ಚಿತ್ರದುರ್ಗ: ಮಠದ ಸನಿವಾಸ ಶಾಲೆಯ ಇಬ್ಬರು ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ (Physical abuse) ನಡೆಸಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿ 14 ತಿಂಗಳ ಬಳಿಕ ಜಾಮೀನಿನಲ್ಲಿ ಬಿಡುಗಡೆಯಾಗಿರುವ ಚಿತ್ರದುರ್ಗದ ಮುರುಘಾ ಮಠದ (Chitradurga Murugha Matt) ಶಿವಮೂರ್ತಿ ಮುರುಘಾಶ್ರೀಗಳ (Murugha Shri) ವಿರುದ್ಧ ಮತ್ತೆ ವಾರಂಟ್ ಜಾರಿಯಾಗಿದ್ದು, (Warrant against Murugha Shri) ಯಾವುದೇ ಕ್ಷಣ ಬಂಧನ ನಡೆಯಲಿದೆ. ಅವರು ಮತ್ತೆ ಸೇರುವುದು ಗ್ಯಾರಂಟಿಯಾಗಿದೆ.
ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಕಾಯಿದೆಯಡಿ ಎರಡು ಪ್ರಕರಣಗಳು ದಾಖಲಾಗಿದ್ದವು. ಒಂದರಲ್ಲಿ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯರನ್ನು ಲೈಂಗಿಕವಾಗಿ ಬಳಸಿಕೊಂಡ ಪ್ರಕರಣವಾದರೆ ಎರಡನೇ ಪ್ರಕರಣದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯರ ಜತೆಗೆ ಅವರು ಪರಿಶಿಷ್ಟ ಜಾತಿಯ ವಿದ್ಯಾರ್ಥಿನಿಯರು ಎಂಬುದನ್ನು ಉಲ್ಲೇಖಿಸಲಾಗಿದೆ. ಮೊದಲ ಪ್ರಕರಣದಲ್ಲಿ ಪೋಕ್ಸೊ ಪ್ರಕರಣ ಮಾತ್ರ ಇದ್ದರೆ, ಎರಡನೇ ಕೇಸ್‌ನಲ್ಲಿ ಪೋಕ್ಸೋ ಜತೆಗೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆಯೂ ಅನ್ವಯವಾಗಿದೆ.
ನಿಜವೆಂದರೆ, ಮೊದಲನೇ ಪ್ರಕರಣದಲ್ಲಿ ಜಾಮೀನು ಪಡೆದಾಗ ಎರಡನೇ ಪ್ರಕರಣದ ಉಲ್ಲೇಖ ಆಗಿರಲಿಲ್ಲ. ಅದರಲ್ಲೂ ಮುಖ್ಯವಾಗಿ ಎರಡನೇ ಪ್ರಕರಣದಲ್ಲಿ ನಡೆಯಬೇಕಾದ ಬಂಧನ, ವಿಚಾರಣೆಯ ಯಾವ ಪ್ರಕ್ರಿಯೆಗಳೂ ನಡೆದಿರಲಿಲ್ಲ. ಮೊದಲ ಪ್ರಕರಣದಲ್ಲಿ ಜಾಮೀನು ಪಡೆದಾಗ (ನವೆಂಬರ್ 16) ಶ್ರೀಗಳಿಗೆ ಹಲವು ಷರತ್ತುಗಳನ್ನು ವಿಧಿಸಲಾಗಿತ್ತು. ಅದರಲ್ಲಿ ಚಿತ್ರದುರ್ಗ ಜಿಲ್ಲಾ ಪ್ರವೇಶ ಮಾಡುವಂತಿಲ್ಲ ಎನ್ನುವುದು ಕೂಡಾ ಒಂದು. ಹೀಗಾಗಿ ಚಿತ್ರದುರ್ಗ ಜೈಲಿನಿಂದ ಹೊರಬಿದ್ದ ಶ್ರೀಗಳು ನೇರವಾಗಿ ದಾವಣಗೆರೆಯ ವಿರಕ್ತ ಮಠಕ್ಕೆ ಹೋಗಿದ್ದರು.
ಈ ನಡುವೆ, ಜೈಲಿನಿಂದ ಬಿಡುಗಡೆಯಾದ ದಿನವೇ ಅಂದರೆ ನವೆಂಬರ್ 16ರಂದೇ ಎರಡನೇ ಪ್ರರಕಣದ ವಿಚಾರಣೆ ಚಿತ್ರದುರ್ಗದ 2ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ನಡೆದಿತ್ತು. ಶ್ರೀಗಳು ವಿಡಿಯೊ ಕಾನ್ಫರೆನ್ಸ್‌ನಲ್ಲಿ ವಿಚಾರಣೆಗೆ ಹಾಜರಾಗಿದ್ದರು. ಈ ವಿಚಾರಣೆ ನವೆಂಬರ್ 18ಕ್ಕೆ ಮುಂದೂಡಲ್ಪಟ್ಟಿತ್ತು. ನವೆಂಬರ್ 18ರಂದು ನಡೆದ ವಿಚಾರಣೆಯ ಅಂತಿಮ ತೀರ್ಪನ್ನು ನವೆಂಬರ್ 20ಕ್ಕೆ (ಮಂಗಳವಾರ) ಕಾಯ್ದಿರಿಸಲಾಗಿತ್ತು.
ಜಾಮೀನುರಹಿತ ವಾರಂಟ್ ಹೊರಡಿಸಿದ ಕೋರ್ಟ್
ಇದೀಗ ಎರಡನೇ ಪ್ರಕರಣದಲ್ಲಿ ಮುರುಘಾ ಶ್ರೀ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದ್ದು, ಶ್ರೀಗಳನ್ನು ಮಂಗಳವಾರದ ಒಳಗೆ ಬಂಧಿಸಿ ಕೋರ್ಟ್ ಮುಂದೆ ಹಾಜರುಪಡಿಸುವಂತೆ ಆದೇಶಿಸಲಾಗಿದೆ.
2ನೇ ಅಪರ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶೆ ಬಿ.ಕೆ.ಕೋಮಲಾ ಅವರ ಆದೇಶದಂತೆ ಚಿತ್ರದುರ್ಗ ಗ್ರಾಮಾಂತರ ಠಾಣೆ ಠಾಣೆ ಸಿಪಿಐ ಮುದ್ದುರಾಜ್ ಮತ್ತು ಟೀಮ್ ದಾವಣಗೆರೆಯ ವಿರಕ್ತ ಮಠದಿಂದ ಶ್ರೀಗಳನ್ನು ಬಂಧಿಸಿ ಕರೆ ತರಲಿದೆ. ದಾವಣಗೆರೆಯ ದೊಡ್ಡ ಪೇಟೆಯಲ್ಲಿರುವ ವಿರಕ್ತ ಮಠದ ಸುತ್ತ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ.
ಮುರುಘಾ ಶ್ರೀಗಳನ್ನು ಭೇಟಿಯಾದ ಜೆಡಿಎಸ್ ಮಾಜಿ ಶಾಸಕ ಶಿವಶಂಕರ್
ಈ ನಡುವೆ, ಮುರುಘಾಶ್ರೀಗಳ ಬಂಧನಕ್ಕೆ ವಾರಂಟ್ ಹೊರಡುತ್ತಿದ್ದಂತೆಯೇ ಜೆಡಿಎಸ್ ಮಾಜಿ ಶಾಸಕ ಶಿವಶಂಕರ್ ಅವರು ವಿರಕ್ತ ಮಠಕ್ಕೆ ಭೇಟಿ ನೀಡಿದ್ದಾರೆ.
ʻʻನಾವು ಇದನ್ನು ನಿರೀಕ್ಷೆ ಮಾಡಿರಲಿಲ್ಲ. 14 ತಿಂಗಳಿನಿಂದ ನಾವು ನೋವು ಅನುಭವಿಸಿಕೊಂಡು ಬಂದಿದ್ದೇವೆ. ಇದೇನು ಕೂಡ ಹೊಸದೇನಲ್ಲ. ಶ್ರೀಗಳ ದೇಶದ ಕಾನೂನಿಗೆ ತಲೆ ಬಾಗ್ತಿನಿ ಅಂತ ಹೇಳಿದ್ದಾರೆ. ಇದೊಂದು ಷಡ್ಯಂತ್ರವಾಗಿದ್ದು, ಕಾನೂನು ರೀತಿ ನಾವು ಹೋರಾಟ ಮಾಡುತ್ತೇವೆʼʼ ಎಂದು ಮಾಜಿ ಶಾಸಕ ಶಿವಶಂಕರ ಮಠಕ್ಕೆ ಭೇಟಿ ನೀಡಿದ ವೇಳೆ ಹೇಳಿದರು.
ಈ ನಡುವೆ, ಶ್ರೀಗಳ ಬಂಧನಕ್ಕೆ ಮತ್ತೆ ವಾರೆಂಟ್ ಜಾರಿಯಾದ ಹಿನ್ನೆಲೆಯಲ್ಲಿ ದಾವಣಗೆರೆ ವಿರಕ್ತ ಮಠದ ಮುಂದೆ ಭಕ್ತರು ಜಮಾಯಿಸುತ್ತಿಧಧಾರೆ. ಶ್ರೀಗಳು ಮಠದ ಕೋಣೆಯಲ್ಲಿ ಕುಳಿತಿದ್ದಾರೆ.
ವಿರಕ್ತ ಮಠದಲ್ಲಿರು ಶ್ರೀಗಳನ್ನು ಬಂಧಿಸುವ ಪೊಲೀಸರು ಅವರನ್ನು ಚಿತ್ರದುರ್ಗಕ್ಕೆ ಕರೆತಂದು ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಿದ್ದಾರೆ. ಬಳಿಕ ನ್ಯಾಯಾಧೀಶರಾದ ಬಿ.ಕೆ ಕೋಮಲ ಮುಂದೆ ಹಾಜರುಪಡಿಸಲಿದ್ದಾರೆ.
ಮುಂದೇನಾಗಬಹುದು?
ಎರಡನೇ ಪೋಕ್ಸೋ ಪ್ರಕರಣದಲ್ಲಿ ಶ್ರೀಗಳನ್ನು ಬಂಧಿಸಿ ಮತ್ತೆ ಮೊದಲಿನಂತೆ ವಿಚಾರಣೆ ನಡೆಯುವ ಸಾಧ್ಯತೆಗಳಿವೆ. ಈ ಹಂತದಲ್ಲಿ ಶ್ರೀಗಳ ಪರವಾಗಿ ವಕೀಲರು ಜಾಮೀನು ಅರ್ಜಿ ಸಲ್ಲಿಸಬಹುದು. ಆಗ ಮೊದಲ ಪ್ರಕರಣದಲ್ಲಿ ಕೋರ್ಟ್ ಯಾವ ಆಧಾರದಲ್ಲಿ ಜಾಮೀನು ನೀಡಿತ್ತು ಎಂಬ ಅಂಶ ಪರಿಗಣನೆಗೆ ಬರಲಿದೆ. ಹೀಗಾಗಿ ಎರಡನೇ ಪ್ರಕರಣದಲ್ಲಿ ಜಾಮೀನು ಹಿಂದಿನಷ್ಟು ಕಷ್ಟವಾಗಲಾರದು. ಆದರೆ, ಶ್ರೀಗಳಿಗೆ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಮುಂದಾಗಿರುವುದರಿಂದ ಸ್ವಲ್ಪ ಜಟಿಲವಾಗಲೂಬಹುದು.