ಮಂಡ್ಯ: ರಾಜ್ಯದಲ್ಲಿ ಮೀಸಲಾತಿ ಕೂಗು ದಿನೇ ದಿನೆ ಹೆಚ್ಚುತ್ತಲೇ ಇದೆ. ಹಲವು ಸಮುದಾಯದವರು ಮೀಸಲು ನೀಡುವಂತೆ ಸರ್ಕಾರಕ್ಕೆ ಒತ್ತಾಯ ತರುತ್ತಿದ್ದಾರೆ. ಈಗಾಗಲೇ ಪಂಚಮಸಾಲಿ ಸಮುದಾಯದವರು ಮೀಸಲಾತಿಗಾಗಿ ಒತ್ತಾಯಿಸಿ ಈಚೆಗೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ವಿಜಯಪುರದಲ್ಲಿ ಪ್ರತಿಭಟನೆ ನಡೆದಿತ್ತು. ಈಗ ಮಂಡ್ಯದ ಮದ್ದೂರಿನಲ್ಲಿ ಒಕ್ಕಲಿಗ ಸಮುದಾಯದವರು (Vokkaliga Reservation) ಬೃಹತ್ ಮಟ್ಟದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಮೀಸಲಾತಿ ಹೆಚ್ಚಳಕ್ಕಾಗಿ ಒಕ್ಕಲಿಗ ಮುಖಂಡರು ಸರ್ಕಾರವನ್ನು ಒತ್ತಾಯಿಸಿದ್ದು, ಮದ್ದೂರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಜತೆಗೆ ಬೈಕ್ ರ‍್ಯಾಲಿಯನ್ನೂ ನಡೆಸಿದ್ದು, ಮೀಸಲಾತಿ ಹೆಚ್ಚಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮದ್ದೂರಿನ ಪ್ರವಾಸಿ ಮಂದಿರದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯಲ್ಲಿ ನಂಜಾವಧೂತ ಸ್ವಾಮೀಜಿಗಳು ನೇತೃತ್ವ ವಹಿಸಿದ್ದರು. ಪ್ರಮುಖ ಬೀದಿಗಳಲ್ಲಿ ಸಾಗಿದ ಪ್ರತಿಭಟನಾ ನಿರತರು, ಮೀಸಲಾತಿ ಬೇಕೇ ಬೇಕು ಎಂದು ಘೋಷಣೆ ಕೂಗಿದರು. ನರಸಿಂಹ ಸ್ವಾಮಿ ದೇವಾಲಯದ ಆವರಣದಲ್ಲಿ ಪ್ರತಿಭಟನೆಯನ್ನು ಅಂತ್ಯ ಮಾಡಲಾಯಿತು. ಆದರೆ, ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದೇ ಇದ್ದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನು ನೀಡಲಾಗಿದೆ.
ಇದನ್ನೂ ಓದಿ | Vishwakarma Community | ವಿಶ್ವಕರ್ಮರಿಗೂ ಬೇಕು ಮೀಸಲಾತಿ; ಬೀದರ್ ಟು ಬೆಂಗಳೂರು ಪಾದಯಾತ್ರೆ: ಕೆ.ಪಿ. ನಂಜುಂಡಿ