ಬೆಂಗಳೂರು: ವಿಸ್ತಾರ ಮೀಡಿಯಾ ಆರಂಭದ ಹಿಂದೆ ಅನೇಕ ವರ್ಷಗಳ ಚಿಂತನೆ, ಆಲೋಚನೆ ಬೆನ್ನೆಲುಬಾಗಿದೆ ಎಂದು ವಿಸ್ತಾರ ಮೀಡಿಯಾ ಸಿಇಒ ಹಾಗೂ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ತಿಳಿಸಿದರು.
ವಿಸ್ತಾರ ನ್ಯೂಸ್ ವೆಬ್‌ಸೈಟ್ ಮತ್ತು ಚಾನೆಲ್ ಲೋಗೊ ಅನಾವರಣ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಎಫ್‌ಕೆಸಿಸಿಐನ ಸರ್. ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಡೆದ ʻಭಾರತದಲ್ಲಿ ಡಿಜಿಟಲ್ ಮಾಧ್ಯಮದ ಭವಿಷ್ಯʼ ಸಂವಾದದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇಂದಿನ ನಮ್ಮ ಸಂವಾದ ಕಾರ್ಯಕ್ರಮದಲ್ಲಿ ಕೂ ಸಾಮಾಜಿಕ ಜಾಲತಾಣದ ಸಹ ಸ್ಥಾಪಕ ಅಪ್ರಮೇಯ ರಾಧಾಕೃಷ್ಣ, ಓಪನ್ ಡಾಟ್ ಮನಿ ಜಾಲತಾಣದ ಸಹ ಸ್ಥಾಪಕ ಅನೀಶ್ ಅಚ್ಯುತನ್, ಫ್ರೀಡಂ ಆ್ಯಪ್‌ನ ಸ್ಥಾಪಕ ಹಾಗೂ ಸಿಇಒ ಸಿ.ಎಸ್. ಸುಧೀರ್ ಅವರು ಉಪಸ್ಥಿತರಿದ್ದಾರೆ. ವಿಸ್ತಾರ ಮೀಡಿಯಾ ಆರಂಭಿಸಲು ನಮಗೆ ಇಂದು ನಮ್ಮ ಜತೆಗಿರುವ ಇಂತಹ ದಿಗ್ಗಜ ಸ್ಟಾರ್ಟಪ್ ನಾಯಕರು, ನಮ್ಮ ಕಂಪನಿಯ ಚೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಎಚ್.ವಿ. ಧರ್ಮೇಶ್, ನಿರ್ದೇಶಕರಾದ ಶ್ರೀನಿವಾಸ ಹೆಬ್ಬಾರ್ ಹಾಗೂ ವಿಸ್ತಾರ ಮೀಡಿಯಾದ ಎಲ್ಲ ಹಿತೈಷಿ ಬಂಧುಗಳೇ ಕಾರಣ ಎಂದರು.
ವಿಸ್ತಾರ ಮೀಡಿಯಾ ಆರಂಭಿಸಬೇಕು ಎನ್ನುವುದು ತಕ್ಷಣದ ಕನಸಲ್ಲ ಎಂದ ಹರಿಪ್ರಕಾಶ ಕೋಣೆಮನೆ ಅವರು, ಕಳೆದ ನಾಲ್ಕೈದು ವರ್ಷಗಳಿಂದ ಆಲೋಚನೆ ಮಾಡಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ಆಲೋಚನೆಗೆ ಒಂದು ಸ್ಪಷ್ಟ ದೆಸೆ ಮತು ದಿಕ್ಕು ಸಿಕ್ಕಿದ್ದು 2021ರ ಡಿಸೆಂಬರ್‌ನಲ್ಲಿ, ಅನೇಕ ವರ್ಷಗಳ ಸ್ನೇಹಿತರಾದ ಎಚ್.ವಿ. ಧರ್ಮೇಶ್ ಹಾಗೂ ಶ್ರೀನಿವಾಸ ಹೆಬ್ಬಾರ್ ಅವರು ನಮ್ಮ ಜತೆಗೆ ಗಟ್ಟಿಯಾಗಿ ನಿಲ್ಲುವ ನಿರ್ಧಾರ ಕೈಗೊಂಡ ನಂತರದಿಂದ. ಅಂದರೆ ಇಂದಿನ ವಿಸ್ತಾರ ಮೀಡಿಯಾ ಆರಂಭದ ಹಿಂದೆ ಸುಮಾರು ಐದು ವರ್ಷಗಳ ನಿರಂತರ ಆಲೋಚನೆ ಹಾಗೂ ಎಂಟು ತಿಂಗಳ ಪರಿಶ್ರಮ ಅಡಗಿದೆ ಎಂದು ತಿಳಿಸಿದರು.
ಈಗ ಆರಂಭವಾಗುತ್ತಿರುವ ವೆಬ್‌ಸೈಟ್ ಜತೆಗೆ ಆಗಸ್ಟ್ ತಿಂಗಳ ಕೊನೆಯಲ್ಲಿ ನ್ಯೂಸ್ ಚಾನೆಲ್ ಸಹ ಆರಂಭವಾಗಲಿದೆ. ಎಂದು ಮಾಹಿತಿ ನೀಡಿದ ಹರಿಪ್ರಕಾಶ ಕೋಣೆಮನೆ ಅವರು, ವಿಸ್ತಾರ ಮೀಡಿಯಾದಲ್ಲಿ ಕೆಲಸ ಮಾಡುವ ಸಹೋದ್ಯೋಗಿಗಳ ಅನುಭವವನ್ನು ಗಮನಿಸಿದರೆ ಹೆಚ್ಚಿನವರು ನಾವೆಲ್ಲ ಮುದ್ರಣ ಮಾಧ್ಯಮದಲ್ಲಿ ಕೆಲಸ ಮಾಡಿದವರು. ಎಲ್ಲರೂ ಡಿಜಿಟಲ್ ಮೀಡಿಯಾ ಕಡೆಗೆ ಹೆಜ್ಜೆ ಇಡಲು ಆರಂಭಿಸಿದ್ದೇವೆ.
ಹಾಗೆಂದ ಮಾತ್ರಕ್ಕೆ ನಾವು ಯಾವುದೋ ಹೊಸ ದಿಕ್ಕನ್ನು ತೆಗೆದುಕೊಂಡಿದ್ದೇವೆ ಎಂದಲ್ಲ. ಮಾಧ್ಯಮ ಕ್ಷೇತ್ರ ಆರಂಭ ಆದಾಗಿನಿಂದಲೂ ಕಾಲಕಾಲಕ್ಕೆ ತನ್ನದೇ ಹೊಸ ಆಯಾಮಕ್ಕೆ ತೆರೆದುಕೊಂಡಿದೆ, ಇಂದು ಅದೇ ರೀತಿ ಹೊಸ ಆಯಾಮಕ್ಕೆ ತೆರೆದುಕೊಂಡಿದೆ. ಹೊಸ ದಿಕ್ಕನ್ನು ತೆರೆದಿಡುವುದರ ಜತೆಗೆ ಕಾರ್ಯವನ್ನು ಆರಂಭಿಸಲು ನಾವು ತೀರ್ಮಾನಿಸಿದ್ದೇವೆ. ಅದಕ್ಕಾಗಿಯೇ, ಭಾರತದಲ್ಲಿ ಡಿಜಿಟಲ್ ಮೀಡಿಯಾದ ಭವಿಷ್ಯ ಎಂದು ಸಂವಾದ ಆಯೋಜಿಸಿದ್ದೇವೆ. ಭಾರತದಲ್ಲಿ ಡಿಜಿಟಲ್ ಮಾಧ್ಯಮದ ಕುರಿತು ನಮಗೆ ಅನುಮಾನಗಳಿವೆ ಎಂದಲ್ಲ, ಬದಲಿಗೆ ನಮ್ಮ ಆಲೋಚನೆಗಳನ್ನು ಮತ್ತಷ್ಟು ಸ್ಪಷ್ಟ ದಿಕ್ಕಿನಲ್ಲಿ ಮೂಡಿಸಬೇಕು, ಈ ಕುರಿತು ಚಾಲ್ತಿಯಲ್ಲಿರುವ ಹಲವಾರು ಗೊಂದಲಗಳನ್ನು ನಿವಾರಣೆ ಮಾಡಬೇಕು ಎಂಬ ಕಾರಣಕ್ಕೆ ಈ ಸಂವಾದ ಆಯೋಜನೆ ಮಾಡಲಾಗುತ್ತಿದೆ ಎಂದರು.
ಡಿಜಿಟಲ್ ಮಾಧ್ಯಮ ನಮ್ಮನ್ನು ಹತ್ತಿರಕ್ಕೆ ಸೆಳೆಯುತ್ತಿದೆ. ಇದೇ ವೇಳೆ ಪ್ರಿಂಟ್ ಮೀಡಿಯಾಕ್ಕೆ ಭವಿಷ್ಯ ಉಳಿದಿದೆಯೇ, ಡಿಜಿಟಲ್ ಮಾಧ್ಯಮದಲ್ಲಿ ಅವಕಾಶ ಇದೆಯೇ ಎಂಬ ಅನೇಕ ಪ್ರಶ್ನೆಗಳಿವೆ. ಇದೆಲ್ಲದಕ್ಕೂ ಇಂದಿನ ಸಂವಾದದಲ್ಲಿ ಉತ್ತರ ಸಿಗುವ ನಿರೀಕ್ಷೆ ಇದೆ ಹರಿಪ್ರಕಾಶ ಕೋಣೆಮನೆ ಅವರು ಆಶಯ ವ್ಯಕ್ತಪಡಿಸಿದರು.
ಇದನ್ನೂ ಓದಿ | Vistara News: ಇಂದು ಅನಾವರಣಗೊಳ್ಳಲಿದೆ ವಿಸ್ತಾರ ನ್ಯೂಸ್‌ನ ಲೋಗೊ ಮತ್ತು ವೆಬ್‌ಸೈಟ್