ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಸುಳಿಗಾಳಿ ಎದ್ದಿದ್ದು, ಇದರ ಪ್ರಭಾವದಿಂದಾಗಿ ವಾಯುಭಾರ ಕುಸಿತ ಉಂಟಾಗಲಿದೆ. ಇದರ ತೀವ್ರತೆಯು ಆಂದ್ರಪ್ರದೇಶ ಹಾಗೂ ಒಡಿಶಾ ಮೂಲಕ ಬರಲಿದೆ. ಹೀಗಾಗಿ ರಾಜ್ಯದ ಉತ್ತರ ಒಳನಾಡು ಹಾಗೂ ಕರಾವಳಿಯಲ್ಲಿ ಭಾರಿ ಮಳೆಯಾಗುವ (Rain News) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (Weather report) ಮುನ್ಸೂಚನೆ ನೀಡಿದೆ.
ಸೆ.13 ರಿಂದ ಮುಂದಿನ 7 ದಿನಗಳು ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಒಳನಾಡಲ್ಲಿ ಮೂರು ದಿನಗಳು ಭಾರಿ ಮಳೆಯಾಗಲಿದ್ದು, ನಂತರ ಸಾಧಾರಣವಾಗಿರಲಿದೆ. ಬೆಂಗಳೂರು ಸುತ್ತಮುತ್ತ ಸಂಜೆ ಅಥವಾ ರಾತ್ರಿ ಮಳೆಯ ಸಿಂಚನವಾಗಲಿದೆ. ಮೋಡ ಕವಿದ ವಾತಾವರಣ ಇರಲಿದ್ದು, ಎರಡು ದಿನಗಳು ನೆಲಗಾಳಿಯ ವೇಗವು ಗಂಟೆಗೆ 30-40 ಕಿ.ಮೀ ಬೀಸುವ ಸಾಧ್ಯತೆ ಇದೆ.
ಕರಾವಳಿ ಜಿಲ್ಲೆಯಾದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಲಿದೆ. ಮಳೆಗೆ ಗುಡುಗು, ಮಿಂಚು ಸಾಥ್ ನೀಡಲಿದೆ. ಬಿರುಗಾಳಿ ವೇಗವು ಗಂಟೆಗೆ 30-40 ಕಿ.ಮೀ ವ್ಯಾಪ್ತಿಯಲ್ಲಿ ಇರಲಿದೆ. ದಕ್ಷಿಣ ಒಳನಾಡಿನ ರಾಮನಗರ, ಮಂಡ್ಯ ಸೇರಿದಂತೆ ಬೆಂಗಳೂರಲ್ಲಿ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ಉತ್ತರ ಒಳನಾಡಿನ ಬೀದರ್ ಹಾಗೂ ಮಲೆನಾಡಿನ ಕೊಡಗು ಭಾಗದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: Assault Case : ಬಾರ್‌ನಲ್ಲಿ ಕಿರಿಕ್; ಗಲ್ಲಿ ಗಲ್ಲಿಯಲ್ಲಿ ಅಟ್ಟಾಡಿಸಿ ಮಚ್ಚು ಬೀಸಿದ ಕಿರಾತಕರು!
ರಾಜ್ಯಾದ್ಯಂತ ನೈರುತ್ಯ ಮುಂಗಾರು ದಕ್ಷಿಣ ಒಳನಾಡು ಹಾಗೂ ಕರಾವಳಿಯಲ್ಲಿ ದುರ್ಬಲಗೊಂಡಿದ್ದರೆ, ಉತ್ತರ ಒಳನಾಡಲ್ಲಿ ಸಾಮಾನ್ಯವಾಗಿದೆ. ರಾಜ್ಯದಲ್ಲಿ ಜೂನ್ 1ರಿಂದ ಸೆ.12ರವರೆಗೆ ಮಳೆ ಕೊರತೆಯು ಶೇ.19ರಷ್ಟಿದೆ. ರಾಜ್ಯದಲ್ಲಿ ಸೋಮವಾರದಂದು ದಕ್ಷಿಣ ಕನ್ನಡದ ಮಾಣಿಯಲ್ಲಿ 4 ಸೆಂ.ಮೀ, ಮಂಗಳೂರು, ಧರ್ಮಸ್ಥಳ, ಸುಳ್ಯ, ಉಡುಪಿ, ಸಿದ್ದಾಪುರ ಸೇರಿದಂತೆ ಹೊನ್ನಾವರ, ವಿಜಯಪುರ, ತಾಳಿಕೋಟೆ, ಖಜೂರಿ, ಶೋರಾಪುರ, ಸೈದಾಪುರದಲ್ಲಿ ತಲಾ 3 ಸೆಂ.ಮೀ ಮಳೆಯಾಗಿದೆ.
ಮಂಗಳೂರು ವಿಮಾನ ನಿಲ್ದಾಣ, ಕೋಟ, ಕೊಲ್ಲೂರು, ಶಿರಾಲಿ, ಗೇರುಸೊಪ್ಪ, ಯಲ್ಲಾಪುರ, ಕ್ಯಾಸಲ್ ರಾಕ್, ಚಿಂಚೋಳಿ, ಮಹಾಗಾಂವ್ , ಕವಡಿಮಟ್ಟಿ ಎಆರ್‌ಜಿ ಸೇರಿದಂತೆ ರಾಯಚೂರು, ಗಟ್ಟೂರು ಮಂಡಗದ್ದೆ , ಶೃಂಗೇರಿ, ಕೊಟ್ಟಿಗೆಹಾರದಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ. ಪಣಂಬೂರು, ಮೂಲ್ಕಿ, ಬೆಳ್ತಂಗಡಿ, ಪುತ್ತೂರು, ಉಪ್ಪಿನಂಗಡಿ, ಮಂಕಿ, ಕುಮಟಾ, ಕಿರವತ್ರಿ, ಮಂಚಿಕೇರಿ, ಜೋಯಿಡಾ, ಮುಂಡಗೋಡು, ಅಣ್ಣಿಗೇರಿ ಕಮಲಾಪುರ ಸೇರಿ ಕೆಂಭಾವಿ, ಕುರ್ಡಿ, ನಾಪೋಕ್ಲು, ಪೊನ್ನಂಪೇಟೆ, ವಿರಾಜಪೇಟೆ, ಸೋಮವಾರಪೇಟೆ, ಜಯಪುರ, ಬಾಳೆಹೊನ್ನೂರು, ಆನೇಕಲ್, ದಾವಣಗೆರೆ ಪಿಟಿಒ ಕುಣಿಗಲ್, ರಾಮನಗರದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ