Site icon Vistara News

Voter data | 3 ಕ್ಷೇತ್ರಗಳಲ್ಲಿ ಡಿಲೀಟ್‌ ಆದ ಎಲ್ಲ ಹೆಸರುಗಳ ಮರುಪರಿಶೀಲನೆಗೆ ಚು.ಆಯೋಗ ಆದೇಶ, ಇಬ್ಬರು ಅಧಿಕಾರಿಗಳ ಸಸ್ಪೆಂಡ್‌

voter data

ಬೆಂಗಳೂರು: ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ, ಬೆಂಗಳೂರಿನಲ್ಲಿ ನಡೆದಿದೆ (voter data) ಎಂದು ಆಪಾದಿಸಲಾದ ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮದ ಸಮಗ್ರ ತನಿಖೆಗೆ ಕೇಂದ್ರ ಚುನಾವಣಾ ಆಯೋಗ ಆದೇಶಿಸಿದೆ. ಮಾತ್ರವಲ್ಲ, ಪರಿಷ್ಕರಣೆಯ ವೇಳೆ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಿಂದ ಕಿತ್ತು ಹಾಕಲಾದ ಮತ್ತು ಸೇರಿಸಲಾದ ಎಲ್ಲ ಹೆಸರುಗಳ ಮರುಪರಿಶೀಲನೆಗೆ ಆರ್ಡರ್‌ ಮಾಡಿದೆ.

ಇದರ ಜತೆಗೆ ಬಿಬಿಎಂಪಿಯಲ್ಲಿ ವಿಶೇಷ ಆಯುಕ್ತರಾಗಿರುವ ರಂಗಪ್ಪ ಮತ್ತು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್‌ ಅವರನ್ನು ಹುದ್ದೆಯಿಂದ ಅಮಾನತುಗೊಳಿಸಲಾಗಿದೆ. ಇವರು ಈ ಮೂರು ಕ್ಷೇತ್ರಗಳ ಚುನಾವಣಾ ಪ್ರಕ್ರಿಯೆಯ ಮೇಲುಸ್ತುವಾರಿ ವಹಿಸಿದ್ದರು.

ಚಿಲುಮೆ ಸಂಸ್ಥೆ ನಡೆಸಿದ ಮತದಾರದ ಮಾಹಿತಿ ಸಂಗ್ರಹ ಮತ್ತು ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಶಿವಾಜಿ ನಗರ, ಚಿಕ್ಕಪೇಟೆ, ಮಹದೇವಪುರ ಕ್ಷೇತ್ರದಲ್ಲಿ ಭಾರಿ ಅಕ್ರಮ ನಡೆದಿದೆ. ಬಿಜೆಪಿ ಸರಕಾರವೇ ಖಾಸಗಿ ಸಂಸ್ಥೆಯನ್ನು ಬಳಸಿಕೊಂಡು ಕಾಂಗ್ರೆಸ್‌ ಪಕ್ಷಕ್ಕೆ ಮತ ಹಾಕುವ ನಿರೀಕ್ಷೆ ಇರುವವರ ಮತಗಳನ್ನು ಪಟ್ಟಿಯಿಂದಲೇ ಡಿಲೀಟ್‌ ಮಾಡಿದೆ ಎಂದು ಕಾಂಗ್ರೆಸ್‌ ಅರೋಪ ಮಾಡಿತ್ತು. ಬಿಬಿಎಂಪಿಯ ಮೂಲಕ ನಡೆದಿರುವ ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಪ್ರಧಾನ ಆರೋಪಿ ಎಂದು ಆಪಾದಿಸಿದ್ದ ಕಾಂಗ್ರೆಸ್‌ ಕೇಂದ್ರ ಚುನಾವಣಾ ಆಯೋದವರೆಗೂ ದೂರು ನೀಡಿತ್ತು. ಈ ನಡುವೆ, ಸರಕಾರ ತನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಚುನಾವಣಾ ಆಯೋಗ ನಡೆಸುವ ನಿಗದಿತ ಕಾರ್ಯಾಚರಣೆ ಎಂದು ಹೇಳಿತ್ತು. ಬಿಬಿಎಂಪಿಯು ಅಕ್ರಮದ ಆರೋಪ ಕೇಳಿಬರುತ್ತಿದ್ದಂತೆಯೇ ಚಿಲುಮೆ ಸಂಸ್ಥೆಯ ಮೇಲೆ ಕೇಸು ದಾಖಲಿಸಿತ್ತು. ಪೊಲೀಸರು ಚಿಲುಮೆ ಗ್ರೂಪ್‌ನ ಮುಖ್ಯಸ್ಥ ರವಿಕುಮಾರ್‌, ಅವನ ಸೋದರ ಕೆಂಪೇಗೌಡ ಸೇರಿದಂತೆ ಹಲವರನ್ನು ಬಂಧಿಸಿತ್ತು. ಚಿಲುಮೆ ಸಂಸ್ಥೆಗೆ ಮತದಾರರ ಪಟ್ಟಿ ಪರಿಷ್ಕರಣೆಯ ಅಧಿಕಾರ ನೀಡುವ ಬಿಎಲ್‌ಒ ಕಾರ್ಡ್‌ ನೀಡಿದ ಆರೋಪದಲ್ಲಿ ಕಂದಾಯ ಅಧಿಕಾರಿಯೊಬ್ಬರನ್ನು ಅಮಾನತು ಮಾಡಿತ್ತು.

ಇದೆಲ್ಲದರ ನಡುವೆ ಕೇಂದ್ರ ಚುನಾವಣಾ ಆಯೋಗ ಈಗ ಮಹತ್ವದ ತೀರ್ಮಾನವನ್ನು ಪ್ರಕಟಿಸಿದ್ದು, ಮೂರು ಕ್ಷೇತ್ರಗಳಲ್ಲಿ ನಡೆದಿರುವ ಎಲ್ಲಾ ಸೇರ್ಪಡೆ ಮತ್ತು ಡಿಲೀಷನ್‌ಗಳ ಬಗ್ಗೆ ಶೇಕಡಾ ೧೦೦ ಮರುಪರಿಶೀಲನೆ ನಡೆಸಬೇಕು ಎಂದು ಆದೇಶಿಸಿದೆ. ಕೇಂದ್ರ ಚುನಾವಣಾ ಆಯೋಗವು ರಾಜ್ಯದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಮತ್ತು ರಾಜ್ಯದ ಚುನಾವಣಾಧಿಕಾರಿಯಾಗಿರುವ ಮನೋಜ್‌ ಕುಮಾರ್‌ ಮೀನಾ ಅವರಿಗೆ ಹಲವು ಪ್ರಮುಖ ನಿರ್ದೇಶನಗಳನ್ನು ನೀಡಿದೆ.

ಪ್ರಮುಖ ಆದೇಶವೇನು?
-ಬಿಬಿಎಂಪಿ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ಖಾಸಗಿ ಸಂಸ್ಥೆಯ ಮೂಲಕ ಮತದಾರರ ಮಾಹಿತಿಯನ್ನು ಸಂಗ್ರಹಿಸಿದ್ದನ್ನು ಬಲವಾಗಿ ಆಕ್ಷೇಪಿಸಿರುವ ಕೇಂದ್ರ ಚುನಾವಣಾ ಆಯೋಗ ಚಿಕ್ಕಪೇಟೆ, ಶಿವಾಜಿನಗರ ಮತ್ತು ಮಹದೇವಪುರ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಿಂದ ಕಿತ್ತು ಹಾಕಿರುವ ಎಲ್ಲ ಹೆಸರುಗಳ ಮರುಪರಿಶೀಲನೆ ನಡೆಸಬೇಕು. ಮತ್ತು ಈ ರೀತಿ ಡಿಲೀಟ್‌ ಮಾಡಿರುವ ಹೆಸರುಗಳ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಡಿಸೆಂಬರ್‌ ೨೪ರವರೆಗೆ ಅವಕಾಶ ನೀಡಬೇಕು.

– ಬಿಬಿಎಂಪಿಯಲ್ಲಿ ವಿಶೇಷ ಆಯುಕ್ತರಾಗಿರುವ ರಂಗಪ್ಪ ಮತ್ತು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್‌ ಅವರನ್ನು ಹುದ್ದೆಯಿಂದ ಅಮಾನತುಗೊಳಿಸಲಾಗಿದೆ. ಇವರು ಈ ಮೂರು ಕ್ಷೇತ್ರಗಳ ಚುನಾವಣಾ ಪ್ರಕ್ರಿಯೆಯ ಮೇಲುಸ್ತುವಾರಿ ವಹಿಸಿದ್ದರು. ಜತೆಗೆ ಇವರ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗಿದೆ.

-ಮತದಾರರ ಪಟ್ಟಿ ಪರಿಶುದ್ಧವಾಗಿದೆ ಎಂಬುದನ್ನು ಖಾತ್ರಿಪಡಿಸುವುದಕ್ಕಾಗಿ ಬಿಬಿಎಂಪಿ ವ್ಯಾಪ್ತಿಯ ಹೊರಗಿನಿಂದ ಮೂವರು ಐಎಎಸ್‌ ಅಧಿಕಾರಿಗಳನ್ನು ವಿಶೇಷ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.

ನಿರ್ದೇಶನದ ಪ್ರಮುಖಾಂಶಗಳು
೧.ಶಿವಾಜಿ ನಗರ, ಚಿಕ್ಕಪೇಟೆ, ಮಹದೇವಪುರ ಕ್ಷೇತ್ರಗಳಲ್ಲಿ ೨೦೨೨ರ ಜನವರಿ ೧ರ ಬಳಿಕ ಮತದಾರರ ಪಟ್ಟಿಯಲ್ಲಿ ಆಗಿರುವ ಎಲ್ಲಾ ಡಿಲಿಷನ್‌ ಮತ್ತು ಸೇರ್ಪಡೆಗಳನ್ನು ನೂರಕ್ಕೆ ನೂರು ಮರುಪರಿಶೀಲಿಸಬೇಕು. ಆಕ್ಷೇಪ ಸಲ್ಲಿಕೆ ಅವಧಿಯನ್ನು ಈಗ ನಿಗದಿಯಾಗಿರುವ ಡಿಸೆಂಬರ್‌ ೯ರಿಂದ ೨೪ಕ್ಕೆ ವಿಸ್ತರಿಸಬೇಕು.

೨. ಮತದಾರರ ಪಟ್ಟಿ ಮತ್ತು ಆಗಿರುವ ಎಲ್ಲಾ ಹೆಸರು ಸೇರ್ಪಡೆ ಹಾಗು ಕಿತ್ತು ಹಾಕಿದ್ದರ ಸಮಗ್ರ ಮಾಹಿತಿಯನ್ನು ರಾಜಕೀಯ ಪಕ್ಷಗಳ ಜತೆ ಹಂಚಿಕೊಳ್ಳಬೇಕು. ಇದರಿಂದ ಅವರಿಗೆ ಆಕ್ಷೇಪ ಸಲ್ಲಿಸಲು ಅನುಕೂಲವಾಗಲಿದೆ.

೩. ನವೆಂಬರ್‌ ೧೭ರಂದು ದಾಖಲಾಗಿರುವ ಎಲ್ಲ ಎಫ್‌ಐಆರ್‌ಗಳ ತನಿಖೆ ಮುಂದುವರಿದಿದೆ. ಖಾಸಗಿ ಸಂಸ್ಥೆಗಳ ಮೂಲಕ ಸಂಗ್ರಹಿಸಲಾದ ಯಾವುದೇ ಮಾಹಿತಿಯನ್ನು ನೇರವಾಗಿ ಇಲ್ಲವೇ ಪರೋಕ್ಷವಾಗಿ ಯಾರೂ ಉಪಯೋಗಿಸದಂತೆ ಎಚ್ಚರಿಕೆ ವಹಿಸಬೇಕು.

೪. ಇಬ್ಬರು ಅಧಿಕಾರಿಗಳ ಅಮಾನತು
ಶಿವಾಜಿ ನಗರ ಮತ್ತು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಗಳ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಬಿಬಿಎಂಪಿ ವಿಶೇಷ ಆಯುಕ್ತ ಎಸ್‌. ರಂಗಪ್ಪ ಹಾಗೂ ಮಹದೇವಪುರದ ಜವಾಬ್ದಾರಿ ಹೊಂದಿರುವ ಬೆಂಗಳೂರು ನಗರ ಜಿಲ್ಲಾ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್‌ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು. ಅವರ ವಿರುದ್ಧ ಇಲಾಖಾ ತನಿಖೆಯನ್ನು ನಡೆಸಬೇಕು.

೫. ತನಿಖೆಗಾಗಿ ಅಧಿಕಾರಿಗಳ ನೇಮಕ
ಹೊಸ ಮಾರ್ಗಸೂಚಿ ಮತ್ತು ಆಯೋಗದ ನಿರ್ದೇಶನದಂತೆ ಮೂರು ಕ್ಷೇತ್ರಗಳ ಮತದಾರರ ಪಟ್ಟಿಯನ್ನು ಯಾವುದೇ ಸಂಶಯಕ್ಕೆ ಅವಕಾಶವಿಲ್ಲದೆ ಮರುರೂಪಿಸುವುದಕ್ಕಾಗಿ ಮೂವರು ಅಧಿಕಾರಿಗಳನ್ನು ನೇಮಿಸಲಾಗಿದೆ.
ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌-ಶಿವಾಜಿ ನಗರ
ಡಾ.ಆರ್‌. ವಿಶಾಲ್‌-ಚಿಕ್ಕಪೇಟೆ
ಅಜಯ್‌ ನಾಗಭೂಷಣ್‌: ಮಹದೇವಪುರ

ಮತದಾರರ ಪಟ್ಟಿ ಮೇಲುಸ್ತುವಾರಿಗಳ ನೇಮಕ
ಉಜ್ವಲ್‌ ಘೋಷ್‌ (ಬಿಬಿಎಂಪಿ ಕೇಂದ್ರ) ರಾಮಚಂದ್ರನ್‌ ಆರ್‌. (ಬಿಬಿಎಂಪಿ ಉತ್ತರ), ಪಿ. ರಾಜೇಂದ್ರ ಚೋಳನ್‌ (ದಕ್ಷಿಣ), ಡಾ. ಎನ್‌. ಮಂಜುಳಾ (ಬೆಂಗಳೂರು ನಗರ)

ಇದನ್ನೂ ಓದಿ | Voter Data | ಮತದಾರರ ಪಟ್ಟಿ ಅಕ್ರಮ; ಕೇಂದ್ರ ಚುನಾವಣಾ ಆಯೋಗಕ್ಕೆ ರಾಜ್ಯ ಕಾಂಗ್ರೆಸ್‌ ನಾಯಕರಿಂದ ದೂರು

Exit mobile version