Site icon Vistara News

Rain News | ಹಿರಣ್ಯಕೇಶಿ, ಘಟಪ್ರಭಾ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಳ, ತೀರ ಪ್ರದೇಶದಲ್ಲಿ ಪ್ರವಾಹ ಭೀತಿ!

Rain News

ಬೆಳಗಾವಿ/ಚಿಕ್ಕೋಡಿ: ಮಹಾರಾಷ್ಟ್ರ ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಿರಂತರ ಮಳೆ (Rain News) ಹಿನ್ನೆಲೆಯಲ್ಲಿ ಹಿರಣ್ಯಕೇಶಿ ಹಾಗೂ ಘಟಪ್ರಭಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ನದಿ ತೀರದ ಪ್ರದೇಶದ ಗ್ರಾಮಗಳಲ್ಲಿ ಪ್ರವಾಹ ಭೀತಿ ಉಂಟಾಗಿದ್ದು, ಗ್ರಾಮಗಳು ಹಾಗೂ ಕೃಷಿ ಜಮೀನುಗಳಿಗೆ ನೀರು ನುಗ್ಗಿ ಜನರ ಪರದಾಡುವಂತಾಗಿದೆ.

ಘಟಪ್ರಭೆಯ ಪ್ರವಾಹಕ್ಕೆ ರೈತರು ಬೆಳೆದ ವಿವಿಧ ಬೆಳೆ ನೀರು ಪಾಲಾಗಿವೆ. ಕೈಗೆ ಬಂದ ತುತ್ತು ಬಾಯಿಗೆ ಬಾರದೆ ಗೋಕಾಕ್‌ ಹಾಗೂ ಮೂಡಲಗಿ ತಾಲೂಕಿನ ರೈತರು ಪರದಾಡುತ್ತಿದ್ದಾರೆ. ಈ ಭಾಗದಲ್ಲಿ ಸುಮಾರು 15ಕ್ಕೂ ಹೆಚ್ಚು ಹಳ್ಳಿಗಳ ರೈತರು ಬೆಳೆದ ಬೆಳೆಗಳು ಜಲಾವೃತವಾಗಿದ್ದು, ಮುಸುಗುಪ್ಪಿ ಸೇರಿದಂತೆ ತಾಲೂಕಿನ ನದಿ ತೀರದ ಗ್ರಾಮಗಳಲ್ಲಿ ಕಬ್ಬು, ಮೆಕ್ಕೆಜೋಳ, ಗೋವಿನ ಜೋಳ ಮತ್ತಿತರ ಬೆಳೆಗಳಿಗೆ ಹಾನಿಯಾಗಿದೆ.

ಇದನ್ನೂ ಓದಿ | 40% ಕಮಿಷನ್‌ | ಬಿಜೆಪಿ ಸರಕಾರದ ಮೇಲೆ 15,00,00,00,00,000 ರೂ. ಲೂಟಿ ಆರೋಪ, ಕಾಂಗ್ರೆಸ್‌ನಿಂದ ಲಂಚದ ಮೆನು!

ಬಳ್ಳಾರಿ ನಾಲಾ ಅವಾಂತರದಿಂದ ಎರಡು ತಿಂಗಳಲ್ಲಿ ನಾಲ್ಕು ಸಲ‌ ಭತ್ತದ ಗದ್ದೆಗಳು ಜಲಾವೃತವಾಗಿವೆ. ಬೆಳಗಾವಿ-ಯಳ್ಳೂರು ಮಾರ್ಗದಲ್ಲಿ ಬೆಳೆಯಲಾಗಿರುವ 800 ಎಕರೆ ಭತ್ತದ ಗದ್ದೆ ಜಲಾವೃತವಾಗಿರುವುದರಿಂದ ಶಹಾಪುರ, ವಡಗಾವಿ, ಯಳ್ಳೂರು ಭಾಗದ ರೈತರು ಸಂಕಷ್ಟ ಎದುರಿಸುವಂತಾಗಿದೆ. ಬಳ್ಳಾರಿ ನಾಲಾ ‌ಹೂಳೆತ್ತದಿರುವುದಕ್ಕೆ ಕೃಷಿ ‌ಜಮೀನಿಗೆ ನುಗ್ಗುತ್ತಿದೆ. 18 ಕಿ.ಮೀ.ನಷ್ಟು ಹರಿಯುವ ಬಳ್ಳಾರಿ ನಾಲಾದಿಂದ ಸಾವಿರಾರು ಹೆಕ್ಟೇರ್ ಪ್ರದೇಶಕ್ಕೆ ತೊಂದರೆಯಾಗಿದೆ ಎಂದು ಸರ್ಕಾರದ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದಾರೆ.

ವಿವಿಧ ದೇವಾಲಯಗಳಿಗೆ ನುಗ್ಗಿದ ನೀರು
ಘಟಪ್ರಭಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕೋಟಬಾಗಿ ಗ್ರಾಮದ ಸುಪ್ರಸಿದ್ಧ ದುರ್ಗಾದೇವಿ ದೇವಸ್ಥಾನ ಜಲಾವೃತವಾಗಿದೆ. ದೇವಸ್ಥಾನದ ಹೊರಗಡೆ ಭಾಗ ಹಾಗೂ ಗರ್ಭ ಗುಡಿ ಜಲಾವೃತವಾಗಿದ್ದರೂ ಕೆಲವು ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ದೇಗುಲ ಜಲಾವೃತವಾದ ಹಿನ್ನೆಲೆಯಲ್ಲಿ ಬೆಲೆ ಬಾಳುವ ಸಾಮಗ್ರಿಗಳನ್ನು ಅರ್ಚಕರು ಸ್ಥಳಾಂತರಿಸಿದ್ದಾರೆ.

ಖಾನಾಪುರ ತಾಲೂಕಿನ ಮಾರುತಿ ‌ಮಂದಿರ

ಮೂಡಲಗಿ ತಾಲೂಕಿನ ಮುಸುಗುಪ್ಪಿ ಗ್ರಾಮ ಘಟಪ್ರಭೆಯ ನೀರು ನುಗ್ಗಿ ಜಲಾವೃತವಾಗಿದ್ದು, ಇಲ್ಲಿನ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಕಳೆದ ಒಂದು ತಿಂಗಳ ಅವಧಿಯಲ್ಲಿ ಎರಡನೇ ಬಾರಿ ದೇವಸ್ಥಾನ ಜಲಾವೃತವಾಗಿದೆ. ಪದೇಪದೆ ನೆರೆಯಿಂದ ಮುಸುಗುಪ್ಪಿ ಗ್ರಾಮದ ಜನ ಕಂಗಾಲಾಗಿದ್ದಾರೆ. ಅದೇ ರೀತಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ‌ಮಲಪ್ರಭ ನದಿ ಉಕ್ಕಿ ಹರಿಯುತ್ತಿರುವುದರಿಂದ ಇಲ್ಲಿನ ಮಾರುತಿ ‌ಮಂದಿರದ ಗರ್ಭಗುಡಿಗೆ ನೀರು ನುಗ್ಗಿದೆ. ದೇಗುಲ ಜಲಾವೃತವಾಗಿದ್ದರಿಂದ ಭಕ್ತರ ‌ಪ್ರವೇಶಕ್ಕೆ ನಿಷೇಧ ವಿಧಿಸಲಾಗಿದೆ. ಕಳೆದ ತಿಂಗಳು ಸುರಿದ ಮಳೆಗೂ ಮಾರುತಿ ದೇವಾಲಯ ಜಲಾವೃತವಾಗಿತ್ತು.

ಸರ್ಕಾರಿ ಶಾಲೆಯನ್ನು ಸುತ್ತುವರಿದ ನೀರು
ಜಿಲ್ಲೆಯ ಗೋಕಾಕ್‌ ತಾಲೂಕಿನ ತಳಕಟನಾಳ ಗ್ರಾಮದ ಸರ್ಕಾರಿ ಪ್ರೌಢ ಶಾಲಾ ಆವರಣಕ್ಕೆ ಘಟಪ್ರಭಾ ನದಿ ನುಗ್ಗಿದೆ. ಮಳೆ ನೀರು ಸುತ್ತಿವರಿದಿದ್ದರಿಂದ ಶಾಲೆ ಆವರಣ ಕೆಸರು ಗದ್ದೆಯಂತಾಗಿದೆ. ಮಳೆ ಕಡಿಮೆಯಾದರೂ ಘಟಪ್ರಭೆ ನದಿಯಲ್ಲಿ ಅಪಾರ ಪ್ರಮಾಣದ ನೀರು ಹರಿಯುತ್ತಿದೆ. ಮಳೆ ಹೆಚ್ಚಾದರೆ ನದಿ ತೀರದ ಗ್ರಾಮಗಳು ಜಲಾವೃತವಾಗುವ ಭೀತಿ ಎದುರಿಸುತ್ತಿವೆ.

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಮುಸುಗುಪ್ಪಿ ಗ್ರಾಮ ಜಲಾವೃತವಾಗಿದ್ದರಿಂದ 11 ಕುಟುಂಬಗಳ 50 ಮಂದಿಗೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಆಶ್ರಯ ಕಲ್ಪಿಸಲಾಗಿದೆ. ಮಂಗಳವಾರ ಮಧ್ಯಾಹ್ನ ಸಂತ್ರಸ್ತರನ್ನು ಜಿಲ್ಲಾ ನೋಡಲ್ ಅಧಿಕಾರಿ ಲಕ್ಷ್ಮಣ ಬಬಲಿ, ತಹಸೀಲ್ದಾರ್ ಡಿ.ಜಿ.ಮಹತ್, ಉಪತಹಸೀಲ್ದಾರ್ ರಾಜಶೇಖರ್ ವಾಳಸಂದ, ಕಂದಾಯ ನಿರೀಕ್ಷಕ ಎಸ್‌.ಬಿ.ಹೊಸಮನಿ ಸಂತ್ರಸ್ತರನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿ, ಅವರೊಂದಿಗೆ ಊಟ ಸವಿದರು.

ಮರ ಬಿದ್ದು ಯುವಕ ಸಾವು
ಬೆಳಗಾವಿಯ ಆರ್‌ಟಿಒ ವೃತ್ತದಲ್ಲಿ ನಿರಂತರ ಮಳೆಗೆ ಮರ ಬಿದ್ದು ಖಾಸಗಿ ಕಂಪನಿ ಉದ್ಯೋಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗೋಕಾಕ್‌ ತಾಲೂಕಿನ ಸಿದ್ನಳ್ಳಿ ಗ್ರಾಮದ ರಾಕೇಶ ಸುಳದಾಳ (25) ಮೃತ. ಇಬ್ಬರು ಸವಾರರ ಮೇಲೆ‌ ಏಕಾಏಕಿ ಬೃಹತ್ ಮರ ಬಿದ್ದಿದ್ದರಿಂದ ದುರಂತ ನಡೆದಿದ್ದು, ಅದೃಷ್ವವಶಾತ್‌ ಮತ್ತೊಬ್ಬ ಅಪಾಯದಿಂದ ಪಾರಾಗಿದ್ದಾನೆ.

ಗೋಕಾಕ್‌ ಫಾಲ್ಸ್‌ ಬೆಟ್ಟದ ಬಂಡೆ ಕುಸಿಯುವ ಭೀತಿ
ಗೋಕಾಕ್‌ ಹಾಗೂ ಗೋಕಾಕ್‌ ಫಾಲ್ಸ್ ನಡುವೆ ಸಂಚರಿಸುವವರಿಗೆ ಗೋಕಾಕ ಫಾಲ್ಸ್ ಬೆಟ್ಟದಲ್ಲಿರುವ ಬಂಡೆ ಜಾರುವ ಭಯ ಉಂಟಾಗಿದೆ. ಇತ್ತೀಚೆಗೆ ಬೆಟ್ಟದ ಭೂಕುಸಿತವಾಗಿ ಮಣ್ಣು ಕುಸಿದು ರಸ್ತೆಗೆ ಬಿದ್ದಿತ್ತು. ಇದೀಗ ಬೆಟ್ಟದಲ್ಲಿ ಸುಮಾರು 5 ರಿಂದ 6 ಅಡಿ ದೂರ ಬಂಡೆ ಜರಿದಿದ್ದು, ಯಾವ ಕ್ಷಣದಲ್ಲಾದರೂ ಕುಸಿಯುವ ಭೀತಿ ಸೃಷ್ಟಿಯಾಗಿದೆ. ಆದರೆ, ಅಧಿಕಾರಿಗಳು, ಇಲ್ಲಿ ಕೇವಲ ಬ್ಯಾರಿಕೇಡ್ ಹಾಕಿ ಕೈ ತೊಳೆದುಕೊಂಡಿದ್ದಾರೆ. ಹೀಗಾಗಿ ಸ್ಥಳೀಯರು, ಅಪಾಯ ಸಂಭವಿಸುವ ಮುನ್ನ ಬಂಡೆ ತೆರವು ಮಾಡಲು ಒತ್ತಾಯಿಸಿದ್ದಾರೆ.

ಇದನ್ನೂ ಓದಿ | Encroachment | ಶಾಸಕರ ಜಾಗವೆಂದು ಗೊತ್ತಿದ್ದರೂ ಡೆಮಾಲಿಷ್‌ ಮಾಡ್ತಿರಾ? ಎಷ್ಟು ಧೈರ್ಯ; ಹ್ಯಾರಿಸ್‌ ಪಿಎ ಧಮ್ಕಿ

Exit mobile version