ಬೆಂಗಳೂರು: ಎಸಿಬಿ ರಚನೆಯನ್ನು ರದ್ದುಗೊಳಿಸಿ ಹೈಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅನೌಪಚಾರಿಕವಾಗಿ ಚರ್ಚೆ ಮಾಡಿದ್ದೇವೆ. ಆದರೆ, ಈ ಬಗ್ಗೆ ಅಡ್ವಕೇಟ್ ಜನರಲ್ ಕಾನೂನು ತಂಡಕ್ಕೆ ಮಾಹಿತಿ ಕೊಡಲು ಹೇಳಿದ್ದೇವೆ. ವರದಿ ಬಂದ ಬಳಿಕ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕೋರ್ಟ್ ಆದೇಶದ ಬಗ್ಗೆ ಕೂಲಂಕಷವಾಗಿ ನೋಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾನೂನು ತಂಡದಿಂದ ಶೀಘ್ರವಾಗಿ ಮಾಹಿತಿಯನ್ನು ಪಡೆಯಲಾಗುತ್ತದೆ. ಬಳಿಕ ಮುಂದಿನ ಕ್ರಮವನ್ನು ಸರ್ಕಾರ ತೆಗೆದುಕೊಳ್ಳುತ್ತದೆ ಎಂದು ಮುಖ್ಯಮಂತ್ರಿಯವರು ಸುದ್ದಿಗಾರರಿಗೆ ತಿಳಿಸಿದರು.
ಕೋರ್ಟ್‌ನಲ್ಲಿದ್ದಿದ್ದರಿಂದ ರದ್ದುಪಡಿಸಲು ಆಗಿರಲಿಲ್ಲ
ಎಸಿಬಿ ರಚನೆ ಬಗ್ಗೆ ಬಿಜೆಪಿ ಮೊದಲಿನಿಂದಲೂ ವಿರೋಧಿಸುತ್ತಾ ಬಂದಿದೆ. ಅಲ್ಲದೆ, ಎಸಿಬಿಯನ್ನು ರದ್ದುಪಡಿಸುವ ಬಗ್ಗೆ ನಾವು ಪ್ರಣಾಳಿಕೆಯಲ್ಲಿಯೇ ಪ್ರಸ್ತಾಪ ಮಾಡಿದ್ದೆವು. ಆದರೆ, ಪ್ರಕರಣ ಕೋರ್ಟ್‌ನಲ್ಲಿ ಇದ್ದಿದ್ದರಿಂದ ರದ್ದುಪಡಿಸಲು ಆಗಿರಲಿಲ್ಲ ಎಂದು ಸಿಎಂ ಬೊಮ್ಮಾಯಿ ಸ್ಪಷ್ಟೀಕರಣ ನೀಡಿದ್ದಾರೆ.
ಇದನ್ನೂ ಓದಿ | ಮೈಸೂರಿನಲ್ಲಿ ಟೂರಿಸಂ ಸರ್ಕೀಟ್ ನಿರ್ಮಾಣ: ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ