ಬೆಂಗಳೂರು: ಮುಂದಿನ 24 ಗಂಟೆಯಲ್ಲಿ (ಜು.10) ಕರ್ನಾಟಕ ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ (Rain News) ಸಾಧ್ಯತೆ ಇದೆ. ಮಲೆನಾಡು ಭಾಗದಲ್ಲಿ ವರುಣ ಅಬ್ಬರಿಸಿದ್ದರೆ, ಒಳನಾಡಿನಲ್ಲಿ ತುಂತುರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (Weather report) ಮುನ್ಸೂಚನೆಯನ್ನು ನೀಡಿದೆ.
ಕರಾವಳಿ ಭಾಗವಾದ ಉತ್ತರ ಕನ್ನಡ, ಉಡುಪಿ , ದಕ್ಷಿಣ ಕನ್ನಡದ ಜಿಲ್ಲೆಯಾದ್ಯಂತ ಮಳೆ ಅಬ್ಬರ ಕಡಿಮೆ ಆಗಿದೆ. ಇಂದು ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಎಚ್ಚರಿಕೆಯನ್ನು ನೀಡಲಾಗಿದೆ. ಕರಾವಳಿ ಮತ್ತು ಉತ್ತರ ಒಳನಾಡಿನ ಕೆಲವು ಕಡೆ ಗಡುಗು, ಮಿಂಚಿನ ಮಳೆಯಾಗಲಿದೆ. ಬಿರುಗಾಳಿಯ ವೇಗವು ಗಂಟೆಗೆ 30-40 ಕಿ.ಮೀ ಇರುವ ಸಾಧ್ಯತೆ ಇದೆ. ಮೀನುಗಾರರಿಗೆ ಯಾವುದೇ ಎಚ್ಚರಿಕೆಯನ್ನು ನೀಡಿಲ್ಲ.
ದಕ್ಷಿಣ ಒಳನಾಡಿನ ಜಿಲ್ಲೆಗಳಾದ ದಾವಣಗೆರೆ, ರಾಮನಗರ, ಬೆಂಗಳೂರು ನಗರ, ಕೋಲಾರ, ಮೈಸೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ. ಮಲೆನಾಡಿನ ಭಾಗವಾದ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗಿನಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ.
ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆ
ಉತ್ತರ ಒಳನಾಡಿನ ಕೆಲವು ಕಡೆ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ. ಬೆಳಗಾವಿ ಜಿಲ್ಲೆಯಾದ್ಯಂತ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಧಾರವಾಡದಲ್ಲಿ ವ್ಯಾಪಕ ಮಳೆಯಾಗಲಿದ್ದು, ಉಳಿದ ಜಿಲ್ಲೆಗಳಲ್ಲಿ ಹಗುರದಿಂದ ಲಘು ಮಳೆಯಾಗುವ ಸಾಧ್ಯತೆಯಿದೆ.
ತಡರಾತ್ರಿ ಸುರಿದ ಗಾಳಿ-ಮಳೆಯಿಂದ ಹಾನಿ
ತಡರಾತ್ರಿ ಸುರಿದ ಗಾಳಿ ಮಳೆಗೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹಲವು ಗ್ರಾಮಗಳಲ್ಲಿ ಅಡಿಕೆ ಮರಗಳು, ದನದ ಕೊಟ್ಟಿಗೆಗೆ ಹಾನಿಯಾಗಿದೆ. ಕೆಳಗಿನ ಬೊಮ್ಮನಹಳ್ಳಿಯ ನಾಗರಾಜ ಗಜಾನನ ಭಟ್ಟ ಅವರ ದನದ ಕೊಟ್ಟಿಗೆ ಮೇಲೆ ಮರ ಬಿದ್ದಿದ್ದು, ಅಂದಾಜು 10 ಸಾವಿರ ರೂ. ಹಾನಿಯಾಗಿದೆ. ಬನವಾಸಿ ಭಾಗದ ಭಾಶಿಯ ಪಾರ್ವತಿ ಮಡಿವಾಳ ಎಂಬುವರ ದನದ ಕೊಟ್ಟಿಗೆ ಕೂಡ ಗಾಳಿ-ಮಳೆಗೆ ಬಿದ್ದಿದ್ದು, ಅಂದಾಜು 6 ಸಾವಿರ ರೂ. ಹಾನಿ ಆಗಿದೆ.
ಇತ್ತ ಹಕ್ಕಿಗದ್ದೆ ಗ್ರಾಮದ ಶ್ರೀಧರ ತಿಮ್ಮಯ್ಯ ಹೆಗಡೆ ಇವರ ತೋಟದ ಮೇಲೆ ಮಳೆ ಗಾಳಿಯಿಂದಾಗಿ 20ಕ್ಕೂ ಹೆಚ್ಚು ಅಡಿಕೆ ಮರಗಳು ಧರೆಗುರುಳಿವೆ. ಇದರಿಂದ 20 ಸಾವಿರ ರೂ. ಹಾನಿಯಾಗಿರುವ ಮಾಹಿತಿ ಲಭ್ಯವಾಗಿದೆ. ಸಾಲ್ಕುಣಿ ಗ್ರಾಮದ ಮಂಜುನಾಥ ಗಣಪತಿ ಭಟ್‌ಗೆ ಸೇರಿದ ಅಡಿಕೆ ತೋಟದಲ್ಲಿ ಗಾಳಿ ಮಳೆಯಿಂದ ಬೃಹತ್ ಗಾತ್ರದ ಹಲಸಿನ ಮರ ಬಿದ್ದು, 150 ಅಡಿಕೆ ಮರಗಳು ಮುರಿದು ಬಿದ್ದಿವೆ. ಇದರಿಂದ ಅಂದಾಜು 80 ಸಾವಿರ ರೂ. ಹಾನಿಯಾಗಿರುವ ವರದಿಯಾಗಿದೆ.
ಇದನ್ನೂ ಓದಿ: Wild animal Menace : ಆನೆ ದಾಳಿಗೆ ವ್ಯಕ್ತಿ ಬಲಿ, ಡಿಆರ್‌ಡಿಒ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷ
ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.
ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್)
ಕಲಬುರಗಿ: 37 ಡಿ.ಸೆ – 23 ಡಿ.ಸೆ
ಗದಗ: 31 ಡಿ.ಸೆ – 23 ಡಿ.ಸೆ
ಚಿತ್ರದುರ್ಗ: 30 ಡಿ.ಸೆ – 21 ಡಿ.ಸೆ
ಬೆಳಗಾವಿ: 27 ಡಿ.ಸೆ – 21 ಡಿ.ಸೆ
ಕಾರವಾರ: 30 ಡಿ.ಸೆ – 25 ಡಿ.ಸೆ
ಮಂಗಳೂರು: 29 ಡಿ.ಸೆ – 24 ಡಿ.ಸೆ
ಹೊನ್ನಾವರ: 29 ಡಿ.ಸೆ- 24 ಡಿ.ಸೆ
ಬೆಂಗಳೂರು ನಗರ: 28 ಡಿ.ಸೆ – 20 ಡಿ.ಸೆ
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ