ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿ ಮೂರು ವರ್ಷವಾಗಿದ್ದರ ಕಾರ್ಯಕ್ರಮದ ಮೂಲಕ ಹೇಗಾದರೂ ವಿಧಾನಸಭೆ ಚುನಾವಣೆ ಅಭಿಯಾನಕ್ಕೆ ಚಾಲನೆ ನೀಡಬೇಕೆಂಬ ರಾಜ್ಯ ಬಿಜೆಪಿ ಹಾಗೂ ಸರ್ಕಾರದ ಪ್ರಯತ್ನಕ್ಕೆ ಎದುರಾದ ವಿಘ್ನಗಳು ಅನೇಕ. ಇದೀಗ ಜನೋತ್ಸವ ಹೆಸರಿನ ಕುರಿತೂ ಚರ್ಚೆಗಳು ನಡೆದು, ಬದಲಾದ ಹೆಸರಿನಲ್ಲೂ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ.
ಆಗಸ್ಟ್ 3 ರಂದು ದಾವಣಗೆರೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹುಟ್ಟುಹಬ್ಬದ ಕಾರ್ಯಕ್ರಮವನ್ನು ಬೃಹತ್ ಪ್ರಮಾಣದಲ್ಲಿ ಆಯೋಜನೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಪ್ರಾರಂಭದಲ್ಲಿ ಸಿದ್ದರಾಮೋತ್ಸವ ಎಂಬ ಹೆಸರನ್ನು ಅನೌಪಚಾರಿಕವಾಗಿ ಇರಿಸಲಾಗಿತ್ತು. ನಂತರ ಅಧಿಕೃತವಾಗಿ ಹೆಸರನ್ನು ಸಿದ್ದರಾಮಯ್ಯ-75: ಅಮೃತ ಮಹೋತ್ಸವ ಎಂದು ಬದಲಾಯಿಸಲಾಯಿತು. ಆದರೂ ಸಾಮಾನ್ಯ ಜನರ ಬಾಯಲ್ಲಿ ಸಿದ್ದರಾಮೋತ್ಸವ ಎಂದೇ ಉಳಿದುಕೊಂಡಿದೆ.
ಮೊದಲ ವಿಘ್ನ
ಸಿದ್ದರಾಮೋತ್ಸವಕ್ಕೆ ಸಿದ್ಧತೆಗಳು ನಡೆಯುತ್ತಿರುವಂತೆಯೇ, ಅದಕ್ಕೂ ಮೊದಲೇ ಬಿಜೆಪಿ ವತಿಯಿಂದಲೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜಿಸಲಾಯಿತು. ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ರಚನೆಯಾಗಿ ಜುಲೈ 28ಕ್ಕೆ ಒಂದು ವರ್ಷವಾಗುವುದರಿಂದ ಜನೋತ್ಸವ ಎಂದು ವರ್ಚಾರಣೆ ಮಾಡುವ ತೀರ್ಮಾನ ಮಾಡಲಾಯಿತು. ಆದರೆ ಇದಕ್ಕೆ ಪಕ್ಷದೊಳಗಿಂದಲೇ ಭಿನ್ನ ಸ್ವರ ಕೇಳಿಬಂದಿತು.
ಕೇವಲ ಒಂದು ವರ್ಷದ ಆಚರಣೆ ಮಾಡಿದರೆ, ಹಿಂದೆ ಎರಡು ವರ್ಷದ ಬಿಜೆಪಿ ಆಡಳಿತದ ಯೋಜನೆಗಳ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ. ಅದಕ್ಕಿಂತಲೂ ಹೆಚ್ಚಾಗಿ, ಈ ಅವಧಿಯಲ್ಲಿ ಸಿಎಂ ಆಗಿದ್ದ ಬಿ.ಎಸ್. ಯಡಿಯೂರಪ್ಪ ಅವರನ್ನು ಕಡೆಗಣಿಸಿದ ಸಂದೇಶ ನೀಡಿದಂತಾಗುತ್ತದೆ ಎಂಬ ಮಾತು ಕೇಳಿಬಂದಿತು. ಇದಕ್ಕಾಗಿ, ಬಿಜೆಪಿ ಸರ್ಕಾರದ ಮೂರು ವರ್ಷ-ಬೊಮ್ಮಾಯಿ ಸರ್ಕಾರದ ಒಂದು ವರ್ಷ ಎಂದು ಬದಲಾವಣೆ ಮಾಡಲಾಯಿತು. ಕಾರ್ಯಕ್ರಮದ ಲೋಗೊದಲ್ಲೂ ಬದಲಾವಣೆ ಮಾಡಿಕೊಳ್ಳಲಾಯಿತು.
ಎರಡನೇ ವಿಘ್ನ
ಜುಲೈ 28ಕ್ಕೆ ದೊಡ್ಡಬಳ್ಳಾಪುರದಲ್ಲಿ ಕಾರ್ಯಕ್ರಮ ನಡೆಯಲು ಇನ್ನು ಎರಡು ದಿನ ಮಾತ್ರವೇ ಇತ್ತು. ಜುಲೈ 26ರಂದು ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಬಿಜೆಪಿ ಯುವಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯಾಯಿತು. ಮಾರನೆಯ ದಿನ ಸ್ಥಳಕ್ಕೆ ತೆರಳಿದ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು ಅವರ ಕಾರನ್ನೇ ಹಿಡಿದು ಅಲುಗಾಡಿಸಿದರು.
ನಿರಂತರ ಬಿಜೆಪಿ ಹಾಗೂ ಸಂಘಪರಿವಾರದ ಕಾರ್ಯಕರ್ತರ ಮೇಲೆ ದಾಳಿಗಳಾಗುತ್ತಿದ್ದರೂ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ರಾಜ್ಯಾದ್ಯಂತ ಬಿಜೆಪಿ ಯುವಮೋರ್ಚಾ ಪದಾಧಿಕಾರಿಗಳು ರಾಜೀನಾಮೆ ಪರ್ವಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮ ನಡೆಸಿದರೆ ಎಲ್ಲಿಯೂ ಪ್ರತಿಭಟನೆಯ ಬಿಸಿ ಎದುರಿಸಬೇಕಾಗುತ್ತದೆ ಎಂದು ಜುಲೈ 27ರ ತಡರಾತ್ರಿ ತುರ್ತು ಸುದ್ದಿಗೋಷ್ಠಿ ನಡೆಸಿದ ಸಿಎಂ ಬೊಮ್ಮಾಯಿ, ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಘೋಷಿಸಿದರು.
ಮೂರನೇ ವಿಘ್ನ
ಜುಲೈ 28ರಂದು ನಡೆಯಬೇಕಿದ್ದ ಕಾರ್ಯಕ್ರಮವನ್ನು ಆಗಸ್ಟ್ 28ಕ್ಕೆ ನಿಗದಿಪಡಿಸಲಾಯಿತು. ಒಂದು ತಿಂಗಳು ತಡವಾಗಿಯಾದರೂ ಕಾರ್ಯಕ್ರಮಗಳು ನಡೆಯುತ್ತವೆ ಎಂಬ ನಿರೀಕ್ಷೆಯಿತ್ತು. ಆದರೆ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ದಿನಾಂಕ ಸಿಗದೆ ಮತ್ತೆ ಮುಂದೂಡಿಕೆ ಆಯಿತು. ಕಾರ್ಯಕ್ರಮವನ್ನು ಸೆಪ್ಟೆಂಬರ್ 8ಕ್ಕೆ ನಿಗದಿಪಡಿಸಲಾಯಿತು.
ನಾಲ್ಕನೇ ವಿಘ್ನ
ಸೆಪ್ಟೆಂಬರ್ 8ಕ್ಕೆ ಬೃಹತ್ ಪ್ರಮಾಣದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು, ಕಾರ್ಯಕ್ರಮದ ಉಸ್ತುವಾರಿ ಹೊತ್ತ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಸಾಕಷ್ಟು ತಯಾರಿ ಮಾಡಿಕೊಂಡಿದ್ದರು. ಅದಾಗಲೇ ಬೃಹತ್ ಗಾತ್ರದ ಪೆಂಡಾಲ್, ವೇದಿಕೆಯೂ ಸಿದ್ಧವಾಗಿತ್ತು. ಇದೇ ವೇಳೆ ಸೆಪ್ಟೆಂಬರ್ 6ರ ರಾತ್ರಿ, ಸರ್ಕಾರದ ಹಿರಿಯ ಸಚಿವ ಉಮೇಶ್ ಕತ್ತಿ ಹೃದಯಾಘಾತದಿಂದ ಹಠಾತ್ ನಿಧನರಾದರು.
ಈ ಸಂದರ್ಭದಲ್ಲೂ ಜನೋತ್ಸವ ಕಾರ್ಯಕ್ರಮ ನಡೆಯುವುದನ್ನು ತಪ್ಪಿಸಬಾರದು ಎಂಬ ಕಾರಣಕ್ಕೆ, ಕತ್ತಿ ಅವರು ಪ್ರತಿನಿಧಿಸುವ ಬೆಳಗಾವಿ ಜಿಲ್ಲೆಗೆ ಮಾತ್ರವೇ ಸೀಮಿತವಾಗಿ ಶಾಲಾ ಕಾಲೇಜುಗಳಿಗೆ ಸೆಪ್ಟೆಂಬರ್ 7ರಂದು ರಜೆಯನ್ನು ಸಿಎಂ ಬೊಮ್ಮಾಯಿ ಘೋಷಣೆ ಮಾಡಿದರು. ಸೆಪ್ಟೆಂಬರ್ 7ರಂದು ಹೊರಡಿಸಿದ ಆದೇಶದಲ್ಲೂ, ಒಂದು ದಿನಕ್ಕೆ ಮಾತ್ರವೇ ರಾಜ್ಯಾದ್ಯಂತ ಶೋಕಾಚರಣೆ ಎಂದು ಘೋಷಿಸಲಾಯಿತು. ಸಾಮಾನ್ಯವಾಗಿ ಹಾಲಿ ಸಚಿವರು, ಗಣ್ಯರು ನಿಧನರಾದಾಗ ಮೂರು ದಿನ ಶೋಕಾಚರಣೆ ಘೋಷಿಸಲಾಗುತ್ತದೆ. ಕಾರ್ಯಕ್ರಮ ನಡೆಸುವ ಉದ್ದೇಶಕ್ಕಾಗಿ ಸರ್ಕಾರ ಶೋಕಾಚರಣೆಯನ್ನೇ ಮೊಟಕುಗೊಳಿಸಿದೆ ಎಂಬ ಮಾತುಗಳು ಕೇಳಿಬಂದವು. ನಂತರ ಸರ್ಕಾರ ಶೋಕಾಚರಣೆಯನ್ನು ಮೂರು ದಿನಕ್ಕೆ ವಿಸ್ತರಣೆ ಮಾಡಿತು, ಜನೋತ್ಸವ ಕಾರ್ಯಕ್ರಮವನ್ನು ಸೆಪ್ಟೆಂಬರ್ 11ರ ಭಾನುವಾರಕ್ಕೆ ಮುಂದೂಡಿತು. ಪಕ್ಷದ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಸಹ ಇದೇ ಘೋಷಣೆ ಮಾಡಿದರು.
ಐದನೇ ವಿಘ್ನ
ಸೆಪ್ಟೆಂಬರ್ 11ರ ಭಾನುವಾರವಾದರೂ ಕಾರ್ಯಕ್ರಮ ನಡೆಯಬಹುದೆಂಬ ನಿರೀಕ್ಷೆ ಕೇವಲ ಐದು ಗಂಟೆಗಳ ಅವಧಿಯಲ್ಲಿ ಸುಳ್ಳಾಯಿತು. ಈ ನಡುವೆ ಟ್ವೀಟ್ ಮಾಡಿದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಸೆಪ್ಟೆಂಬರ್ 10ರ ಶನಿವಾರ ಕಾರ್ಯಕ್ರಮ ನಡೆಯುತ್ತದೆ ಎಂದರು.
ಅಸಲಿಗೆ ಸೆಪ್ಟೆಂಬರ್ 11ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿಯನ್ನು ನಡೆಸಲಾಗುತ್ತದೆ ಎಂದು ಈ ಹಿಂದೆಯೇ ಘೋಷಿಸಲಾಗಿತ್ತು. ಇದರ ಮಾಹಿತಿ ಹಾಗೂ ಸಮನ್ವಯದ ಕೊರತೆಯಿಂದಾಗಿ ಸೆಪ್ಟೆಂಬರ್ 11 ಎಂದು ಘೊಷಿಸಲಾಯಿತು. ತಪ್ಪಿನ ಅರಿವಾಗುತ್ತಿದ್ದಂತೆಯೇ ಸೆಪ್ಟೆಂಬರ್ 10ಕ್ಕೆ ಮರುನಿಗದಿ ಮಾಡಲಾಯಿತು. ಅಚ್ಚರಿಯೆಂದರೆ, ಸೆಪ್ಟೆಂಬರ್ 11ರಂದು ನಿಗದಿಯಾಗಿದ್ದ ರಾಜ್ಯ ಕಾರ್ಯಕಾರಿಣಿ ಸಭೆಯನ್ನೂ ಮುಂದೂಡಲಾಗಿದೆ ಎಂದು ಸುಧಾಕರ್ ಘೊಷಣೆ ಮಾಡಿದರು.
ಆರನೇ ವಿಘ್ನ
ಜನೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲೇ ರಾಜ್ಯಾದ್ಯಂತ ವಿಧಾನಸಭಾ ಚುನಾವಣೆ ಸಲುವಾಗಿ ಅಭಿಯಾನ ಆರಂಭಿಸಲು ಬಿಜೆಪಿ ನಿರ್ಧರಿಸಿತ್ತು. ಸಿಎಂ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಒಂದು ತಂಡ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ನೇತೃತ್ವದಲ್ಲಿ ಮತ್ತೊಂದು ತಂಡ ರಚನೆ ಮಾಡಲಾಯಿತು. ಎರಡೂ ತಂಡಗಳು ತಲಾ 54 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿ ರ‍್ಯಾಲಿ ಮಾಡುವ ಯೋಜನೆಯಿತ್ತು. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬಳ್ಳಾರಿ, ಕಲಬುರಗಿ ಸೇರಿ ಆರು ಕಡೆಗಳಲ್ಲಿ ಬೃಹತ್ ಸಮಾವೇಶಗಳ ಯೋಜನೆ ಮಾಡಲಾಗಿತ್ತು. ಈ ಪ್ರವಾಸವನ್ನೂ ಸದ್ಯದ ಮಟ್ಟಿಗೆ ಬಿಜೆಪಿ ಮುಂದೂಡಿದೆ.
ಏಳನೇ ವಿಘ್ನ
ಇದೀಗ ಸೆಪ್ಟೆಂಬರ್ 10ರಂದು ಜನೋತ್ಸವ ನಿಗದಿಯಾಗಿದೆ. ಆದರೆ ಜನೋತ್ಸವ ಎಂಬ ಹೆಸರನ್ನೇ ಬದಲಾಯಿಸಿ ಜನ ಸ್ಪಂದನ ಎಂದು ಸುಧಾಕರ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಜನೋತ್ಸವಕ್ಕೆ ಪದೇಪದೆ ವಿಘ್ನಗಳು ಎದುರಾಗುತ್ತಿದೆ. ಹೆಸರು ಬದಲಾಯಿಸುವುದರಿಂದಾದರೂ ಕಾರ್ಯಕ್ರಮ ನಡೆಯಬಹುದೆಂಬ ನಿರೀಕ್ಷೆಯಲ್ಲಿ ಜನ ಸ್ಪಂದನ ಎಂದು ಬದಲಾವಣೆ ಮಾಡಲಾಗಿದೆ ಎಂಬ ಮಾತುಗಳು ಪಕ್ಷದಲ್ಲಿ ಕೇಳಿಬರುತ್ತಿವೆ.
ಸಿದ್ದರಾಮೋತ್ಸವದ ಪ್ರಭಾವದಲ್ಲಿ ಜನೋತ್ಸವ ಎಂಬ ಹೆಸರನ್ನು ಇರಿಸಲಾಗಿತ್ತು. ಈ ಪ್ರಭಾವದಿಂದ ಕಾರ್ಯಕ್ರಮವನ್ನು ಹೊರತರುವ ಪ್ರಯತ್ನ ಎಂದೂ ಹೇಳಲಾಗುತ್ತಿದೆ. ಇದೀಗ ರಾಜ್ಯಾದ್ಯಂತ ಮಳೆ ಅನಾಹುತ ನಡೆಯುತ್ತಿರುವಾಗ ಜನೋತ್ಸವ ಎಂದು ಉತ್ಸವ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಪ್ರಚಾರ ಆರಂಭಿಸಿತ್ತು. ಇದು ಜನೋತ್ಸವ ಅಲ್ಲ ಭ್ರಷ್ಟೋತ್ಸವ ಎಂದು ಸಾಮಾಜಿಕ ಜಾಲತಾಣದಲ್ಲಿ ಆರೋಪ ಮಾಡಿತ್ತು.
ಜನ ಸ್ಪಂದನ ಎಂಬ ಹೆಸರಿನ ಕುರಿತೂ ಕಾಂಗ್ರೆಸ್ ಟೀಕೆ ಆರಂಭಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಜನ ಸ್ಪಂದನಕ್ಕೂ ಮೊದಲು ಸರ್ಕಾರ ಜಲ ಸ್ಪಂದನ ಮಾಡಬೇಕು. ‘ರಾಜ್ಯ ಸರ್ಕಾರ ಬೆಂಗಳೂರಿನ ಐಟಿ ಕಾರಿಡಾರ್ ನಲ್ಲಿ ಜಲಸಂಚಾರ ಕ್ಕಾಗಿ ಬೋಟ್ ಫ್ಯಾಕ್ಟರಿ ಆರಂಭಿಸುವುದು ಉತ್ತಮ. ಬಿಜೆಪಿ ಅವರು ಜನಸ್ಪಂದನ ಬದಲಾಗಿ ಮೊದಲು ಜಲಸ್ಪಂದನ ಕೆಲಸ ಮಾಡಲಿ ಎಂದಿದ್ದಾರೆ.
ಎಂಟನೇ ವಿಘ್ನ?
ಏಳು ವಿಘ್ನಗಳನ್ನು ದಾಟಿ ಮುಂದೆ ಬಂದಿರುವ ದೊಡ್ಡಬಳ್ಳಾಪುರದ ಕಾರ್ಯಕ್ರಮ ಇದೀಗ ಶನಿವಾರ ನಡೆಯುತ್ತದೆ ಎನ್ನಲಾಗುತ್ತಿದೆ. ಇನ್ನು ಒಂದು ದಿನ ಮಾತ್ರವೇ ಬಾಕಿಯಿದ್ದು, ಈಗಲಾದರೂ ಯಾವುದೇ ವಿಘ್ನ ಇಲ್ಲದೆ ಕಾರ್ಯಕ್ರಮ ನಡೆಯಲಿ ಎಂದು ಪಕ್ಷದ ನಾಯಕರು ಪ್ರಾರ್ಥನೆ ಮಾಡುತ್ತಿದ್ದಾರೆ. ಆದರೆ, ಪ್ರತಿಪಕ್ಷ ಕಾಂಗ್ರೆಸ್ ಮಾತ್ರ ಬಿಜೆಪಿಯಲ್ಲಿರುವ ಗೊಂದಲ ಹಾಗೂ ಇಕ್ಕಟ್ಟನ್ನು ಸದುಪಯೋಗಪಡಿಸಿಕೊಂಡು ದಾಳಿ ನಡೆಸುತ್ತಿದೆ.
ಇದನ್ನೂ ಓದಿ | ಬಿಜೆಪಿ ಜನೋತ್ಸವ ದಿನಾಂಕ ಮತ್ತೆ ಬದಲು, ಭಾನುವಾರ ಅಲ್ಲ ಶನಿವಾರವೇ ಜನಸ್ಪಂದನ ಹೆಸರಿನಲ್ಲಿ ಕಾರ್ಯಕ್ರಮ