Site icon Vistara News

Voter data | ಮಾವನ ಮನೆಯಲ್ಲಿ ದಾಖಲೆ ಬಚ್ಚಿಟ್ಟು ಪರಾರಿ ಆದ ರವಿಕುಮಾರ್‌ ನಿಜಕ್ಕೂ ಯಾರು? ಇಲ್ಲಿದೆ ಸಮಗ್ರ ವಿವರ

Ravi kumar - kempegowda chilume

ನೆಲಮಂಗಲ/ಬೆಂಗಳೂರು: ರಾಜ್ಯಾದ್ಯಂತ ಭಾರಿ ಸುದ್ದಿಯಲ್ಲಿರುವ ಚಿಲುಮೆ ಗ್ರೂಪ್ಸ್‌ನ ಮಾಲೀಕ ರವಿಕುಮಾರ್‌ ಮತ್ತು ಅವರ ಸಹೋದರ ಕೆಂಪೇಗೌಡ ಅವರ ಇತಿಹಾಸ ಮತ್ತು ಕೆಲವೊಂದು ಅಕ್ರಮಗಳ (Voter data) ಬಗ್ಗೆ ಸಾಕಷ್ಟು ಮಾಹಿತಿಗಳು ಬಯಲಾಗಿವೆ. ಈ ಇಬ್ಬರು ಆರೋಪಿಗಳು ತಮ್ಮ ಮೇಲೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗುತಿದ್ದಂತೆಯೇ ದಾಖಲೆಗಳನ್ನೆಲ್ಲ ತಮ್ಮ ಮಾವನ ತೋಟದ ಮನೆಯಲ್ಲಿ ಅಡಗಿಸಿಟ್ಟು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಈಗ ಅಣ್ಣ, ತಮ್ಮಂದಿರ ಪತ್ನಿಯರನ್ನು ಪೊಲೀಸರು ತೀವ್ರ ವಿಚಾರಣೆಗೆ ಗುರಿಪಡಿಸಿದ್ದು ಅವರಿಗೆ ಸಂಕಷ್ಟ ಎದುರಾಗಿದೆ.

ಇವರು ದಾಬಸ್‌ ಪೇಟೆಯವರು
ರವಿಕುಮಾರ್‌ ಮತ್ತು ಸಹೋದರ ಕೆಂಪೇ ಗೌಡ ಅವರು ತಮ್ಮ ಚಿಲುಮೆ ಗ್ರೂಪ್ಸ್‌ನ್ನು ಮೊದಲು ಪ್ರಾರಂಭಿಸಿದ್ದು ದಾಬಸ್‌ ಪೇಟೆಯಲ್ಲಿ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಕಲ್ಲನಾಯನಹಳ್ಳಿಯಲ್ಲಿ ಇವರ ಮನೆ ಇದೆ. ಸಾಮಾನ್ಯ ಹಿನ್ನೆಲೆಯಿಂದ ಬಂದಿರುವ ಇವರಿಬ್ಬರೂ ಈಗ ಸಾಕಷ್ಟು ಶ್ರೀಮಂತರು.

ಏನೇನು ಆಸ್ತಿಗಳಿವೆ?
ಒಂದು ತೋಟದ ಮನೆ, ಒಂದು ಡುಫ್ಲೆಕ್ಸ್‌ ಮನೆ, ಎರಡು ಸೈಟ್, 3 ಎಕರೆ ಅಡಿಕೆ ತೋಟ, ಯಂಟಗಾನಹಳ್ಳಿಯಲ್ಲಿ 5 ಎಕರೆ, ಅಗಳಕುಪ್ಪೆ ಗ್ರಾಮದಲ್ಲಿ 10 ಗುಂಟೆ, ಮಲ್ಲೇಶ್ವರಂನಲ್ಲಿ ಮೂರು ಕಟ್ಟಡ, ನೆಲಮಂಗಲದಲ್ಲಿ 2 ಅಪ್‌ಸ್ಟೇರ್‌ ಬಿಲ್ಡಿಂಗನ್ನು ಇವರು ಹೊಂದಿದ್ದಾರೆ. ಇದರ ಜತೆಗೆ ನೆಲಮಂಗಲ ಸುತ್ತಮುತ್ತ ಕೋಟ್ಯಾಂತರ ರೂ. ಬೆಲೆಬಾಳುವ ಜಮೀನು ಇದೆ ಎಂದು ಹೇಳಲಾಗುತ್ತಿದೆ.

ಶಿಕ್ಷಣ ಪಡೆದದ್ದು ಎಲ್ಲಿ?
ರವಿಕುಮಾರ್ ಅಗಳಗುಪ್ಪೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದು ಸಿವಿಜಿ ಶಾಲೆಯಲ್ಲಿ ಪ್ರೌಡಶಿಕ್ಷಣ ಮುಗಿಸಿದ್ದ. ಸಿದ್ದಗಂಗಾ ಮಠದಲ್ಲಿ ಡಿಇಡಿ ವ್ಯಾಸಂಗ ಮಾಡಿ ಬಳಿಕ ಕೆಲಸವಿಲ್ಲದೆ ಓಡಾಡಿಕೊಂಡಿದ್ದ ಎನ್ನಲಾಗಿದೆ. ಶಿವಾನಂದ್ ಇಡಕಲ್ ಎಂಬವರು ಬಿಬಿಎಂಪಿ ಸರ್ವೆ ಕಾರ್ಯ ಮಾಡುತ್ತಿದ್ದಾಗ ಅವರಿಗೆ ಸಹಾಯಕನಾಗಿ ಸೇರಿಕೊಂಡ. ಆವಾಗ ಮಲ್ಲೇಶ್ವರದ ಸಂಪರ್ಕ ಆಗಿತ್ತು.. ಅಲ್ಲಿಂದ ಬದುಕೇ ಬದಲಾಯಿತು ಎಂದು ತಿಳಿದುಬಂದಿದೆ.

ಬೆದರಿಕೆ ಹಾಕುತ್ತಿದ್ದರೆಂಬ ಆರೋಪ
ರವಿಕುಮಾರ್‌ ಅವರು ತಮಗೆ ಮಂತ್ರಿಗಳು ಸೇರಿದಂತೆ ಹಲವರ ಪರಿಚಯವಿದೆ ಎಂದು ಹೇಳಿ ಹಲವರನ್ನು ಬೆದರಿಸುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಸಿಎಂ ಅವರ ಹೆಸರನ್ನೂ ಈ ಬೆದರಿಕೆ ಬಳಸುತ್ತಿದ್ದ ಎಂಬ ಆಪಾದನೆಗಳಿವೆ. ಅಗಳಕುಪ್ಪೆ ಗ್ರಾಮದ ಸುತ್ತಮುತ್ತಲ ಹುಡುಗರನ್ನು ಬಿಬಿಎಂಪಿ ಸರ್ವೆ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದ ಎಂದು ಹಲವರು ಹೇಳುತ್ತಾರೆ.

ರಿಯಲ್‌ ಎಸ್ಟೇಟ್‌ನಿಂದ ಎನ್‌ಜಿಒಗೆ
ಮೊದ ಮೊದಲು ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ ರವಿಕುಮಾರ್‌ ಈ ಸಂದರ್ಭದಲ್ಲಿ ರಾಜಕಾರಣಿಗಳು ಹಾಗೂ ದೊಡ್ಡ ವ್ಯಕ್ತಿಗಳ ಸಂಪರ್ಕ ಬೆಳೆಸಿದ್ದ. ಬಳಿಕ ಆಪ್ತರು, ಹಿತೈಷಿಗಳ ಸಲಹೆಯಂತೆ ಚಿಲುಮೆ ಎನ್ ಜಿ ಒ ಸ್ಥಾಪಿಸಿದ್ದ.

ಒಂದು ಎನ್‌ಜಿಒ ಆಗಿ ಸರ್ಕಾರಿ ಸಂಸ್ಥೆಗಳ ಮೂಲಕ ಪ್ರಾಜೆಕ್ಟ್ ಪಡೆದು ಸರ್ವೇ ಕಾರ್ಯಗಳಿಗೆ ಇಳಿದಿದ್ದ. 2012ರಿಂದ ಹಲವು ಸರ್ವೇಗಳನ್ನ ನಡೆಸಿದ್ದ ಆತ ಅದೇ ರೀತಿ ಬಿಬಿಎಂಪಿ ಮೂಲಕ ಚುನಾವಣಾ ಜಾಗೃತಿ ಕೆಲಸಕ್ಕೆ ಕೈ ಹಾಕಿದ್ದ. ಸರ್ವೇ ಹೆಸರಿನಲ್ಲಿ ವೈಯಕ್ತಿಕ ಮಾಹಿತಿ ಕಲೆ ಹಾಕಿದ್ದೇ ಈಗ ಆತ ಸಂಕಷ್ಟದಲ್ಲಿ ಸಿಲುಕಲು ಪ್ರಮುಖ ಕಾರಣ.

ದಾಖಲೆ ಅಡಗಿಸಿಟ್ಟು ಪರಾರಿ
ಕಲ್ಲನಾಯಕನಹಳ್ಳಿಯ ಮನೆಯ ಬಾಗಿಲಿನಲ್ಲಿ ಚಿಲುಮೆ ಗ್ರೂಪ್‌ನ ನಾಮಫಲಕವನ್ನು ಹಾಕಲಾಗಿತ್ತು. ವೋಟರ್‌ ಐಡಿ ಹಗರಣ ಬೆಳಕಿಗೆ ಬರುತ್ತಿದ್ದಂತೆಯೇ ಅದನ್ನು ಕಿತ್ತು ಹಾಕಿ ಅಣ್ಣ-ತಮ್ಮ ಪರಾರಿಯಾಗಿದ್ದಾರೆ. ಇವರಿಬ್ಬರೂ ಮೂರು ದಿನಗಳ ಹಿಂದೆ ದಾಖಲೆಗಳ ಸಮೇತ ಪರಾರಿಯಾಗಿದ್ದಾರೆ. ಇವುಗಳಲ್ಲಿ ಕೆಲವನ್ನು ತಮ್ಮ ಮಾವನ ತೋಟದ ಮನೆಯಲ್ಲಿ ಬಚ್ಚಿಟ್ಟಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಮಾಹಿತಿ ಪಡೆದ ಹಲಸೂರುಗೇಟ್ ಪೊಲೀಸರು ತಡರಾತ್ರಿ ದಾಳಿ ನಡೆಸಿ, ದಾಖಲೆ‌ ಸೇರಿದಂತೆ ಇಬ್ಬರ ಪತ್ನಿಯರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ದಾಖಲೆಗಳನ್ನು ಬಚ್ವಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಟಿ ಬೇಗೂರಿನಲ್ಲಿರುವ ತೋಟದ ಮನೆಯಲ್ಲಿ ದಾಖಲೆಗಳು ಪತ್ತೆಯಾಗಿವೆ.

ಚಿಲುಮೆ ಸಂಸ್ಥೆ ಮಾಡಿದ ಕೆಲಸವೇನು?

ಚಿಲುಮೆ ಸಂಸ್ಥೆ ರಾಜಕೀಯ ಬೆಳವಣಿಗೆಗಳಿಗೆ ಸಂಬಂಧಿಸಿ ದೊಡ್ಡ ಮಟ್ಟದ ಸರ್ವೆ ನಡೆಸುತ್ತಿತ್ತು. ಪ್ರತಿಯೊಬ್ಬ ಮತದಾರನ ಮನೋಸ್ಥಿತಿ ತಿಳಿದು ಸಂಬಂಧಿತ ರಾಜಕಾರಣಿಗಳಿಗೆ ಅಪ್‌ಡೇಟ್‌ ಮಾಡುತ್ತಿತ್ತು. ಎಷ್ಟು ಜನ ಮತದಾರರಿದ್ದಾರೆ, ಅವರ ಮನಸ್ಥಿತಿ ಹೇಗಿದೆ ಎಂದು ತಿಳಿದು ಅದನ್ನು ಡಾಟಾ ರೂಪದಲ್ಲಿ ರಾಜಕಾರಣಿಗಳಿಗೆ ನೀಡುತ್ತಿತ್ತು. ತಮ್ಮಲ್ಲಿ ಡಾಟಾ ಇದೆ, ಹಣ ಕೊಟ್ಟರೆ ಕೊಡುತ್ತೇವೆ ಎಂದು ರಾಜಕಾರಣಿಗಳಿಗೆ ತಿಳಿಸುತ್ತಿತ್ತು. ಹಲವು ರಾಜಕಾರಣಿಗಳು ಅದನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ಮಹದೇವಪುರ ಕ್ಷೇತ್ರದ ಮತದಾರರ ಮಾಹಿತಿಯನ್ನು ಸಂಗ್ರಹಿಸಿದ್ದ ಚಿಲುಮೆ ಸಂಸ್ಥೆ ಅದನ್ನು ಸದ್ಯಕ್ಕೆ ಬಚ್ಚಿಟ್ಟಿದೆ. ಈ ರೀತಿ ಅಕ್ರಮ ಮಾಹಿತಿ ಸಂಗ್ರಹದ ವಿಚಾರ ಬಿಬಿಎಂಪಿಗೆ ಗೊತ್ತಾಗಿ ನವೆಂಬರ್‌ ೩ರಂದು ನೋಟಿಸ್‌ ನೀಡಿತ್ತು. ಹೀಗಾಗಿ ಕೂಡಲೇ ಎಚ್ಚೆತ್ತುಕೊಂಡ ರವಿಕುಮಾರ್‌ ಮತ್ತು ಕೆಂಪೇಗೌಡ ಡಾಟಾವನ್ನು ಕಣ್ಮರೆ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ | Voter data | ಚುನಾವಣೆ ಆಯೋಗಕ್ಕೆ ಕಾಂಗ್ರೆಸ್‌ ದೂರು, ಯಾರನ್ನೂ ಬಂಧಿಸಿಲ್ಲ ಎಂದು ಆಕ್ರೋಶ, ಬಾಗಿಲಲ್ಲೇ ಧರಣಿ

Exit mobile version