ಶಿಗ್ಗಾಂವಿ: ಹಾವೇರಿ ಜಿಲ್ಲೆಯ ಶಿಗ್ಗಾಂವಿಯ ಕುನ್ನೂರ ಗ್ರಾಮದಲ್ಲಿ ಭಾರಿ ಮಳೆಗೆ ಮನೆಯೊಂದು ಕುಸಿದು ಬಿದ್ದು ಯುವಕರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಹೆರಿಗೆಯಾಗಿದ್ದ ಪತ್ನಿ, ಮಗು, ಕುಟುಂಬದವರು ಅಪಾಯದಿಂದ ಪಾರಾಗಿದ್ದಾರೆ.
ಕುನ್ನೂರ ಗ್ರಾಮದ ಪ್ಲಾಟ್‌ನಲ್ಲಿ ಈ ದುರಂತ ನಡೆದಿದ್ದು, ಮುಸ್ತಾಕ ಶರೀಫ್ ಸಾಬ ಯರಗುಪ್ಪಿ (27)ಮೃತಪಟ್ಟ ದುರ್ದೈವಿ. ತೀವ್ರ ಗಾಯಗೊಂಡ ಇವರನ್ನು ಹುಬ್ಬಳ್ಳಿ ಕಿಮ್ಸ್ ಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಈ ಮನೆ ಮೊದಲೇ ಶಿಥಿಲವಾಗಿತ್ತು. ಈ ಪ್ರದೇಶದಲ್ಲಿ ನಿರಂತರವಾಗಿ ಬೀಳುತ್ತಿರುವ ಭಾರಿ ಮಳೆಯಿಂದ ಅದು ಇನ್ನಷ್ಟು ಶಿಥಿಲಗೊಂಡಿತ್ತು. ಮನೆಯ ಒಂದು ಭಾಗ ಕುಸಿದು ಬಿದ್ದಿದ್ದು ಅಲ್ಲೇ ಇದ್ದ ಯುವಕ ಪ್ರಾಣ ಕಳೆದುಕೊಂಡಿದ್ದಾರೆ. ಈಗ ಈ ಕುಟುಂಬಕ್ಕೆ ಬೇರೆ ಕಡೆ ವಾಸದ ವ್ಯವಸ್ಥೆ ಮಾಡಲಾಗಿದೆ. ಆದರೆ, ಪುಟ್ಟ ಮಗು, ಪತ್ನಿ ಮತ್ತು ಕುಟುಂಬಿಕರು ಮನೆ ಮಗನನ್ನು ಕಳೆದುಕೊಂಡು ತೀವ್ರ ನೋವು ಅನುಭವಿಸುತ್ತಿದ್ದಾರೆ.
ಕುಮದ್ವತಿ ನದಿ ಆರ್ಭಟ
ರಾಣೆಬೆನ್ನೂರು ತಾಲೂಕಿನ ಹಲವು ಭಾಗಗಳಲ್ಲಿ ಜಿಟಿಜಿಟಿ ಮಳೆ ಸುರಿಯುತ್ತಿದೆ. ಮಣಕೂರು- ಲಿಂಗದಹಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಸೇತುವೆ ಪಕ್ಕದ ನೂರಾರು ಎಕರೆ ಜಮೀನಿಗೆ ನೀರು ನುಗ್ಗಿದ್ದು, ಜಮೀನುಗಳು ನದಿಯಂತಾಗಿವೆ. ರಾಣೆಬೆನ್ನೂರ ಶಾಸಕ ಅರುಣಕುಮಾರ ಪೂಜಾರ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಇದನ್ನೂ ಓದಿ | ಪಕ್ಕದ ಮನೆಗೆ ಮಲಗಲು ಬಂದವರು ಮರ ಬಿದ್ದು ಮೃತ