Site icon Vistara News

Karnataka Election 2023: ಹಾಸನ ಬಿಟ್ಟು ಓಡಿಸುತ್ತೇವೆ; ಪ್ರೀತಂ ಗೌಡ ವಿರುದ್ಧ ಭವಾನಿ ರೇವಣ್ಣ ವಾಗ್ದಾಳಿ

We Will Make Preetham Gowda Out From Hassan; Says Bhavani Revanna

ಭವಾನಿ ರೇವಣ್ಣ

ಹಾಸನ: ಜೆಡಿಎಸ್‌ಗೆ ಪ್ರತಿಷ್ಠೆಯ ಕಣವಾಗಿರುವ (Karnataka Election 2023) ಹಾಸನದಲ್ಲಿ ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ ವಿರುದ್ಧ ಭವಾನಿ ರೇವಣ್ಣ ವಾಗ್ದಾಳಿ ನಡೆಸಿದ್ದಾರೆ. “ನನ್ನನ್ನು ಹಾಸನದಿಂದ ಓಡಿಸುತ್ತೇನೆ ಎಂದು ಪ್ರೀತಂ ಗೌಡ ಹೇಳಿದ್ದಾರೆ. ಆದರೆ, ನಾವೇ ಅವರನ್ನು ಹಾಸನದಿಂದ ಓಡಿಸುವ ಪಣತೊಡೋಣ” ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಹಾಸನದಲ್ಲಿ ಜೆಡಿಎಸ್‌ ಅಭ್ಯರ್ಥಿ ಎಚ್‌.ಪಿ.ಸ್ವೂರೂಪ್‌ ಪರ ಪ್ರಚಾರ ಮಾಡಿದ ಅವರು, “ಮಹಿಳೆಯರ ಬಗ್ಗೆ ಗೌರವ ಇಲ್ಲದೆ ಮಾತನಾಡುವುದು ಪ್ರೀತಂ ಗೌಡ ಅವರಿಗೆ ಶೋಭೆ ತರುವುದಿಲ್ಲ. ನಾಡಿಗೇ ತಂದೆ ಸಮಾನವಾಗಿರುವ ದೇವೇಗೌಡರಿಗೆ ಅವಮಾನ ಮಾಡಿದ್ದಾರೆ. ಸಚಿವರಾದ ರೇವಣ್ಣ ಅವರ ಬಗ್ಗೆಯೂ ಪ್ರೀತಂ ಗೌಡ ಮಾತನಾಡುತ್ತಾರೆ. ಇಂತಹವರಿಗೆ ಕಾರ್ಯಕರ್ತರೇ ಸರಿಯಾದ ಪಾಠ ಕಲಿಸಬೇಕು” ಎಂದರು.

“ಜಿಲ್ಲೆಯ ಏಳಕ್ಕೆ ಏಳು ಕ್ಷೇತ್ರಗಳಲ್ಲಿ ಜೆಡಿಎಸ್‌ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ. ಹಾಸನದ ಗೆಲುವನ್ನು ನಾವು ದೇವೇಗೌಡರ ಪಾದದಡಿ ಇಡುತ್ತೇವೆ. ಮೇ 10 ಚುನಾವಣೆ ಇದ್ದರೆ, ಮೇ 18ಕ್ಕೆ ದೇವೇಗೌಡರ ಜನ್ಮದಿನ ಇದೆ. ಅವರ ಜನ್ಮದಿನಕ್ಕೆ ಹಾಸನದ ಗೆಲುವನ್ನು ಉಡುಗೊರೆಯಾಗಿ ನೀಡುತ್ತೇವೆ. ಬಿಜೆಪಿ ಶಾಸಕರಿಂದ ನೋವು ತಿಂದಿರುವ ಕುಟುಂಬಗಳಿವೆ. ಅವರಿಗೆ ನ್ಯಾಯ ಸಿಗಬೇಕು ಎಂದರೆ ಜೆಡಿಎಸ್‌ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ಎಲ್ಲರೂ ಚುನಾವಣೆಯನ್ನು ಚಾಲೆಂಜ್‌ ಆಗಿ ಸ್ವೀಕರಿಸಬೇಕು” ಎಂದು ಹೇಳಿದರು.

“ನಾನೂ ಹಾಸನದ ಜೆಡಿಎಸ್‌ ಅಭ್ಯರ್ಥಿಯಾಗಿದ್ದೆ. ನೀವೆಲ್ಲ ನನ್ನನ್ನು ಬೆಂಬಲಿಸಿದಿರಿ. ಆದರೆ, ಸ್ವರೂಪ್‌ ತುಂಬ ಅದೃಷ್ಟವಂತ. ಬಳಿಕ ನಾನೇ ಕುಮಾರಸ್ವಾಮಿ ಅವರಿಗೆ ಕರೆ ಮಾಡಿ ಸ್ವರೂಪ್‌ಗೆ ಟಿಕೆಟ್‌ ಕೊಡಿ ಎಂದು ಹೇಳಿದೆ. ಎಲ್ಲರಿಗೂ ಒಬ್ಬ ತಾಯಿ ಇದ್ದರೆ, ಸ್ವರೂಪ್‌ಗೆ ಇಬ್ಬರು ತಾಯಂದಿರು ಇದ್ದಾರೆ. ಲಲಿತಕ್ಕ (ಸ್ವರೂಪ್ ತಾಯಿ)‌ ಹೆತ್ತ ತಾಯಿ ಆದರೆ, ನಾನು ಹೊತ್ತ ತಾಯಿ” ಎಂದರು.

ಕೊಚ್ಚೆಗೆ ಕಲ್ಲು ಎಸೆಯಲ್ಲ

“”ನಾನು ಕೊಚ್ಚೆಯನ್ನು ನೋಡಿದರೆ, ಅದನ್ನು ದಾಟಿಕೊಂಡು ಹೋಗುತ್ತೇನೆಯೇ ಹೊರತು, ಅದಕ್ಕೆ ಕಲ್ಲು ಎಸೆಯುವುದಿಲ್ಲ” ಎಂದು ಪ್ರೀತಂ ಗೌಡ ಅವರಿಗೆ ಭವಾನಿ ರೇವಣ್ಣ ಚಾಟಿ ಬೀಸಿದರು. “ಕೊಚ್ಚೆಗೆ ಕಲ್ಲು ಎಸೆದರೆ, ಕೊಳಚೆ ನಮ್ಮ ಮೈಗೆ ಅಂಟುತ್ತದೆ. ಹಾಗಾಗಿ, ಸಂಸ್ಕಾರ ಇಲ್ಲದವರ ಬಗ್ಗೆ ಮಾತನಾಡುವುದಿಲ್ಲ. ಬಿಜೆಪಿ ಶಾಸಕನ ಎದುರು ಜೆಡಿಎಸ್‌ನಿಂದ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿದ್ದೇವೆ. ಸ್ವರೂಪ್‌ ಅವರನ್ನು ಗೆಲ್ಲಿಸುವ ಮೂಲಕ ಅವರಿಗೆ ಪ್ರತ್ಯುತ್ತರ ನೀಡುತ್ತೇವೆ” ಎಂದು ಹೇಳಿದರು.

ಕಾಂಗ್ರೆಸ್‌-ಜೆಡಿಎಸ್‌ ಕಾರ್ಯಕರ್ತರ ಗಲಾಟೆ

ಹೊಳೆನರಸೀಪುರದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಾರ್ಯಕರ್ತರ ಮಧ್ಯೆ ಗಲಾಟೆ ನಡೆದಿದೆ. ಪಟ್ಟಣದಲ್ಲಿ ಪ್ರಚಾರ ನಡೆಸುವಾಗ ಎರಡೂ ಪಕ್ಷಗಳ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದಿದ್ದು, ಇದು ಬಳಿಕ ಗಲಾಟೆಗೆ ತಿರುಗಿದೆ.

ಜೆಡಿಎಸ್‌ ಕಾರ್ಯಕರ್ತರೇ ಹಲ್ಲೆ ನಡೆಸಿದ್ದಾರೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಶ್ರೇಯಸ್‌ ಪಟೇಲ್‌ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ. “ಹೊಳೆನರಸೀಪುರದಲ್ಲಿ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಯುತ್ತಿಲ್ಲ. ಪ್ರಜ್ವಲ್‌ ರೇವಣ್ಣ ಎದುರೇ ಜೆಡಿಎಸ್‌ ಕಾರ್ಯಕರ್ತರು ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Amit Shah: ಬಿಜೆಪಿಯವರು ಅಮೆರಿಕ ಪ್ರೆಸಿಡೆಂಟನ್ನೇ ಕರ್ಕೊಂಡು ಬರಲಿ; ನಮಗೆ ದೇವೇಗೌಡ, ಕುಮಾರಸ್ವಾಮಿಯೇ ಚಾಣಕ್ಯ: ಎಚ್.ಡಿ. ರೇವಣ್ಣ

Exit mobile version