ಬೆಂಗಳೂರು: ಮತದಾರರ ಮಾಹಿತಿ ಕಳವು ಮಾಡಿದ್ದಲ್ಲದೆ, ದುರ್ಬಳಕೆ ಮಾಡಿಕೊಂಡಿರುವ ಆರೋಪ ಎದುರಿಸುತ್ತಿರುವ ಚಿಲುಮೆ ಗ್ರೂಪ್‌ನ ಮುಖ್ಯಸ್ಥರಾದ ರವಿ ಕುಮಾರ್ ಮತ್ತು ಕೆಂಪೇಗೌಡ ಸಹೋದರರು ನಾಪತ್ತೆಯಾಗಿರುವುದರಿಂದ ಅವರ ಪತ್ನಿಯರಿಗೆ ಸಂಕಷ್ಟ ಎದುರಾಗಿದೆ.
ರವಿ ಕುಮಾರ್ ಪತ್ನಿ ಐಶ್ವರ್ಯ ಮತ್ತು ಕೆಂಪೇಗೌಡ ಪತ್ನಿ ಶ್ರುತಿ ಅವರನ್ನು ಹಲಸೂರು ಗೇಟ್ ಪೊಲೀಸರು ಈಗಾಗಲೇ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಇವರಿಬ್ಬರೂ ಸಂಸ್ಥೆಯಲ್ಲಿ ಪಾಲುದಾರಿಕೆ ಹೊಂದಿದ್ದಾರೆ ಎನ್ನಲಾಗಿದೆ. ಐಶ್ವರ್ಯಾ ಅವರನ್ನು ಪ್ರಧಾನವಾಗಿ ವಿಚಾರಣೆ ನಡೆಸಲಾಗುತ್ತಿದ್ದು, ಬೆಳಗ್ಗಿನಿಂದಲೇ ಪೊಲೀಸರು ಅವರಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಆದರೆ, ಅವರು ಯಾವುದೇ ಸೂಕ್ತ ಉತ್ತರ ನೀಡುತ್ತಿಲ್ಲ. ಯಾವುದೇ ಮಾಹಿತಿಯನ್ನು ಬಾಯಿ ಬಿಡುತ್ತಿಲ್ಲ ಎಂದು ಹೇಳಲಾಗಿದೆ. ಒಂದೊಮ್ಮೆ ಸರಿಯಾದ ಮಾಹಿತಿ ನೀಡದೆ ಇದ್ದಲ್ಲಿ ಅವರನ್ನು ಬಂಧಿಸುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ. ಅದರಲ್ಲೂ ನಿರ್ದೇಶಕಿಯಾಗಿರುವ ಐಶ್ವರ್ಯಾ ಅವರನ್ನು ಬಂಧಿಸಿಯೇ ವಿಚಾರಣೆ ನಡೆಸಬೇಕಾದ ಅನಿವಾರ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೆಂಪೇಗೌಡರ ಪತ್ನಿ ಶ್ರುತಿಯನ್ನು ಪೊಲೀಸರು ಮಹಜರಿಗೆ ಕರೆದೊಯ್ದಿದ್ದಾರೆ. ಟಿ. ಬೇಗೂರು ಬಳಿಯ ತೋಟದ ಮನೆಯಲ್ಲಿ ಸಹೋದರರು ದಾಖಲೆಗಳನ್ನು ಬಚ್ಚಿಟ್ಟಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ನೆಲಮಂಗಲದ ತೋಟದಲ್ಲಿ ಮಹಜರು ನಡೆಸಲು ಮುಂದಾಗಿದ್ದಾರೆ. ಅವರನ್ನು ಅಲ್ಲಿಗೆ ಕರೆದೊಯ್ಯಲಾಗಿದೆ. ಶ್ರುತಿ ಅವರು ತಮ್ಮ ಸಣ್ಣ ಮಗುವನ್ನು ಹಿಡಿದುಕೊಂಡು ಪೊಲೀಸರ ಜೀಪಿಗೆ ಹತ್ತುವ ದೃಶ್ಯ ಕಂಡುಬಂದಿದೆ.
ಪೊಲೀಸರು ಈಗಾಗಲೇ ಚಿಲುಮೆ ಸಂಸ್ಥೆಯ ಅಕೌಂಟ್ ಸೇರಿದಂತೆ ಹಲವು ಖಾತೆಗಳನ್ನು ಫ್ರೀಜ್ ಮಾಡಿದ್ದಾರೆ. ಸಂಸ್ಥೆಯ ಮತ್ತು ನಿರ್ದೇಶಕರ ಅಕೌಂಟ್‌ಗಳು ಬ್ಲಾಕ್ ಆಗಿವೆ.
ಸದ್ಯಕ್ಕೆ ಇಬ್ಬರ ಬಂಧನ ಎಂದ ಪೊಲೀಸ್
ಚಿಲುಮೆ ಸಂಸ್ಥೆ ವಿರುದ್ಧ ಬಿಬಿಎಂಪಿ ನೀಡಿರುವ ದೂರಿನ ಆಧಾರದಲ್ಲಿ ಸಂಸ್ಥೆಯಲ್ಲಿ ಫೀಲ್ಡ್ ವರ್ಕರ್ ಅಗಿ ಕೆಲಸ ಮಾಡುತ್ತಿದ್ದ ಧರ್ಮೇಶ್ ಮತ್ತು ರೇಣುಕಾ ಪ್ರಸಾದ್ ಎಂಬವರನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ್ ಹೇಳಿಕೆ ನೀಡಿದ್ದಾರೆ. ಇನ್ನೂ ಕೆಲವರ ವಿಚಾರಣೆ ನಡೆಯುತ್ತಿದೆ ಎಂದಿದ್ದಾರೆ.
ಮಹದೇವಪುರ ವಿಭಾಗದಲ್ಲಿ ಡಾಟಾ ಸಂಗ್ರಹ ಮಾಡಿದ್ದಕ್ಕೆ ಸಂಬಂಧಿಸಿ ದೂರು ದಾಖಲಾಗಿದ್ದು, ಅದರಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ರವಿ ಕುಮಾರ್ ಮತ್ತು ಕೆಂಪೇಗೌಡ ತಲೆ ಮರೆಸಿಕೊಂಡಿದ್ದು ಅವರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಹೇಳಿದ್ದಾರೆ ಪೊಲೀಸರು.
ಪೇಪರ್‌ನಿಂದ ಡಿಜಿಟಲ್ ಸಮೀಕ್ಷೆಗೆ ಶಿಫ್ಟ್
ಚಿಲುಮೆ ಟ್ರಸ್ಟ್ ಈ ಹಿಂದೆ ಪೇಪರ್ ಮೂಲಕ ಸಮೀಕ್ಷೆ ನಡೆಸುತ್ತಿದ್ದರು. ಮತದಾರರ ಮನೆ ಬಾಗಿಲಿಗೆ ಹೋಗಿ ಮಾಹಿತಿ ಸಂಗ್ರಹ ಮಾಡುತ್ತಿದ್ದರು. ಬಳಿಕ ತಂತ್ರಜ್ಞಾನವನ್ನು ಬಳಸಿಕೊಂಡು ಡಿಜಿಟಲ್‌ಗೆ ಶಿಫ್ಟ್ ಆಗಿದ್ದರು. ಈಗ ಪ್ರಕರಣ ದಾಖಲಾಗುತ್ತಿದ್ದಂತೆಯೇ ಆ್ಯಪ್ ಡೌನ್ ಮಾಡಿ ಎಸ್ಕೇಪ್ ಆಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ | Voter data | ಮಾವನ ಮನೆಯಲ್ಲಿ ದಾಖಲೆ ಬಚ್ಚಿಟ್ಟು ಪರಾರಿ ಆದ ರವಿಕುಮಾರ್ ನಿಜಕ್ಕೂ ಯಾರು? ಇಲ್ಲಿದೆ ಸಮಗ್ರ ವಿವರ