ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಮತದಾನಕ್ಕೆ ಇನ್ನು ಕೇವಲ ಎರಡು ದಿನ ಬಾಕಿ ಉಳಿದಿದೆ. ಸೋಮವಾರ ಸಂಜೆ ಅಭ್ಯರ್ಥಿಗಳ ಬಹಿರಂಗ ಪ್ರಚಾರಕ್ಕೆ ಬ್ರೇಕ್ ಬಿದ್ದಿದೆ. ಇನ್ನು ಮೇ 10ರಂದು ಮತದಾನದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಸಕಲ ಸಿದ್ಧತೆ ಕೈಗೊಂಡಿದ್ದು, ಮತದಾನದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ಇಡಲು ಭದ್ರತೆಗಾಗಿ ಬೆಂಗಳೂರು ನಗರ ಸೇರಿ ರಾಜ್ಯಾದ್ಯಂತ ಬರೊಬ್ಬರಿ 1.56 ಲಕ್ಷ ಪೊಲೀಸರನ್ನು ನಿಯೋಜಿಸಲಾಗಿದೆ.
ಚುನಾವಣಾ ಮತದಾನದ ವೇಳೆ ಭದ್ರತೆಗಾಗಿ ರಾಜ್ಯದ 84,119 ರಾಜ್ಯ ಪೊಲೀಸರ ಜತೆಗೆ ನೆರೆ ರಾಜ್ಯಗಳ ಪೊಲೀಸರನ್ನೂ ನಿಯೋಜನೆ ಮಾಡಲಾಗಿದೆ. ರಾಜ್ಯದ 304 ಡಿವೈಎಸ್‌ಪಿ, 991 ಇನ್ಸ್‌ಪೆಕ್ಟರ್, 20,610 ಪಿಎಸ್ಐ ನಿಯೋಜನೆ ಮಾಡಲಾಗಿದೆ. ಹೊರರಾಜ್ಯದಿಂದ 8,500 ಪೊಲೀಸರು, 650 ಸಿಎಪಿಎಫ್ ತುಕಡಿಗಳು ನಿಯೋಜನೆಗೊಂಡಿವೆ.
ಅವುಗಳಲ್ಲಿ ಬಿಎಎಸ್‌ಎಫ್ 108, ಸಿಐಎಸ್ಎಫ್ 75, ಐಟಿಬಿಪಿ 70, ಆರ್ ಪಿಎಫ್-35, ಎಸ್ಎಸ್‌ಬಿ 75 ಹಾಗೂ ರಾಜ್ಯದ 224 ಕೆಎಸ್ಆರ್‌ಪಿ ತುಕಡಿಗಳು ಬಂದೋಬಸ್ತ್‌ಗೆ ನಿಯೋಜನೆ ಮಾಡಲಾಗಿದೆ. ಭದ್ರತೆಗಾಗಿ ನಿಯೋಜನೆಗೊಂಡ ಸಿಬ್ಬಂದಿ 58,282 ಮತಗಟ್ಟೆಗಳ ಬಳಿ ಕೆಲಸ ಮಾಡಲಿದ್ದಾರೆ. 11,617 ಸೂಕ್ಷ್ಮ ಮತಗಟ್ಟೆಗಳ ಬಳಿ ಸಿಆರ್‌ಪಿಎಫ್ ಹಾಗೂ ಪೊಲೀಸರಿಂದ ಭದ್ರತೆ ಆಯೋಜಿಸಲಾಗುತ್ತದೆ.
ಇನ್ನು ವಿಶೇಷವಾಗಿ 2930 ಪೊಲೀಸ್ ಮೊಬೈಲ್ ಸೆಕ್ಟರ್‌ಗಳ ಕಾರ್ಯಾಚರಣೆ ನಡೆಯಲಿದೆ. ಒಂದು ಮೊಬೈಲ್ ಸೆಕ್ಟರ್ 20 ಮತಗಟ್ಟೆಗಳನ್ನು ಕವರ್ ಮಾಡಲಿದೆ. ಮೊಬೈಲ್ ಸೆಕ್ಟರ್‌ಗಳ ಮೇಲ್ವಿಚಾರಣೆಗೆ 749 ಸೂಪರ್ ವೈಸರ್‌ಗಳು ಇರಲಿದ್ದಾರೆ. 700 ಫ್ಲೈಯಿಂಗ್ ಸ್ಕ್ವಾಡ್, 700 ಚೆಕ್ ಪೋಸ್ಟ್‌ಗಳ ನಿರ್ಮಾಣ ಮಾಡಲಾಗಿದೆ. ರಾಜ್ಯದ ಗಡಿಗಳಲ್ಲಿ ವಾಹನಗಳ ತಪಾಸಣೆ ಮಾಡಿ ಒಳ ಬಿಡಲು ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ.
ಬೆಂಗಳೂರು ನಗರದಾದ್ಯಂತ 16 ಸಾವಿರ ಪೊಲೀಸರ ನಿಯೋಜನೆ
ಬೆಂಗಳೂರಿನಲಿ ಪೊಲೀಸರು ಈಗಾಗಲೇ ಕಟ್ಟೆಚ್ಚರ ವಹಿಸಿದ್ದು, ಚುನಾವಣಾ ಭದ್ರತೆಗಾಗಿ 13 ಸಾವಿರ ಪೊಲೀಸರು, KSRP ಹಾಗೂ ಹೋಮ್ ಗಾರ್ಡ್‌ಗಳು ಸೇರಿ 16 ಸಾವಿರ ನಿಯೋಜನೆ ಮಾಡಲಾಗಿದೆ. ಈ ರೀತಿ ಭದ್ರತೆಗಾಗಿ ನಿಯೋಜನೆಗೊಂಡಿರುವ ವಿವಿಧ ತುಕಡಿಗಳು ನಗರದಾದ್ಯಂತ ತೆರೆದಿರುವ 7,916 ಮತಗಟ್ಟೆಗಳು ಹಾಗೂ 1,907 ಅತಿಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಒದಗಿಸಲಿದ್ದಾರೆ.
ಅಷ್ಟೇ ಅಲ್ಲದೇ ಬೆಂಗಳೂರಿನ ಅತಿಸೂಕ್ಷ್ಮ ಪ್ರದೇಶಗಳಲ್ಲಿ ಬಿಎಸ್ಎಫ್, ಆರ್‌ಪಿಎಫ್, ಸಿಆರ್‌ಪಿಎಫ್ ಹಾಗೂ ಎಸ್ಎಪಿ ಯನ್ನ ಭದ್ರತೆಗಾಗಿ ನಿಯೋಜನೆ ಮಾಡಿದ್ದು, ಆಯಾ ವಿಭಾಗದ ಡಿಸಿಪಿಗಳು ಮೊಬೈಲ್ ಸೆಕ್ಟರ್‌ಗಳ ಮೇಲೆ ನಿಗಾವಹಿಸಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದಾರೆ.