ಬಳ್ಳಾರಿ: ಐಸಿಸ್ ಜತೆ ಸಂಪರ್ಕ ಹೊಂದಿದ ಆರೋಪದಲ್ಲಿ ಬಳ್ಳಾರಿ ಮೂಲದ ಇಬ್ಬರು ಸೇರಿ 8 ಐಸಿಸ್ ಶಂಕಿತ ಉಗ್ರರನ್ನು ಎನ್‌ಐಎ ಆಧಿಕಾರಿಗಳು (NIA Raid) ಸೋಮವಾರ ಬಂಧಿಸಿದ್ದರು. ಆದರೆ, ಬಳ್ಳಾರಿಯಲ್ಲಿ ಸೆರೆ ಸಿಕ್ಕಿರುವ ಐಸಿಸ್ ಶಂಕಿತ ಉಗ್ರನಿಂದ ಕಾಲೇಜು ಯುವಕರನ್ನು ಐಸಿಸ್‌ಗೆ ಸೆಳೆಯಲು ಯತ್ನ ನಡೆದಿತ್ತು ಎಂಬ ಸ್ಫೋಟಕ ವಿಷಯ ಬಯಲಾಗಿದೆ.
ಬಳ್ಳಾರಿ ಮಾಡ್ಯುಲ್ ಮಾಸ್ಟರ್ ಮೈಂಡ್ ಮಿನಾಜ್ ಅಲಿಯಾಸ್ ಎಂಡಿ ಸುಲೈಮಾನ್ ಹಾಗೂ ನಗರದ ಸೈಯದ್ ಸಮೀರ್ ಸೇರಿ 8 ಶಂಕಿತರನ್ನು ಸೋಮವಾರ ಬಂಧಿಸಲಾಗಿತ್ತು. ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಸಿಎ ಓದುತ್ತಿದ್ದ ಕೇವಲ 20 ವರ್ಷದ ಸೈಯದ್ ಸಮೀರ್, ಕಾಲೇಜು ಯುವಕರನ್ನು ಉಗ್ರ ಸಂಘಟನೆಗೆ ಸೆಳೆಯಲು ಮುಂದಾಗಿದ್ದ ಎನ್ನಲಾಗಿದೆ. ನವೆಂಬರ್ 22 ರಂದೇ ಕಾಲೇಜಿನಲ್ಲಿ ಮೊಹಮದ್ ಫೈಗಂಬರ್‌ಗೆ ಅವಮಾನ ಆರೋಪದ ಹೆಸರಲ್ಲಿ ಗಲಭೆಗೆ ಮೆಗಾ ಪ್ಲಾನ್ ನಡೆದಿತ್ತು ಎನ್ನಲಾಗಿದೆ.
ತಾನು ಓದುವ ಕಾಲೇಜಿನ ಉಪನ್ಯಾಸಕರೊಬ್ಬರು ನಮ್ಮ ಆಚರಣೆ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ಸಮೀರ್ ಯುವಕರ ಗುಂಪು ಕಟ್ಟಿದ್ದ. ಬಳಿಕ ನೂರಾರು ಯುವಕರನ್ನು ಕರೆದುಕೊಂಡು ಬಳ್ಳಾರಿ ಎಸ್ಪಿ ಕಚೇರಿಗೆ ತೆರಳಿ ದೂರು ನೀಡಿದ್ದ. ಆ ದಿನ ಸಂಜೆ ಬಳ್ಳಾರಿಯ ಕೌಲ್ ಬಜಾರ್ ಠಾಣೆಗೆ ಸಾವಿರಾರು ಜನ ಮುತ್ತಿಗೆ ಹಾಕಿ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದರು.
ಇದನ್ನೂ ಓದಿ | Medical Negligence: ಹಾವು ಕಚ್ಚಿದ ಮಹಿಳೆಗೆ ಗ್ಲೂಕೋಸ್ ಕೊಟ್ಟು ಕಳಿಸಿದ ವೈದ್ಯ; ಮನೆಯಲ್ಲಿ ಸಾವು
ಅಂದರೆ ಆ ದಿನ ಸಮುದಾಯದ ಯುವಕರನ್ನು ಸೆಳೆಯಲು ಸೈಯ್ಯದ್ ಸಮೀರ್ ವಿನಾಕಾರಣ ಉಪನ್ಯಾಸಕರ ಮಾತನ್ನು ತಪ್ಪಾಗಿ ಅರ್ಥೈಸಿದ್ದ. ಸೈಯ್ಯದ್ ಸಮೀರ್ ಮಾತು ಕೇಳಿ ಸಾವಿರಾರು ಜನ ಅವತ್ತು ಪೊಲಿಸ್ ಠಾಣೆಗೆ ಮುತ್ತಿಗೆ ಹಾಕಿದ್ದರು. ಮಿನಾಜ್ ಹೇಳಿದಂತೆ ಕಾಲೇಜು ಯುವಕರ ಬ್ರೈನ್ ವಾಶ್ ಮಾಡಿ, ಐಸಿಸ್‌ಗೆ ಸೆಳೆಯಲು ಸೈಯ್ಯದ್ ಸಮೀರ್ ಯತ್ನಿಸುತ್ತಿದ್ದ ಎನ್ನಲಾಗಿದೆ.