ಬೆಂಗಳೂರು: ಚಾಮರಾಜಪೇಟೆಯ ವಿವಾದಿತ ಮೈದಾನಕ್ಕೆ ಸಂಬಂಧಿಸಿ ಹೈಕೋರ್ಟ್‌ನಲ್ಲಿ ವಕ್ಫ್ ಬೋರ್ಡ್ ವಾದ ಗೆಲುವು ಸಾಧಿಸಿದೆ. ಇದರ ಆಧಾರದಲ್ಲೇ ಏಕ ಸದಸ್ಯ ಪೀಠ ಮೈದಾನದಲ್ಲಿ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಲು ಸೂಚಿಸಿದೆ. ಹಾಗಿದ್ದರೆ ವಕ್ಫ್ ಮಂಡಳಿ ವಾದ ಏನಾಗಿತ್ತು? ಈ ಬಗ್ಗೆ ಮಾತನಾಡಿದ್ದಾರೆ ವಕ್ಫ್ ಬೋರ್ಡ್ ಅಧ್ಯಕ್ಷರಾಗಿರುವ ಶಾಫಿ ಸಅದಿ.
ʻನಿಜವೆಂದರೆ ಸುಪ್ರೀಂಕೋರ್ಟ್ ಆದೇಶ ನಮ್ಮ ಪರವಾಗಿಯೇ ಇತ್ತು. ಹೀಗಾಗಿ ನಮಗೆ ಬೇರೆ ಯಾವ ದಾಖಲೆಗಳೂ ಬೇಕಾಗಿರಲಿಲ್ಲ. ನಾವು ಹೈಕೋರ್ಟ್‌ಗೆ ಸಲ್ಲಿಸಿದ್ದು ಅದೊಂದೇ ಆದೇಶದ ದಾಖಲೆಯನ್ನುʼʼ ಎಂದು ಸಅದಿ ಹೇಳಿದ್ದಾರೆ.
ಮೈದಾನದ ವಿಚಾರದಲ್ಲಿ ಬಿಬಿಎಂಪಿಯ ಜಂಟಿ ಆಯುಕ್ತರು ಅವಸರ ಮಾಡಿದರು. ಗಲಿಬಿಲಿ ಮಾಡಿದ್ರು. ಆದರೆ, ನ್ಯಾಯಾಂಗ ವ್ಯವಸ್ಥೆ ನಮ್ಮ ಪರವಾಗಿ ತೀರ್ಪು ನೀಡಿದೆ ಎಂದು ಹೇಳಿದ ಶಾಫಿ ಸಅದಿ ಅವರು, ಎಡವಟ್ಟಿಗೆ ಕಾರಣರಾದ ಜಂಟಿ ಆಯುಕ್ತರ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಎಂದು ಹೇಳಿದರು. ನಾವು ರಾಜ್ಯದ ಎಲ್ಲ ಪ್ರಮುಖ ಮುಸ್ಲಿಂ ವಕೀಲರ ಅಭಿಪ್ರಾಯ ಪಡೆದು ಹೋರಾಟ ಸಂಘಟಿಸಿದ್ದೇವೆ ಎಂದರು.
ವಕ್ಫ್ ಬೋರ್ಡ್ ಸಶಕ್ತವಾಗಿದೆ
ಮಾಜಿ ಮುಖ್ಯಮಂತ್ರಿಗಳಾದ ಯಡಿಯೂಪ್ಪ ಅವರು ಎಲ್ಲ ಸಂದರ್ಭದಲ್ಲೂ ರಾಜಧರ್ಮವನ್ನು ಪಾಲಿಸಿ ಎನ್ನುತ್ತಿದ್ದರು. ಶಾಸಕ ಜಮೀರ್ ಅಹಮದ್ ಖಾನ್ ಅವರು ಸಮರ್ಥವಾಗಿ ಜವಾಬ್ದಾರಿಯನ್ನು ನಿರ್ವಹಿಸುವ ಮೂಲಕ ಯಾವುದೇ ಗಲಭೆ ಆಗದಂತೆ ನೋಡಿಕೊಂಡರು ಎಂದರು ಸಅದಿ. ವಕ್ಫ್ ಮಂಡಳಿಗೆ ಯಾವುದೇ ರಾಜಕೀಯ ಬೆಂಬಲದ ಅಗತ್ಯವಿಲ್ಲ. ಅದು ಸಹಜವಾಗಿ ತನ್ನಷ್ಟಕ್ಕೇ ಶಕ್ತಿಶಾಲಿಯಾಗಿದೆ ಎಂದರು.
ʻʻಹಂದಿ ತಿಂದು ಮಸೀದಿಗೆ ಹೋಗಿʼ ಎನ್ನುವ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದ ಸಅದಿ ಅವರು, ಇಂಥ ಹೇಳಿಕೆಗಳಿಂದ ಬಿಜೆಪಿಗೇ ನಷ್ಟ. ಅವರನ್ನು ಸ್ವಲ್ಪ ಹದ್ದುಬಸ್ತಿನಲ್ಲಿಟ್ಟು ಬಾಯಿ ಮುಚ್ಚಿಸಬೇಕುʼʼ ಎಂದು ಹೇಳಿದರು.
ಮಾಲೀಕತ್ವದ ಪ್ರಶ್ನೆಯೇ ಇಲ್ಲ
ಮೈದಾನಕ್ಕೆ ಸಂಬಂಧಿಸಿದ ಮಾಲೀಕತ್ವದ ಪ್ರಶ್ನೆಯೇ ಉದ್ಭವ ಆಗುವುದಿಲ್ಲ. ಹಿಂದೆಯೇ ಗಜೆಟ್ ನೋಟಿಫಿಕೇಶನ್ ಆಗಿದೆ. ಸುಪ್ರೀಂಕೋರ್ಟ್ ಆದೇಶ ಕೂಡಾ ಇದೆ. ಮಕ್ಕಳು ಆಡಲು ಅನುಮತಿ ಇದೆ. ವರ್ಷಕ್ಕೆ ಎರಡು ಬಾರಿ ನಮಾಜ್ ಮಾಡಲು ಅವಕಾಶ ಇದೆ ಎಂದು ವಕ್ಫ್ ಬೋರ್ಡ್ ಪರ ವಕೀಲರು ಹೇಳಿದರು.
ಇದನ್ನೂ ಓದಿ| ಚಾಮರಾಜಪೇಟೆ ಮೈದಾನದ ಯಥಾಸ್ಥಿತಿ ಕಾಪಾಡಲು ಹೈಕೋರ್ಟ್ ಆದೇಶ, ಗಣೇಶೋತ್ಸವಕ್ಕೂ ಅವಕಾಶ ಇಲ್ಲ?