ಬೆಂಗಳೂರು: ನನ್ನನ್ನು ವಿಪಕ್ಷ ನಾಯಕನಾಗಿ ಆಯ್ಕೆ ಮಾಡಲಾಗಿದೆ. ನಾನೊಬ್ಬನೇ ನಾಯಕ ಅಲ್ಲ. ಇರುವ 66 ಶಾಸಕರೂ ವಿಪಕ್ಷ ನಾಯಕರೇ. ಈಗ ನಮ್ಮ ಜತೆ ಜೆಡಿಎಸ್ ಕೂಡ ಸೇರಿದೆ. ಎನ್‌ಡಿಎ ಭಾಗವಾಗಿ ಜೆಡಿಎಸ್ (JDS Karnataka) ಕಾರ್ಯನಿರ್ವಹಿಸುತ್ತದೆ. ನಾವೆಲ್ಲರೂ ಸೇರಿ 84 ಜನ ಶಾಸಕರಾಗಿದ್ದೇವೆ. ನಮ್ಮ ಮೊದಲ ಆದ್ಯತೆ ಭ್ರಷ್ಟಾಚಾರದ ಕಾಂಗ್ರೆಸ್ ಸರ್ಕಾರವನ್ನು (Congress Government) ತೊಲಗಿಸೋದು. ನಿಮ್ಮೆಲ್ಲರ ಸಹಕಾರ ಬೇಕು. ಆರು ತಿಂಗಳ ಈ ಭ್ರಷ್ಟಾಚಾರದ ಸರ್ಕಾರವನ್ನು ಕಿತ್ತೊಗೆಯೋಣ ಎಂದು ನೂತನ ಪ್ರತಿಪಕ್ಷ ನಾಯಕ (Opposition Leader) ಆರ್. ಅಶೋಕ್ (R Ashok) ಗುಡುಗಿದರು.
ವಿಪಕ್ಷ ನಾಯಕರಾಗಿ ಆಯ್ಕೆಯಾದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಆರ್. ಅಶೋಕ್, ನಮಗೆ ಚಾಲೆಂಜ್ ಇರೋದು ವಿಧಾನಸಭೆಯ ಒಳಗೆ. ಕಾಂಗ್ರೆಸ್ ಸರ್ಕಾರ ಬಂದ ಆರಂಭದಿಂದಲೇ ಭ್ರಷ್ಟಾಚಾರದ ಅಂಗಡಿ ಓಪನ್ ಮಾಡಿದ್ದಾರೆ. ಟ್ರಾನ್ಸ್‌ಫರ್ ದಂಧೆಯನ್ನು ಶುರು ಮಾಡಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಪರ ಇರುವವರು ಸಿಎಂ ಬದಲಾವಣೆ ಎಂದು ಹೇಳುತ್ತಾರೆ. ಸಿಎಂ ಸಿದ್ದರಾಮಯ್ಯ ಪರ ಇರುವವರು ಅವರೇ ಪೂರ್ಣಾವಧಿ ಸಿಎಂ ಎಂದು ಹೇಳುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ: Opposition Leader : ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ ಆರ್. ಅಶೋಕ್ ಆಯ್ಕೆ; ಬಿಎಸ್‌ವೈ ಮೇಲುಗೈ
ಸಿಎಂ ಪುತ್ರನಿಂದ ವರ್ಗಾವಣೆ ದಂಧೆ
ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ನಿರತವಾಗಿ ಸ್ವತಃ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಟ್ರಾನ್ಸ್‌ಫರ್ ದಂಧೆಯಲ್ಲಿ ಮುಳುಗಿದ್ದಾರೆ. ಈ ಸರ್ಕಾರದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ. ಅಲ್ಲದೆ, ಗ್ಯಾರಂಟಿ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಎರಡು ತಿಂಗಳು ಮಹಿಳೆಯರ ಖಾತೆಗೆ ಹಣ ಹಾಕಿದರು. ಆನಂತರ ನಿಲ್ಲಿಸಿ ಬಿಟ್ಟರು ಎಂದು ಆರ್. ಅಶೋಕ್ ಆಕ್ರೋಶ ಹೊರಹಾಕಿದರು.
ಸರ್ಕಾರ ಬದುಕಿದೆಯೋ, ಸತ್ತಿದೆಯೋ ಗೊತ್ತಿಲ್ಲ
ರಾಜ್ಯದಲ್ಲಿ ಭೀಕರ ಬರ ಬಂದಿದೆ. ಈ ಸರ್ಕಾರ ನಯಾ ಪೈಸೆ ಹಣ ಬಿಡುಗಡೆ ಮಾಡಿಲ್ಲ. ಮಾತೆತ್ತಿದರೆ ಕೇಂದ್ರ ಸರ್ಕಾರ ಅಂತಾರೆ. ನಾವಿದ್ದಾಗ ಮೊದಲು ನಾವೇ ಹಣವನ್ನು ಬಿಡುಗಡೆ ಮಾಡಿದ್ದೇವೆ. ಅಲ್ಲದೆ, ಕೇಂದ್ರ ಸರ್ಕಾರ ನೀಡುತ್ತಿರುವ ಕಿಸಾನ್ ಸಮ್ಮಾನ್ ಹಣದ ಜತೆಗೆ ನಾವು ಸಹ ಹಣ ಸೇರಿಸಿ ಕೊಟ್ಟಿದ್ದೇವೆ. ಕೇಂದ್ರ ಸರ್ಕಾರದ ಹಣ ತಾನಾಗಿಯೇ ಅಕೌಂಟಿಗೆ ಬರಲಿದೆ. ಆದರೆ, ಈ ಸರ್ಕಾರದಲ್ಲಿ ಹಣ ಇಲ್ಲ. ಕ್ಷೇತ್ರದ ಹಣವನ್ನೂ ವಾಪಸ್ ಪಡೆಯುತ್ತಿದ್ದಾರೆ. ಹಿಂದೆ ಯಾರೂ, ಯಾವ ಸರ್ಕಾರವೂ ಹೀಗೆ ಮಾಡಿರಲಿಲ್ಲ. ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ವಿಪಕ್ಷದವರನ್ನೂ ಕರೆದು ಹಣ ಕೊಡುತ್ತಿದ್ದರು. ಎಲ್ಲ ಕ್ಷೇತ್ರಗಳ ಅಭಿವೃದ್ಧಿಯಾದಾಗ ಸಮಗ್ರ ಕರ್ನಾಟಕದ ಅಭಿವೃದ್ಧಿ ಎಂದು ನಂಬಿದವರು ಅವರಾಗಿದ್ದರು. ಆದರೆ, ಈಗ ಈ ಸರ್ಕಾರ ಬದುಕಿದೆಯೋ, ಸತ್ತಿದೆಯೋ ಗೊತ್ತಿಲ್ಲ ಎಂದು ಆರ್. ಅಶೋಕ್ ಕಿಡಿಕಾರಿದರು.
ಪಕ್ಷ ಕಟ್ಟುವ ಸಂಕಲ್ಪ
ಸೂರ್ಯ ಉದಯಿಸುತ್ತಾನೆ. ಕಮಲ ಮತ್ತೆ ಅರಳುತ್ತೆ ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಮಾತನ್ನು ಉಲ್ಲೇಖಿಸುವ ಮೂಲಕ ರಾಜ್ಯ ಬಿಜೆಪಿಗೆ ಹೊಸ ಮುನ್ನುಡಿ ಬರೆಯುವುದಾಗಿ ನೂತನ ವಿರೋಧ ಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ. ಈ ಮೂಲಕ ಮತ್ತೆ ಪಕ್ಷ ಕಟ್ಟುವ ಸಂಕಲ್ಪವನ್ನು ಮಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಜತೆಗೂಡಿ ಪಕ್ಷ ಕಟ್ಟುವ ಕೆಲಸವನ್ನು ಮಾಡುತ್ತೇನೆ ಎಂದು ಹೇಳಿದ್ದಾರೆ.
ನ ದೈನ್ಯಂ, ನ ಪಲಾಯನಂ ಎಂಬ ಉಕ್ತಿಯನ್ನು ಉಲ್ಲೇಖಿಸುವ ಮೂಲಕ ತಾವು ಎಂದೂ “ತಲೆ ಬಾಗುವುದಿಲ್ಲ ಹಾಗೂ ಪಲಾಯನ ಮಾಡುವುದಿಲ್ಲ” ಎಂಬ ಸಂದೇಶವನ್ನು ನೀಡಿದ್ದಾರೆ.
ಲೋಕಸಭಾ ಚುನಾವಣೆಗೆ ತಯಾರಿ ಆಗಬೇಕಿದೆ. ಬಿಜೆಪಿಯಲ್ಲಿ 45 ವರ್ಷ ಕೆಲಸ ಮಾಡಿದ್ದೇನೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಜತೆ ಕೆಲಸ ಮಾಡಿದ್ದೇನೆ. ಇಂದಿರಾ ಗಾಂಧಿ ತುರ್ತು ಪರಿಸ್ಥಿತಿಯಲ್ಲಿ ಜೈಲು ವಾಸ ಅನುಭವಿಸಿದ್ದೆ ಎಂದು ಆರ್. ಅಶೋಕ್ ಹೇಳಿದರು.
ಲೋಕಸಭೆಯಲ್ಲಿ 28 ಕ್ಷೇತ್ರವನ್ನು ಗೆಲ್ಲೋಣ
ಈ ಬಾರಿ 28ಕ್ಕೆ 28 ಸ್ಥಾನ ಗೆಲ್ಲಬೇಕು. ಈ ನಿಟ್ಟಿನಲ್ಲಿ ನಿಮ್ಮೆಲ್ಲರ ಸಹಕಾರ ಮುಖ್ಯ. ನಾನು ಆ ನಿಟ್ಟಿನಲ್ಲಿ ದುಡಿಯುತ್ತೇನೆ. ನಿಮ್ಮೆಲ್ಲರ ಸಹಕಾರದಿಂದ ಆಯ್ಕೆಯಾಗಿದ್ದೇನೆ. ನನ್ನ ಮೇಲೆ ವಿಶ್ವಾಸ ಇಟ್ಟಿದ್ದೀರಿ. ನಿಮ್ಮೆಲ್ಲರ ಸಹಕಾರ ಪಡೆದು ಕೆಲಸ ಮಾಡುತ್ತೇನೆ. ಯಾವುದೇ ದ್ವೇಷ ಇಲ್ಲದೆ, ಎಲ್ಲರ ಜತೆಗೆ ಹೋಗೋಣ ಎಂದು ಆರ್. ಅಶೋಕ್ ಹೇಳಿದರು.
ಇದನ್ನೂ ಓದಿ: Gruha Lakshmi : ಇನ್ಮುಂದೆ ಚಾಮುಂಡೇಶ್ವರಿಗೂ ಗೃಹಲಕ್ಷ್ಮಿ ಹಣ; ಇದಕ್ಕೆ ಕಾರಣ ಇವರು!
ರೈತ ನಾಯಕನಾಗಿ ಬಿ.ಎಸ್. ಯಡಿಯೂರಪ್ಪ ರಾಜ್ಯ ಸುತ್ತಿದ್ದಾರೆ. ಅವರ ಮಾರ್ಗದರ್ಶನದ ಮೂಲಕ ಕೆಲಸ ಮಾಡೋಣ. ಪ್ರಧಾನಿ ನರೇಂದ್ರ ಮೋದಿ ಅವರ ಸಬ್ ಕಾ ಸಾತ್, ಸಬ್ ಕಾ ವಿಕಾಸ್ ಕನಸನ್ನು ನನಸು ಮಾಡೋಣ ಎಂದು ಹೇಳಿದರು.