ಬಾಗಲಕೋಟೆ: ಇದು ನನ್ನ ೧೮ನೇ ಹಾಗೂ ಕೊನೆಯ ಗ್ರಾಮ ವಾಸ್ತವ್ಯ (Grama Vastavya) ಕಾರ್ಯಕ್ರಮವಾಗಿದೆ. ಮತ್ತೆ ಅಧಿಕಾರಕ್ಕೆ ನಾವೇ ಬರುತ್ತೇವೆ. ಆಗ ಇದನ್ನು ಮುಂದುವರಿಸುತ್ತೇನೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಜಿಲ್ಲೆಯ ಬೀಳಗಿ ತಾಲೂಕಿನ ಕಲಾದಗಿಯಲ್ಲಿ ಶನಿವಾರ (ಫೆ.೨೫) ಏರ್ಪಡಿಸಿದ್ದ “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಅವಧಿಯಲ್ಲಿ ಇದು ನನ್ನ ಕೊನೆಯ ಗ್ರಾಮ ವಾಸ್ತವ್ಯವಾಗಿದೆ. ಆದರೆ, ಇದು ನನಗೆ ಒಂದು ಪಾಠಶಾಲೆಯಿದ್ದಂತಾಗಿತ್ತು. ಇಲ್ಲಿ ಸಾಕಷ್ಟು ತಿಳಿದುಕೊಂಡಿದ್ದೇನೆ. ಜನರ ಕಷ್ಟಕ್ಕೆ ಸ್ಪಂದಿಸಿದ್ದೇನೆ. ತಾಂಡಾ, ಗೊಲ್ಲಹಟ್ಟಿ ಪ್ರದೇಶಗಳಿಗೆ ಭೇಟಿ ನೀಡಿದಾಗ ನಾನು ಕಣ್ಣೀರಾಗಿದ್ದೆ ಎಂದು ಸ್ಮರಿಸಿದರು.
ಕೃತಕ ಕಾಲು ಜೋಡಿಸಿದ ಸಚಿವರು
ಈ ವೇಳೆ ಕಾಲು ಇಲ್ಲದ ವಯೋವೃದ್ಧರೊಬ್ಬರಿಗೆ ಸಚಿವರೇ ಸ್ವತಃ ಕೃತಕ ಕಾಲನ್ನು ಜೋಡಿಸುವ ಮೂಲಕ ಸಭಿಕರ ಮೆಚ್ಚುಗೆಗೆ ಪಾತ್ರರಾದರು. ೧೯೯೭ ಸಂತ್ರಸ್ತರಿಗೆ ಹಕ್ಕು ಪತ್ರವನ್ನು ವಿತರಿಸಲಾಯಿತು. ಜತೆಗೆ ಕೃಷಿ ಉಪಕರಣ ವಿತರಣೆ, ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್, ಸಂಧ್ಯಾ ಸುಕನ್ಯಾ ಬಾಂಡ್‌ಗಳನ್ನು ನೀಡಲಾಯಿತು. ಇನ್ನು ದೃಷ್ಟಿಹೀನ ವಿದ್ಯಾರ್ಥಿಗೆ ಲ್ಯಾಪ್‌ಟಾಪ್ ನೀಡಲಾಯಿತು.
ಇದನ್ನೂ ಓದಿ: Barisu Kannada Dindimava: ಕನ್ನಡ ನಾಡಿನಲ್ಲಿ ಹುಟ್ಟುವುದೇ ಪುಣ್ಯ, ‘ಬಾರಿಸು ಕನ್ನಡ ಡಿಂಡಿಮ’ದಲ್ಲಿ ಬೊಮ್ಮಾಯಿ ಹೇಳಿಕೆ
ಮಧ್ಯಾಹ್ನ ಕಾಲಾದಗಿ ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಮಾತನಾಡಿದ್ದ ಅಶೋಕ್, ನಮ್ಮದು ಜನರಿಗೆ ರೀಚ್ ಆಗುವ ಕಾರ್ಯಕ್ರಮವಾಗಿದೆ. ನಾನು ಬಂದು ಬುರುಡೆ ಬಿಟ್ಟು ಏನೋ ಮಾಡಿಬಿಡುತ್ತೇನೆ. ಎಲ್ಲವನ್ನೂ ಕೊಟ್ಟು ಬಿಡುತ್ತೇನೆ. ನಮ್ಮನ್ನು ಗೆಲ್ಲಿಸಿ, ನಿಮಗೆ ಎಷ್ಟು ದುಡ್ಡು ಬೇಕೋ ಎಲ್ಲವನ್ನೂ ಕೊಡುತ್ತೇನೆ ಎಂದು ಹೇಳಿಹೋಗುವ ಕಾರ್ಯಕ್ರಮ ಇದಲ್ಲ. ಇಲ್ಲೇ ಸ್ಥಳದಲ್ಲೇ ಸೌಕರ್ಯಗಳನ್ನು ನೀಡಲಾಗುತ್ತದೆ. 18 ಸಾವಿರ ಫಲಾನುಭವಿಗಳಿಗೆ ನಾಳೆ ಬಾ ಅನ್ನಲ್ಲ, ಸ್ಥಳದಲ್ಲೇ ಸೌಲಭ್ಯವನ್ನು ಕೊಡುತ್ತಿದ್ದೇವೆ ಎಂದು ಹೇಳಿದರು.
50 ವರ್ಷ ದೇಶ ಹಾಗೂ ರಾಜ್ಯವನ್ನು ಆಳಿದವರು ನಿಮ್ಮ ಕೈಗೆ ಆಗ ಯಾಕೆ ಹಣ ಕೊಡಲಿಲ್ಲ. ಈಗ ಇನ್ನೊಮ್ಮೆ ಅಧಿಕಾರ ಕೊಡಿ ಅಂತ ಯಾಕೆ ಕೇಳುತ್ತಾ ಇದ್ದಾರೆ? ನಮ್ಮ ಜನ ಪ್ರಜ್ಞಾವಂತರಿದ್ದಾರೆ. ನಮ್ಮದು ರಾಜಕೀಯ ಸಂಬಂಧ ಅಲ್ಲ. ನಮ್ಮದು ಸರ್ಕಾರಿ ಕಾರ್ಯಕ್ರಮ ಜನರಿಗೆ ರೀಚ್ ಆಗೋ ಕಾರ್ಯಕ್ರಮ. ನಾವು ಏನನ್ನು ಹೇಳುತ್ತೇವೆಯೋ ಅದನ್ನೇ ಮಾಡುತ್ತೇವೆ ಎಂದು ಅಶೋಕ್ ತಿಳಿಸಿದರು.
ಇದನ್ನೂ ಓದಿ: 7th Pay Commission : ಸಾರ್ವಜನಿಕರಿಗೆ ತೊಂದರೆಯಾದರೂ ಹೋರಾಟ ಅನಿವಾರ್ಯ: ನಾಗರಾಜ ಜುಮ್ಮಣ್ಣನವರ
ನಿವೃತ್ತ ಶಿಕ್ಷಕನ ಆತ್ಮಹತ್ಯೆಗೆ ನ್ಯಾಯ ಸಿಗಬೇಕು- ಅಶೋಕ್
ಹಳೇ ಪಿಂಚಣಿ ಜಾರಿಗೋಸ್ಕರ ನಿವೃತ್ತ ಶಿಕ್ಷಕ ಸಿದ್ದಯ್ಯ ಹಿರೇಮಠ ಅವರು ಆತ್ಮಹತ್ಯೆ ವಿಚಾರ ಬೇಸರ ತಂದಿದೆ. ಈ ವಿಚಾರ ನನ್ನ ಇಲಾಖೆಗೆ ಬರುವುದಿಲ್ಲ. ಆದರೂ ನಾನು ಶಿಕ್ಷಣ ಇಲಾಖೆ ಸಚಿವರ ಜತೆ ಮಾತನಾಡುತ್ತೇನೆ. ಎಲ್ಲರಿಗೂ ನ್ಯಾಯ ಕೊಡಬೇಕು. ಅವರಿಗೆ ನ್ಯಾಯ ಸಿಗುವ ರೀತಿಯಲ್ಲಿ ನಾನು ಮಾಡುತ್ತೇನೆ ಎಂದು ಅಶೋಕ್ ಹೇಳಿದರು.