Site icon Vistara News

Wayanad Landslide: ವಯನಾಡು ಭೂಕುಸಿತ; ಮೃತ ಕನ್ನಡಿಗರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ

wayanad landslide

ಬೆಂಗಳೂರು: ಕೇರಳದ ವಯನಾಡು ಸಂಭವಿಸಿದ ಭೂಕುಸಿತದಲ್ಲಿ (Wayanad Landslide) ಸಾವಿನ ಸಂಖ್ಯೆ 150ಕ್ಕೇರಿದೆ. ಈ ಪೈಕಿ 7 ಕನ್ನಡಿಗರು ಮೃತಪಟ್ಟಿದ್ದು, ಇವರ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ ಅವರು ತಲಾ 5 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಸಿಎಂ, ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಾವಿನ ಸಂಖ್ಯೆ ಏರುತ್ತಲೇ ಹೋಗುತ್ತಿದೆ. ಇದೊಂದು ಅತ್ಯಂತ ಘೋರ ದುರಂತ, ಈ ದುರಂತದಲ್ಲಿ ಕನ್ನಡಿಗರು ಪ್ರಾಣ ಕಳೆದುಕೊಂಡದ್ದು ಮತ್ತಷ್ಟು ನೋವುಂಟು ಮಾಡಿದೆ. ಮೃತಪಟ್ಟ ಕನ್ನಡಿಗರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗುವುದು. ಇದೇ ವೇಳೆ ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

ಈಗಾಗಲೇ ರಾಜ್ಯದ ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳು, ಎನ್.ಡಿ.ಆರ್.ಎಫ್ ತಂಡ ಮತ್ತು ಸೇನಾ ಪಡೆಯ ತಂಡಗಳು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಇಂದು ರಕ್ಷಣಾ ಕಾರ್ಯದ ಉಸ್ತುವಾರಿಗಾಗಿ ಸಚಿವರಾದ ಸಂತೋಷ್ ಲಾಡ್ ಅವರನ್ನು ವಯನಾಡಿಗೆ ಕಳುಹಿಸಿಕೊಡಲಾಗುತ್ತಿದೆ. ಸಂತ್ರಸ್ತರ ಪ್ರಾಣ ರಕ್ಷಣೆ ನಮ್ಮ ಮೊದಲ ಆದ್ಯತೆಯಾಗಿದ್ದು, ಸಂಕಷ್ಟದಲ್ಲಿರುವ ಕನ್ನಡಿಗರನ್ನು ಸುರಕ್ಷಿತವಾಗಿ ನಾಡಿಗೆ ಕರೆತರಲು ನಮ್ಮ ಸರ್ಕಾರ ಶಕ್ತಿಮೀರಿ ಶ್ರಮಿಸುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | Wayanad Landslide: ಮಂಡ್ಯದ 9 ಜನರ ಕುಟುಂಬ ಭೂಕುಸಿತದಲ್ಲಿ ಸಂಪೂರ್ಣ ಕಣ್ಮರೆ

ಕೇರಳ ಭೂ ಕುಸಿತ; ಕನ್ನಡಿಗರಿಗೆ ನೆರವು ನೀಡಲು ಸಹಾಯವಾಣಿ

ಬೆಂಗಳೂರು: ವಯನಾಡಿನಲ್ಲಿ ನಡೆದ ಭೂಕುಸಿತ ದುರಂತದಲ್ಲಿ (Wayanad Landslide) ಸಾವಿನ ಸಂಖ್ಯೆ 89ಕ್ಕೇರಿದೆ. ಹೀಗಾಗಿ ಕರ್ನಾಟಕದಲ್ಲೂ ಕಟ್ಟೆಚ್ಚರ ವಹಿಸಲು ಜಿಲ್ಲಾಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. ಇನ್ನು ಕೆಲಸ ಕಾರ್ಯಗಳಿಗಾಗಿ ಕರ್ನಾಟಕದಿಂದ ಹಲವು ಕನ್ನಡಿಗರು ಕೇರಳಕ್ಕೆ ತೆರಳಿ, ಅಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಸಾಧ್ಯತೆ ಇರುವುದರಿಂದ ನೆರವಿಗಾಗಿ ರಾಜ್ಯ ಸರ್ಕಾರ ಸಹಾಯವಾಣಿ ತೆರೆದಿದೆ.

ಭೂಕುಸಿತದ ತ್ಯಾಜ್ಯ ವಿಲೇವಾರಿಗೆ ಲೋಕೋಪಯೋಗಿ ಇಲಾಖೆ ನೆರವು

ವಯನಾಡಿನಲ್ಲಿ ಭೂಕುಸಿತದಿಂದ ಉಂಟಾಗಿರುವ ತ್ಯಾಜ್ಯಗಳ ತೆರವಿಗೆ ರಾಜ್ಯದಿಂದ ಅಗತ್ಯ ಜೆಸಿಬಿ, ಕ್ರೇನ್ ಮತ್ತಿತರ ಭಾರೀ ವಾಹನಗಳ ಸೌಕರ್ಯ ಕಲ್ಪಿಸಲು ಲೋಕೋಪಯೋಗಿ ಇಲಾಖೆ ಕೈಗೊಳ್ಳುತ್ತಿದೆ.

ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿ ಸಹಾಯವಾಣಿ

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ಹಾಗೂ ಸುತ್ತಲಿನ ಪ್ರದೇಶಗಳ ಅಸಂಘಟಿತ ಕಾರ್ಮಿಕರು ಅಲ್ಲಿಗೆ ನಿಯಮಿತವಾಗಿ ಕೆಲಸಕ್ಕಾಗಿ ತೆರಳಿರುವ ಸಾಧ್ಯತೆ ಇರುವುದರಿಂದ, ಅಂತಹವರು ಕಣ್ಮರೆಯಾಗಿದ್ದರೆ ಮಾಹಿತಿ ನೀಡಲು ಚಾಮರಾಜನಗರ ಜಿಲ್ಲಾಡಳಿತವು 24/7 ಸಹಾಯವಾಣಿ ಸ್ಥಾಪಿಸಿದೆ.

ಸಹಾಯವಾಣಿ ಸಂಖ್ಯೆಗಳು- 08226-223161, 223163, 223160 ಅಥವಾ ವಾಟ್ಸಪ್ ಸಂಖ್ಯೆ 9740942902 ಮೂಲಕ ಸಾರ್ವಜನಿಕರು ಸಂಪರ್ಕಿಸಲು ಕೋರಿದೆ.

ಮಾರ್ಗ ಸ್ಥಗಿತ

ಗುಂಡ್ಲುಪೇಟೆ ಮಾರ್ಗವಾಗಿ ಸಾಗುವ ಬೆಂಗಳೂರು-ವಯನಾಡ್ ರಾಷ್ಟ್ರೀಯ ಹೆದ್ದಾರಿ 766 ರ ಮಾರ್ಗದಲ್ಲಿ ಸಂಚಾರ ಮುಂಜಾಗ್ರತಾ ಕ್ರಮವಾಗಿ ನಿರ್ಬಂಧಿಸಲಾಗಿದ್ದು, ಪರ್ಯಾಯವಾಗಿ ಗುಂಡ್ಲುಪೇಟೆ-ಬಂಡೀಪುರ-ಗುಡಲೂರ ಮಾರ್ಗದಲ್ಲಿ ತೆರಳಲು ಸೂಚಿಸಲಾಗಿದೆ.

ಇದನ್ನೂ ಓದಿ | Wayanad Landslide: ವಯನಾಡು ದುರಂತದಲ್ಲಿ ಸಾವಿನ ಸಂಖ್ಯೆ 150ಕ್ಕೆ ಏರಿಕೆ; ಇಂದೂ ಭಾರಿ ಮಳೆಯ ಮುನ್ಸೂಚನೆ, ಮುಂದುವರಿದ ಕಾರ್ಯಾಚರಣೆ

ಮೈಸೂರು ಜಿಲ್ಲಾಡಳಿತರಿಂದ ಅಗತ್ಯ ಕ್ರಮ

ಮೈಸೂರು ಜಿಲ್ಲಾಡಳಿತವು ಕೂಡ ಹೆಗ್ಗಡದೇವನಕೋಟೆ ತಾಲ್ಲೂಕು ಆಸ್ಪತ್ರೆ ಹಾಗೂ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ವೈದ್ಯರನ್ನು ನಿಯೋಜಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆತರಲು ಸಾಕಷ್ಟು ಬಸ್, ವಾಹನಗಳನ್ನು ಅಣಿಗೊಳಿಸಲಾಗಿದೆ. ಪಾರ್ಥಿವ ಶರೀರಗಳ ಸಂರಕ್ಷಣೆಗೆ ಶೈತ್ಯಾಗಾರದ ಘಟಕಗಳನ್ನು ಒದಗಿಸುವ ಸರಬರಾಜುದಾರನ್ನು ಗುರುತಿಸಲಾಗಿದೆ.

ಮೈಸೂರು ಜಿಲ್ಲಾಡಳಿತ ಸಹಾಯವಾಣಿ ಸಂಖ್ಯೆ: 0821-24223800

Exit mobile version