3.2 ಕಿ.ಮೀ. ಉದ್ದ ಜಾಗದಲ್ಲಿ ಹರಡಿಕೊಂಡಿದೆ. ಒಟ್ಟು 13,450 ಕೋಟಿ ರೂ. ವೆಚ್ಚದಲ್ಲಿ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲಾಗಿದೆ. ನಾಳೆ(ಸೆ.8) ಉದ್ಘಾಟನೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸೆಂಟ್ರಲ್ ವಿಸ್ಟಾ ಪುನರಾಭಿವೃದ್ದಿ ಯೋಜನೆಯ ಫುಲ್ ಡಿಟೇಲ್ಸ್ ಇಲ್ಲಿದೆ.

10. Asia Cup | ಪಾಕ್‌, ಲಂಕಾ ವಿರುದ್ಧ ಸೋತರೂ ಭಾರತ ಫೈನಲ್‌ಗೇರಲು ಇರುವ ಲೆಕ್ಕಾಚಾರ ಯಾವವು?
ಬ್ಯಾಟಿಂಗ್‌ನಲ್ಲಿ ಕಾಣದ ಅಬ್ಬರ, ಬೌಲಿಂಗ್‌ನಲ್ಲಿ ಮೊನಚಿನ ಬರ ಹಾಗೂ ಫೀಲ್ಡಿಂಗ್‌ನಲ್ಲಿ ತೋರಿದ ನಿರ್ಲಕ್ಷ್ಯದಿಂದಾಗಿ ಏಷ್ಯಾ ಕಪ್‌ (Asia Cup) ಟೂರ್ನಿಯಲ್ಲಿ ಸುಲಭವಾಗಿ ಫೈನಲ್‌ಗೇರುವ ಅವಕಾಶವನ್ನು ಭಾರತ ತಂಡವು ಕಷ್ಟಸಾಧ್ಯ ಎನ್ನುವ ಹಂತಕ್ಕೆ ತಂದಿದೆ. ಆದರೆ, ಟೂರ್ನಿಯ ಸೂಪರ್‌ 4ರ ಹಂತದಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ವಿರುದ್ಧ ಸೋತರೂ ರೋಹಿತ್‌ ಪಡೆಯು ಫೈನಲ್‌ಗೇರುವ ಅವಕಾಶ ಹೊಂದಿದೆ. ಇದಕ್ಕೆ ಬೇರೆ ತಂಡಗಳ ಸೋಲು, ರನ್‌ರೇಟ್‌ ಮಾನದಂಡ ಸೇರಿ ಹಲವು ಲೆಕ್ಕಾಚಾರವಿದೆ. ಹಾಗಾದರೆ, ಏನು ಆ ಲೆಕ್ಕಾಚಾರ ಎಂಬುದರ ಸಂಕ್ಷಿಪ್ತ ವಿವರ ಹೀಗಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

Exit mobile version