Site icon Vistara News

Karnataka Election 2023: ಮತ ಜಾಗೃತಿ ನಾನಾ ನಮೂನೆ; ಮತದಾನ ನಮ್ಮೆಲ್ಲರ ಹೊಣೆ

Voting awareness in Karnataka Election 2023 and it is our prime duty too

ಬಾದಲ್ ನಂಜುಂಡಸ್ವಾಮಿ ವಿನೂತನ ಜಾಗೃತಿ

ರಾಜ್ಯದಲ್ಲಿ ಈಗಾಗಲೇ ವಿಧಾನಸಭಾ ಚುನಾವಣೆಗೆ (Karnataka Election 2023) ಮೇ 10ರಂದು ಮತದಾನ ನಡೆಯಲಿದೆ. ರಾಜಕೀಯ ಪಕ್ಷಗಳ ನಾಯಕರು ಮತದಾರರ ಮತಬೇಟೆಗೆ ನಡೆಸಿದ್ದಾರೆ. ಮತದಾರರಿಗೆ ಕುಕ್ಕರ್, ಸೀರೆ, ನಗದು ಹೀಗೆ ನಾನಾ ಆಮಿಷ ಒಡ್ಡುತ್ತಿರುವ ಮಾತು ಗೊತ್ತು. ಇಂಥ ರಾಜಕೀಯ ನಾಯಕರಿಗೆ ಕಲಾವಿದ ಬಾದಲ್‌ ನಂಜುಂಡಸ್ವಾಮಿ (Badal Nanjundaswamy) ತಮ್ಮ ಕಲೆಯ ಮೂಲಕವೇ ನೀತಿ ಪಾಠ ಹೇಳಿದ್ದಾರೆ(sveep program).

ಈ ಹಿಂದೆ ಕೊರೊನಾ ಕಾಲದಲ್ಲಿ ಚಿತ್ರಗಳ ಮೂಲಕ ಅರಿವಿನ ಸಂದೇಶ ಸಾರಿದ್ದ ಕಲಾವಿದ ಬಾದಲ್​ ನಂಜುಂಡಸ್ವಾಮಿ, ಬಳಿಕ ರಸ್ತೆಗುಂಡಿಗಳ ಕರಾಳ ಮುಖವನ್ನು ಚಿತ್ರಗಳ ಮೂಲಕವೇ ಎತ್ತಿತೋರಿಸಿ, ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದರು. ಇದೀಗ ಚುನಾವಣೆ​ ಅಬ್ಬರದಲ್ಲಿ ಮತದಾರರು ಮತ ಹಾಕಲು ಯಾವುದೇ ಆಮೀಷಕ್ಕೆ ಒಳಗಾಗದಂತೆ ಚಿತ್ರದ ಮೂಲಕವೇ ಅರಿವು ಮೂಡಿಸಲು ಮುಂದಾಗಿದ್ದಾರೆ.

ಬಾದಲ್ ನಂಜುಂಡಸ್ವಾಮಿ ಅವರ ಮತಜಾಗೃತಿ ಪ್ರಯತ್ನ

ಯಲಹಂಕದ ಬಳಿ ಗೋಡೆಗಳ ಮೇಲೆ ಮತದಾನದ ಸಂದೇಶ ಸಾರುವ ಚಿತ್ರ ಬಿಡಿಸಿರುವ ಬಾದಲ್​ ನಂಜುಂಡಸ್ವಾಮಿ, ಕುಕ್ಕರ್​ ಪಡೆದು ಮತ ಹಾಕಬೇಡಿ ಎಂದು ಸಂದೇಶ ನೀಡುತ್ತಿದ್ದಾರೆ. ಅಲ್ಲದೆ, ಗೋಡೆ ಮೇಲೆ ಕುಕ್ಕರ್​ ಚಿತ್ರ ಬಿಡಿಸಿ ಅದರ ಮೇಲೆ ವೋಟ್​ ಸೆನ್ಸಿಬಲಿ (VOTE SENSIBLY) ಎಂಬ ಅಡಿವಾಕ್ಯ ಬರೆಯುವ ಮೂಲಕ ಆಮಿಷಕ್ಕೆ ಒಳಗಾಗದಂತೆ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಬರ್ತ್‌ಡೇ ಕೇಕ್‌ನಲ್ಲಿ ಹೀಗೊಂದು ಜಾಗೃತಿ ಬರಹ!

ಮತದಾನ ಜಾಗೃತಿ ಸಂಬಂಧ ಹೊನ್ನಾವರ ತಾಲೂಕಿನ ದಂಪತಿಯ ಚಿಂತನೆ ಎಲ್ಲರ ಗಮನ ಸೆಳೆದಿದೆ. ತಾಲೂಕಿನ ಹರಡಸೆಯ ಭಾರತಿ ಮತ್ತು ವಾಸು ನಾಯ್ಕ್ ದಂಪತಿಯ ಮಗ “ಭುವನ್” ನ ಐದನೇ ವರ್ಷದ ಜನ್ಮದಿನದ ಆಚರಣೆಯಲ್ಲಿ ಕೇಕ್ ಮೂಲ ಮತದಾನದ ಜಾಗೃತಿ ಮೆರೆದಿದ್ದಾರೆ.

ಜನ್ಮ ದಿನವನ್ನು ಆಚರಿಸಿಕೊಳ್ಳುವವರ ಹೆಸರನ್ನು ಕೇಕ್ ಮೇಲೆ ಬರೆಸುವುದು ರೂಢಿ. ಆದರೆ, ಇಲ್ಲಿ ಬಾಲಕ “ಭುವನ್” ಹೆಸರಿನ ಬದಲಿಗೆ “ಚುನಾವಣೆ ವ್ಯಾಪಾರ ಅಲ್ಲ, ನಿಮ್ಮ ಮತ ಮಾರಾಟ ಮಾಡಬೇಡಿ” ಎಂಬ ಮತದಾನ ಜಾಗೃತಿಯ ಕುರಿತಾದ ಅರ್ಥಪೂರ್ಣವಾದ ವಾಕ್ಯವನ್ನು ಇಂಗ್ಲಿಷ್‌ನಲ್ಲಿ ಕೇಕ್ ಮೇಲೆ ಬರೆಸಲಾಗಿತ್ತು.

ಇದನ್ನೂ ಓದಿ: Karnataka election 2023: ಮದುವೆ ಮಂಟಪದಲ್ಲಿ ಮತದಾನ ಜಾಗೃತಿ ಮೂಡಿಸಿ ಗಮನ ಸೆಳೆದ ನವ ದಂಪತಿ

ಈ ಸಂದರ್ಭದಲ್ಲಿ ಹಿತೈಷಿ ನರಸಿಂಹ ನಾಯ್ಕ್ ಮಾತನಾಡಿ, “ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಯೊಬ್ಬ ಮತದಾರನ ಮತವೂ ಅತ್ಯಮೂಲ್ಯವಾದದ್ದು. ನಾವು ಜಾಗೃತರಾಗಿದ್ದರೆ ಮತವು ಸರಿಯಾದ ವ್ಯಕ್ತಿಗೆ ಹೋಗುತ್ತದೆ. ಒಂದು ವೇಳೆ ನಾವು ಯೋಗ್ಯ ಅಭ್ಯರ್ಥಿಗೆ ಮತ ನೀಡದೆ ಮನೆಯಲ್ಲೇ ಉಳಿದರೆ, ಪರೋಕ್ಷವಾಗಿ ಪ್ರಯೋಜನ ಇಲ್ಲದ ವ್ಯಕ್ತಿಗೆ ಒಂದು ಮತ ನೀಡಿದಂತೆ ಆಗುತ್ತದೆ. ಆದ್ದರಿಂದ ಮತದಾರರಾದ ನಾವೆಲ್ಲ ಜಾಗೃತರಾಗಬೇಕು ಮತ್ತು ಜವಾಬ್ದಾರಿಯುತರಾಗಬೇಕಿದೆ ಎಂದರು.

Exit mobile version