ಮೈಸೂರು: ಬಿಜೆಪಿ ಪಠ್ಯ ಪುಸ್ತಕ ವಿಚಾರದಲ್ಲಿ ಮಾಡಿರುವ ಎಡವಟ್ಟುಗಳನ್ನ ನಾವು ತಿದ್ದುತ್ತೇವೆ. ಇತಿಹಾಸ ಪುರುಷರನ್ನೇ ಇವರು ಇತಿಹಾಸ ಪುರುಷರಲ್ಲ ಎಂದು ಹೇಳಿದ್ದಾರೆ. ಈ ತಪ್ಪುಗಳನ್ನು ತಿದ್ದಬೇಕು (Textbook Revision) ತಾನೇ. ನಾವು ಚುನಾವಣೆಗೆ ಮುನ್ನವೂ ಈ ವಿಚಾರವನ್ನು ಹೇಳಿದ್ದೇವೆ. ಈಗ ಅದನ್ನು ಮಾಡುತ್ತೇವೆ, ವಾಸ್ತವ ಸತ್ಯವನ್ನು ಪಠ್ಯದಲ್ಲಿ ಇಡುತ್ತೇವೆ ಎಂದು ಸಚಿವ ಡಾ. ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಮಾತನಾಡಿರುವ ಅವರು, ಅವರು ಬರೆದಿದ್ದೇ ಇತಿಹಾಸವಲ್ಲ. ವಾಸ್ತವ ಸತ್ಯವನ್ನು ಪಠ್ಯದಲ್ಲಿ ಇಡುತ್ತೇವೆ. ಸತ್ಯ ಅಲ್ಲದನ್ನು ತೆಗೆದು ಹಾಕುತ್ತೇ ಎಂದು ಹೇಳಿದದ್ದಾರೆ.
ಇದನ್ನೂ ಓದಿ | Text Books: ರೋಹಿತ್ ಚಕ್ರತೀರ್ಥ ಸಮಿತಿಯಲ್ಲಿ ಶಿಕ್ಷಣ ತಜ್ಞರೇ ಇರಲಿಲ್ಲ: ಅವರು ಮಾಡಿದ್ದನ್ನು ಕಿತ್ತು ಎಸೆಯಿರಿ ಎಂದ ದೇವನೂರು ಮಹಾದೇವ
ಬಿಜೆಪಿಗೆ ಆಡಳಿತ ವಿರೋಧಿ ಅಲೆ ಇತ್ತು. ಆ ವಿರೋಧಿ ಅಲೆ ಜತೆಗೆ ನಮ್ಮ ಗ್ಯಾರೆಂಟಿಯನ್ನು ನೋಡಿ ಜನ ಬಹುಮತ ಕೊಟ್ಟಿದ್ದಾರೆ. ಈಗ ಬಿಜೆಪಿ ತಮ್ಮ ಆಡಳಿತ ವಿರೋಧಿ ವೈಫಲ್ಯವನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ಮೇಲೆ ಉಗುಳು ಅಚ್ಚುವ ಕೆಲಸ ಮಾಡುತ್ತಿದೆ. ಬಿಜೆಪಿ ಅವಧಿಯಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿತ್ತು. ಜನರು ಅತೀವ ಸಂಕಷ್ಟದಲ್ಲಿದ್ದರು. ಇದರಿಂದ ಬಿಜೆಪಿ ರಾಜ್ಯದಲ್ಲಿ ತಿರಸ್ಕೃತವಾಗಿದೆ. ಈ ಚರ್ಚೆಯನ್ನ ಮರೆ ಮಾಚಲು ಗ್ಯಾರಂಟಿ ಕಾರ್ಡ್ ವಿಚಾರವನ್ನು ದೊಡ್ಡದು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಹಂತ ಹಂತವಾಗಿ ಪಠ್ಯ ಪರಿಷ್ಕರಣೆ: ಮಧು ಬಂಗಾರಪ್ಪ
ಬೆಂಗಳೂರು: ಈಗಾಗಲೇ ಪಠ್ಯ ಪರಿಷ್ಕರಣೆ ಬಗ್ಗೆ ನಮ್ಮ ಪ್ರಣಾಳಿಕೆಯಲ್ಲಿ ಹೇಳಿದ್ದೇವೆ. ಹಂತ ಹಂತವಾಗಿ ಪಠ್ಯ ಪರಿಷ್ಕರಣೆ ಮಾಡುತ್ತೇವೆ. ಮಕ್ಕಳಿಗೆ ಅನಾನುಕೂಲವಾಗುವಂತಹ ಅಂಶಗಳನ್ನು ತೆಗೆಯುತ್ತೇವೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆ ಆಗದಂತೆ ಕ್ರಮ ಆಗಲಿದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ನಗರದಲ್ಲಿ ಪಠ್ಯ ಪರಿಷ್ಕರಣೆ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಈಗಾಗಲೇ ಸಿಎಂ ಸಿದ್ದರಾಮಯ್ಯ ಜತೆ ಈ ಬಗ್ಗೆ ಚರ್ಚಿಸಲಾಗಿದೆ. ಅವರು ಕೆಲವೊಂದು ಸಲಹೆಗಳನ್ನ ನೀಡಿದ್ದಾರೆ. ಹಿಜಾಬ್ ಸಂಬಂಧ ಕೆಲವೊಂದು ಕಾನೂನು ತೊಡಕುಗಳಿವೆ. ಎಲ್ಲಾ ವಿದ್ಯಾರ್ಥಿಗಳಿಗೂ ಅನುಕೂಲವಾಗುವಂತೆ ಕಾನೂನು ಹೋರಾಟ ನಡೆಸುತ್ತೇವೆ. ಶೈಕ್ಷಣಿಕ ವರ್ಷ ಆರಂಭವಾಗುತ್ತಿದೆ, ಹಾಗಾಗಿ ಎಲ್ಲಾ ರೀತಿಯ ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿದೆ. ನೆನ್ನೆಯಷ್ಟೇ ಇಲಾಖಾಧಿಕಾರಿಗಳ ಜತೆ ಸಭೆ ನಡೆಸಿದ್ದೇನೆ. ಯಾವುದೇ ಗೊಂದಲಗಳಿಲ್ಲದೆ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಲಾಗುತ್ತದೆ ಎಂದು ತಿಳಿಸಿದರು.
ಬುಧವಾರ ನಾನೇ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಶಾಲೆಗಳಿಗೆ ಭೇಟಿ ನೀಡುತ್ತೇನೆ. ಶಾಲಾ ಮಕ್ಕಳನ್ನು ನಾನೇ ಬರಮಾಡಿಕೊಳ್ಳುತ್ತೇನೆ. ಪಠ್ಯ ಪುಸ್ತಕ, ಸಮವಸ್ತ್ರ ವಿತರಣೆಯಲ್ಲಿ ಯಾವುದೇ ಗೊಂದಲ ಇಲ್ಲ. ಎಲ್ಲ ಸಿದ್ಧತೆಗಳು ಸಮಾರೋಪಾದಿಯಲ್ಲಿ ಸಾಗಿವ ಎಂದು ಹೇಳಿದರು.
ಇದನ್ನೂ ಓದಿ | Textbook Revision: ಹಿಜಾಬ್ ಓಕೆ, ಸೂಲಿಬೆಲೆ ಪಠ್ಯಕ್ಕೆ ಕತ್ತರಿ, ಟಿಪ್ಪು ಪಾಠ ಸೇರ್ಪಡೆ: ಸಾಹಿತಿಗಳ ಒತ್ತಾಯ, ಸಿದ್ದರಾಮಯ್ಯ ಏನಂದ್ರು?
ಬಿಜೆಪಿ ಸರ್ಕಾರ ಇತಿಹಾಸ ತಿರುಚುವ ಕೆಲಸ ಮಾಡಿತ್ತು: ದಿನೇಶ್ ಗುಂಡೂರಾವ್
ಬೆಂಗಳೂರು: ಬಿಜೆಪಿ ಸರ್ಕಾರ ಇತಿಹಾಸ ತಿರುಚುವ ಕೆಲಸ ಮಾಡಿತ್ತು. ಉದ್ದೇಶಪೂರ್ವಕವಾಗಿ ಅನೇಕ ವಿಚಾರಗಳನ್ನು ಪಠ್ಯ ಪುಸ್ತಕದಿಂದ ತೆಗೆದಿದ್ದರು. ಅದೆಲ್ಲವೂ ನಮಗೆ ಗೊತ್ತಿದೆ. ಈ ಬಗ್ಗೆ ಸಾರ್ವಜನಿಕವಾಗಿಯೂ ಚರ್ಚೆಯಾಗಿದೆ. ಅದನ್ನು ಶಿಕ್ಷಣ ಸಚಿವರು ಸರಿಪಡಿಸುವ ಕೆಲಸ ಮಾಡುತ್ತಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಪಠ್ಯ ಪುಸ್ತಕ ಪರಿಷ್ಕರಣೆ ಬಗ್ಗೆ ಸಿಎಂಗೆ ಸಾಹಿತಿಗಳ ಮನವಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಪಠ್ಯ ಪರಿಷ್ಕರಣೆ ನನ್ನ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ, ಆ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಶಿಕ್ಷಣ ಸಚಿವರು, ಸಿಎಂ ಇದ್ದಾರೆ. ಅವರು ಕೂಲಂಕಷವಾಗಿ ಚರ್ಚಿಸಿ ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.