Site icon Vistara News

Mallikarjun Kharge : ಖರ್ಗೆ ಕಪ್ಪು ಎಂದ ಆರಗರನ್ನು ನಿಮ್ಹಾನ್ಸ್‌ಗೆ ಕಳಿಸುತ್ತೇವೆ: ಡಿಕೆಶಿ ಗುಡುಗು

DK Shivakumar Mallikarjun Kharge and Araga jnanendra

ನವ ದೆಹಲಿ / ಬೆಂಗಳೂರು: ರಾಜ್ಯದಲ್ಲಿ ಕಸ್ತೂರಿ ರಂಗನ್ ವರದಿ (Kasturirangan Report) ಜಾರಿ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (AICC president Mallikarjun Kharge) ಅವರ ಮೈಬಣ್ಣದ ಬಗ್ಗೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಮಾತನಾಡಿದ್ದರು. ಮರಗಿಡಗಳ ನೆರಳನ್ನೇ ಕಾಣದ ಅಲ್ಲಿಯ ಜನರು ಬಿಸಿಲಿನ ಝಳಕ್ಕೆ ಸುಟ್ಟು ಕರಕಲಾಗಿರುತ್ತಾರೆ, ಮಲ್ಲಿಕಾರ್ಜುನ ಖರ್ಗೆ ಅವರನ್ನು ನೋಡಿದರೇ ಕಾಣುವುದಿಲ್ಲವೇ ಎಂದು ನೀಡಿರುವ ವಿವಾದಾತ್ಮಕ ಹೇಳಿಕೆಗೆ ಕಾಂಗ್ರೆಸ್‌ ಕೆಂಡವಾಗಿದೆ. ಅಲ್ಲದೆ, ಈ ಬಗ್ಗೆ ನವ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್‌ (Deputy CM DK Shivakumar) ಅವರು, ಆರಗ ಜ್ಞಾನೇಂದ್ರ ಅವರನ್ನು ನಿಮ್ಹಾನ್ಸ್‌ಗೆ ಕಳಿಸುವ ಕೆಲಸವನ್ನು ಮಾಡಬೇಕಾಗುತ್ತದೆ ಎಂದು ಕಿಡಿಕಾರಿದ್ದಾರೆ. ಅಲ್ಲದೆ, ಕಾಂಗ್ರೆಸ್‌ ಟ್ವೀಟ್‌ (Congress tweets) ಮಾಡಿ, ಆರಗ ಜ್ಞಾನೇಂದ್ರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದೆ.

ಈ ಬಗ್ಗೆ ಡಿ.ಕೆ. ಶಿವಕುಮಾರ್‌ ಮಾತನಾಡಿ, ಬೆಂಗಳೂರಿನಲ್ಲಿ ನಿಮ್ಹಾನ್ಸ್‌ ಇದೆ. ಅದು ಬಹಳ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆರಗ ಜ್ಞಾನೇಂದ್ರ ಅವರು ಹೀಗೇ ಮಾತನಾಡಿದರೆ ಅವರನ್ನು ನಿಮ್ಹಾನ್ಸ್‌ಗೆ ಕಳಿಸುವ ಕೆಲಸವನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ

ಆರಗ ಜ್ಞಾನೇಂದ್ರ ಹೇಳಿದ್ದೇನು?

ಆರಗ ಜ್ಞಾನೇಂದ್ರ ಅವರು ಬೀದರ್ ಮೂಲದ ಈಶ್ವರ್ ಖಂಡ್ರೆ ಅವರು ಅರಣ್ಯ ಸಚಿವರಾಗಿರುವುದನ್ನು ಟೀಕಿಸುವ ಭರದಲ್ಲಿ ಖರ್ಗೆ ಅವರ ಮೈಬಣ್ಣವನ್ನು ಉಲ್ಲೇಖಿಸಿದ್ದಾರೆ. ಬೀದರ್‌ ಭಾಗದ ಜನರಿಗೆ ಮರ – ಗಿಡ ಅಥವಾ ನೆರಳಿನ ಬಗ್ಗೆ ತಿಳಿದಿರುವುದಿಲ್ಲ. ಅಲ್ಲಿನವರಿಗೆ ಮಲೆನಾಡಿನ ಜನರ ಜೀವನ ಹಾಗೂ ಪಶ್ಚಿಮ ಘಟ್ಟಗಳಿಗೆ ಸಮೀಪ ಇರುವ ನಾಗರಿಕರ ಸಮಸ್ಯೆಗಳ ಬಗ್ಗೆ ಮಾಹಿತಿಯೇ ಇರುವುದಿಲ್ಲ. ಅಲ್ಲಿನ ಮಂದಿ ಬಿಸಿಲಿನ ಝಳಕ್ಕೆ ಸುಟ್ಟು ಕರಕಲಾಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ನೋಡಿದರೆ ಇದು ಗೊತ್ತಾಗುವುದಿಲ್ಲವೇ? ಅವರು ಕೂದಲನ್ನೇ ನೆರಳೆಂದು ಭಾವಿಸಿಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಇದೇ ಈಗ ವಿವಾದಕ್ಕೆ ಕಾರಣವಾಗಿದೆ.

ಇದನ್ನೂ ಓದಿ: Karnataka Politics : ಡಿಕೆಶಿ ದಶಾಸ್ತ್ರಕ್ಕೆ ಸಿದ್ದರಾಮಯ್ಯ ಟೀಮ್ ಸಚಿವರು ಗಲಿಬಿಲಿ‌!

ಕಾಂಗ್ರೆಸ್‌ ಟ್ವೀಟ್‌ ಮಾಡಿ ಆಕ್ರೋಶ

ಈ ಬಗ್ಗೆ ಕಾಂಗ್ರೆಸ್‌ ಟ್ವೀಟ್ ಮಾಡಿ ಆಕ್ರೋಶವನ್ನು ಹೊರಹಾಕಿದೆ. ಅಲ್ಲದೆ, ಆರಗ ಜ್ಞಾನೇಂದ್ರ ಅವರು ಮಲ್ಲಿಕಾರ್ಜುನ ಖರ್ಗೆ ಹಾಗೂ ದಲಿತ ಸಮುದಾಯದವರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದೆ.

ಕಾಂಗ್ರೆಸ್‌ ಟ್ವೀಟ್‌ನಲ್ಲೇನಿದೆ?

ಕಾಂಗ್ರೆಸ್, ಮಲ್ಲಿಕಾರ್ಜುನ್ ಖರ್ಗೆಯವರ ಮೈಬಣ್ಣದ ಬಗ್ಗೆ ಅವಹೇಳನ ಮಾಡಿದ ಆರಗ ಜ್ಞಾನೇಂದ್ರ ಅವರು ಬಿಜೆಪಿಯ ಕೀಳು ಮಟ್ಟದ ಮನಸ್ಥಿತಿಯನ್ನು ಪ್ರತಿನಿಧಿಸಿದ್ದಾರೆ. ಬಿಜೆಪಿಯವರಲ್ಲಿ ದಲಿತರ ಬಗ್ಗೆ ಇರುವ ಅಸಹನೆ, ಅಸಡ್ಡೆಯನ್ನು ವ್ಯಕ್ತಪಡಿಸಿದ್ದಾರೆ.

ಮೈಬಣ್ಣದ ಬಗೆಗಿನ ಈ ಅವಹೇಳನ ಕೇವಲ ಖರ್ಗೆಯವರನ್ನು ಅವಮಾನಿಸಿದ್ದಲ್ಲ, ಖರ್ಗೆಯವರ ಹೆಸರಲ್ಲಿ ಇಡೀ ಮೂಲನಿವಾಸಿ ದಲಿತರಿಗೆ ಮಾಡಿದ ಅವಮಾನ.

ಬಣ್ಣದ ಬಗೆಗಿನ ಶೋಷಣೆ, ಅವಮಾನವನ್ನು ತೊಡೆದುಹಾಕಲು ಜಾಗತಿಕ ಮಟ್ಟದಲ್ಲಿ ಚಳವಳಿಗಳು ನಡೆದಿವೆ, ಪಾಶ್ಚಿಮತ್ಯ ದೇಶಗಳಲ್ಲಿ ಮೈಬಣ್ಣದ ಬಗ್ಗೆ, ದೈಹಿಕ ರೂಪದ ಬಗ್ಗೆ ಅವಮಾನಿಸಿದರೆ ಮಹಾ ಅಪರಾಧಿಯಂತೆ ಕಾಣಲಾಗುತ್ತದೆ. ಆದರೆ ಇಲ್ಲಿನ ಬಿಜೆಪಿಗರು ದಲಿತರನ್ನು, ದಲಿತರ ಮೈಬಣ್ಣವನ್ನು, ರೂಪವನ್ನು ಅವಮಾನಿಸುವುದು ಹೆಗ್ಗಳಿಕೆಯಾಗಿ ನೋಡುತ್ತದೆ.

ಬಿಜೆಪಿಗೆ ದಲಿತರ ಬಗ್ಗೆ ಕಿಂಚಿತ್ತಾದರೂ ಗೌರವವಿದ್ದರೆ ಜ್ಞಾನೇಂದ್ರರನ್ನು ಉಚ್ಚಾಟನೆ ಮಾಡಬೇಕು, ಜ್ಞಾನೇಂದ್ರ ಅವರು ಮಲ್ಲಿಕಾರ್ಜುನ್ ಖರ್ಗೆಯವರ ಹಾಗೂ ದಲಿತರ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್‌ ಟ್ವೀಟ್‌ ಮೂಲಕ ಒತ್ತಾಯಿಸಿದೆ.

ಇದನ್ನೂ ಓದಿ: OBC Commission : ಅನಾಥ ಮಕ್ಕಳಿಗೂ ಮೀಸಲಾತಿ; ಹಿಂದುಳಿದ ವರ್ಗಗಳ ಆಯೋಗ ಶಿಫಾರಸು

ಏನಿದು ವಿವಾದ?

ಕಸ್ತೂರಿ ರಂಗನ್ ವರದಿ ಜಾರಿಯ ಕುರಿತಾಗಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿಕೆಯನ್ನು ವಿರೋಧಿಸಿ ತೀರ್ಥಹಳ್ಳಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ್ದ ಆರಗ ಜ್ಞಾನೇಂದ್ರ, ಆ ಭಾಗದವರು ಸುಟ್ಟು ಕರಕಲಾಗಿದ್ದಾರೆ. ಖರ್ಗೆ ಅವರನ್ನು ನೋಡಿದರೆ ಅಲ್ಲಿಯವರ ಪರಿಸ್ಥಿತಿ ಗೊತ್ತಾಗುತ್ತದೆ. ಪಾಪ ಅವರ ತಲೆ ಕೂದಲು ಮುಚ್ಚಿಕೊಂಡಿದ್ದರಿಂದ ಸ್ವಲ್ಪ ಉಳ್ಕೊಂಡಿದ್ದಾರೆ. ಅದೇ ಅವರ ನೆರಳು. ಅದನ್ನು ಸಿಎಂ ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದರು.

Exit mobile version