Site icon Vistara News

Weather Report : ಮಂಡ್ಯ ಸೇರಿ 15 ಜಿಲ್ಲೆಗಳಲ್ಲಿ ನಾಳೆ ಭಾರಿ ಮಳೆ; ಆದರೂ ಸೆಕೆಯೋ ಸೆಕೆ!

Rain with heat wave

ಬೆಂಗಳೂರು: ರಾಜ್ಯದಲ್ಲಿ ನೈರುತ್ಯ ಮುಂಗಾರು (Southwest Monsoon) ಸಾಮಾನ್ಯವಾಗಿದೆ. ಮುಂದಿನ 24 ಗಂಟೆಯಲ್ಲಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗಲಿದೆ. ಕೆಲವೊಮ್ಮೆ ಪ್ರತ್ಯೇಕ ಸ್ಥಳದಲ್ಲಿ ಭಾರೀ ಮಳೆಯಾಗುವ (Rain News) ಸಾಧ್ಯತೆಯಿದೆ. ಮಲೆನಾಡು, ಕರಾವಳಿ ಸೇರಿ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಚದುರಿದ ಮಳೆಯಾಗಲಿದೆ. ಪ್ರತ್ಯೇಕ ಸ್ಥಳಗಳಲ್ಲಿ ಮಿಂಚು ಸಹಿತ ಗುಡುಗು ಮಳೆಯಾಗುವ (Weather report) ಸಾಧ್ಯತೆ ಇದೆ.

ಮಂಡ್ಯ, ರಾಮನಗರದಲ್ಲಿ ಭಾರಿ ಮಳೆ

ದಕ್ಷಿಣ ಒಳನಾಡಿನ ಜಿಲ್ಲೆಯಾದ ಚಿಕ್ಕಬಳ್ಳಾಪುರ, ರಾಮನಗರ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಕೋಲಾರ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಚದುರಿದ ಮಳೆಯಾಗಲಿದೆ. ಉತ್ತರ ಒಳನಾಡಿನ ಜಿಲ್ಲೆಯಾದ ಯಾದಗಿರಿ, ಕಲಬುರಗಿ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಹಗುರವಾದ ಮಳೆಯಾಗಲಿದೆ. ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.

ಮಲೆನಾಡಿನ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಅಲ್ಲಲ್ಲಿ ಅತಿ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯಲ್ಲಿ ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಚದುರಿದಂತೆ ಅಲ್ಲಲ್ಲಿ ತೀರಾ ಕಡಿಮೆ ಮಳೆ ಬೀಳಲಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಲ್ಲಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ.

ಭಾನುವಾರ ದುರ್ಬಲಗೊಂಡಿದ್ದ ವರುಣ

ರಾಜ್ಯದಲ್ಲಿ ನೈರುತ್ಯ ಮುಂಗಾರು ಭಾನುವಾರ ದುರ್ಬಲಗೊಂಡಿತ್ತು. ರಾಜ್ಯದ ಒಂದೆರಡು ಕಡೆಗಳಲ್ಲಿ ಮಳೆಯಾಗಿರುವ ವರದಿ ಆಗಿದೆ. ತುಮಕೂರಿನ ತಿಪಟೂರಿನಲ್ಲಿ 2 ಸೆಂ.ಮೀ, ಮಂಡ್ಯದ ಕೃಷ್ಣರಾಜಪೇಟೆ, ಕೃಷ್ಣರಾಜಸಾಗರ, ಮೈಸೂರು, ಕೊಪ್ಪಳದ ಯಲಬುರ್ಗಾದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ಮಳೆಗಾಲದಲ್ಲೂ ಹೆಚ್ಚಾಯ್ತು ಸೆಕೆ ಅನುಭವ

ರಾಜ್ಯದಲ್ಲಿ ವಾಡಿಕೆಗಿಂತ ಉಷ್ಣಾಂಶ ಹೆಚ್ಚಾಗಿದೆ. ಮಳೆ ಕೊರತೆದಿಂದಾಗಿ ಉಷ್ಣಾಂಶ ವಾಡಿಕೆಗಿಂತ 3 ಡಿಗ್ರಿ ಏರಿಕೆ ಆಗಿದೆ. ಬೆಂಗಳೂರಿನಲ್ಲೂ ಸುಡು ಸುಡು ವಾತಾವರಣ ಇದೆ. ವಾಯುವ್ಯ ದಿಕ್ಕಿ‌ನಿಂದ ಗಾಳಿ ಬೀಸುತ್ತಿರುವ ಹಿನ್ನೆಲೆ ತಾಪಮಾನ ಏರಿಳಿತವಾಗಿದೆ ಎನ್ನಲಾಗಿದೆ.

ಜೂನ್‌ನಿಂದ ಇಲ್ಲಿವರೆಗೆ ವಾಡಿಕೆಯಂತೆ 666 ಮಿ.ಮಿ ಮಳೆಯಾಗಬೇಕಿತ್ತು. ಸದ್ಯ ಇಲ್ಲಿಯ ತನಕ 499 ಮಿ.ಮಿ ಅಷ್ಟೇ ಮಳೆಯಾಗಿದೆ. ಜುಲೈ ಕೊನೆ ವಾರದಲ್ಲಿ ಮಳೆ ಪ್ರಮಾಣ ಅಲ್ಪಮಟ್ಟಿಗೆ ಸುಧಾರಣೆ ಕಂಡಿತ್ತು. ಆದರೆ ಆಗಸ್ಟ್‌ನಲ್ಲಿ 23% ರಷ್ಟು ಮಳೆ ಕೊರತೆಯಾಗಿದೆ. ಮಳೆ ಕೊರತೆ ಹಿನ್ನೆಲೆಯಲ್ಲಿ ತೇವಾಂಶ ಇರದ ಕಾರಣ ತಾಪಮಾನ ಏರಿಕೆ ಆಗಿದೆ.

ಯಾವ ಜಿಲ್ಲೆಯಲ್ಲಿ ಎಷ್ಟಿದೆ ತಾಪಮಾನ

ಜಿಲ್ಲೆ- ಇಂದಿನ ತಾಪಮಾನ – ವಾಡಿಕೆ – ಏರಿಕೆ
ಮಡಿಕೇರಿ – 29 ಡಿ.ಸೆ – 22 ಡಿ.ಸೆ- 7
ಮಂಡ್ಯ – 34 ಡಿ.ಸೆ – 29.4 ಡಿ.ಸೆ – 4.6
ಶಿರಸಿ – 33.8 ಡಿ.ಸೆ – 29.7 ಡಿ.ಸೆ – 4.1
ಬೆಂಗಳೂರು – 31.8 ಡಿ.ಸೆ – 28 ಡಿ.ಸೆ- 3.8
ಚಿಂತಾಮಣಿ – 32 ಡಿ.ಸೆ – 26.5 ಡಿ.ಸೆ – 3.7
ಕಲಬುಗಿರಲಿ – 34.5 ಡಿ.ಸೆ – 31.9 ಡಿ.ಸೆ- 2.6
ಮೈಸೂರು – 31.5 ಡಿ. ಸೆ- 25.7 ಡಿ.ಸೆ – 2.6
ಬೀದರ್ – 31.1 ಡಿ.ಸೆ – 29.4 ಡಿ.ಸೆ -2.2

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version