ರಮೇಶ ದೊಡ್ಡಪುರ, ಬೆಂಗಳೂರು
ದೇಶದಲ್ಲೆ ಅತ್ಯಧಿಕ ಸ್ಟಾರ್ಟಪ್‌ಗಳನ್ನು ಹೊಂದಿರುವ ರಾಜ್ಯ, ತಂತ್ರಜ್ಞಾನದ ರಾಜಧಾನಿ ಎಂಬ ಹೆಗ್ಗಳಿಕೆ ಹೊಂದಿರುವ ಕರ್ನಾಟಕ ರಾಜ್ಯಕ್ಕೆ ಮುಂದಿನ ಎಂಟು ವರ್ಷದಲ್ಲಿ ಹೆಚ್ಚಿನ ಸವಾಲುಗಳು ಹಾಗೂ ಜನಸಂಖ್ಯೆಯ ಗಂಡಾಂತರ ಎದುರಾಗಲಿದೆ ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ಮುಖ್ಯವಾಗಿ, ಕುಸಿಯುತ್ತಿರುವ ಫಲವತ್ತತೆ, ಯುವಕರ ಸಂಖ್ಯೆ ಕುಸಿತ, ಹಿರಿಯ ನಾಗರಿಕರ ಸಂಖ್ಯೆ ಹೆಚ್ಚಳದಂತಹ ಅನೇಕ ಸಂಗತಿಗಳನ್ನು ತಿಳಿಸಿಕೊಟ್ಟಿದೆ.
ಇನ್ಫೋಸಿಸ್ ಸಹ ಸಂಸ್ಥಾಪಕ ಟಿ.ವಿ. ಮೋಹನದಾಸ್ ಪೈ ಹಾಗೂ ಆರ್ಥಿಕ ತಜ್ಞೆ ನಿಶಾ ಹೊಳ್ಳ ಅವರು ಸಿದ್ಧಪಡಿಸಿ, ಸಿಎಂ ಬಸವರಾಜ ಬೊಮ್ಮಾಯಿ ಮಂಗಳವಾರ ಬಿಡುಗಡೆ ಮಾಡಿದ ʼಕರ್ನಾಟಕ- $೧ ಲಕ್ಷ ಕೋಟಿ ಜಿಡಿಪಿ ಮಹತ್ವಾಕಾಂಕ್ಷೆʼ ಕುರಿತ ವರದಿಯಲ್ಲಿ ಇಂತಹ ಅಂಶಗಳನ್ನು ತಿಳಿಸಲಾಗಿದೆ.
ಮುಖ್ಯವಾಗಿ ಕರ್ನಾಟಕವನ್ನು 2026ರ ವೇಳೆಗೆ $1 ಲಕ್ಷ ಕೋಟಿ ಜಿಡಿಪಿಯ ಆರ್ಥಿಕತೆಯನ್ನಾಗಿ ರೂಪಿಸಲು ಸರ್ಕಾರಕ್ಕೆ ಮಾರ್ಗದರ್ಶಿ ಸೂತ್ರಗಳನ್ನು ಈ ವರದಿ ನೀಡಿದೆ. 2025ರ ವೇಳೆಗೆ ಭಾರತವನ್ನು $5 ಲಕ್ಷ ಕೋಟಿ ಜಿಡಿಪಿಯ ಆರ್ಥಿಕತೆಯನ್ನಾಗಿ ರೂಪಿಸುವುದಾಗಿ ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದರು. ಆದರೆ ಈ ನಡುವೆ ಕೋವಿಡ್ ಆಗಮಿಸಿದರಿಂದ ಗುರಿಯನ್ನು 2026ಕ್ಕೆ ಮುಂದೂಡಲಾಗಿದೆ. ಈ $5 ಲಕ್ಷ ಕೋಟಿ ಜಿಡಿಪಿ ಆರ್ಥಿಕತೆಯಲ್ಲಿ ಕರ್ನಾಟಕವು $1 ಲಕ್ಷ ಕೋಟಿ ಅಂದರೆ ಒಟ್ಟು ದೇಶದ ಜಿಡಿಪಿಯ ಶೇ.20 ಪಾಲನ್ನು ಕರ್ನಾಟಕ ಸಾಧಿಸಬೇಕು ಎಂಬ ಮಹತ್ವಾಕಾಂಕ್ಷಿ ಗುರಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದರು. ಆದರೆ ಇದೀಗ ಮೋಹನದಾಸ್ ಪೈ ಹಾಗೂ ನಿಶಾ ಹೊಳ್ಳ ಸಿದ್ಧಪಡಿಸಿರುವ ವರದಿಯಲ್ಲಿ, ಕರ್ನಾಟಕವನ್ನು 2032ಕ್ಕೆ ಅಂದರೆ ಭಾರತದ ಜಿಡಿಪಿಯು $10 ಲಕ್ಷ ಕೋಟಿ ಡಾಲರ್ ಆದಾಗ $1 ಲಕ್ಷ ಕೋಟಿಗೆ ಕೊಂಡೊಯ್ಯುವ ಗುರಿ ನೀಡಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ಗುರಿ ಅಸಾಧ್ಯ ಎನ್ನುವುದನ್ನು ವರದಿ ಪರೋಕ್ಷವಾಗಿ ತಿಳಿಸಿಕೊಟ್ಟಿದೆ.
ಇದನ್ನೂ ಓದಿ | ಕರ್ನಾಟಕದ ಆರ್ಥಿಕತೆಯನ್ನು1 ಲಕ್ಷ ಕೋಟಿ ಡಾಲರ್‌ಗೆ ಹೆಚ್ಚಿಸುವ ಗುರಿ: ಸಿಎಂ ಬೊಮ್ಮಾಯಿ
ಶೇ.10 ಪಾಲು ಹೊಂದಬೇಕು
ಭಾರತವು ವಾರ್ಷಿಕ ಶೇ.12ಸಿಎಜಿಆರ್ ದರದಲ್ಲಿ ಏರಿಕೆ ಕಾಣುತ್ತ ಸಾಗಿದರೆ 2032ಕ್ಕೆ $10 ಲಕ್ಷ ಕೋಟಿ ಆರ್ಥಿಕತೆ ಆಗುತ್ತದೆ. ಆದರೆ ಕರ್ನಾಟಕ ಈ ವೇಗದಲ್ಲಿ ಸಾಗಿದರೆ ಗುರಿ ಮುಟ್ಟಲು ಆಗುವುದಿಲ್ಲ. ಇದೀಗ ದೇಶದ ಜಿಡಿಪಿಯಲ್ಲಿ ಕರ್ನಾಟಕದ ಪಾಲು ಶೇ. 8.7 ಇದೆ. ಈ ಪ್ರಮಾಣವನ್ನು ಶೇ.10ಕ್ಕೆ ಕೊಡೊಯ್ಯಬೇಕೆಂದರೆ ಕರ್ನಾಟಕವು ಶೇ.16.3 ದರದಲ್ಲಿ ಏರಿಕೆ ಕಾಣಬೇಕಾಗುತ್ತದೆ ಎನ್ನುವುದನ್ನು ಮೋಹನದಾಸ್ ಪೈ ಹಾಗೂ ನಿಶಾ ಹೊಳ್ಳ ವರದಿ ತಿಳಿಸಿದೆ.
ಕರ್ನಾಟಕದ ಒಟ್ಟು ಆರ್ಥಿಕತೆಯಲ್ಲಿ ಶೇ.66 ಪಾಲನ್ನು ಸೇವಾ ವಲಯವೇ ಪಡೆದುಕೊಂಡಿದೆ. ಅದರಲ್ಲೂ ಸಾಫ್ಟ್‌ವೇರ್ ಕ್ಷೇತ್ರದ ಪಾಲು ಇದರಲ್ಲಿ ಅಗ್ರಗಣ್ಯ. ಕೈಗಾರಿಕಾ ವಲಯ ಶೇ.೨೦, ಕೃಷಿ ವಲಯದ ಪಾಲು ಶೇ.33.8 ಆದರೆ ಇದು ಕ್ರಮೇಣ ಇಳಿಕೆ ಆಗುತ್ತಿದೆ.
ಜನಸಂಖ್ಯೆಯ ಅಪಾಯ
ಕರ್ನಾಟಕದಲ್ಲಿ ಸದ್ಯ 6.6 ಕೋಟಿ ಜನಸಂಖ್ಯೆ ಇದ್ದು, 2030ರ ವೇಳೆಗೆ 7.06 ಕೋಟಿ ಆಗುತ್ತದೆ. ಫಲವತ್ತತೆ ದರವು ಕರ್ನಾಟಕದಲ್ಲಿ ಕುಸಿಯುತ್ತಿದೆ ಎಂದು ವರದಿ ಆತಂಕ ವ್ಯಕ್ತಪಡಿಸಿದೆ. ಸದ್ಯ ಫಲವತ್ತತೆ ದರವು 1.೭ ಇದ್ದು, ಈಗಾಗಲೆ ದೇಶದ ಸರಾಸರಿಗಿಂತ (೨) ಕಡಿಮೆ ಇದೆ. 2030ರ ವೇಳೆಗೆ ಈ ಪ್ರಮಾಣವು ಮತ್ತಷ್ಟು ಕುಸಿದು 1.5 ಆಗುತ್ತದೆ.ಅದಕ್ಕಿಂತಲೂ ಆಘಾತಕಾರಿ ಸಂಗತಿ ಎಂದರೆ ಕರ್ನಾಟಕದಲ್ಲಿ ಯುವಕರ ಸಂಖ್ಯೆ ಕಡಿಮೆ ಆಗುತ್ತಿದೆ. ಸದ್ಯ 18-23 ವಯೋಮಾನದವರ ಪ್ರಮಾಣ ಶೇ. 10.2 ಇದೆ. 60 ವರ್ಷ ಮೀರಿದವರ ಪ್ರಮಾಣ ಶೇ.11.5 ಇದೆ. ಆದರೆ 2030ರ ವೇಳೆಗೆ 18-23 ವಯೋಮಾನದವರ ಪ್ರಮಾಣ ಶೇ.8.7ಕ್ಕೆ ಕುಸಿದರೆ 60 ವರ್ಷ ಮೀರಿದವರ ಸಂಖ್ಯೆ ಶೇ. 15ಕ್ಕೆ ಹೆಚ್ಚಾಗಲಿದೆ ಎಂದು ವರದಿ ಹೇಳಿದೆ.
ಅಂದರೆ 2030ರ ವೇಳೆಗೆ ರಾಜ್ಯದಲ್ಲಿ ಹಿರಿಯ ನಾಗರಿಕರ ಸಂಖ್ಯೆ ಹೆಚ್ಚಾಗುತ್ತದೆ. ಇದರಿಂದಾಗಿ ಯುವಕರ ಮೇಲೆ ಹೆಚ್ಚಿನ ಒತ್ತಡಬೀಳುತ್ತದೆ. ರಾಜ್ಯದ ಆರ್ಥಿಕತೆಗೆ ಕೊಡುಗೆ ನೀಡುವವರ ಸಂಖ್ಯೆಯೂ ಕಡಿಮೆ ಆಗುತ್ತದೆ. ಹಿರಿಯ ನಾಗರಿಕರ ಆರೋಗ್ಯದ ಮೇಲೆ ಸರ್ಕಾರ ಹೆಚ್ಚು ವೆಚ್ಚ ಮಾಡಬೇಕಾಗುತ್ತದೆ ಎಂಬುದರತ್ತ ವರದಿಯು ಬೊಟ್ಟು ಮಾಡಿ ತೋರಿಸಿದೆ. “ಆರ್ಥಿಕ ಉತ್ಪಾದನೆಯನ್ನು ಬೆಂಬಲಿಸುವ ಕೌಶಲ್ಯ ಭರಿತ ಕಾರ್ಯಪಡೆಯನ್ನು ಹೆಚ್ಚಿಸುವ ಅವಕಾಶಗಳೊಂದಿಗೆ, ಅಧಿಕವಾಗುತ್ತಿರುವ ಹಿರಿಯ ನಾಗರೀಕರಿಗೆ ಸಾಮಾಜಿಕ ಭದ್ರತೆ ನೀಡುವುದು ನಿರ್ಣಾಯಕವಾಗಿದೆ” ಎಂದು ವರದಿ ಹೇಳಿದೆ.
ಕರ್ನಾಟಕದ ಮುಂದಿರುವ ಸವಾಲುಗಳು
- ಕರ್ನಾಟಕ ಸರ್ಕಾರವು ಮುಂದಿನ ದಿನಗಳಲ್ಲಿ ಗಮನ ನೀಡಬೇಕಾಗಿರುವ 6 ಅಂಶಗಳನ್ನು ವರದಿಯಲ್ಲಿ ಪಟ್ಟಿ ಮಾಡಲಾಗಿದೆ.
- ಉತ್ತರ ಮತ್ತು ದಕ್ಷಿಣ ಕರ್ನಾಟಕದ ನಡುವಿನ ಅಭಿವೃದ್ಧಿಯ ಅಂತರ ಹೆಚ್ಚಾಗಿದೆ. ಅತೀ ಬಡತನವಿರುವ ಹತ್ತು ಜಿಲ್ಲೆಗಳು ಉತ್ತರ ಕರ್ನಾಟಕ ಭಾಗದಲ್ಲೇ ಇವೆ.
- ಕೃಷಿ ಮತ್ತು ಗ್ರಾಮೀಣ ಆರ್ಥಿಕತೆಯಲ್ಲಿ ಕುಸಿತ
- ಕೆಲವು ವಲಯಗಳಲ್ಲಿ ಸರ್ಕಾರದ ವೆಚ್ಚ ದುಪ್ಪಟ್ಟಾಗಿದೆ
- ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ಹಿಂದುಳಿಯಲಾಗಿದೆ. ಉನ್ನತ ಶಿಕ್ಷಣಕ್ಕೆ ದಾಖಲಾಗುವವರ ಪ್ರಮಾಣ ದಕ್ಷಿಣ ಭಾರತದಲ್ಲಿ, ಕರ್ನಾಟಕದಲ್ಲಿಯೇ ಅತಿ ಕಡಿಮೆ ಇದೆ.
- ಫಲವತ್ತತೆ ಪ್ರಮಾಣ ಕುಸಿಯುತ್ತಿದೆ. ಹೆಚ್ಚಿನ ಹಿರಿಯ ನಾಗರಿಕರನ್ನು ಹೊಂದಲಿದೆ. ಉತ್ಪಾದನೆ ಹೆಚ್ಚಿಸುವಂತೆ ಕಾರ್ಮಿಕರನ್ನು ಉತ್ತೇಜಿಸುವುದು
- ತಂತ್ರಜ್ಞಾನದ ಅಡೆತಡೆ ಹಾಗೂ ಯಾಂತ್ರೀಕರಣದಿಂದಾಗಿ ಅನೇಕ ಸೇವಾ ವಲಯಗಳ ಉದ್ಯೋಗದ ಮೇಲೆ ಪರಿಣಾಮ ಬೀರುತ್ತದೆ.
ವರದಿಯಲ್ಲಿ ಸೂಚಿಸಿರುವ 9 ಆರ್ಥಿಕ ಕಾರ್ಯತಂತ್ರಗಳು
- ಕೃಷಿ ವಲಯವನ್ನು ತಂತ್ರಜ್ಞಾನ, ಬ್ರ್ಯಾಂಡಿಂಗ್, ಮಾರುಕಟ್ಟೆ ಮತ್ತು ರಪ್ತು ಮೂಲಕ ಉತ್ತೇಜಿಸುವುದು
- ಕಾರ್ಮಿಕ ಆಧಾರಿತ ಕೈಗಾರಿಕೆಗಳ ಮೂಲಕ ಉತ್ಪಾದನೆ ಮತ್ತು ರಫ್ತುಗಳನ್ನು ಹೆಚ್ಚಿಸುವುದು (ಉದಾ: ವಿದ್ಯುತ್ ಉಪಕರಣಗಳು, ಯಂತ್ರೊಪಕರಣಗಳು ಪಿಟೋಪಕರಣಗಳು)
- ಮೂಲಭೂತ ಸೌಕರ್ಯಗಳಿಗೆ ವೆಚ್ಚವನ್ನು ಹೆಚ್ಚಿಸುವ ಮೂಲಕ ನಿರ್ಮಾಣ ವಲಯದ ಮೌಲ್ಯವರ್ಧನೆಯನ್ನು ಉತ್ತೇಜಿಸುವುದು
- ಬೆಂಗಳೂರು ಹೊರತುಪಡಿಸಿ – 200 ಸಣ್ಣಪಟ್ಟಣಗಳಲ್ಲಿ ವ್ಯವಸ್ಥಿತ ನಗರೀಕರಣ
- NITI ಆಯೋಗದ ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮವನ್ನು ವಿಸ್ತರಿಸುವುದು
- ಉತ್ಪಾದನೆ ಮತ್ತು ರಫ್ತು ಕೈಗಾರಿಕೆಗಳ ಮೌಲ್ಯವರ್ಧನೆಯನ್ನು ಹೆಚ್ಚಿಸಲು ವಿಶೇಷವಾದ ಹೈಟೆಕ್ ಉದ್ಯಮಗಳ ಸೃಜನೆ
- ಬೆಂಗಳೂರು ಗ್ಲೋಬಲ್ ಹೈಟೆಕ್ ಸಿಟಿ ಆಗಲು ಹೆಚ್ಚಿನ ಹೂಡಿಕೆ ಮಾಡುವುದು
- ಫೀಡ್‌ಫಾರ್ವರ್ಡ್ ಸಾಮರ್ಥ್ಯಗಳು ಮತ್ತು ಬೆಳವಣಿಗೆಯ ಕ್ಷೇತ್ರಗಳನ್ನು ನಿರ್ಮಿಸಲು ಮಾಹಿತಿ ತಂತ್ರಜ್ಞಾನ ಸೇವಾ ವಲಯವನ್ನು ತ್ವರಿತಗೊಳಿಸುವುದು
- ನವೋದ್ಯಮಗಳ ಇಕೋಸಿಸ್ಟಮ್‌ನ್ನು ಬಲಪಡಿಸಲು ಹೂಡಿಕೆ ಮಾಡುವುದು
ಇದನ್ನೂ ಓದಿ | Economy | 2029ರಲ್ಲಿ ಜಗತ್ತಿನ 3ನೇ ಅತಿ ದೊಡ್ಡ ಆರ್ಥಿಕತೆಯಾಗಲಿದೆ ಭಾರತ: ಎಸ್‌ಬಿಐ