ಬೆಂಗಳೂರು: ಕರ್ನಾಟಕದಲ್ಲಿ ನೈರುತ್ಯ ಮುಂಗಾರು (southwest Monsoon) ಪೂರ್ತಿ ಆವರಿಸಿತು ಎನ್ನುವಾಗಲೇ ಇದೀಗ ನಿರಾಸೆ ಮೂಡಿಸಿದೆ. ವಾಡಿಕೆಯ ಮಳೆಯಾಗುತ್ತದೆ ಎಂದು ಈ ಹಿಂದೆ ತಜ್ಞರು ಅಂದಾಜಿಸಿದ್ದರೂ, ಆದರೆ ಮಳೆಗಾಲದ ಮೊದಲ ತಿಂಗಳು ಜೂನ್‌ನಲ್ಲಿ ವಾಡಿಕೆಯ ಮಳೆಯಾಗಿಲ್ಲ ಎಂದು ತಿಳಿದು ಬಂದಿದೆ. ಈ ಮಧ್ಯೆ ಮುಂಗಾರು ಮಂಕಾಗಿದ್ದು, ಜು. 2ರಂದು ಹತ್ತು ಜಿಲ್ಲೆಗಳಿಗೆ ಮಾತ್ರ ಮಳೆ ಅಲರ್ಟ್ (Weather report) ನೀಡಲಾಗಿದೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಬೆಂಗಳೂರು ನಗರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಬೆಳಗಾವಿ ಜಿಲ್ಲೆಯಾದ್ಯಂತ ಗುಡುಗು, ಮಿಂಚಿನ ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ಮಲೆನಾಡಿನ ಶಿವಮೊಗ್ಗದಲ್ಲಿ ವ್ಯಾಪಕ ಮಳೆಯಾದರೆ, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಗುಡುಗು ಸಹಿತ ಜೋರು ಮಳೆಯಾಗುವ ಸಾಧ್ಯತೆ ಇದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಗುಡುಗು ಜತೆಗೆ ಧಾರಾಕಾರ ಮಳೆಯಾಗುವ ಎಚ್ಚರಿಕೆಯನ್ನು ನೀಡಲಾಗಿದೆ. ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಅಂದಾಜಿಸಲಾಗಿದೆ.
ಮಳೆ ಕೊರತೆಗೆ ರೈತರು ಕಂಗಾಲು
ಈ ವರ್ಷ ನೈರುತ್ಯ ಮುಂಗಾರು ವಾಡಿಕೆಯ ಮಳೆಯಾಗುವ ನಿರೀಕ್ಷೆ ಇತ್ತು. ಸಾಮಾನ್ಯವಾಗಿ ಜೂನ್ ಮೊದಲೆರಡು ವಾರದೊಳಗೆ ಪ್ರವೇಶಿಸುವ ಮುಂಗಾರು ಮಳೆಯು, ಜುಲೈ ಹಾಗೂ ಆಗಸ್ಟ್, ಸೆಪ್ಟೆಂಬರ್‌ವರೆಗೆ ಇರಲಿದೆ. ಸಾಮಾನ್ಯವಾಗಿ ವಾಡಿಕೆಯ ಪ್ರಕಾರ ಈ ನಾಲ್ಕು ತಿಂಗಳಲ್ಲಿ ರಾಜ್ಯಕ್ಕೆ 83 ಸೆಂ.ಮೀ ನಷ್ಟು, ಬೆಂಗಳೂರಲ್ಲಿ ನಾಲ್ಕು ತಿಂಗಳಲ್ಲಿ 60 ಸೆಂ.ಮೀ ಮಳೆಯಾಗಬೇಕು.
ಇನ್ನೂ ಜೂನ್ ತಿಂಗಳಲ್ಲಿ ಸಾಮಾನ್ಯವಾಗಿ 150 ಮಿ.ಮೀ ಮಳೆಯಾಗುತ್ತಿತ್ತು. ಆದರೆ ಈ ವರ್ಷ ಕೇವಲ 75 ಮಿ.ಮೀ ಮಳೆಯಾಗಿದೆ ಎನ್ನಲಾಗಿದೆ. ಅದು ಕೂಡ ಕಳೆದ ವಾರ ಸುರಿದ ಮಳೆಯ ಪಾಲು ಹೆಚ್ಚಿದೆ. ಈ ಮೂಲಕ ಜೂನ್‌ನಲ್ಲಿ ಶೇ. 50ರಷ್ಟು ಮಳೆ ಕೊರತೆಯಾಗಿದೆ.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಸಂಬಂಧ ಪ್ರತಿಕ್ರಿಯಿಸಿದ ಸಚಿವ ಕೃಷ್ಣ ಭೈರೇಗೌಡ, ಕರ್ನಾಟಕದ ಕೆಲವು ಭಾಗಗಳಲ್ಲಿ ಮುಂಗಾರು ಚುರುಕಾಗಿದೆ. ಬೆಳಗಾವಿ ಕೆಲವೆಡೆ ಮಳೆಯಾಗಿದೆ, ಕಾರವಾರದಲ್ಲಿ ಗಣನೀಯ ಸುಧಾರಣೆ ಕಂಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಜಲಾಶಯದಲ್ಲಿ ನೀರು ಕಡಿಮೆ ಇದ್ದರೂ ಸಾಕಾಗುತ್ತಿದೆ. ಗ್ರಾಮೀಣಾಭಿವೃದ್ಧಿ ಜತೆಗೂಡಿ ನೀರಿನ ಸಮಸ್ಯೆ ಇದ್ದ ಕಡೆ ಟ್ಯಾಂಕರ್ ಮೂಲಕ ನೀರು ಕೊಡಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಯಾವುದೇ ಊರಿನಲ್ಲಿ ನೀರಿನ ಸಮಸ್ಯೆ ಬಂದರೆ 24 ಗಂಟೆಯಲ್ಲಿ ಪರಿಹಾರಕ್ಕೆ ಸೂಚನೆ ನೀಡಲಾಗಿದೆ ಎಂದರು.
16 ಜಿಲ್ಲೆಗಳು ಬರಗಾಲದ ಪರಿಸ್ಥಿತಿ?
ಜುಲೈ ಮೊದಲ ವಾರ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಅಲ್ಲಿವರೆಗೆ ತಾಲೂಕು ಹಾಗೂ ಜಿಲ್ಲೆಗಳ ಬರಪೀಡಿತ ಎಂದು ಘೋಷಿಸುವ ಮೊದಲು ಕಾಯಲು ನಿರ್ಧರಿಸಿದ್ದಾಗಿ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ. ರಾಜ್ಯದ 31 ಜಿಲ್ಲೆಗಳ ಪೈಕಿ 16 ಜಿಲ್ಲೆಗಳಲ್ಲಿ ಅಲ್ಪ ಪ್ರಮಾಣದ ಮಳೆಯಾಗಿದೆ. ಜುಲೈನಲ್ಲಿ ಗರಿಷ್ಠ ಮಳೆ ಆಗುವ ಸಾಧ್ಯತೆ ಇದ್ದು, ಕೊರತೆ ನೀಗಿಸುವ ಆಶಾಭಾವ ಇದೆ.
ಇದನ್ನೂ ಓದಿ: Monsoon Diet: ಮಳೆಗಾಲದಲ್ಲಿ ಆಹಾರ ಸೇವನೆ ಹೀಗಿರಲಿ
ಆಲಮಟ್ಟಿ ಜಲಾಶಯ ಖಾಲಿ ಖಾಲಿ
ಮುಂಗಾರು ಮಳೆ ಕೊರತೆಯಿಂದಾಗಿ ವಿಜಯಪುರದ ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದ ಹಿನ್ನೀರು ಖಾಲಿ ಆಗಿದೆ. ಜುಲೈ ತಿಂಗಳ ಪ್ರಾರಂಭದಲ್ಲಿಯೂ ನದಿಗೆ ಒಳಹರಿವಿಲ್ಲ. ಹಿನ್ನೀರು ಪ್ರದೇಶದಲ್ಲಿ ನೀರು ಖಾಲಿಯಾಗಿ ಕೃಷ್ಣಾ ನದಿ ಒಡಲು ಬಿರುಕು ಬಿಟ್ಟಿದೆ. ಬರಗಾಲದ ಭೀಕರತೆಗೆ ದೃಶ್ಯಗಳು ಸಾಕ್ಷಿಯಾಗಿದೆ. ಕೊಲ್ಹಾರ ಸೇತುವೆ ಬಳಿ ಹಿನ್ನೀರು ಸಂಪೂರ್ಣ ತಗ್ಗಿದೆ. ಕೊಲ್ಹಾರ ಸೇತುವೆ ಬಳಿಯ ಹಿನ್ನೀರಿನಿಂದ ಬಾಗಲಕೋಟೆ ವಿಜಯಪುರ ಅವಳಿ ಜಿಲ್ಲೆಗೆ ಕುಡಿಯಲು ಹಾಗೂ ಜಮೀನಿಗೆ ನೀರು ಬಳಸಲಾಗುತ್ತದೆ. ಸದ್ಯಕ್ಕೆ ಎಲ್ಲರ ಚಿತ್ತ ಮಹಾರಾಷ್ಟ್ರದ ಮಳೆಯತ್ತ ನೆಟ್ಟಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ