ಬೆಂಗಳೂರು: ಮತದಾರರ ಮಾಹಿತಿ ಮಾರಾಟ ಆರೋಪ (Voter data) ಎದುರಿಸುತ್ತಿರುವ ಚಿಲುಮೆ ಸಂಸ್ಥೆ ಮೇಲೆ ಪೊಲೀಸ್ ಇಲಾಖೆ ಮುಗಿಬಿದ್ದಿದೆ. ಶುಕ್ರವಾರ ಸಂಸ್ಥೆಯ ಮಲ್ಲೇಶ್ವರ ಕಚೇರಿಗೆ ಲಗ್ಗೆ ಇಟ್ಟು ಹಲವು ದಾಖಲೆಗಳು, ಹಣ ಎಣಿಸುವ ಯಂತ್ರಗಳನ್ನು ವಶಕ್ಕೆ ಪಡೆದಿದ್ದ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದರು. ಈ ನಡುವೆ ಸಂಸ್ಥೆಯ ಮಾಲೀಕನಾಗಿರುವ ರವಿಕುಮಾರ್ ಸೇರಿದಂತೆ ಮೂವರು ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ನಡೆಯುತ್ತಿದೆ. ಪೊಲೀಸರು ರವಿ ಕುಮಾರ್ ಅವರ ಪತ್ನಿ ಐಶ್ವರ್ಯ ಅವರಿಂದಲೂ ಮಾಹಿತಿ ಪಡೆದುಕೊಂಡಿದ್ದಾರೆ.
ಚಿಲುಮೆ ಕಚೇರಿಗೆ ದಾಳಿ ಮಾಡಿದ ಹಲಸೂರು ಗೇಟ್ ಪೊಲೀಸರು ಅಲ್ಲಿಂದ 80 ಬಿಎಲ್‌ಒ ಕಾರ್ಡ್‌ಗಳು, ಹಣ ಎಣಿಸುವ ಯಂತ್ರ, ಈ ಹಿಂದಿನ ವೋಟರ್ ಲಿಸ್ಟ್ ಗಳು, ಕೆಲವೊಂದು ದಾಖಲೆಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ನಾಲ್ವರನ್ನು ವಶಕ್ಕೆ ಪಡೆದಿರುವ ಪೊಲೀಸರು ಮತ್ತೆ ನಾಲ್ವರು ಸಿಬ್ಬಂದಿಗೆ ನೋಟಿಸ್ ನೀಡಿದ್ದಾರೆ. ಸಂಸ್ಥೆಯ ಮೇಲೆ ಎಫ್‌ಐಆರ್ ದಾಖಲಾಗುತ್ತಿದ್ದಂತೆಯೇ ಮಾಲೀಕ ರವಿಕುಮಾರ್ ತಲೆ ಮರೆಸಿಕೊಂಡಿದ್ದಾರೆ.
ಹಣಕಾಸು ವ್ಯವಹಾರದ ಪರಿಶೀಲನೆ
ಇದೇ ವೇಳೆ ಎಸಿಪಿ ನಾರಾಯಣ ಸ್ವಾಮಿ ನೇತೃತ್ವದ ತಂಡ ಚಿಲುಮೆ ಸಂಸ್ಥೆಗೆ ಸೇರಿದ ಹಣಕಾಸು ವ್ಯವಹಾರಗಳ ತನಿಖೆ ನಡೆಸುತ್ತಿದೆ. ಸಂಸ್ಥೆಯ ಖಾತೆಗಳ ಬಗ್ಗೆ ವಿವರ ಪಡೆದು ಅಕೌಂಟ್‌ಗೆ ಬಂದಿರುವ ಹಣಕಾಸಿನ ಮೂಲಗಳ ಬಗ್ಗೆ ಮಾಹಿತಿ ಹುಡುಕಾಡುತ್ತಿದೆ. ತನಿಖೆಗಾಗಿ ತಾತ್ಕಾಲಿಕವಾಗಿ ಅಕೌಂಟ್ ಫ್ರೀಜ್ ಮಾಡಲು ಬ್ಯಾಂಕ್‌ಗಳಿಗೆ ಪತ್ರ ಬರೆಯಲು ಮುಂದಾಗಿದ್ದಾರೆ.
ಸಮೀಕ್ಷೆ ಮಾಡ್ತೀವಿ ಹಣ ಕೊಡಿ ಎಂದಿದ್ದ ಚಿಲುಮೆ
ಈ ನಡುವೆ, ಚಿಲುಮೆ ಸಂಸ್ಥೆಯ ಮತ್ತಷ್ಟು ಕಳ್ಳಾಟಗಳು ಬಯಲಾಗಿದ್ದು, ಇದು ಸರ್ವೆ ಮಾಡುವುದಾಗಿ ರಾಜಕಾರಣಿಗಳಿಗೆ ಮೊರೆ ಹೋಗಿರುವ ಮಾಹಿತಿ ಹೊರಬಿದ್ದಿದೆ. ನಿಮಗಾಗಿ ಪೊಲಿಟಿಕಲ್ ಸರ್ವೆ ಮಾಡಿಕೊಡುತ್ತೇವೆ. ಹಣ ಕೊಡಿ ಎಂದು ನಗರದ ೨೦ಕ್ಕೂ ಅಧಿಕ ರಾಜಕಾರಣಿಗಳಿಗೆ ಗಾಳ ಹಾಕಿತ್ತು. ಬಿಜೆಪಿ ನಾಯಕ ನಂದೀಶ್ ರೆಡ್ಡಿ ಅವರಿಗೂ ಇದೇ ರೀತಿ ಗಾಳ ಹಾಕಿ ೧೮ ಲಕ್ಷ ರೂ. ಪಡೆದುಕೊಂಡಿತ್ತು ಎನ್ನಲಾಗಿದೆ. ಈ ವಿಚಾರಗಳೆಲ್ಲ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ನಿಮ್ಮ ಕ್ಷೇತ್ರದ ಸಂಪೂರ್ಣ ಮಾಹಿತಿ ನಮ್ಮಲ್ಲಿ ಇದೆ. ಬೇಕಿದ್ದರೆ ನಿಮಗೆ ಶೇರ್ ಮಾಡುತ್ತೇವೆ. ಹಣ ಕೊಡಿ ಎಂದು ರಾಜಕಾರಣಿಗಳಿಗೆ ಅದು ಸಂದೇಶ ರವಾನಿಸಿತ್ತು ಎನ್ನಲಾಗಿದೆ.
ತುಷಾರ್ ಗಿರಿನಾಥ್ ವಜಾ ಆಗ್ರಹಿಸಿ ಪ್ರತಿಭಟನೆ
ಈ ನಡುವೆ ಮತದಾರರ ದತ್ತಾಂಶ ಕಳವು ಮಾಡಲು ಅವಕಾಶ ನೀಡಿದ ಆರೋಪ ಎದುರಿಸುತ್ತಿರುವ ಬಿಬಿಎಂಪಿ ಚೀಫ್ ಕಮಿಷನರ್ ತುಷಾರ್ ಗಿರಿನಾಥ್ ಅವರನ್ನು ಕೂಡಲೇ ವಜಾ ಮಾಡುವಂತೆ ಆಗ್ರಹಿಸಿ ಬಿಬಿಎಂಪಿ ಕಚೇರಿ ಎದುರು ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ | Voter data | ರಾಜಕೀಯ ನಾಯಕರ ಪರ ಖಾಸಗಿ ಸಮೀಕ್ಷೆ ಮಾಡ್ತಿತ್ತಾ ಚಿಲುಮೆ? ನಂದೀಶ್ ರೆಡ್ಡಿ 18 ಲಕ್ಷ ಕೊಟ್ಟಿದ್ಯಾಕೆ?