ಬೆಂಗಳೂರು: ಚಿಲುಮೆ ಸಂಸ್ಥೆಯು ಮತದಾರರ ಪಟ್ಟಿ ದತ್ತಾಂಶವನ್ನು ದುರುಪಯೋಗ ಪಡಿಸಿಕೊಂಡಿದೆ ಎಂದು ಕಾಂಗ್ರೆಸ್ ನಾಯಕರ ನಿಯೋಗ ಪೊಲೀಸ್ ಕಮಿಷನರ್‌ಗೆ ದೂರು ನೀಡಿದ ಬೆನ್ನಲ್ಲೇ ಶುಕ್ರವಾರ ನಗರದಲ್ಲಿರುವ ಚಿಲುಮೆ ಕಚೇರಿಗೆ ಪೊಲೀಸರು ದಾಳಿ ಮಾಡಿದ್ದು, ನಾಲ್ವರನ್ನು ಬಂಧಿಸಿದ್ದಾರೆ. ಜತೆಗೆ ಮಹದೇವಪುರದ ಕಂದಾಯ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.
ಅಕ್ರಮವಾಗಿ ಮತದಾರರ ಮಾಹಿತಿ ಕಲೆ ಹಾಕಿದ ಆರೋಪದಡಿ ಚಿಲುಮೆ ಸಂಸ್ಥೆ ವಿರುದ್ಧ ನಗರದ ಎರಡು ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಕಾಡುಗೋಡಿ ಮತ್ತು ಹಲಸೂರು ಗೇಟ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು ಕಾಂಗ್ರೆಸ್ ನಾಯಕರ ದೂರಿನ ಮೇರೆ ಎಫ್ ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಎಫ್ಐಆರ್ ದಾಖಲು ಮಾಡಿಕೊಂಡ ಕೂಡಲೇ ಪೊಲೀಸರು ತ್ವರಿತವಾಗಿ ಕಾರ್ಯಾಚರಣೆ ಆರಂಭಿಸಿದ್ದು, ಶುಕ್ರವಾರ ಮಲ್ಲೇಶ್ವರಂನ ಹದಿನಾರನೇ ಕ್ರಾಸ್‌ನಲ್ಲಿರುವ ಚಿಲುಮೆ ಕಚೇರಿ ಮೇಲೆ ದಾಳಿ ನಡೆಸಿದರು. ಲಾಕ್ ಮಾಡಿಕೊಂಡು ಹೋಗಿದ್ದ ಕಚೇರಿಗೆ ವಿತ್ ವಾರಂಟ್ ಎಂಟ್ರಿ ಕೊಟ್ಟ ಹಲಸೂರು ಗೇಟ್ ಪೊಲೀಸರು ಕಚೇರಿಯ ಬೀಗ ಮುರಿದು ಒಳ ಹೋಗಿ ಕಚೇರಿಯನ್ನು ಸಂಪೂರ್ಣ ಜಾಲಾಡಿದ್ದಾರೆ.
ಚಿಲುಮೆ ಸಂಸ್ಥೆ ವಿರುದ್ಧ ಈಗಾಗಲೇ ಎರಡು ಠಾಣೆಗಳಲ್ಲಿ ಎಫ್ಐಆರ್ ಆಗಿದ್ದು ಮತಗಟ್ಟೆ ಮಟ್ಟದ ಸಮನ್ವಯ ಅಧಿಕಾರಿಗಳು ಎಂದು ನಕಲಿ ಗುರುತಿನ ಚೀಟಿ ಸೃಷ್ಟಿಸಿಕೊಂಡು ನೇರವಾಗಿ ತಾವೇ ಮತದಾರರ ಐಡಿ ಕಾರ್ಡ್ ಮತ್ತು ಆಧಾರ್ ಕಾರ್ಡ್ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ ಎನ್ನುವುದು ಪ್ರಧಾನ ಆರೋಪ.
ಪ್ರಕರಣದ ಸಂಬಂಧ ಮೂರು ವಿಶೇಷ ತಂಡ ರಚಿಸಲಾಗಿದ್ದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಸಾರಥ್ಯ ವಹಿಸಿದ್ದಾರೆ. ಮಲ್ಲೇಶ್ವರಂನ ಕಚೇರಿ ಮೇಲೆ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸರ ಜೊತೆಗೆ ಸೈಬರ್ ಕ್ರೈಂ ಪೊಲೀಸರು ಕೂಡಾ ದಾಳಿ ನಡೆಸಿದರು. ದಾಳಿ ವೇಳೆ ಕಚೇರಿಯಲ್ಲಿದ್ದ ದಾಖಲೆಗಳು, ಕಂಪ್ಯೂಟರ್ ಗಳು ಎಲ್ಲವನ್ನೂ ಸಂಪೂರ್ಣ ಪರಿಶೀಲನೆ ನಡೆಸಿದ್ದು, ಹಲವು ಮಾಹಿತಿ ಕಲೆ ಹಾಕಿದ್ದಾರೆ.
ನಾಲ್ವರು ವಶಕ್ಕೆ
ಪ್ರಕರಣ ಸಂಬಂಧ ಮಲ್ಲೇಶ್ವರಂನ ಚಿಲುಮೆ ಸಂಸ್ಥೆಯ ಬ್ಯುಸಿನೆಸ್ ಹೆಡ್ ಸುಧಾಕರ್ ಮತ್ತು ಕಚೇರಿ ವರ್ಕರ್ ರಕ್ಷಿತ್ ಎಂಬಾತನನ್ನ ವಶಪಡೆದು ತೀವ್ರ ವಿಚಾರಣೆ ನಡೆಸ್ತಿದ್ದಾರೆ.. ಚಿಕ್ಕಪೇಟೆ, ಬಸವನಗುಡಿ ಬ್ರಾಂಚ್‌ನ ಇಬ್ಬರು ಸಿಬ್ಬಂದಿ ಸೇರಿ ಒಟ್ಟು ನಾಲ್ವರನ್ನು ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಡಿಸಿಪಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ನಡೆದ ವಿಚಾರಣೆ ವೇಳೆ ಹೇಳಿಕೆ ನೀಡಿದ ಸಿಬ್ಬಂದಿ, ʻʻನಾವು ನಮ್ಮ ಕೆಲಸ ಮಾತ್ರ ಮಾಡಿದ್ದೇವೆʼʼ ಎನ್ನುವ ಸಬೂಬು ನೀಡಿದ್ದಾರೆ. ವಿಚಾರಣೆ ವೇಳೆ ಕೆಲವು ಸಿಬ್ಬಂದಿ ಒಳಗಡೆ ನಡೆದ ಕೆಲ ವಿಚಾರಗಳ ಬಗ್ಗೆ ಮಹತ್ವದ ಮಾಹಿತಿ ಕೂಡ ಬಿಚ್ಚಿಟ್ಟಿದ್ದಾರೆ ಎನ್ನಲಾಗಿದೆ. ಅದರ ಬಗ್ಗೆ ದಾಖಲೆಗಳನ್ನು ಸಂಗ್ರಹ ಮಾಡುತ್ತಿದ್ದಾರೆ.
ಕಂದಾಯ ಅಧಿಕಾರಿ ಅಮಾನತು
ಚಿಲುಮೆ ಸಂಸ್ಥೆ ಕಾನೂನುಬಾಹಿರವಾಗಿ ಬಿಎಲ್‌ಒ (ಬೂತ್ ಲೆವೆಲ್ ಆಫೀಸರ್) ಗುರುತಿನ ಚೀಟಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಮಹಾದೇವಪುರ ಕಂದಾಯ ಅಧಿಕಾರಿ ಚಂದ್ರಶೇಖರ ಅವರನ್ನು ಅಮಾನತು ಮಾಡಲಾಗಿದೆ. ಚಿಲುಮೆ ಸಿಬ್ಬಂದಿಗೆ ಕಾನೂನುಬಾಹಿರವಾಗಿ ಗುರುತಿನ ಚೀಟಿ ನೀಡುವಲ್ಲಿ ಇವರ ಪಾತ್ರ ಪ್ರಧಾನ ಎನ್ನಲಾಗಿದೆ.
ಇದನ್ನೂ ಓದಿ | Voter Data | 6 ಲಕ್ಷ ಮತದಾರರ ಹೆಸರು ಡಿಲೀಟ್ ಹಿಂದೆ ʼಚಿಲುಮೆʼ ಕೈವಾಡ?: ಮೂಡಿದ ಅನುಮಾನ