Site icon Vistara News

Vistara news: ವಿಸ್ತಾರ ನ್ಯೂಸ್‌ ವೆಬ್‌ ಸೈಟ್‌, ಲೋಗೊ ಅನಾವರಣ, ನಾಡಿನೆಲ್ಲೆಡೆ ಸಂಚಲನ

Vistara CM1

ಬೆಂಗಳೂರು: ಕನ್ನಡದ ಮಾಧ್ಯಮ ಲೋಕದಲ್ಲಿ ಶನಿವಾರ ಹೊಸ ನಕ್ಷತ್ರವೊಂದರ ಉದಯದ ಸಂಭ್ರಮ. ಅಗಾಧ ಆತ್ಮವಿಶ್ವಾಸದೊಂದಿಗೆ ಇಟ್ಟ ಮೊದಲ ಹೆಜ್ಜೆಯಲ್ಲೇ ನಾಡಿನೆಲ್ಲೆಡೆ ಹೊಸ ಸಂಚಲನ. ತುಂಬು ನಿರೀಕ್ಷೆಯೊಂದಿಗೆ ಕಾಯುತ್ತಿದ್ದ ಕೋಟ್ಯಂತರ ಕನ್ನಡಿಗರ ಹೃದಯಗಳು ಖುಷಿಗೊಂಡ ಕ್ಷಣ.: ಅದು ವಿಸ್ತಾರ ಮೀಡಿಯಾ ಪ್ರೈವೆಟ್‌ ಲಿಮಿಟೆಡ್‌ನ ಬಹು ನಿರೀಕ್ಷೆಯ ವಿಸ್ತಾರ ನ್ಯೂಸ್‌ ಲೋಗೊ ಅನಾವರಣ ಮತ್ತು ವೆಬ್‌ ಸೈಟ್‌ನ ಲೋಕಾರ್ಪಣೆಯ ಸಮಯ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಬೆಂಗಳೂರಿನ ಕೆಸಿಸಿಎಫ್‌ ಸಭಾಂಗಣದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ತೆರೆಯನ್ನು ಎಳೆಯುತ್ತಿದ್ದಂತೆಯೇ ಲೋಗೊ ಅನಾವರಣಗೊಂಡಿತು. ರಿಮೋಟ್‌ ಬಟನ್‌ ಪ್ರೆಸ್‌ ಮಾಡುತ್ತಿದ್ದಂತೆಯೇ www.vistaranews.com ವೆಬ್‌ಸೈಟ್‌ ನಾಡಿಗೆ ಸಮರ್ಪಣೆಗೊಂಡಿತು.

ನಾಡಿನ ಪ್ರಮುಖ ನಾಯಕರು, ಗಣ್ಯ ಉದ್ಯಮಿಗಳು, ಜನಪ್ರತಿನಿಧಿಗಳು, ಹಲವಾರು ಮಾಧ್ಯಮ ಪ್ರತಿನಿಧಿಗಳು ಮತ್ತು ನೂರಾರು ಪತ್ರಿಕೋದ್ಯಮ ವಿದ್ಯಾರ್ಥಿಗಳು ಈ ವಿಶೇಷ ಕ್ಷಣಕ್ಕೆ ಪ್ರತ್ಯಕ್ಷ ಸಾಕ್ಷಿಗಳಾದರೆ ಕ್ಷಣ ಮಾತ್ರದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಅದು ನಾಡಿನಾದ್ಯಂತ ಪಸರಿಸಿತು.

ವಿಸ್ತಾರ ಮೀಡಿಯಾ ಹೌಸ್‌ ಬಗ್ಗೆ ಕಳೆದ ಕೆಲವು ತಿಂಗಳುಗಳಿಂದ ಭಾರಿ ನಿರೀಕ್ಷೆ ಗರಿಗೆದರಿತ್ತು. ಕಳೆದ ಹತ್ತು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವೈವಿಧ್ಯಮಯ ಪೋಸ್ಟರ್‌ಗಳು ಈ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದ್ದವು. ಶನಿವಾರ ಅನಾವರಣಗೊಂಡ ವೆಬ್‌ಸೈಟ್‌ ಎಲ್ಲರ ಕುತೂಹಲಕ್ಕೆ ಅತ್ಯಂತ ಹಿತವಾದ ಉತ್ತರವನ್ನು ನೀಡುವ ಮೂಲಕ ಎಲ್ಲೆಡೆ ಗಮನ ಸೆಳೆದಿದೆ.

ಎಲ್ಲರ ಭರವಸೆಯ ಕಣ್ಣು
ಬಣ್ಣ ಬಣ್ಣದ ಹೂವುಗಳಿಂದ ಅಲಂಕೃತಗೊಂಡಿದ್ದ ಸರ್‌ ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಬೆಳಗ್ಗಿನಿಂದಲೇ ಹಬ್ಬದ ವಾತಾವರಣ ನೆಲೆಗೊಂಡಿತ್ತು. ವಿಸ್ತಾರ ಮೀಡಿಯಾದ ಮೇಲಿನ ಪ್ರೀತಿ ಮತ್ತು ವಿಶ್ವಾಸ ಹಾಗೂ ಕುತೂಹಲದಿಂದ ನೂರಾರು ಮಂದಿ ಸೇರಿದ್ದರು. ಲೋಗೊ ಮತ್ತು ವೆಬ್‌ ಸೈಟ್‌ ಅನಾವರಣ ಮಾಡಿದ ಮುಖ್ಯಮಂತ್ರಿಗಳು ಸೇರಿದಂತೆ ಎಲ್ಲರೂ ವಿಸ್ತಾರ ಮೀಡಿಯಾದ ಬಗ್ಗೆ ಭರವಸೆಯಿಂದ ಮಾತನಾಡಿದರು. ವಿಸ್ತಾರ ಮೀಡಿಯಾದ ಸಿಇಒ ಮತ್ತು ಪ್ರಧಾನ ಸಂಪಾದಕರಾದ ಹರಿಪ್ರಕಾಶ್‌ ಕೋಣೆಮನೆ, ಅಧ್ಯಕ್ಷರು ಮತ್ತು ಆಡಳಿತ ನಿರ್ದೇಶಕರಾದ ಎಚ್‌.ವಿ. ಧರ್ಮೇಶ್‌ ಹಾಗೂ ನಿರ್ದೇಶಕರಾದ ಶ್ರೀನಿವಾಸ ಹೆಬ್ಬಾರ್‌ ಅವರ ಧನಾತ್ಮಕ ಪತ್ರಿಕೋದ್ಯಮದ ನಿಲುವನ್ನು ಎಲ್ಲರೂ ಕೊಂಡಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಹರಿಪ್ರಕಾಶ್‌ ಕೋಣೆಮನೆ ಅವರ ಸ್ಪಷ್ಟ ಮಾತು ನಿಖರ ಮತ್ತು ಜನಪರ ನಿಲುವಿಗೆ ಕನ್ನಡಿ ಹಿಡಿದಿತ್ತು. ಸಂಸ್ಥೆಯ ಹುಟ್ಟಿನ ಹಿನ್ನೆಲೆ, ಮುಂದೆ ಸಾಗಬೇಕಾದ ರಾಜಕೀಯ, ಸೈದ್ಧಾಂತಿಕ ಹಾದಿ, ದೇಶ ಮೊದಲು ಎನ್ನುವ ನಿಲುವುಗಳು, ಸಮಾಜದ ಪ್ರತಿ ವರ್ಗದಲ್ಲೂ ಹೊಸ ಧನಾತ್ಮಕ ಆಶಾವಾದ ಸೃಷ್ಟಿಸುವ ಖಚಿತತೆ ಎಲ್ಲರ ಹೃದಯ ತಟ್ಟಿತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಂತೂ ಕನ್ನಡ ಮಾಧ್ಯಮ ಲೋಕದಲ್ಲಿ ಹೊಸ ಹೊಳೆಯುವ ನಕ್ಷತ್ರವೊಂದರ ಉದಯವಾಗಿದೆ ಎಂದು ಖುಷಿಪಟ್ಟರು. ವಿಸ್ತಾರ ಮೀಡಿಯಾದ ಬಗ್ಗೆ ಅಪಾರವಾದ ನಿರೀಕ್ಷೆ ಇದೆ, ಜನರ ನಂಬಿಕೆಗಳನ್ನು ಅದು ಈಡೇರಿಸುತ್ತದೆ ಎನ್ನುವ ನಂಬಿಕೆ ಅದಕ್ಕಿಂತಲೂ ದೊಡ್ಡದಿದೆ ಎಂದರು. ವಿಸ್ತಾರದ ಕನಸುಗಳು ಇನ್ನಷ್ಟು ವಿಸ್ತಾರವಾಗುವಂತೆ ಹಿರಿಯಣ್ಣನಂತೆ ಮಾರ್ಗದರ್ಶನ ನೀಡಿದರು.

ಸಿಎಂ ಬಸವರಾಜ ಬೊಮ್ಮಾಯಿ ಅವರು ವಿಸ್ತಾರ ನ್ಯೂಸ್‌ ವೆಬ್‌ ಸೈಟ್‌ ವೀಕ್ಷಿಸುತ್ತಿರುವುದು.

ಹೊಸ ಮಾಧ್ಯಮಕ್ಕೆ ಶುಭ ಕೋರಿದ ಕಂದಾಯ ಸಚಿವ ಆರ್‌. ಅಶೋಕ್‌, ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌, ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಸಲೀಂ ಅಹಮದ್‌ ಅವರು ಪ್ರಧಾನ ಸಂಪಾದಕರಾದ ಹರಿಪ್ರಕಾಶ್‌ ಕೋಣೆಮನೆ ಅವರು ತಮ್ಮ ರಾಜಕೀಯ ಬದುಕಿಗೆ ಮಾರ್ಗದರ್ಶನ ನೀಡುತ್ತಿರುವ ಗೆಳೆಯನೆಂದೇ ಸಂಬೋಧಿಸಿ ಹೃದಯದಿಂದ ಶುಭ ಹಾರೈಸಿದರು. ಕೊರೊನಾ ಸಂದರ್ಭದಲ್ಲಿ ಮೃತಪಟ್ಟ ಕೆಲವರ ಶವಗಳನ್ನು ಸ್ವೀಕರಿಸಲು ಮನೆಯವರೇ ನಿರಾಕರಿಸಿದಾಗ ಸರಕಾರವೇ ಅವರ ಅಂತ್ಯಕ್ರಿಯೆಯನ್ನು ನಡೆಸಿತ್ತು. ಆಗ ಅವರ ಅಪರ ಕ್ರಿಯೆಯನ್ನು ತಾನೇ ನಡೆಸಲು ಮುಂದಾಗಿದ್ದರು ಸಚಿವ ಆರ್‌. ಅಶೋಕ್‌. ಆದರೆ, ಅದರ ಬಗ್ಗೆ ಗೊಂದಲ ಮೂಡಿದಾಗ, ಪಾಪ-ಪುಣ್ಯಗಳ ಜಿಜ್ಞಾಸೆ ಕಾಡಿದಾಗ ಬೆಂಬಲವಾಗಿ ನಿಂತು ಗೋ ಅಹೆಡ್‌ ಅಂದವರು ಹರಿಪ್ರಕಾಶ್‌ ಕೋಣೆಮನೆ ಎಂದು ಸಚಿವರೇ ನೆನಪು ಮಾಡಿಕೊಂಡರು.

ಸಮಾರಂಭಕ್ಕೆ ಬಂದಿದ್ದ ಗಣ್ಯರು, ಉದ್ಯಮಿಗಳೆಲ್ಲರೂ ಮೀಡಿಯಾ ಹೌಸ್‌ ಮುಖ್ಯಸ್ಥರಾದ ಹರಿಪ್ರಕಾಶ್‌ ಕೋಣೆಮನೆ, ಎಚ್‌.ವಿ. ಧರ್ಮೇಶ್‌, ಶ್ರೀನಿವಾಸ ಹೆಬ್ಬಾರ್‌ ಅವರಿಗೆ ಶುಭ ಹಾರೈಸಿದರು. ತಮ್ಮ ಬೆಂಬಲವನ್ನು ಸೂಚಿಸಿದರು.

ವಿಶಿಷ್ಟವಾಗಿ ನಡೆದ ಡಿಜಿಟಲ್‌ ಸಂವಾದ
ಲೋಗೊ ಅನಾವರಣ ಮತ್ತು ವೆಬ್‌ಸೈಟ್‌ ಲಾಂಚ್‌ಗೆ ಮುನ್ನ ʻಭಾರತದಲ್ಲಿ ಡಿಜಿಟಲ್‌ ಮಾಧ್ಯಮದ ಭವಿಷ್ಯʼ ಎಂಬ ವಿಷಯದಲ್ಲಿ ಅತ್ಯುಪಯುಕ್ತ ಸಂವಾದವೊಂದು ಜರುಗಿತು. ಕೂ ಸಂಸ್ಥೆಯ ಸಿಇಒ ಮತ್ತು ಸಹ ಸಂಸ್ಥಾಪಕರಾದ ಅಪ್ರಮೇಯ ರಾಧಾಕೃಷ್ಣ, ಭಾರತದ 100ನೇ ಯೂನಿಕಾರ್ನ್‌ ಎಂಬ ಹೆಗ್ಗಳಿಕೆಗೆ ಪಾತ್ರವಾದ ಓಪನ್‌ ಡಾಟ್‌ ಮನಿ ಸಂಸ್ಥೆಯ ಸಹ ಸಂಸ್ಥಾಪಕ ಅನೀಶ್‌ ಅಚ್ಯುತನ್‌, ಫ್ರೀಡಂ ಆ್ಯಪ್‌ನ ಸಂಸ್ಥಾಪಕ ಮತ್ತು ಸಿಇಒ ಸಿ.ಎಸ್‌. ಸುಧೀರ್‌ ಅವರು ಈ ಸಂವಾದದಲ್ಲಿ ಭಾಗವಹಿಸಿದ್ದರು. ಏಮ್‌ ಹೈ ಕನ್ಸಲ್ಟಿಂಗ್‌ನ ಸಿಇಒ ಆಗಿರುವ ಎನ್‌. ರವಿಶಂಕರ್‌ ಅವರು ಸಂವಾದವನ್ನು ನಡೆಸಿಕೊಟ್ಟರು. ಇಡೀ ಜಗತ್ತಿನಲ್ಲಿ ಡಿಜಿಟಲ್‌ ಮಾಧ್ಯಮಕ್ಕಿರುವ ಅಗಾಧ ಅವಕಾಶಗಳ ಬಗ್ಗೆ ದಿಗ್ಗಜ ಸಾಧಕರು ವಿವರಿಸುತ್ತಿದ್ದರೆ ಇಡೀ ಸಭಾಂಗಣದಲ್ಲಿ ವಿದ್ಯುತ್ಸಂಚಾರ ಉಂಟಾಗಿತ್ತು. ವಿದ್ಯಾರ್ಥಿಗಳಿಗಂತೂ ನಮ್ಮ ನಡುವಿನ ಸಾಧಕರನ್ನು ಅತ್ಯಂತ ಹತ್ತಿರದಿಂದ ಕಂಡು ಖುಷಿಗೊಂಡ ಸಂಭ್ರಮ.

ವಿಸ್ತಾರ ಡಿಜಿಟಲ್‌ ಸಂವಾದದ ಒಂದು ದೃಶ್ಯ

ಎಲ್ಲೆಡೆಯಿಂದ ಶುಭಾಶಯಗಳ ಮಹಾಪೂರ
ಒಂದು ಸಭಾಂಗಣದಲ್ಲಿ ಸಂಭ್ರಮದ ಅಲೆಗಳು ಏಳುತ್ತಿದ್ದರೆ ಇತ್ತ ನಾಡಿನೆಲ್ಲೆಡೆಯಿಂದ ವಿಸ್ತಾರ ನ್ಯೂಸ್‌ಗೆ ಶುಭಾಶಯಗಳ ಮಹಾಪೂರವೇ ಹರಿದುಬಂತು. ನಾಡಿನ ನೂರಾರು ಗಣ್ಯರು ಶುಭಾಶಯಗಳ ಜತೆಗೆ ವೆಬ್‌ಸೈಟ್‌ ಕುರಿತು ತಮ್ಮ ಅಭಿಪ್ರಾಯಗಳನ್ನೂ ಹಂಚಿಕೊಂಡರು. ಮೊದಲ ದಿನವೇ ಸಾವಿರಾರು ಮಂದಿ ವೆಬ್‌ಸೈಟ್‌ ಪ್ರವೇಶಿಸಿ ಅಲ್ಲಿರುವ ವಿಷಯ ವೈವಿಧ್ಯಗಳಿಂದ ಖುಷಿಗೊಂಡಿದ್ದಾರೆ.

ಇದನ್ನೂ ಓದಿ| ವಿಸ್ತಾರ ಮೀಡಿಯಾ: ಏನು, ಎತ್ತ? | ಸಿಇಒ, ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಮುಕ್ತ ಮಾತು

Exit mobile version