ಬೆಳಗಾವಿ: ಹಣದ ಹೊಳೆಯನ್ನೇ ಹರಿಸಿದ ಚುನಾವಣೆ ಇದಾಗಿದೆ ಎಂಬ ಆರೋಪ-ಪ್ರತ್ಯಾರೋಪಗಳ ಮಧ್ಯೆ ವಿಧಾನ ಪರಿಷತ್ತಿನ (MLC election) ವಾಯವ್ಯ ಪದವೀಧರರ, ಶಿಕ್ಷಕ ಕ್ಷೇತ್ರಗಳ ಮತದಾನ ಶಾಂತಿಯುತವಾಗಿ ಪೂರ್ಣಗೊಂಡಿದೆ. ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಸೇರಿದ್ದು ಎಲ್ಲರ ಚಿತ್ತ ಜೂನ್ 15 ರಂದು ನಡೆಯುವ ಮತ ಎಣಿಕೆಯತ್ತ ನೆಟ್ಟಿದೆ.
ಇದನ್ನೂ ಓದಿ | ಬೆಳಗಾವಿಯಲ್ಲಿ ನೂಪುರ್ ಶರ್ಮಾ ಪ್ರತಿಕೃತಿಯನ್ನು ಗಲ್ಲಿಗೇರಿಸಿದ್ದ ಮೂವರ ಬಂಧನ
ವಾಯವ್ಯ ಕ್ಷೇತ್ರವೂ ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆ ವ್ಯಾಪ್ತಿ ಹೊಂದಿದ್ದು, ಬಿಜೆಪಿಯಿಂದ ಹಣಮಂತ ನಿರಾಣಿ ಸ್ಫರ್ಧಿಸಿದ್ದರೆ, ನ್ಯಾಯವಾದಿ ಸುನೀಲ ಸಂಕ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಶಿಕ್ಷಕ ಕ್ಷೇತ್ರಕ್ಕೆ ಕಾಂಗ್ರೆಸ್ಸಿನಿಂದ ಪ್ರಕಾಶ ಹುಕ್ಕೇರಿ ಬಿಜೆಪಿಯಿಂದ ಅರುಣ್ ಶಹಾಪುರ ಕಣದಲ್ಲಿದ್ದರು. ಬಿಜೆಪಿಗೆ ವಿರೋಧಿ ಅಲೆಯಿದ್ರೆ, ಕಾಂಗ್ರೆಸ್ಸಿಗೆ ಬಂಡಾಯ ಬಿಸಿ ತುಪ್ಪವಾಗಿತ್ತು. ಇದೀಗ ಮತದಾನ ಪೂರ್ಣಗೊಂಡಿದ್ದು, ಶಾಸಕರು ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಿದ್ದರು.
ಇತ್ತ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಅನಿಲ್ ಬೆನಕೆ, ಕಾಂಗ್ರೆಸ್ ಅಭ್ಯರ್ಥಿ ಹಣ ಹಂಚಿಕೆ ಬಗ್ಗೆ ಮಾಧ್ಯಮಗಳಲ್ಲಿ ಬಂದಿದೆ. ವಾಮಮಾರ್ಗದಿಂದ ಮತಗಳನ್ನು ಗಳಿಸುವುದು ತಪ್ಪು. ಶಿಕ್ಷಕರ ಕ್ಷೇತ್ರದಲ್ಲಿ ಈ ತರಹ ಆಗುವುದು ನೋವಿನ ಸಂಗತಿ. ಚುನಾವಣಾ ಆಯೋಗಕ್ಕೆ ಈ ಸಂಬಂಧ ನಾವು ದೂರು ನೀಡಿದ್ದೇವೆ. ಹಾಗೇ ನಾವು ಬೆಳ್ಳಿ ತಟ್ಟೆ, ಸ್ಮಾರ್ಟ್ ವಾಚ್ ನೀಡುತ್ತಿದ್ದೇವೆ ಅನ್ನೋ ಆರೋಪ ಕೇಳಿಬಂದಿದೆ. ಆದರೆ ಅದೆಲ್ಲ ಸುಳ್ಳು ಎಂದು ಸಮಜಾಯಿಷಿ ನೀಡಿದ್ರು.
ಬಿಜೆಪಿ ಗೆಲುವಿನ ಓಟಕ್ಕೆ ಬ್ರೇಕ್- ಸತೀಶ್ ಜಾರಕಿಹೊಳಿ
ಇನ್ನು ಚುನಾವಣೆ ಆರಂಭದಿಂದಲೂ ಆರೋಪ ಮಾಡುತ್ತಿದ್ದ ಬಿಜೆಪಿ ನಾಯಕರಿಗೆ ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಗೆಲುವು ಸಾಧಿಸಲಿದ್ದಾರೆ. ಕಳೆದ ಎರಡು ಅವಧಿಗೆ ಬಿಜೆಪಿ ಶಿಕ್ಷಕರ ಕ್ಷೇತ್ರದಲ್ಲಿ ಮೇಲುಗೈ ಸಾಧಿಸಿತ್ತು. ಈ ಸಲ ಬಿಜೆಪಿ ಗೆಲುವಿನ ಓಟಕ್ಕೆ ಬ್ರೇಕ್ ಬೀಳಲಿದೆ. ಪ್ರಕಾಶ್ ಹುಕ್ಕೇರಿಗೆ ಯಾರ ಸರ್ಟಿಫಿಕೇಟ್ ಬೇಕಾಗಿಲ್ಲ. ಪ್ರಕಾಶ್ ಹುಕ್ಕೇರಿ ಅವರಿಗೆ 30 ವರ್ಷಗಳ ಕಾಲ ಕೆಲಸ ಮಾಡಿದ್ದಕ್ಕೆ ಜನರೇ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಯಾರ ಬೇಕಾದರೂ ಚುನಾವಣೆ ನಿಲ್ಲಲು ಅವಕಾಶ ಇದೆ. ಅಭ್ಯರ್ಥಿಗಳು ಎಂ.ಎ, ಪಿಹೆಚ್‌ಡಿ, ಇಂಗ್ಲೆಂಡ್‌ನಲ್ಲಿ ಕಲಿತರಬೇಕೆಂದು ತಿದ್ದುಪಡಿ ಮಾಡಲಿ ಎಂದು ಬಿಜೆಪಿ ನಾಯಕರಿಗೆ ಸತೀಶ್ ಜಾರಕಿಹೊಳಿ ತಿರುಗೇಟು ಕೊಟ್ಟರು.
ಯಡವಟ್ಟು ಆಯ್ತ, ಎಫ್‌ಐಆರ್ ದಾಖಲಾಯ್ತು
ಮತದಾನದ ವೇಳೆ ಬಿಜೆಪಿ ಶಾಸಕ ಅನಿಲ್ ಬೆನಕೆ ಯಡವಟ್ಟು ಮಾಡಿಕೊಂಡಿದ್ದಾರೆ. ಮತಗಟ್ಟೆಗೆ ತೆರಳಿ ನೀತಿಸಂಹಿತೆ ಉಲ್ಲಂಘಿಸಿದ್ದಾರೆ. ಹೀಗಾಗಿ ಅವ್ರ ವಿರುದ್ಧ ಎಫ್ಐಆರ್ ದಾಖಲಿಸಲು ಡಿಸಿ ನಿತೇಶ ಪಾಟೀಲ ಸೂಚನೆ ನೀಡಿದ್ದಾರೆ. ಶಾಸಕ ಅನಿಲ್ ಬೆನಕೆ ಸೇರಿದಂತೆ ಮಹಾನಗರ ಪಾಲಿಕೆ ಸದಸ್ಯ ಶ್ರೇಯಸ್, ಇಬ್ಬರು ಕಾರ್ಯಕರ್ತರು ಸೇರಿ ನಾಲ್ಕು ಜನರ ಮೇಲೆ ಪ್ರಜಾಪ್ರತಿನಿಧಿ ಕಾಯ್ದೆಯಡಿಯಲ್ಲಿ ದೂರು ದಾಖಲಾಗಿದೆ. ಚುನಾವಣಾ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಶಾಸಕ ಅನಿಲ್ ಬೆನಕೆ ಬೆಳಗ್ಗೆ ವಿಶ್ವೇಶ್ವರಯ್ಯ ನಗರದ ಮತದಾನ ಮಾಡುವ ಕೊಠಡಿಗೆ ತೆರಳಿ ಪೋನ್‌ನಲ್ಲಿ ಮಾತನಾಡಿ ನೀತಿ ಸಂಹಿತೆ ಉಲ್ಲಂಘಿಸಿದ್ದರು.
ಸದ್ಯ ಮತದಾನ ಮುಗಿದಿದ್ದು ಫಲಿತಾಂಶದತ್ತ ಎಲ್ಲ ಚಿತ್ತ ನೆಟ್ಟಿದ್ದು, ಗೆಲುವಿನ ವಿಜಯದ ಮಾಲೆ ಯಾರ ಕೊರಳಿಗೆ ಎಂಬುದೇ ಕುತೂಹಲ.
ಇದನ್ನೂ ಓದಿ | ಬೆಳಗಾವಿ: ವಾಯುವ್ಯ ಪದವೀಧರ, ಶಿಕ್ಷಕರ ಕ್ಷೇತ್ರಕ್ಕೆ ಇಂದು ಮತದಾನ