Site icon Vistara News

Voter Data | ಖಾಲಿ ಬಿಎಲ್‌ಒ ಕಾರ್ಡ್‌ಗಳಿಗೆ ಸೀಲ್‌, ಸಹಿ ಮಾಡಿ ವಿತರಿಸುತ್ತಿದ್ದ ಆರ್‌ಒಗಳು!

Voter Data

ಬೆಂಗಳೂರು: ಮತದಾರರ ಪಟ್ಟಿ ಅಕ್ರಮ ಪ್ರಕರಣ (Voter Data) ದಿನದಿಂದ ದಿನಕ್ಕೆ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಒಂದು ಕಡೆ ಹಗರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಅಧಿಕಾರಿಗಳಿಗೆ ಕೇಂದ್ರ ಚುನಾವಣಾ ಆಯೋಗ ಬಿಸಿ ಮುಟ್ಟಿಸುತ್ತಿದೆ. ಮತ್ತೊಂದೆಡೆ ತನಿಖೆ ಕೈಗೊಂಡಿರುವ ಹಲಸೂರು ಗೇಟ್‌ ಪೊಲೀಸರು, ಪ್ರಕರಣದಲ್ಲಿ ಮೂವರು ಕಂದಾಯ ಅಧಿಕಾರಿಗಳು (ಆರ್‌ಒ) ಹಾಗೂ ಒಬ್ಬ ಸಹಾಯಕ ಕಂದಾಯ ಅಧಿಕಾರಿಯನ್ನು (ಎಆರ್‌ಒ) ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಮತದಾರರ ಮಾಹಿತಿ ಕಳವು ಹಗರಣ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಹಲಸೂರು ಗೇಟ್ ಪೊಲೀಸರು ತನಿಖೆ ಮತ್ತಷ್ಟು ಚುರುಕುಗೊಳಿಸಿದ್ದಾರೆ. ಹಗರಣದ ಪ್ರಮುಖ ಆರೋಪಿಯಾಗಿರುವ ಚಿಲುಮೆ ಸಂಸ್ಥೆ ಮುಖ್ಯಸ್ಥ ಹಾಗೂ ಪ್ರಕರಣದ ಕಿಂಗ್‌ಪಿನ್ ರವಿಕುಮಾರ್ ಸೇರಿ ಆರು ಜನ ಚಿಲುಮೆ ಸಂಸ್ಥೆಯ ಸಿಬ್ಬಂದಿಯನ್ನು ಬಂಧಿಸಿದ್ದ ಪೊಲೀಸರು, ಶನಿವಾರ ರಾತ್ರಿ ಚಿಲುಮೆ ಸಂಸ್ಥೆ ಹಾಗೂ ಬಿಬಿಎಂಪಿ ನಡುವೆ ಮಧ್ಯವರ್ತಿಯಾಗಿದ್ದ ಶಿವಕುಮಾರ್ ಎಂಬಾತನನ್ನೂ ಬಂಧಿಸಿದ್ದರು.

ಇದನ್ನೂ ಓದಿ | Karnataka Election 2023 | ಕಾಂಗ್ರೆಸ್‌ನಲ್ಲಿ ಸಿಎಂ ಗಾದಿಗೆ ಮುಂದುವರಿದ ಸಿದ್ದು VS ಡಿಕೆಶಿ ಪೈಪೋಟಿ

ಇದರ ಬೆನ್ನಲ್ಲೇ ತನಿಖೆಯನ್ನು ಮತ್ತಷ್ಟು ಚುರುಕುಗೊಳಿದ ಪೊಲೀಸರು ಆರೋಪಿಗಳು ನೀಡಿದ ಮಾಹಿತಿ ಆಧಾರದ ಮೇಲೆ ಚಿಲುಮೆ ಸಂಸ್ಥೆಯ ಅಕ್ರಮದಲ್ಲಿ ನೇರವಾಗಿ ಭಾಗಿಯಾಗಿ, ಕೊನೆಗೆ ತಮಗೇನೂ ಗೊತ್ತಿಲ್ಲದಂತೆ ನಟಿಸಿ, ಪೊಲೀಸ್ ದೂರು ನೀಡಿದ್ದ ಬಿಬಿಎಂಪಿ ಮಹದೇವಪುರ ಕ್ಷೇತ್ರದ ಬಂಧಿತ ಕಂದಾಯ ಅಧಿಕಾರಿ ಚಂದ್ರಶೇಖರ್, ಚಿಕ್ಕಪೇಟೆಯ ವಿ.ಬಿ.ಭೀಮಾಶಂಕರ್, ಶಿವಾಜಿನಗರದ ಸೊಹೆಲ್ ಅಹಮದ್ ಹಾಗೂ ಆರ್‌ಆರ್ ನಗರದ ಎಆರ್‌ಒ ಮಹೇಶ್‌ ಎಂಬುವವರನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.

ಖಾಲಿ ಐಡಿ ಕಾರ್ಡ್‌ಗಳಿಗೆ ಸೀಲ್‌, ಸಹಿ
ಖಚಿತ ಮಾಹಿತಿ ಹಾಗೂ ದಾಖಲೆಗಳ ಆಧಾರದಲ್ಲಿ ವಿಚಾರಣೆ ನಡೆಸಿದಾಗ ಬಂಧಿತ ಕಂದಾಯ ಅಧಿಕಾರಿಗಳು (ಆರ್‌ಒ) ತಾವು ಮಾಡಿರುವ ತಪ್ಪನ್ನು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ. ಚಿಲುಮೆ ಸಂಸ್ಥೆಗೆ ಬೂತ್‌ ಮಟ್ಟದ ಅಧಿಕಾರಿ (ಬಿಎಲ್‌ಒ) ಕಾರ್ಡ್ ವಿತರಣೆ ಮಾಡುತ್ತಿದ್ದ ವೇಳೆ ಖಾಲಿ ಐಡಿ ಕಾರ್ಡ್‌ಗಳಿಗೆ ಸೀಲ್, ಸಹಿ ಹಾಕಿ ನೀಡುತ್ತಿದ್ದರು ಎಂಬ ವಿಷಯ ಬಯಲಾಗಿದೆ. ನಂತರ ಚಿಲುಮೆ ಸಂಸ್ಥೆ ತಮಗೆ ಬೇಕಾದವರ ಫೋಟೋ ಮತ್ತು ಹೆಸರು ಹಾಕಿಕೊಳ್ಳುತ್ತಿದ್ದರು ಎನ್ನಲಾಗಿದೆ. ಆರ್‌ಒ ಮತ್ತು ಎಆರ್‌ಒಗಳಿಗೆ ಬಿಎಲ್‌ಒ ಕಾರ್ಡ್ ನೀಡುವ ಅಧಿಕಾರವೇ ಇಲ್ಲ. ಇದರಿಂದ ಅಧಿಕಾರ ದುರ್ಬಳಕೆ ಮಾಡಿರುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ.

ಮತದಾರರ ಪಟ್ಟಿ ಪರಿಶೀಲನೆ
ಮತ್ತೊಂದೆಡೆ ಮೂರ್ನಾಲ್ಕು ದಿನಗಳಿಂದ ತನಿಖೆ ತೀವ್ರಗೊಳಿಸಿದ ಚುನಾವಣಾ ಆಯೋಗದ ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಪ್ರಮುಖವಾಗಿ ಚಿಕ್ಕಪೇಟೆ, ಶಿವಾಜಿನಗರ ಮತ್ತು ಮಹದೇವಪುರ ಕ್ಷೇತ್ರದ ಮತದಾರರ ಪಟ್ಟಿ ಪರಿಶೀಲನೆ ನಡೆಸುತ್ತಿದ್ದಾರೆ. ಅದರಲ್ಲಿ ಇತ್ತೀಚೆಗೆ ಮತಪಟ್ಟಿಯಿಂದ ಡಿಲೀಟ್ ಆಗಿರುವ ಹಾಗೂ ಸೇರ್ಪಡೆಯಾದವರ ಮಾಹಿತಿ ತಿಳಿಯಲು ಫಾರಂ 6, 7, 8 ಅರ್ಜಿ ನಮೂನೆಗಳ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಸದ್ಯ ಬಂಧಿತ ಆರ್‌ಒಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಕೋರಮಂಗಲ ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸಿರುವ ಪೊಲೀಸರು, ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದು ತನಿಖೆ ಮುಂದುವರಿಸಲು ಪ್ಲ್ಯಾನ್ ಮಾಡಿದ್ದಾರೆ. ಒಂದು ವೇಳೆ ಕಸ್ಟಡಿಗೆ ನೀಡದೆ ಇದ್ದಲ್ಲಿ ಸೋಮವಾರ ಕೋರ್ಟ್‌ನಲ್ಲಿ ಆರೋಪಿಗಳನ್ನು ಕಸ್ಟಡಿಗೆ ನೀಡುವಂತೆ ಮನವಿ ಮಾಡಲಿದ್ದಾರೆ.

ಈ ಬಗ್ಗೆ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ ಗೌಡ ಪ್ರತಿಕ್ರಿಯಿಸಿ, ಚಿಲುಮೆ ಸಂಸ್ಥೆಯ ಮತದಾರರ ಮಾಹಿತಿ ಸಂಗ್ರಹ ಪ್ರಕರಣದಲ್ಲಿ ಮೂವರು ಆರ್‌ಒ ಹಾಗೂ ಒಬ್ಬ ಎಆರ್‌ಒನನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದೇವೆ. ಐಡಿ ಕಾರ್ಡ್ ವಿತರಣೆಯಲ್ಲಿ ಇವರ ಪಾತ್ರವಿದ್ದು, ಚಿಲುಮೆ ಸಂಸ್ಥೆ ಜತೆ ಸೇರಿ ಅಕ್ರಮ ಎಸಗಿರುವುದು ಸಾಬೀತಾಗಿದೆ. ಹಾಗಾಗಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಪೊಲೀಸರ ವಿರುದ್ಧ ತನಿಖೆ ನೆಪದಲ್ಲಿ ಮಾನಸಿಕ ಕಿರುಕುಳ ಆರೋಪ
ಚಿಲುಮೆ ಸಂಸ್ಥೆಯ ಮತದಾರರ ಮಾಹಿತಿ ಕಳವು ಪ್ರಕರಣದ ತನಿಖೆ ನೆಪದಲ್ಲಿ ಪೊಲೀಸರು, ಬಿಬಿಎಂಪಿ ಸಿಬ್ಬಂದಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಗಳು ಮತ್ತು ನೌಕರರ ಸಂಘ ಆರೋಪಿಸಿದೆ. ಮತದಾರರ ದತ್ತಾಂಶ ಕಳವಿಗೆ ಸಹಕಾರ ಹಾಗೂ ಬೂತ್‌ ಮಟ್ಟದ ಅಧಿಕಾರಿ (ಬಿಎಲ್‌ಒ) ಗುರುತಿನ ಚೀಟಿ ನೀಡುವಲ್ಲಿ ಕರ್ತವ್ಯಲೋಪ ಸಾಬೀತಾಗಿದ್ದರಿಂದ ಮೂವರು ಕಂದಾಯ ಅಧಿಕಾರಿಗಳು ಹಾಗೂ ಒಬ್ಬ ಸಹಾಯಕ ಕಂದಾಯ ಅಧಿಕಾರಿಯನ್ನು ಹಲಸೂರು ಗೇಟ್‌ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಸಿಬ್ಬಂದಿಗೆ ವಿಚಾರಣೆ ನೆಪದಲ್ಲಿ ಕಿರುಕುಳ ನೀಡಲಾಗುತ್ತಿದೆ. ಹೀಗಾಗಿ ಪ್ರಕರಣ ತನಿಖೆ ಹೊಣೆಯನ್ನು ಯಾವುದಾದರೂ ತನಿಖಾ‌ಸಂಸ್ಥೆಗೆ ನೀಡುವಂತೆ ಆಗ್ರಹ ನೌಕರರ ಸಂಘ ಆಗ್ರಹಿಸಿದೆ.

ಇದನ್ನೂ ಓದಿ | ವಿಸ್ತಾರ ವಿಶ್ಲೇಷಣೆ | ಮೀಸಲಾತಿ ʼಅಸ್ತ್ರʼವೇ ʼತಿರುಗುಬಾಣʼ ಆಗುವ ಅಪಾಯದ ಅಂಚಿನಲ್ಲಿ ಬಿಜೆಪಿ ಸರ್ಕಾರ

Exit mobile version