Site icon Vistara News

ವಿಧಾನ ಪರಿಷತ್‌ ಚುನಾವಣೆ: 4 ಗಂಟೆವರೆಗೆ 69.28% ಮತ ಚಲಾವಣೆ

ಮತದಾನ

ಬೆಂಗಳೂರು: ವಿಧಾನ ಪರಿಷತ್‌ನ ವಾಯವ್ಯ ಶಿಕ್ಷಕರ, ಪದವೀಧರ ಕ್ಷೇತ್ರ, ಪಶ್ಚಿಮ ಶಿಕ್ಷಕರ ಕ್ಷೇತ್ರ ಹಾಗೂ ದಕ್ಷಿಣ ಪದವೀಧರ ಕ್ಷೇತ್ರಗಳ ಚುನಾವಣೆಯ ಮತದಾನ ಬಿರುಸಿನಿಂದ ನಡೆಯುತ್ತಿದೆ.

ವಿಜಯಪುರ ವಾಯವ್ಯಪದವೀಧರ ಕ್ಷೇತ್ರದಲ್ಲಿ ಸಂಜೆ 4 ಗಂಟೆ ವೇಳೆಗೆ 69.28% ಆಗಿದೆ. ಮತದಾನವಾಗಿದ್ದು, ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಚುನಾವಣೆಯಲ್ಲಿ 57.85% ಮತದಾನವಾಗಿದೆ. ಇನ್ನು ಮೈಸೂರಿನ ದಕ್ಷಿಣ ಪದವೀಧರರ ಕ್ಷೇತ್ರ ಚುನಾವಣೆಯಲ್ಲಿ ಮಧ್ಯಾಹ್ನ 12 ಗಂಟೆ ಹೊತ್ತಿಗೆ ಶೇ. 20.68 ಮತದಾನವಾಗಿದ್ದು, ಸಂಜೆ 4ರ ವೇಳೆಗೆ 60.49% ಮತದಾನವಾಗಿದೆ. ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ 81.11% ಹಾಗೂ ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ 77.70% ಮತದಾನವಾಗಿದೆ.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ, ಶಾಸಕ ಅನಿಲ್‌ ಬೆನಕೆ ವಿರುದ್ಧ ಪ್ರಕರಣ ದಾಖಲು

ಬೆಳಗಾವಿ: ವಾಯವ್ಯ ಪದವೀಧರ, ಶಿಕ್ಷಕರ ಕ್ಷೇತ್ರ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿಯಲ್ಲಿ ಶಾಸಕ ಅನಿಲ್‌ ಬೆನಕೆ ಸೇರಿ ನಾಲ್ವರ ವಿರುದ್ಧ ನಗರದ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ್‌ ಬೆನಕೆ, ಪಾಲಿಕೆ ಸದಸ್ಯ, ಇಬ್ಬರು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ. ವಿಶ್ವೇಶ್ವರ ನಗರದ ಮತಗಟ್ಟೆ ಪ್ರವೇಶಿಸಿ ಶಾಸಕರು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕಾಶ್ ಹುಕ್ಕೇರಿಯನ್ನು ಚುನಾವಣೆ ಕಣದಿಂದ ನಿವೃತ್ತಗೊಳಿಸಿ: ಬಿಜೆಪಿ ಎಂಎಲ್‌ಸಿ ರವಿಕುಮಾರ್

ರಾಯಚೂರು: ವಿಧಾನ ಪರಿಷತ್‌ ಚುನಾವಣೆಯಲ್ಲಿ ಸೋಲುವ ಹತಾಶೆಯಿಂದ ಕಾಂಗ್ರೆಸ್ ಹಣ ಹಂಚಿಕೆ ಮಾಡಿದೆ ಎಂದು ಬಿಜೆಪಿ ಎಂಎಲ್‌ಸಿ ರವಿಕುಮಾರ್ ಆರೋಪಿಸಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2 ಪದವೀಧರ, 2 ಶಿಕ್ಷಕರ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ 4 ಸ್ಥಾನಗಳನ್ನೂ ಬಿಜೆಪಿ ಆಭ್ಯರ್ಥಿಗಳೇ ಗೆಲ್ಲುತ್ತಾರೆ. ಬಿಜೆಪಿ ಅಭ್ಯರ್ಥಿ ಬಸವರಾಜ್ ಹೊರಟ್ಟಿ 10 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ. ಬೆಳಗಾವಿ, ಬಾಗಲಕೋಟೆ, ಬಿಜಾಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಣ ಹಂಚಿಕೆ ಮಾಡುವ ತಾಜಾ ಫೋಟೋಗಳನ್ನ ನಾವು ಬಿಡುಗಡೆ ಮಾಡಿದ್ದೇವೆ. ಹೀಗಾಗಲೇ ಹಣ ಹಂಚಿಕೆ ಮಾಡುವವರ ವಿರುದ್ಧ ಪ್ರಕರಣ ದಾಖಲಾಗಿ 6 ಜನರ ಬಂಧನ ಕೂಡ ಆಗಿದೆ ಎಂದರು. ಹುಕ್ಕೇರಿ ರಣದಿ ಫಾರ್ಮ್ ಹೌಸ್ ನಲ್ಲಿ ಕಂತೆ ಕಂತೆ ಹಣವಿರುವ ಬಗ್ಗೆ ‌ನಮಗೆ ಮಾಹಿತಿಯಿದೆ. ಇದಕ್ಕೆ ಸಂಬಂಧಿಸಿ, ಸಿಸಿ ಕ್ಯಾಮರಾ ವಿಡಿಯೋವನ್ನ ನಾವು ಬಿಡುಗಡೆ ಮಾಡಿದ್ದೇವೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿಯನ್ನ ಕಣದಿಂದ ವಜಾ ಮಾಡುವಂತೆ ಆಗ್ರಹಿಸಿದರು. ಸೋಲುವ ಆತಂಕದಲ್ಲಿ ಶಿಕ್ಷಕರಿಗೆ 10 ಸಾವಿರ ಹಣದ ಕವಹಂಚಲಾಗುತ್ತಿದೆ, ಇದರಲ್ಲಿ ಬೈಲಹೊಂಗಲ ಕ್ಷೇತ್ರದ ಸ್ಥಳೀಯ ಶಾಸಕ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.

ವಿಜಯಪುರದಲ್ಲಿ ಮತಗಟ್ಟೆಗಳ ಪರಿಶೀಲಿಸಿದ ಡಿಸಿ

ವಿಜಯಪುರ: ವಾಯುವ್ಯ ಶಿಕ್ಷಕ, ಪದವೀಧರರ ಮತಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ನಗರದ ವಿವಿಧ ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ ಸೋಮವಾರ ಭೇಟಿ ನೀಡಿ ಮತದಾನವನ್ನು ಖುದ್ದು ಪರಿಶೀಲಿಸಿದರು.

ಸೋಲ್ಲಾಪುರ ರಸ್ತೆಯಲ್ಲಿರುವ ಕೆಎಚ್‌ಬಿ ಕಾಲನಿಯ ಮತಗಟ್ಟೆ ಸಂಖ್ಯೆ 127, ಗಾಂಧೀ ಚೌಕ್ ಹತ್ತಿರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿರುವ ಮತಗಟ್ಟೆ ಸಂಖ್ಯೆ 122 ಮತ್ತು ಮತ್ತು 123, ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿರುವ ಮತಗಟ್ಟೆ ಸಂಖ್ಯೆ 121ಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಡಿ.ಎನ್. ದರಬಾರ್ ಕಾಲೇಜಿನ ಆವರಣದಲ್ಲಿರುವ ಮತಗಟ್ಟೆ ಸಂಖ್ಯೆ 126 ಹಾಗೂ ಹೆಚ್ಚುವರಿ ಮತಗಟ್ಟೆ ಸಂಖ್ಯೆ 126ಎ ಗೆ ಕೂಡ ಭೇಟಿ ನೀಡಿ ಮಾಹಿತಿ ಪಡೆದರು.

ಶೇಕಡವಾರು ಮತದಾನದ ವಿವರ: ಕರ್ನಾಟಕ ವಾಯುವ್ಯ ಶಿಕ್ಷಕರ ಮತಕ್ಷೇತ್ರಕ್ಕೆ ಬೆಳಗಿನ 8 ರಿಂದ 10ಗಂಟೆವರೆಗೆ ಶೇ.11.36ರಷ್ಟು, 12 ಗಂಟೆವರೆಗೆ ಶೇ.34.81ರಷ್ಟು ಅದೇ ರೀತಿ ವಾಯುವ್ಯ ಪದವೀಧರ ಮತಕ್ಷೇತ್ರಕ್ಕೆ ಬೆಳಗ್ಗೆ 8 ರಿಂದ 10 ಗಂಟೆವರೆಗೆ ಶೇ.7.95ರಷ್ಟು ಹಾಗೂ ಮಧ್ಯಾಹ್ನ 12 ಗಂಟೆವರೆಗೆ ಶೇ.24.08ನಷ್ಟು ಮತದಾನದ ಪ್ರಮಾಣ ದಾಖಲಾಗಿತ್ತು. ಸಂಜೆ 5 ಗಂಟೆವರೆಗಿನ ಮತದಾನದ ಪ್ರಮಾಣ ಇನ್ನೂ ಲಭ್ಯವಾಗಬೇಕಿದೆ.

Exit mobile version