Site icon Vistara News

Jagadish Shettar : ಬಿಜೆಪಿ ಏನು‌ ಒತ್ತಡ ಹೇರಿದೆ, ಯಾವ ಆಮಿಷ ಒಡ್ಡಿದೆ ಎಂದು ಶೆಟ್ಟರೇ ಹೇಳಬೇಕು: ಡಿ.ಕೆ ಶಿವಕುಮಾರ್‌

Jagadish Shettar DK Shivakumar

ಬೆಂಗಳೂರು: ಜಗದೀಶ್‌ ಶೆಟ್ಟರ್‌ (Jagadish Shettar) ಅವರನ್ನು ಬಿಜೆಪಿ ದೂರ ಮಾಡಿದರೂ, ಜನ ತಿರಸ್ಕರಿಸಿದರೂ ಕಾಂಗ್ರೆಸ್‌ ಅವರಿಗೆ ಎಂದೂ ಅಗೌರವ ತೋರಿಲ್ಲ. ಅವರು ಯಾಕೆ ಪಕ್ಷ ಬಿಡುವ ನಿರ್ಧಾರ ಮಾಡಿದರೋ ಗೊತ್ತಿಲ್ಲ. ಅವರಿಗೆ ಯಾವ ಒತ್ತಡವಿತ್ತೋ ಗೊತ್ತಿಲ್ಲ. ಆದರೆ, ನಾನು ನಿರೀಕ್ಷೆ ಮಾಡಿರಲಿಲ್ಲ.: ಇದು ಜಗದೀಶ್‌ ಶೆಟ್ಟರ್‌ ಅವರು ಬಿಜೆಪಿ ಸೇರಿದ್ದರ ಬಗ್ಗೆ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ ಶಿವಕುಮಾರ್‌ (DK Shivakumar) ಅವರ ಮೊದಲ ಪ್ರತಿಕ್ರಿಯೆ.

ಬಿಜೆಪಿಯವರು ನನ್ನನ್ನು ಮರಳಿ ಪಕ್ಷಕ್ಕೆ ಬರುವಂತೆ ಒತ್ತಡ ಹೇರುತ್ತಿದ್ದಾರೆ. ಕಾರ್ಯಕರ್ತರನ್ನು ಕಳಿಸುತ್ತಿದ್ದಾರೆ ಎಂದು ನನ್ನ ಬಳಿ ಹೇಳಿದ್ದರು. ನಿನ್ನೆ ಬೆಳಿಗ್ಗೆ ಕೂಡಾ ನನ್ನ ಜೊತೆ ಮಾತನಾಡಿದ್ದರು. ಆಗ ನಾನು ಹೋಗುವುದಿಲ್ಲ, ರಾಜಕೀಯವಾಗಿ ಕಾಂಗ್ರೆಸ್ ಮರುಜೀವ ಕೊಟ್ಟಿದೆ ಎಂದು ಹೇಳಿದ್ದರು. ಅದನ್ನು ಗಮನದಲ್ಲಿಟ್ಟುಕೊಂಡೆ ನಾನು ಮೈಸೂರಿನಲ್ಲಿ ಮಾತಾಡಿದ್ದೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ʻʻಕಾಂಗ್ರೆಸ್ ಪಕ್ಷಕ್ಕೆ ಒಬ್ಬ ಹಿರಿಯ ನಾಯಕ ಬಂದಿದ್ದಾರೆ ಎಂದು ಗೌರವದಿಂದ ನಡೆಸಿಕೊಂಡಿದ್ದೆವು. ಅವರೇ ಬಿಜೆಪಿ ಪಕ್ಷ ಒಳ್ಳೆಯದಲ್ಲ ಎಂದಿದ್ದರು. ಹಿರಿಯ ನಾಯಕ ಎಂದು ವಿಶ್ವಾಸ ವ್ಯಕ್ತಪಡಿಸಿದ್ದೆವು. ಈಗ ವಿಶ್ವಾಸಕ್ಕೆ ಧಕ್ಕೆಯಾಗುತ್ತಿದೆ ಎಂದು ನೀವೇ ತೋರಿಸುತ್ತಿದ್ದೀರಿʼʼ ಎಂದು ಡಿ.ಕೆ. ಶಿವಕುಮಾರ್‌ ವಿವರಿಸಿದರು.

ಅವರು ಮೇಲ್ಮನೆ ಸದಸ್ಯರು. ಈ ಸ್ಥಾನಕ್ಕೆ ಸ್ಪೀಕರ್ ಅವರಿಗೆ ಫ್ಯಾಕ್ಸ್ ಮೂಲಕ ರಾಜೀನಾಮೆ ಕಳಿಸುತ್ತೇನೆ ಎಂದು ಹೇಳಿದ್ದಾರೆ. ಕಚೇರಿಯಿಂದ ನನಗೆ ಮಾಹಿತಿ ಬಂದಿದೆ ಎಂದು ಹೇಳಿದ ಡಿ.ಕೆ. ಶಿವಕುಮಾರ್‌ ಅವರು, ʻʻಅವರ ತೀರ್ಮಾನ ಏನು ಇದೆಯೋ, ಅವರಿಗೆ ಏನು ಒತ್ತಡ ಇದೆಯೋ, ಬಲವಂತವಾಗಿ ಹೋಗಿದ್ದಾರೋ ಗೊತ್ತಿಲ್ಲ. ಅವರು ಏನು ಹೇಳಿಕೆ ಕೊಡ್ತಾರೋ ಕೊಡಲಿ. ಆ ಮೇಲೆ ಅದರ ಬಗ್ಗೆ ನಾನು ಮಾತಾಡುತ್ತೇನೆʼʼ ಎಂದು ಹೇಳಿದರು.

ಅವರು ದೇಶದ ಹಿತಕ್ಕಾಗಿ ಮತ್ತೆ ಬಿಜೆಪಿ ಸೇರಿದ್ದೇನೆ ಎಂದು ಹೇಳಿದ್ದರ ಬಗ್ಗೆ ಗಮನ ಸೆಳೆದಾಗ ʻʻಬಿಜೆಪಿಯವರು ಸೀಟು ತಪ್ಪಿಸುವಾಗ ಅವರಿಗೆ ದೇಶದ ಹಿತ ಗೊತ್ತಿರಲಿಲ್ಲವೇ? ಕಾಂಗ್ರೆಸ್ ಐದು ವರ್ಷದ ಎಂಎಲ್ಸಿ ನಾಮಿ ನೇಷನ್ ಮಾಡಿಸುವಾಗ ಗೊತ್ತಿರಲಿಲ್ಲವೇ?ʼʼ ಎಂದು ಹೇಳಿದರು.

ನಾನು ಈಗ ಏನೂ ಹೇಳುವುದಿಲ್ಲ. ಅವರು ಏನು ರಿಯಾಕ್ಟ್ ಮಾಡ್ತಾರೆ ನೋಡಿಕೊಂಡೇ ಮಾತಾಡುತ್ತೇನೆ ಎಂದು ಹೇಳಿದ ಅವರು, ʻʻಎಲ್ಲರೂ ಸ್ವ ಇಚ್ಛೆಯಿಂದಲೇ ರಾಜೀನಾಮೆ ಕೊಡುವುದು. ಆದರೆ, ಬಿಜೆಪಿಯವರು ಏನು ಆಮಿಷ ಕೊಟ್ಟಿದ್ದಾರೆ ಎಂದು ಅವರೇ ಹೇಳಬೇಕುʼʼ ಎಂದರು.

ʻʻನನಗೂ ಆತ್ಮಸಾಕ್ಷಿ ಇರುತ್ತದೆ, ಅವರಿಗೂ ಇರುತ್ತದೆ. ಕಾಂಗ್ರೆಸ್ ಪಾರ್ಟಿ ನಡೆಯುವ ಸಿಸ್ಟಮ್ ಬೇರೆ, ಬಿಜೆಪಿಯ ವ್ಯವಸ್ಥೆಯೇ ಬೇರೆʼʼ ಎಂದು ಹೇಳಿದರು.

ಅವರು ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ಪತ್ರ ಕಳುಹಿಸಿದ್ದೇನೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಅಧ್ಯಕ್ಷನಾಗಿ ನನಗೆ ರಾಜೀನಾಮೆ ಪತ್ರ ತಲುಪಿಲ್ಲ. ನಾನೇ ಅವರಿಗೆ ಬಿ ಫಾರಂ ಕೊಟ್ಟಿದ್ದೆ ಎಂದು ನೆನಪಿಸಿದರು.

ಇದನ್ನೂ ಓದಿ : Jagadish Shettar : ಶೆಟ್ಟರ್‌ ಕ್ರಾಂತಿ ಎಫೆಕ್ಟ್; ಬಿಜೆಪಿಗೇನು ಲಾಭ? ಕಾಂಗ್ರೆಸ್‌ಗೆ ನಷ್ಟವೇನು?

ಬೇರೆ ಯಾರೂ ಕಾಂಗ್ರೆಸ್‌ ಬಿಟ್ಟು ಹೋಗಲ್ಲ ಎಂದ ಡಿ.ಕೆ ಶಿವಕುಮಾರ್‌

ʻʻನಾವು ರಾಜಕಾರಣಿಗಳು, ರಾಜಕಾರಣಿ ಕೆಲಸ ಮಾಡುತ್ತೇವೆ. ಸಂಘ ಪರಿವಾರದವರಾಗಿದ್ದರೆ ಸಂಘ ಬಿಟ್ಟು ಕಾಂಗ್ರೆಸ್ ಸೇರುತ್ತಿದ್ದರಾ..? ಅವರು ರಾಜಕಾರಣಿ ನಾನ್ಯಾಕೆ ಸಂಘ ಅಂತ ಮಾತನಾಡಲಿʼʼ ಎಂದು ಸಂಘ ಪರಿವಾರದದವರಾಗಿರುವುದರಿಂದ ಶೆಟ್ಟರ್‌ ಬಿಟ್ಟು ಹೋದರು ಎಂಬ ಮಾತಿಗೆ ಉತ್ತರಿಸಿದರು.

ʻʻಜಗದೀಶ್ ಶೆಟ್ಟರ್ ಹೋಗಿದ್ದಾರೆ. ಅದು ಬೇರೆ ವಿಚಾರ. ಬೇರೆ ಯಾರೂ ಕಾಂಗ್ರೆಸ್ ಬಿಟ್ಟು ಹೋಗಲ್ಲʼʼ ಎಂದು ಹೇಳಿದ ಡಿ.ಕೆ. ಶಿವಕುಮಾರ್‌ ಅವರು, ಜನ ಶೆಟ್ಟರ್‌ ಅವರನ್ನು ತಿರಸ್ಕರಿಸಿದರೂ ಕೂಡ ನಾವು ಬಹಳ ಗೌರವದಿಂದ ನಡೆಸಿಕೊಂಡಿದ್ದೇವೆ ಇದು ಆತ್ಮಸಾಕ್ಷಿ ವಿಚಾರ. ಮುಂದಿನದನ್ನು ಜನ ತೀರ್ಮಾನ ಮಾಡುತ್ತಾರೆ ಎಂದು ಡಿ.ಕೆ. ಶಿವಕುಮಾರ್‌ ನುಡಿದರು.

Exit mobile version