Site icon Vistara News

Karnataka Election: ರಾಜ್ಯದ ವಿವಿಧೆಡೆ ಮತದಾನದ ಗೌಪ್ಯತೆ ಉಲ್ಲಂಘನೆ; ವೋಟ್‌ ಮಾಡಿದ ಫೋಟೊ, ವಿಡಿಯೊ ವೈರಲ್

#image_title

ಬೆಂಗಳೂರು: ರಾಜ್ಯಾದ್ಯಂತ ಬುಧವಾರ ವಿಧಾನಸಭಾ ಚುನಾವಣೆಯ ಮತದಾನ ನಡೆದಿದೆ. ಜತೆಗೆ ವಿವಿಧೆಡೆ ಮತದಾನದ ಗೌಪ್ಯತೆ ಉಲ್ಲಂಘನೆ ಮಾಡಿರುವ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಮತಗಟ್ಟೆಯಲ್ಲಿ ವೋಟ್‌ ಮಾಡುವಾಗ ಕೆಲವು ಮತದಾರರು, ಫೋಟೊ, ವಿಡಿಯೊ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಹೀಗಾಗಿ ಅಂತಹವರ ವಿರುದ್ಧ ಚುನಾವಣಾಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ.

ಮುದ್ದೇಬಿಹಾಳದಲ್ಲಿ ವೋಟ್‌ ಮಾಡಿ ವಿಡಿಯೊ ತೆಗೆದ ಮತದಾರ

ವಿಜಯಪುರ: ಚುನಾವಣಾ ಮತಗಟ್ಟೆಯೊಳಗೆ (Karnataka Election) ಮೊಬೈಲ್‌ ಹಾಗೂ ಕ್ಯಾಮೆರಾ ಕೊಂಡೊಯ್ಯಲು ನಿಷೇಧವಿದೆ. ಆದರೂ, ಜಿಲ್ಲೆಯ ಮತಗಟ್ಟೆಯೊಂದರಲ್ಲಿ ಮತದಾರನೊಬ್ಬ, ತಾನು ಮತ ಹಾಕುವುದನ್ನು ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಮತದಾನದ ಗೌಪ್ಯತೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಮತದಾರನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಚುನಾವಣಾಧಿಕಾರಿ ಮುಂದಾಗಿದ್ದಾರೆ.

ಜಿಲ್ಲೆಯ ಮುದ್ದೇಬಿಹಾಳ ತಾಲೂಕು ನಾಲತವಾಡದ ಮತಗಟ್ಟೆಯಲ್ಲಿ ಮತದಾರನೊಬ್ಬ ವಿಡಿಯೊ ತೆಗೆದಿದ್ದಾನೆ. ಈ ವಿಷಯ ಚುನಾವಣಾಧಿಕಾರಿಗಳ ಗಮನಕ್ಕೆ ಬಂದಿದ್ದು, ಸಾಮಾಜಿಕ ಜಾಲತಾಣ, ವಾಟ್ಸ್‌ಆ್ಯಪ್‌ನಲ್ಲಿ ಇರುವ ಮೊಬೈಲ್ ಸಂಖ್ಯೆ ಆಧಾರದ ಮೇಲೆ ಆ ಮತದಾರನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಚುನಾವಣಾಧಿಕಾರಿ ಚಂದ್ರಕಾಂತ ಪವಾರ್‌ ಅವರು, ಜಿಲ್ಲಾ ಎಂಸಿಸಿ ನೋಡಲ್ ಅಧಿಕಾರಿ ರಾಮನಗೌಡ ಕನ್ನೊಳ್ಳಿ ಅವರಿಗೆ ಸೂಚಿಸಿದ್ದಾರೆ.

ಎಂಸಿಸಿ ನೋಡಲ್ ಅಧಿಕಾರಿಗಳು, ಮತದಾರನ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದ ಕೂಡಲೇ ಸದರಿ ಮತದಾರ ತಾನು ಬಿಟ್ಟಿದ್ದ ವಿಡಿಯೊವನ್ನು ವಾಟ್ಸ್‌ಆ್ಯಪ್‌ ಗ್ರೂಪ್‌ನಿಂದ ಡಿಲೀಟ್ ಮಾಡಿದ್ದಾನೆ. ವಿಡಿಯೊದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಿರುವುದು, ವಿವಿ ಪ್ಯಾಟ್‌ನಲ್ಲಿ ಚೀಟಿ ಹೊರಬಂದಿರುವುದು ಹಾಗೂ ಮತದಾರನ ಮುಖ ದಾಖಲಾಗಿದೆ.

ಇದನ್ನೂ ಓದಿ | Karnataka Election 2023: ಚಿಕ್ಕಬಳ್ಳಾಪುರದಲ್ಲಿ ಒಂದೇ ಕುಟುಂಬದ 65 ಸದಸ್ಯರಿಂದ ಏಕಕಾಲಕ್ಕೆ ಮತದಾನ!

ಹಾವೇರಿ, ಹಿರೇಕೆರೂರಿನಲ್ಲಿ ಅಭ್ಯರ್ಥಿಗಳಿಗೆ ಮತದಾನ ಮಾಡಿದ ಫೋಟೊ ವೈರಲ್

ಹಾವೇರಿ: ಕ್ಷೇತ್ರದಲ್ಲಿ ಬಿಜೆಪಿ ಬಿಜೆಪಿ ಅಭ್ಯರ್ಥಿ ಗವಿಸಿದ್ದಪ್ಪಗೆ ಮತ ಚಲಾಯಿಸಿದ ಮತದಾರನೊಬ್ಬ ವಾಟ್ಸ್‌ಆ್ಯಪ್‌ ಗ್ರೂಪ್, ಫೇಸ್‌ಬುಕ್‌ನಲ್ಲಿ ಪೊಟೊ, ವಿಡಿಯೊ ಅಪ್‌ಲೋಡ್ ಮಾಡಿರುವುದು ಕಂಡುಬಂದಿದೆ. ಅದೇ ರೀತಿ ಹಿರೇಕೆರೂರು ಕ್ಷೇತ್ರದ ರಟ್ಟಿಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯು.ಬಿ. ಬಣಕಾರ್‌ಗೆ ಮತದಾನ ಮಾಡಿ ಪೋಟೊ, ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ.

ಇವಿಎಂ ಪೋಟೊ ಕ್ಲಿಕ್ಕಿಸಿದ ಯುವಕ

ಹಾವೇರಿಯ ಹುಕ್ಕೇರಿಮಠದ ಮಹಿಳಾ ಕಾಲೇಜು ಮತಗಟ್ಟೆಯಲ್ಲಿ ಮತದಾನ ಮಾಡುವಾಗ ಯುವಕನೊಬ್ಬ ಇವಿಎಂ ಫೋಟೊ ಕ್ಲಿಕ್ಕಿಸಿಕೊಂಡು ಫೇಸ್‌ಬುಕ್‌ನಲ್ಲಿ ಹರಿಬಿಟ್ಟಿರುವುದು ಕಂಡುಬಂದಿದೆ. ನಗರದ ಪುರದ ಓಣಿ ಯುವಕ ಹರೀಶ್ ಮಾಳಗಿ ಫೋಟೊ ಹರಿಬಿಟ್ಟಿದ್ದಾನೆ.

ವಿಜಯನಗರ ಜಿಲ್ಲೆಯಲ್ಲಿ 2 ಪ್ರಕರಣ

ವಿಜಯನಗರ: ವೋಟ್ ಮಾಡುವ ವೇಳೆ ಮತದಾರ ಫೋಟೊ, ವಿಡಿಯೊ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಎರಡು ಪ್ರಕರಣಗಳು ಜಿಲ್ಲೆಯಲ್ಲಿ ನಡೆದಿವೆ. ಹರಪನಹಳ್ಳಿ ಪಕ್ಷೇತರ ಅಭ್ಯರ್ಥಿ ಲತಾ ಪರ ವೋಟ್ ಮಾಡಿ ಮತದಾರನೊಬ್ಬ ಫೋಟೊವನ್ನು ಹರಿಬಿಟ್ಟಿದ್ದಾನೆ. ಅದೇ ರೀತಿ ವಿಜಯನಗರ ಜಿಲ್ಲೆಯ ವಿಜಯನಗರ-90 ಮತಗಟ್ಟೆಯಲ್ಲಿ ಮತದಾರನೊಬ್ಬ ಬಿಜೆಪಿ ಅಭ್ಯರ್ಥಿ ಸಿದ್ದಾರ್ಥ ಸಿಂಗ್ ಪರ ಮತ ಹಾಕಿ ವಿಡಿಯೊ ಹರಿಬಿಟ್ಟಿದ್ದಾನೆ. ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

Exit mobile version