ಮೈಸೂರು: ಊಟಿ ರಸ್ತೆಯಲ್ಲಿ ನಿರ್ಮಿಸಲಾಗಿರುವ ಗುಂಬಜ್ ಮಾದರಿಯ ಬಸ್ ನಿಲ್ದಾಣವನ್ನು ತೆರವು ಮಾಡಬೇಕು ಎಂದು ಒತ್ತಾಯಿಸಿ ಹಿಂದೂ ಕಾರ್ಯಕರ್ತರೊಬ್ಬರು ವಿಭಿನ್ನ ಪ್ರತಿಭಟನೆ ಶುರು ಮಾಡಿದ್ದಾರೆ. ಜತೆಗೆ ಬಾಬ್ರಿ ಮಸೀದಿಯನ್ನೇ ಬಿಟ್ಟಿಲ್ಲ, ಇನ್ನು ಇದನ್ನು ಬಿಡ್ತೀವಾ ಎಂದು ಅಬ್ಬರಿಸಿದ್ದಾರೆ!
ಮೈಸೂರು – ನಂಜನಗೂಡು ರಸ್ತೆಯ ಬಸ್ ನಿಲ್ದಾಣದಲ್ಲಿ ಚಾಪೆ ಹಾಸಿ ಕುಳಿತು ಏಕಾಂಗಿ ಪ್ರತಿಭಟನೆ ನಡೆಸುತ್ತಿರುವ ಹಿಂದೂ ಕಾರ್ಯಕರ್ತ ವಿಕಾಸ್ ಶಾಸ್ತ್ರಿ ಕೈಯಲ್ಲಿ ಫ್ಲೆಕ್ಸ್ ಹಿಡಿದುಕೊಂಡಿದ್ದಾರೆ.
ʻʻಬಸ್ ಶೆಲ್ಟರ್ ಮೇಲೆ ಗುಂಬಜ್‌ನ ಆಕೃತಿ ನಿರ್ಮಿಸಲಾಗಿದೆ. ಇದನ್ನು ಪ್ರಶ್ನಿಸಿದ ಬಳಿಕ ರಾತ್ರೋರಾತ್ರಿ ಗುಂಬಜ್‌ಗೆ ಕಳಸವನ್ನು ಹಾಕುವ ಮೂಲಕ ತೇಪೆ ಹಚ್ಚುವ ಕೆಲಸಕ್ಕೆ ಮುಂದಾಗಿದ್ದಾರೆ. ಇನ್ನು ಏಳು ದಿನಗಳ ಅವಕಾಶ ನೀಡುತ್ತಿದ್ದೇವೆ. ಒಂದು ವೇಳೆ ತೆರವು ಮಾಡದಿದ್ದರೆ ನಾವೇ ಬಂದು ಒಡೆಯುತ್ತೇವೆʼʼ ಎಂದು ಹೇಳಿದ ವಿಕಾಸ್ ಶಾಸ್ತ್ರಿ, ʻʻಬಾಬ್ರಿ ಮಸೀದಿಯನ್ನೇ ಬಿಡಲಿಲ್ಲ ನಾವು ಇದನ್ನು ಬಿಡುತ್ತೇವೆಯೇ? ನಾಳೆ ಇದನ್ನೇ ತಾಜ್ ಮಹಲ್ ಎನ್ನಬಹುದುʼʼ ಎಂದಿದ್ದಾರೆ.
ʻʻನಮ್ಮ ಕ್ಷೇತ್ರದ ಶಾಸಕರನ್ನು ಭೇಟಿ ಮಾಡಿ ಮಾತನಾಡುತ್ತೇನೆ. ಅವರು ತಬ್ರೇಜ್ ಎನ್ನುವ ವ್ಯಕ್ತಿಗೆ ಕಾಂಟ್ರಾಕ್ಟ್ ಕೊಟ್ಟಿದ್ದರು. ಇದನ್ನು ಗುಂಬಜ್ ಮಾದರಿಯಲ್ಲಿ ನಿರ್ಮಿಸಿರುವುದು ಸರಿಯಲ್ಲ. ಇದು ಸಾರ್ವಜನಿಕ ಸ್ಥಳ, ಇಲ್ಲಿ ಗುಂಬಜ್ ಇರಬಾರದು. ಏಳು ದಿನಗಳಲ್ಲಿ ತೆರವು ಮಾಡಿ, ಇಲ್ಲದಿದ್ದರೆ ನಾವೇ ಒಡೆಯುವ ಕೆಲಸ ಮಾಡುತ್ತೇವೆʼʼ ಎಂದು ಹಿಂದೂ ಕಾರ್ಯಕರ್ತ ವಿಕಾಸ್ ಶಾಸ್ತ್ರಿ ಹೇಳಿದ್ದಾರೆ.
ಇದನ್ನೂ ಓದಿ | ಶೆಲ್ಟರ್‌ನಲ್ಲಿ ಗುಂಬಜ್ | ಗುಂಬಜ್ ಒಡೀತೇನೆ ಅನ್ನೋದಕ್ಕೆ ಪ್ರತಾಪ್ ಸಿಂಹ ಯಾವನ್ರೀ?: ಅಬ್ಬರಿಸಿದ ಸಿದ್ದರಾಮಯ್ಯ