Site icon Vistara News

Weather report : ಇನ್ನೆರಡು ದಿನ ಉತ್ತರ ಕರ್ನಾಟಕದ 7 ಜಿಲ್ಲೆ ಸೇರಿ ಕರಾವಳಿಯಲ್ಲಿ ಭಾರಿ ಮಳೆ

Woman Enjoying The Rain Outside A Grass Field

ಬೆಂಗಳೂರು: ಉತ್ತರ ಒಳನಾಡಿನ ಬಾಗಲಕೋಟೆ, ಗದಗ, ಹಾವೇರಿ, ಧಾರವಾಡ, ಬೆಳಗಾವಿ, ಕಲಬುರಗಿ, ಕೊಪ್ಪಳ, ವಿಜಯಪುರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಇನ್ನೆರಡು ದಿನ ಭಾರಿ ಮಳೆಯಾಗುವ (Rain News) ಸಾಧ್ಯತೆಯಿದೆ. ಈ ಭಾಗದಲ್ಲಿ ಐಎಂಡಿ ಯೆಲ್ಲೋ ಅಲರ್ಟ್‌ ನೀಡಿದೆ. ಇದಲ್ಲದೆ, ಕರಾವಳಿ ಜಿಲ್ಲೆಗಳಲ್ಲಿ ಸಹ ಭಾರಿ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ತನ್ನ ಮುನ್ಸೂಚನಾ ವರದಿಯಲ್ಲಿ (Weather report) ಹೇಳಿದೆ.

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದ ಒಂದೆರಡು ಕಡೆಗಳಲ್ಲಿ ಮಿಂಚು ಸಹಿತ ಗುಡುಗಿನ ಸಾಧ್ಯತೆ ಇದೆ. ಜತೆಗೆ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಿಂಚು ಸಹಿತ ಗುಡುಗಿನೊಂದಿಗೆ ಮಳೆಯಾಗುವ ಸಾಧ್ಯತೆ ಇದ್ದು, ಬಿರುಗಾಳಿಯ ವೇಗವು ಗಂಟೆಗೆ 30-40 ಕಿ.ಮೀ ಇರಲಿದೆ.

ಇದನ್ನೂ ಓದಿ: Mandya Accident: ಕೆಎಸ್ಸಾರ್ಟಿಸಿ ಬಸ್‌ ಡಿಕ್ಕಿ ಹೊಡೆದ ಕಾರು; ನಾಲ್ವರು ಸ್ಥಳದಲ್ಲೇ ದುರ್ಮರಣ

ದಕ್ಷಿಣ ಒಳನಾಡಲ್ಲಿ ತಗ್ಗಿದ ಮಳೆ

ಬುಧವಾರ (ಸೆ. 27) ಮತ್ತು ಗುರುವಾರ (ಸೆ. 28) ದಕ್ಷಿಣ ಒಳನಾಡಿನ ಕೋಲಾರ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ಹೇಳಿದೆ. ಉಳಿದ ಭಾಗಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆ ಬೀಳಬಹುದು ಎಂದು ಅಂದಾಜಿಸಲಾಗಿದೆ. ಉತ್ತರ ಒಳನಾಡಿನ ಬೀದರ್, ವಿಜಯನಗರ ಜಿಲ್ಲೆಗಳಲ್ಲಿ ಅಲ್ಪ ಪ್ರಮಾಣದ ಮಳೆಯಾಗಲಿದೆ. ಹೆಚ್ಚಿನ ಸಮಯ ಮೋಡ ಕವಿದ ವಾತಾವರಣ ಇರಲಿದೆ.

ಮಲೆನಾಡಲ್ಲೂ ಸಣ್ಣ ಮಳೆ

ಮಲೆನಾಡಿನ ಕೊಡಗು, ಹಾಸನ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಈ ಬಾರಿ ಭಾರಿ ಪ್ರಮಾಣದ ಮಳೆಯ ನಿರೀಕ್ಷೆ ಮಾಡುವಂತಿಲ್ಲ. ಇಲ್ಲಿ ಸಾಧಾರಣ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಇದನ್ನೂ ಓದಿ: Elephant Attack : ಹಾಲು ತರಲು ಹೋಗುತ್ತಿದ್ದ ವೃದ್ಧನ ಬೆನ್ನಟ್ಟಿ ದಾಳಿ ಮಾಡಿದ ಕಾಡಾನೆ ಹಿಂಡು, ಗಂಭೀರ ಗಾಯ

ಬೆಂಗಳೂರಿನಲ್ಲಿ ರಾತ್ರಿ ಮಳೆ ಭರ್ಜರಿ

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬುಧವಾರ ಮತ್ತು ಗುರುವಾರ ಬೆಳಗ್ಗೆ ಹೆಚ್ಚಿನ ಸಮಯ ಬಿಸಿಲಿದ್ದರೂ ನಂತರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದೆ. ಸಂಜೆ ಅಥವಾ ರಾತ್ರಿಯಂದು ಭಾರಿ ಪ್ರಮಾಣದ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಹೀಗಾಗಿ ಸಂಜೆ ವೇಳೆಗೆ ಪ್ರಯಾಣ ಮಾಡುವವರು ಸೂಕ್ತ ತಯಾರಿ ಮಾಡಿಕೊಂಡಿರಲು ಸೂಚಿಸಲಾಗಿದೆ. ಇನ್ನು ಮಳೆ ವೇಳೆ ಸಂಚಾರ ದಟ್ಟಣೆ ಹೆಚ್ಚುವ ಸಂಭವವೂ ಇದೆ. ಗರಿಷ್ಠ ಉಷ್ಣಾಂಶ 30 ಡಿಗ್ರ ಸೆಲ್ಸಿಯಸ್‌ ಇದ್ದರೆ, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version